ಮಂಗಳವಾರ, ಸೆಪ್ಟೆಂಬರ್ 22, 2020
24 °C
ಯಾದಗಿರಿ ತಾಲ್ಲೂಕಿನಲ್ಲಿ ಹೆಚ್ಚು, ಸುರಪುರದಲ್ಲಿ ಕಡಿಮೆ ಶಾಲೆಗಳು

ಯಾದಗಿರಿ | 126 ಶಾಲೆಗಳಲ್ಲಿ ವಠಾರ ಪಾಠ

ಬಿ.ಜಿ.ಪ್ರವೀಣಕುಮಾರ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಜಿಲ್ಲೆಯ 126 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ವಠಾರ ಪಾಠ ನಡೆಯುತ್ತಿವೆ. ಯಾದಗಿರಿ ತಾಲ್ಲೂಕಿನಲ್ಲಿ ಹೆಚ್ಚು ವಠಾರ ಶಾಲೆಗಳು ನಡೆಯುತ್ತಿದ್ದು, ಸುರಪುರ ತಾಲ್ಲೂಕಿನಲ್ಲಿ ಕಡಿಮೆ ಶಾಲೆಗಳು ನಡೆಯುತ್ತಿವೆ.

ಮೇ ತಿಂಗಳ ಕೊನೆಯ ವಾರದಲ್ಲಿ ಶಾಲೆಗಳು ಆರಂಭವಾಗಬೇಕಿತ್ತು. ಆದರೆ, ಕೋವಿಡ್ ಕಾರಣದಿಂದ ಶಾಲೆಗಳನ್ನು ತೆರೆಯಲು ಅನುಮತಿ ಇಲ್ಲ. ಹೀಗಾಗಿ ಶಿಕ್ಷಣ ಇಲಾಖೆ ಮಕ್ಕಳು ಇರುವ ಕಡೆಯೆ ತೆರಳಿ ಆಟ, ಪಾಠ ಮಾಡುವ ಮೂಲಕ ಶಾಲೆಯಿಂದ ಮಕ್ಕಳ ವಂಚಿತರಾಗಬಾರದು ಎನ್ನುವ ದೃಷ್ಟಿಯಿಂದ ವಠಾರ ಪಾಠ ಆರಂಭಿಸಲಾಗಿದೆ.

‘ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 12.30ರವರೆಗೆ ಕಲಿಕೆ ನಡೆಯುತ್ತಿದೆ. ವಿಶಾಲ ಅಂಗಳ, ದೇವಸ್ಥಾನ, ಜಗುಲಿ, ಶಾಲಾ ಕಾರಿಡಾರ್ ಸೇರಿದಂತೆ ಇನ್ನಿತರ ಕಡೆ ವಠಾರ ಪಾಠ ನಡೆಯುತ್ತವೆ' ಎನ್ನುತ್ತಾರೆ ಶಿಕ್ಷಣ ಇಲಾಖೆಯ ಅಧಿಕಾರಿಗಳು.

'ಜಿಲ್ಲೆಯಲ್ಲಿ 929 ಪ್ರಾಥಮಿಕ ಶಾಲೆಗಳಿದ್ದು, ಅದರಲ್ಲಿ 126 ವಠಾರ ಶಾಲೆಗಳು ನಡೆಯುತ್ತಿವೆ. 10ರಿಂದ 15 ಮಕ್ಕಳು ಭಾಗವಹಿಸುತ್ತಿದ್ದಾರೆ. ಮಳೆ ಬಂದರೆ ಶಾಲೆ ಬಂದ್ ಆಗುತ್ತದೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶ್ರೀನಿವಾಸ ರೆಡ್ಡಿ ತಿಳಿಸುತ್ತಾರೆ.

ಏನೇನು ನಡೆಯುತ್ತೆ ವಠಾರ ಶಾಲೆಯಲ್ಲಿ: ಕೋವಿಡ್‌–19 ಬಗ್ಗೆ ಮಕ್ಕಳಿಗೆ ಜಾಗೃತಿ ಮೂಡಿಸುವ ಪಾಠ ಮಾಡಲಾಗುತ್ತಿದೆ. ಮಾಸ್ಕ್‌ ಧರಿಸುವುದು, ಅಂತರ ಕಾಪಾಡಿಕೊಳ್ಳುವುದು, ಮನೆಯಲ್ಲಿರುವಾಗ ಕುಟುಂಬದವರೊಟ್ಟಿಗೆ ಹೇಗೆ ಇರಬೇಕು. ಕಲಿಕೆ ಭಯ ಹೋಗಲಾಡಿಸುವುದು, ವ್ಯಾಕರಣ, ಗಣಿತ, ಸೇತುಬಂಧ, ಪುನರಾವರ್ತಿತ ಪಾಠ, ಮನೆಕೆಲಸ ನೀಡುವುದು ನಡೆಯುತ್ತಿದೆ. 

ಹಳ್ಳಿಗಳಲ್ಲಿ ಹೆಚ್ಚು ವಠಾರ ಪಾಠ: ಜಿಲ್ಲೆಯಲ್ಲಿ ನಗರ ಪ್ರದೇಶಕ್ಕಿಂತ ಹಳ್ಳಿಗಳಲ್ಲಿ ಹೆಚ್ಚು ವಠಾರ ಶಾಲೆಗಳು ನಡೆಯುತ್ತಿವೆ. ನಗರದಲ್ಲಿ ಜಾಗದ ಕೊರತೆ ಜೊತೆಗೆ ಪೋಷಕರು ಮಕ್ಕಳನ್ನು ಕಳಿಸುತ್ತಿಲ್ಲ. ಹಳ್ಳಿಗಳಲ್ಲಿ ಜಾಗದ ಸಮಸ್ಯೆ ಇಲ್ಲ. ಹೀಗಾಗಿ ಅಲ್ಲಿ ಪಾಠ ನಡೆಯುತ್ತದೆ ಎಂದು ಶಿಕ್ಷಕರು ತಿಳಿಸಿದರು.

‘ಹಳ್ಳಿಗಳ ಶಾಲಾ ಶಿಕ್ಷಕರು ಉತ್ಸಾಹದಿಂದ ‘ವಠಾರ’ ಶಾಲೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಆದರೆ, ನಗರ ಪ್ರದೇಶದಲ್ಲಿ ಹೆಚ್ಚಿನ ಶಿಕ್ಷಕರು ಮುಂದೆ ಬಂದಿಲ್ಲ. ಮುಂದಿನ ದಿನಗಳಲ್ಲಿ ಈ ಸಂಖ್ಯೆ ಹೆಚ್ಚು ಆಗಲಿದೆ’ ಎಂದು ಡಿಡಿಪಿಐ ತಿಳಿಸುತ್ತಾರೆ.

***
ಶಾಲಾ ಶಿಕ್ಷಣದಿಂದ ಮಕ್ಕಳು ವಂಚಿತರಾಗಬಾರದು ಎನ್ನುವ ಉದ್ದೇಶದಿಂದ ವಠಾರ ಶಾಲೆಗಳನ್ನು ನಡೆಸಲಾಗುತ್ತಿದೆ. ಗುರುಗಳೇ ಶಿಷ್ಯರ ಹತ್ತಿರ ಹೋಗಿ ಪಾಠ ಮಾಡ್ತಾರೆ.
-ಶ್ರೀನಿವಾಸ ರೆಡ್ಡಿ,ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ

***
1ರಿಂದ 5ನೇ ತರಗತಿ, 6ರಿಂದ 8ನೇ ತರಗತಿ ‘ವಠಾರ‘ ಶಾಲೆಗಳನ್ನು ನಡೆಲಾಗುತ್ತಿದೆ. ಉತ್ಸಾಹದಿಂದ ಮಕ್ಕಳು ಭಾಗವಹಿಸುತ್ತಿದ್ದಾರೆ.
-ಚಂದ್ರಕಾಂತರೆಡ್ಡಿ,ಕ್ಷೇತ್ರ ಶಿಕ್ಷಣಾಧಿಕಾರಿ, ಯಾದಗಿರಿ

***
ವಿದ್ಯಾರ್ಥಿಗಳ ಜೊತೆ ಮುಖಾಮುಖಿಯಾಗಿ ಪಾಠ ಮಾಡುವುದು ಉತ್ತಮ ಅನುಭವ. ಇಲ್ಲಿ 5 ಕೇಂದ್ರಗಳನ್ನು ತೆಗೆದಿದ್ದೇವೆ. ವಿದ್ಯಾರ್ಥಿಗಳು ಬರುತ್ತಿದ್ದಾರೆ.
-ಯಂಕಪ್ಪ ದೊಡ್ಡಮನಿ, ಬಂದಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು