ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

LS Results 2024: ದಕ್ಷಿಣದಲ್ಲಿ INDIA; ಕೇರಳದ 2 ಕ್ಷೇತ್ರದಲ್ಲಿ BJP ಮುನ್ನಡೆ

Published 4 ಜೂನ್ 2024, 4:38 IST
Last Updated 4 ಜೂನ್ 2024, 4:38 IST
ಅಕ್ಷರ ಗಾತ್ರ

ಬೆಂಗಳೂರು: ದಕ್ಷಿಣದಲ್ಲಿ ಪೂರ್ಣ ಪ್ರಮಾಣದಲ್ಲಿ ಅರಳಲು ಬಿಜೆಪಿಯ ತಂತ್ರ ಹಾಗೂ ತನ್ನ ಭದ್ರಕೋಟೆಯನ್ನು ಉಳಿಸಿಕೊಳ್ಳಲು ಇಂಡಿಯಾ ಬಣದ ಕಸರತ್ತು. ಕೇಂದ್ರಾಡಳಿತ ಪ್ರದೇಶದ ಪುದುಚೇರಿ ಸೇರಿ ಒಟ್ಟು 130 ಸ್ಥಾನಗಳಿರುವ ದಕ್ಷಿಣದಲ್ಲಿ ಎರಡೂ ಬಣಗಳು ನಡುವೆ ಆರಂಭಿಕ ಜಿದ್ದಾಜಿದ್ದಿನ ಹೋರಾಟ ನಡೆದಿದೆ. 

ಮತ ಎಣಿಕೆ ಬಹುತೇಕ ನಿರ್ಣಾಯಕ ಹಂತಕ್ಕೆ ತಲುಪಿದ್ದು, ದಕ್ಷಿಣ ಭಾರತದ ಐದು ಪ್ರಮುಖ ರಾಜ್ಯಗಳಲ್ಲಿ ಕಾಂಗ್ರೆಸ್, ಡಿಎಂಕೆ ಹಾಗೂ ಮಿತ್ರ ಪಕ್ಷಗಳ ಇಂಡಿಯಾ ಬಣ ಮುನ್ನಡೆ ಕಾಯ್ದುಕೊಂಡಿದೆ.

ತಮಿಳುನಾಡಿನಲ್ಲಿ ಏ. 19ರಂದು ಒಂದೇ ಹಂತದಲ್ಲಿ ಮತದಾನ ನಡೆದಿತ್ತು. ಒಟ್ಟು 39 ಕ್ಷೇತ್ರಗಳಲ್ಲಿ ಸದ್ಯದ ಮಾಹಿತಿ ಪ್ರಕಾರ ಡಿಎಂಕೆ 24 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಕಾಂಗ್ರೆಸ್ 8 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ. ಎನ್‌ಡಿಎ 2 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ. ಉಳಿದಂತೆ ವಿದುತಲೈ ಚಿರುಥೈಗಲ್‌ ಕಾಚಿ–1, ಸಿಪಿಐಎಂ–2, ಸಿಪಿಐ–2, ಐಯುಎಂಎಲ್‌–1 ಹಾಗೂ ಎಐಎಡಿಎಂಕೆ–1 ಕ್ಷೇತ್ರದಲ್ಲಿ ಮುಂದಿದೆ.

ರಾಜ್ಯದಲ್ಲಿ ಒಟ್ಟು 950 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಇವರಲ್ಲಿ ಬಹುಮುಖ್ಯವಾಗಿ ಬಿಜೆಪಿಯ ಕೆ.ಅಣ್ಣಾಮಲೈ ಅವರು ಕೊಯಂಬತ್ತೂರ್‌ ಕ್ಷೇತ್ರದಿಂದ ಸ್ಪರ್ಧಿಸಿದ್ದು, ಹಿನ್ನಡೆ ಅನುಭವಿಸಿದ್ದಾರೆ. ತೂತುಕುಡಿ ಕ್ಷೇತ್ರದಲ್ಲಿ ಕನಿಮೋಳಿ ಮುನ್ನಡೆ ಕಾಯ್ದುಕೊಂಡಿದ್ದಾರೆ. 

ಚುನಾವಣೋತ್ತರ ಮತಗಟ್ಟೆ ಸಮೀಕ್ಷೆಯಲ್ಲಿ ರಾಜ್ಯದಲ್ಲಿ ಡಿಎಂಕೆ–ಇಂಡಿಯಾ ಒಕ್ಕೂಟವು 33ರಿಂದ 37 ಕ್ಷೇತ್ರಗಳಲ್ಲಿ ಗೆಲ್ಲಲಿದೆ ಎಂದು ಹೇಳಲಾಗಿತ್ತು. ಜತೆಗೆ ಎನ್‌ಡಿಎ 2ರಿಂದ 4 ಸ್ಥಾನಗಳನ್ನು ರಾಜ್ಯದಲ್ಲಿ ಪಡೆಯುವುದಾಗಿ ಹೇಳಿದ್ದವು. 

ಮತ ಎಣಿಕೆ ಭರದಿಂದ ಸಾಗಿದ್ದು, ಕರ್ನಾಟಕದಲ್ಲಿ ಬಿಜೆಪಿ–ಜೆಡಿಎಸ್ ಮೈತ್ರಿಯ ಎನ್‌ಡಿಎ ಆರಂಭಿಕ ಮುನ್ನಡೆ ಸಾಧಿಸಿದೆ. ಮತ್ತೊಂದೆಡೆ ಆಂಧ್ರ ಪ್ರದೇಶದಲ್ಲಿ ಟಿಡಿಪಿಯೊಂದಿಗಿನ ಮೈತ್ರಿಯು ಬಿಜೆಪಿಗೆ ನೆರವಾಗಿದೆ. ಕೇರಳದ ತ್ರಿಶೂರ್‌ ಹಾಗೂ ತಿರುವನಂತಪುರದಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದ್ದು, ಈ ರಾಜ್ಯದಲ್ಲಿ ಕಮಲ ಅರಳುವ ತವಕದಲ್ಲಿದೆ. ತೆಲಂಗಾಣದಲ್ಲಿ ಬಿಆರ್‌ಎಸ್‌ ಆರಂಭಿಕ ಹಿನ್ನಡೆ ಅನುಭವಿಸಿದೆ. ತಮಿಳುನಾಡಿನಲ್ಲಿ ಡಿಎಂಕೆ ಮುನ್ನಡೆ ಸಾಧಿಸಿದೆ.

ತಿರುವನಂತಪುರ ಕ್ಷೇತ್ರದಲ್ಲಿ ಮೂರು ಬಾರಿ ಸಂಸದರಾಗಿರುವ ಶಶಿ ತರೂರ್ ವಿರುದ್ಧ ಕೇಂದ್ರ ಸಚಿವ ಬಿಜೆಪಿಯ ರಾಜೀವ್ ಚಂದ್ರಶೇಖರ್ ಅವರು ಸ್ಪರ್ಧಿಸಿದ್ದು ಆರಂಭಿಕ 24 ಸಾವಿರ ಮತಗಳ ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ತ್ರಿಶೂರ್‌ ಕ್ಷೇತ್ರದಲ್ಲಿ ಬಿಜೆಪಿಯ ಸುರೇಶ್ ಗೋಪಿ 61 ಸಾವಿರ ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ. ಕೇರಳ ಪ್ರವೇಶಿಸುವ ಬಯಕೆ ಹೊಂದಿದ್ದ ಬಿಜೆಪಿಗೆ ಈ ಎರಡು ಕ್ಷೇತ್ರಗಳು ಭರವಸೆ ಮೂಡಿಸಿವೆ.

ವಯನಾಡ್‌ ಕ್ಷೇತ್ರದಲ್ಲಿ ರಾಹುಲ್ ಗಾಂಧಿ 2.15ಲಕ್ಷ ಮತಗಳ ಅಂತರದೊಂದಿಗೆ ಮುನ್ನಡೆ ಕಾಯ್ದುಕೊಂಡಿದ್ದಾರೆ. ಅಲಪುಳದಲ್ಲಿ ಕಾಂಗ್ರೆಸ್‌ ಮುಖಂಡ ಕೆ.ಸಿ.ವೇಣುಗೋಪಾಲ್ ಅವರು 45 ಸಾವಿರ ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಆಂಧ್ರಪ್ರದೇಶದಲ್ಲಿ ಟಿಡಿಪಿ–ಬಿಜೆಪಿ ಒಳಗೊಂಡ ಎನ್‌ಡಿಎ ಒಕ್ಕೂಟವು 21 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಆಡಳಿತಾರೂಢ ವೈಎಸ್‌ಆರ್‌ಸಿಪಿ ಪಕ್ಷವು ಕೇವಲ ನಾಲ್ಕು ಕ್ಷೇತ್ರಗಳಲ್ಲಷ್ಟೇ ಮುನ್ನಡೆಯಲ್ಲಿದೆ. ತೆಲಂಗಾಣದಲ್ಲಿ ಇಂಡಿಯಾ ಹಾಗೂ ಎನ್‌ಡಿಎ ಬಣಗಳು ತಲಾ 8 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಳ್ಳುವ ಮೂಲಕ ಸಮಬಲದ ಹೋರಾಟ ಮುಂದುವರಿಸಿವೆ.

ಲೋಕಸಭೆಯ 543 ಕ್ಷೇತ್ರಗಳಲ್ಲಿ ಈ ಬಾರಿ 400 ಕ್ಷೇತ್ರಗಳನ್ನು ಗೆಲ್ಲುವ ತವಕದಲ್ಲಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಇದ್ದು, ಆರಂಭಿಕ ಮುನ್ನಡೆ ಸಾಧಿಸಿದೆ. ಕಳೆದ ಬಾರಿ ಪಕ್ಷವು ಕರ್ನಾಟಕದಲ್ಲಿ 25 ಸ್ಥಾನಗಳನ್ನು ಗೆದ್ದಿತ್ತು. ತೆಲಂಗಾಣದಲ್ಲಿ 4 ಸ್ಥಾನಗಳನ್ನು ಪಡೆದಿತ್ತು. ಆದರೆ ಆಂಧ್ರಪ್ರದೇಶ, ಕೇರಳ ಹಾಗೂ ತಮಿಳುನಾಡಿನಲ್ಲಿ ಶೂನ್ಯ ಸಂಪಾದಿಸಿತ್ತು. 

ಆದರೆ ಜೂನ್ 1ರಂದು ವಿವಿಧ ಸಂಸ್ಥೆಗಳು ಪ್ರಕಟಿಸಿದ ಚುನಾವಣೋತ್ತರ ಸಮೀಕ್ಷೆಯಲ್ಲಿ ಕರ್ನಾಟಕದಲ್ಲಿ ಆಡಳಿತಾರೂಢ ಪಕ್ಷ ಕಾಂಗ್ರೆಸ್ ಇದ್ದರೂ, ಬಿಜೆಪಿ 20ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದು ಹೇಳಲಾಗಿತ್ತು. ಕೇರಳದಲ್ಲಿ ಬಿಜೆಪಿ 2 ಸ್ಥಾನಗಳನ್ನು ಹಾಗೂ ತಮಿಳುನಾಡಿನಲ್ಲಿ 4 ಸ್ಥಾನಗಳನ್ನು ಗೆಲ್ಲುವುದಾಗಿ ಹೇಳಿದ್ದವು.

ಮತ ಎಣಿಕೆ ಪ್ರಗತಿಯಲ್ಲಿದ್ದು, ಅಂತಿಮವಾಗಿ ಎಷ್ಟು ಕ್ಷೇತ್ರಗಳು ಈ ಬಣಗಳಿವೆ ದೊರಕಲಿವೆ ಎಂಬುದು ತಿಳಿಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT