ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

LS Polls 2024| ಅನುಭವಿ ಕಳ್ಳ, ಅಮೂಲ್ ಬೇಬಿಗಳು, ವಿಷ ಗುರು: ನಾಯಕರ ಮಾತಿನ ಛೂಬಾಣ

Published 31 ಮೇ 2024, 11:51 IST
Last Updated 31 ಮೇ 2024, 11:51 IST
ಅಕ್ಷರ ಗಾತ್ರ

ನವದೆಹಲಿ: ವಿಷ ಗುರು, ಅನುಭವಿ ಕಳ್ಳ, ಇಬ್ಬರು ರಾಜಕುಮಾರರು... ಹೀಗೆ ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಪ್ರಚಾರಕ್ಕಿಳಿದ ನಾಯಕರು ನಾಲಿಗೆ ಸಡಿಲಬಿಟ್ಟ ಪರಿಣಾಮ ಪರಸ್ಪರ ಹರಿತವಾದ ಮಾತುಗಳ ಪ್ರಯೋಗಕ್ಕೆ ಈ ಏಳು ಹಂತಗಳ ಚುನಾವಣಾ ಪ್ರಚಾರ ವೇದಿಕೆಗಳು ಸಾಕ್ಷಿಯಾದವು.

ಮಂಗಳಸೂತ್ರ, ಮುಜ್ರಾ, ಮಟನ್, ಮೀನು... ಇವು ಯಾವುದೋ ಕಾಮಿಕ್ಸ್‌ನಲ್ಲಿ ಬರುವ ಪಾತ್ರಗಳಲ್ಲ. ಬದಲಿಗೆ ರಾಜಕೀಯ ಪ್ರತಿಸ್ಪರ್ಧಿಗಳು ಸಾರ್ವಜನಿಕ ವೇದಿಕೆಯಲ್ಲಿ ಪರಸ್ಪರ ಹಣಿಯಲು ಬಳಸಿದ ಪದಗಳು. ಇಂಥ ಹಲವು ಚುಚ್ಚು ಮಾತುಗಳು, ಕಾಲೆಳೆಯುವ ಯತ್ನ ಹಾಗೂ ವ್ಯಂಗ್ಯಭರಿತ ಪದಗಳ ಬಳಕೆ ಅತ್ಯಂತ ಸಲೀಸು ಎಂಬಂತೆ ಈ ಬಾರಿ ಚುನಾವಣೆಯಲ್ಲಿ ಬಹಳಷ್ಟು ಪದ ಪ್ರಯೋಗಗಳು ಕೇಳಿಬಂದವು. ಅಂಥವುಗಳಲ್ಲಿ ಆಯ್ದ ಪ್ರಮುಖವು ಇಲ್ಲಿವೆ.

ಟೆಂಪೊ ಕೋಟ್ಯಧೀಶ್ವರರ ಕೈಗೊಂಬೆ ದೊರೆ: ಮೋದಿ ವಿರುದ್ಧ ರಾಹುಲ್ ವಾಗ್ದಾಳಿ

ಉದ್ಯಮಿಗಳಾದ ಅದಾನಿ ಹಾಗೂ ಅಂಬಾನಿಗಳಿಂದ ಹಣದ ತುಂಬಿದ ಟೆಂಪೊ ಕಾಂಗ್ರೆಸ್‌ಗೆ ಸ್ವೀಕರಿಸಿದೆ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಆರೋಪಕ್ಕೆ ತಿರುಗೇಟು ನೀಡಿದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ‘ಟೆಂಪೊ ಕೋಟ್ಯಧೀಶ್ವರರ ಕೈಗೊಂಬೆ ದೊರೆ’ ಎಂಬ ಪದ ಪ್ರಯೋಗ ಮಾಡಿದ್ದರು.

ದೋ ಶೆಹಝಾದೆ: ರಾಹುಲ್, ಅಖಿಲೇಶ್ ಕುರಿತು ಮೋದಿ ಟೀಕೆ

ತಮ್ಮ ಸಂತೋಷಕ್ಕಾಗಿ ದೋ ಶೆಹಝಾದೆ (ಇಬ್ಬರು ರಾಜಕುಮಾರರು) ರಾಜಕೀಯಕ್ಕೆ ಬಂದಿದ್ದಾರೆ ಎಂದು ಮೋದಿ ಅವರು ಉತ್ತರ ಪ್ರದೇಶ ರ‍್ಯಾಲಿ ಸಂದರ್ಭದಲ್ಲಿ ಯಾರ ಹೆಸರೂ ಹೇಳದೆ ವಾಗ್ದಾಳಿ ನಡೆಸಿದ್ದರು. ಆದರೆ ಅವರ ಮಾತುಗಳು ರಾಹುಲ್ ಗಾಂಧಿ ಹಾಗೂ ಅಖಿಲೇಶ್ ಯಾದವ್ ಕುರಿತಾಗಿಯೇ ಇತ್ತು ಎಂಬುದು ಸ್ಪಷ್ಟವಾಗಿತ್ತು ಎಂದು ರಾಜಕೀಯ ಪಂಡಿತರು ಹೇಳುತ್ತಿದ್ದಾರೆ.

ಮೋದಿ ಎಂಬ ‘ವಿಷ ಗುರು’

ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣಾ ರ‍್ಯಾಲಿಗಳಲ್ಲಿ ಬಳಸುತ್ತಿದ್ದ ಪದಗಳನ್ನು ಗುರಿಯಾಗಿಸಿಕೊಂಡು ಕಾಂಗ್ರೆಸ್ ಮುಖಂಡ ಜೈರಾಂ ರಮೇಶ್ ಅವರು ವಾಗ್ದಾಳಿ ನಡೆಸಿದ್ದರು. ಮೋದಿ ಬಳಸುವ ಪದಗಳನ್ನು ಗಮನಿಸುತ್ತಿದ್ದರೆ ಅವರೊಬ್ಬ ‘ವಿಶ್ವ ಗುರು’ ಎಂದೆನಿಸುವುದಿಲ್ಲ. ಬದಲಿಗೆ ‘ವಿಷ ಗುರು’ ಎಂಬ ವಿಶೇಷಣವೇ ಹೆಚ್ಚು ಸೂಕ್ತ ಎಂದಿದ್ದರು.

‘ಮಂಡಿ ಮೇ ಭಾವ್’: ಕಂಗನಾ ರನೌತ್ ವಿರುದ್ಧ ಸುಪ್ರಿಯಾ ಶ್ರೀನೇಥ್ ಹೇಳಿಕೆಗೆ ಟೀಕೆ

ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ನಟಿ ಕಂಗನಾ ರನೌತ್ ಕುರಿತಾಗಿ ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನೇಥ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಪೋಸ್ಟ್‌ ಒಂದು ತೀರಾ ಟೀಕೆಗೆ ಗುರಿಯಾಗಿತ್ತು. ‘ಮಂಡಿಯಲ್ಲಿ ಏನು ದರ ನಡೆಯುತ್ತಿದೆ’ ಎಂದು ಸುಪ್ರಿಯಾ ಅವರ ಹೇಳಿಕೆಗೆ ಸಾಕಷ್ಟು ಟೀಕೆಗಳು ವ್ಯಕ್ತವಾದವು. ಇದರಿಂದಾಗಿ ಅವರು ತಮ್ಮ ಪೋಸ್ಟ್ ಅನ್ನೇ ಅಳಿಸಿಹಾಕಬೇಕಾಯಿತು.

ಮೋದಿ ಸ್ವಘೋಷಿತ ಭಗವಾನ್

‘ಜೈವಿಕವಾಗಿ ಜನಿಸಿದವನಲ್ಲ’ ಎಂಬ ನರೇಂದ್ರ ಮೋದಿ ಹೇಳಿಕೆಯನ್ನು ಟೀಕಿಸಿರುವ ರಾಹುಲ್ ಗಾಂಧಿ, ‘ಇದೇ ಹೇಳಿಕೆಯನ್ನು ಸಾಮಾನ್ಯ ವ್ಯಕ್ತಿ ಹೇಳಿದ್ದರೆ, ಆತನನ್ನು ಮಾನಸಿಕ ತಜ್ಞರ ಬಳಿ ಕರೆದೊಯ್ಯಲಾಗುತ್ತಿತ್ತು’ ಎಂದಿದ್ದರು. ಜೈರಾಂ ರಮೇಶ್ ಅವರು ಈ ಹೇಳಿಕೆಗೆ, ‘ಪ್ರಧಾನಿ ಅವರು ಸ್ವ ಘೋಷಿತ ಭಗವಾನ್‌’ ಆಗಿದ್ದಾರೆ’ ಎಂದಿದ್ದರು.

ಮೋದಿ ಒಬ್ಬ ಅನುಭವಿ ಕಳ್ಳ ಎಂಬ ಅರವಿಂದ ಕೇಜ್ರಿವಾಲ್ ಟೀಕೆ

ದೆಹಲಿ ಅಬಕಾರಿ ನೀತಿ ಹಗಣರಕ್ಕೆ ಸಂಬಂಧಿಸಿದಂತೆ ಟಿ.ವಿ. ಸಂದರ್ಶನವೊಂದರಲ್ಲಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದ ಎಎಪಿ ಸಂಚಾಲಕ ಅರವಿಂದ ಕೇಜ್ರಿವಾಲ್, ‘ಮೋದಿ ಒಬ್ಬ ಅನುಭವಿ ಕಳ್ಳ’ ಎಂದು ಟೀಕಿಸಿದ್ದರು. 

ಮತ ಬ್ಯಾಂಕ್‌ಗಾಗಿ ಇಂಡಿಯಾ ಒಕ್ಕೂಟದ ‘ಮುಜ್ರಾ‘ ನರ್ತನ

ಮುಸ್ಲಿಂ ಮತಬ್ಯಾಂಕ್‌ ಪಡೆಯಲು ವಿರೋಧ ಪಕ್ಷಗಳ ಇಂಡಿಯಾ ಒಕ್ಕೂಟವು ಮುಜ್ರಾ (ವೇಶ್ಯೆಯರು ಸಾದರಪಡಿಸುವ ಮಾದಕ ನೃತ್ಯ) ಮಾಡಬೇಕಾಗಿದೆ. ದಲಿತರು ಹಾಗೂ ಹಿಂದುಳಿದ ವರ್ಗದವರಿಗೆ ನೀಡಲಾದ ಮೀಸಲಾತಿಯನ್ನು ವಿರೋಧ ಪಕ್ಷದವರು ಕಸಿದುಕೊಳ್ಳಲಿದ್ದಾರೆ ಎಂದು ನರೇಂದ್ರ ಮೋದಿ ಆರೋಪಿಸಿದ್ದರು.

ಮೀನು, ಮಟನ್, ಮಂಗಳಸೂತ್ರ, ಮುಜ್ರಾ...

ಶ್ರಾವಣ ಮಾಸದಲ್ಲಿ ಆರ್‌ಜೆಡಿ ಮುಖಂಡ ತೇಜಸ್ವಿ ಯಾದವ್ ಅವರು ಮೀನು ತಿನ್ನುತ್ತಾರೆ. ರಾಹುಲ್ ಗಾಂಧಿ ಹಾಗೂ ಲಾಲು ಪ್ರಸಾದ್ ಅವರು ಮಟನ್ ಸೇವಿಸುತ್ತಾರೆ ಎಂದು ಬಿಜೆಪಿ ಆರೋಪಿಸಿದ್ದು ದೊಡ್ಡ ಮಟ್ಟದಲ್ಲಿ ಚರ್ಚೆಯನ್ನು ಹುಟ್ಟುಹಾಕಿತು. ವಿರೋಧ ಪಕ್ಷದವರು ತಮ್ಮ ಮೊಘಲ್ ಸಂಸ್ಕೃತಿಯನ್ನು ಪ್ರದರ್ಶಿಸುವ ಮೂಲಕ ಬಹುಸಂಖ್ಯಾತರನ್ನು ಟೀಕಿಸುತ್ತಿದ್ದಾರೆ. ಆ ಮೂಲಕ ತಮ್ಮ ಮತ ಬ್ಯಾಂಕ್ ಭದ್ರಪಡಿಸಿಕೊಳ್ಳುತ್ತಿದ್ದಾರೆ ಎಂದಿದ್ದರು. ಇದಕ್ಕಾಗಿ ಅವರು ಮುಜ್ರಾ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು.

ರಾಜಸ್ಥಾನದಲ್ಲಿ ಚುನಾವಣಾ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ್ದ ಮೋದಿ, ‘ಹಿಂದೂ ಮಹಿಳೆಯರ ಮಂಗಳಸೂತ್ರ ಕಸಿಯುವ ಪ್ರಣಾಳಿಕೆಯನ್ನು ಕಾಂಗ್ರೆಸ್ ಸಿದ್ಧಪಡಿಸಿದೆ. ಬಹುಸಂಖ್ಯಾತರ ಚಿನ್ನವನ್ನು ಪಡೆದು, ಹೆಚ್ಚು ಮಕ್ಕಳನ್ನು ಹೊಂದಿರುವ ದಾಳಿಕೋರರಿಗೆ ಹಂಚಲಿದ್ದಾರೆ ಎಂದು ಮುಸ್ಲಿಮರ ಕುರಿತಾಗಿ ಹೇಳಿದ್ದರು. ಇದನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಆರ್‌ಜೆಡಿಯ ತೇಜಸ್ವಿ ಯಾದವ್ ಅವರು ಮೋದಿ ವಿರುದ್ಧ ಹರಿಹಾಯ್ದಿದ್ದರು.

ಒಂದು ‘ಎಮ್ಮೆ’ ಕಸಿಯುವ ಮೋದಿ ಹೇಳಿಕೆ

‘ಈ ಚುನಾವಣೆಯಲ್ಲಿ ಒಂದೊಮ್ಮೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಪಿತ್ರಾರ್ಜಿತ ತೆರಿಗೆ ಜಾರಿಗೆ ತರುತ್ತದೆ. ಒಂದು ಮನೆಯಲ್ಲಿ ಎರಡು ಎಮ್ಮೆಗಳಿದ್ದರೆ, ಒಂದು ಎಮ್ಮೆಯನ್ನು ಕಾಂಗ್ರೆಸ್ ಕಸಿದುಕೊಳ್ಳಲಿದೆ’ ಎಂದು ಗುಜರಾತ್‌ ರ‍್ಯಾಲಿಯಲ್ಲಿ ಮೋದಿ ವಾಗ್ದಾಳಿ ನಡೆಸಿದ್ದರು. ಇದಕ್ಕೆ ತಿರುಗೇಟು ನೀಡಿದ್ದ ಆರ್‌ಜೆಡಿಯ ಲಾಲು ಪ್ರಸಾದ್, ‘ಇಂಡಿಯಾ ಒಕ್ಕೂಟ ಸರ್ಕಾರ ರಚಿಸಿದರೆ, ಮೋದಿ ಅವರಿಗೆ ಒಂಟೆ ನೀಡಲಾಗುವುದು’ ಎಂದಿದ್ದರು.

ಸುಳ್ಳಿನ ಸರದಾರ ಮೋದಿ

‘ವರ್ಷಕ್ಕೆ 2 ಕೋಟಿ ನೌಕರಿ, ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ ₹15 ಲಕ್ಷ ಹಾಗೂ ರೈತರ ಆದಾಯ ದ್ವಿಗುಣಗೊಳಿಸುವ ಭರವಸೆ ನೀಡಿದ್ದ ಮೋದಿ ಒಬ್ಬ ಸುಳ್ಳಿನ ಸರದಾರ’ ಎಂದು ಹರಿಯಾಣದಲ್ಲಿ ಮಾತನಾಡಿದ ಕಾಂಗ್ರೆಸ್‌ನ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದರು.

ರಾಹುಲ್ ಮತ್ತು ಪ್ರಿಯಾಂಕಾ: ಅಮೂಲ್ ಬೇಬಿಗಳು

‘ಕಾಂಗ್ರೆಸ್‌ನ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ವಾದ್ರಾ ಇಬ್ಬರೂ ಅಮೂಲ್ ಬೇಬಿಗಳು. ಇವರನ್ನು ನೋಡುವ ಬದಲು ಕಾಝೀರಂಗ ರಾಷ್ಟ್ರೀಯ ಉದ್ಯಾನದಲ್ಲಿರುವ ಹುಲಿ ಹಾಗೂ ಖಡ್ಗಮೃಗವನ್ನು ಜನರು ನೋಡಲು ಇಷ್ಟಪಡುತ್ತಾರೆ’ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಅವರು ಟೀಕಿಸಿದ್ದರು.

ದೊಡ್ಡ ಪಪ್ಪು, ಚಿಕ್ಕ ಪಪ್ಪು

ರಾಹುಲ್ ಗಾಂಧಿ ಮತ್ತು ವಿಕ್ರಮಾಧಿತ್ಯ ಸಿಂಗ್ ಇಬ್ಬರು ದೊಡ್ಡ ಪಪ್ಪು ಹಾಗೂ ಸಣ್ಣ ಪಪ್ಪುಗಳಿದ್ದಂತೆ. ಕಾಂಗ್ರೆಸ್ ಎಂಬುದು ಒಂದು ಕಾಯಿಲೆ ಹಾಗೂ ಬ್ರಿಟಿಷರು ಬಿಟ್ಟುಹೋದ ಗೆದ್ದಲು ಎಂದು ಜರಿದಿದ್ದರು. ಮಂಡಿ ಕ್ಷೇತ್ರದಲ್ಲಿ ವಿಕ್ರಮಾಧಿತ್ಯ ಅವರು ಕಂಗನಾ ವಿರುದ್ಧ ಸ್ಪರ್ಧಿಸಿದ್ದಾರೆ.

‘ಇಂಡಿಯಾ’ ಎಂಬುದು ಹಗರಣಗಾರರ ಒಕ್ಕೂಟ

‘ವಿರೋಧ ಪಕ್ಷಗಳ ಇಂಡಿಯಾ ಒಕ್ಕೂಟವು ಹಗರಣಗಾರರ ದುಷ್ಟಕೂಟ. ಅಲ್ಲಿರುವ ನಾಯಕರು ಇರುವುದೇ ಭ್ರಷ್ಟಾಚಾರಕ್ಕಾಗಿ. ಓಲೈಕೆ ರಾಜಕಾರಣ ಹಾಗೂ ಸನಾತನ ವಿರೋಧಿ ಮನಸ್ಥಿತಿಯವರು’ ಎಂದು ಬಿಹಾರದ ರ‍್ಯಾಲಿಯಲ್ಲಿ ಮೋದಿ ಆರೋಪಿಸಿದ್ದರು.

ಕಾಂಗ್ರೆಸ್ ಎಂಬುದು ಪಾಕಿಸ್ತಾನದ ಶಿಷ್ಯ

ಕಾಂಗ್ರೆಸ್ ಎಂಬುದು ಪಾಕಿಸ್ತಾನದ ಶಿಷ್ಯ. ರಾಹುಲ್ ಗಾಂಧಿ ಮುಂದಿನ ಪ್ರಧಾನಿ ಆಗಬೇಕು ಎಂದು ಇಸ್ಲಾಮಾಬಾದ್ ಯೋಜನೆ ರೂಪಿಸುತ್ತಿದೆ ಎಂದು ಮೋದಿ ವಾಗ್ದಾಳಿ ನಡೆಸಿದ್ದರು.

ಮಹಾರಾಜರನ್ನು ನಿಂದಿಸುತ್ತಿರುವ ಶೆಹಝಾದಾ: ರಾಹುಲ್ ವಿರುದ್ಧ ಮೋದಿ ಕಿಡಿ

‘ರಾಜಕುಮಾರ ರಾಹುಲ್ ಗಾಂಧಿ ಭಾರತದ ರಾಜ ಹಾಗೂ ಮಹಾರಾಜರನ್ನು ನಿಂದಿಸುತ್ತಿದ್ದಾರೆ. ಆದರೆ ನವಾಬರು, ನಿಜಾಮರು, ಸುಲ್ತಾನರು ಹಾಗೂ ಬಾದ್‌ಶಾಗಳು ನಡೆಸಿದ ದೌರ್ಜನ್ಯಗಳಿಗೆ ಮೌನವಾಗುತ್ತಾರೆ’ ಎಂದು ಮೋದಿ ಹರಿಹಾಯ್ದಿದ್ದರು.

ರಾಹುಲ್ ಗಾಂಧಿ ಒಬ್ಬ ಅಪಕ್ವ ನಾಯಕ: ಎಡಪಕ್ಷದ ತಿರುಗೇಟು

ವಿರೋಧ ಪಕ್ಷಗಳಿರುವ ರಾಜ್ಯಗಳಲ್ಲಿ ಮುಖ್ಯಮಂತ್ರಿಗಳನ್ನು ಜೈಲಿಗೆ ಕಳುಹಿಸಿದಂತೆ ಕೇರಳದಲ್ಲಿರುವ ಎಡಪಕ್ಷ ನೇತೃತ್ವದ ಸರ್ಕಾರದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಮೋದಿ ಏಕೆ ಜೈಲಿಗೆ ಕಳುಹಿಸಿಲ್ಲ ಎಂಬ ರಾಹುಲ್ ಗಾಂಧಿ ಹೇಳಿಕೆಗೆ ಮಾರ್ಕ್ಸ್‌ವಾದಿ ಪಕ್ಷ ತಿರುಗೇಟು ನೀಡಿತ್ತು.

‘ಅವರೊಬ್ಬ ಅಪಕ್ವ ನಾಯಕ. ಕಾಂಗ್ರೆಸ್ ಮುಖಂಡ ‘ಅಮೂಲ್‌ ಬೇಬಿ’ ಎಂದು ಹಿಂದೆ ಮಾಜಿ ಮುಖ್ಯಮಂತ್ರಿ ವಿ.ಎಸ್.ಅಚ್ಚುತಾನಂದನ್ ಅವರ ಹೇಳಿಕೆಯಂತೆ, ರಾಹುಲ್ ಗಾಂಧಿ ಅವರು ಆ ಹೆಸರಿಗೆ ಸರಿಹೊಂದುವಂತೆ ನಡೆದುಕೊಳ್ಳಬಾರದು ಎಂದು ತಿರುಗೇಟು ನೀಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT