ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

LS Polls: NDAಗೆ ಸಿಗದ ನಿರೀಕ್ಷಿತ ಸ್ಥಾನ: ಸರ್ಕಾರ ರಚಿಸಲು INDIA ದಿಂದಲೂ ಯತ್ನ

Published 4 ಜೂನ್ 2024, 10:30 IST
Last Updated 4 ಜೂನ್ 2024, 10:30 IST
ಅಕ್ಷರ ಗಾತ್ರ

ಬೆಂಗಳೂರು: ಲೋಕಸಭಾ ಚುನಾವಣೆ 2024ರ ಮತಗಣನೆ ಅಂತಿಮ ಹಂತದಲ್ಲಿದ್ದು, ಚುನಾವಣೋತ್ತರ ಸಮೀಕ್ಷೆಗಳ ಲೆಕ್ಕಾಚಾರದಂತೆ ಫಲಿತಾಂಶ ಬಾರದಿದ್ದರೂ, ಎನ್‌ಡಿಎ ಮೈತ್ರಿಕೂಟಕ್ಕೆ ಸರ್ಕಾರ ರಚಿಸಲು ಅಗತ್ಯವಿರುವ ಬಹುಮತವಷ್ಟೇ ಲಭಿಸಿದೆ. 2019ಕ್ಕೆ ಹೋಲಿಸಿದರೆ ಕಾಂಗ್ರೆಸ್‌ ಸಹಿತ ವಿರೋಧ ಪಕ್ಷಗಳ ಬಲಾಬಲ ಹೆಚ್ಚಾಗಿದೆ.

ಇತ್ತೀಚಿನ ವರದಿಗಳ ಪ್ರಕಾರ, ಈ ಬಾರಿ 236 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿರುವ ಬಿಜೆಪಿ ಕಳೆದ ಚುನಾವಣೆಯ 303 ಸ್ಥಾನಗಳಿಗೆ ಹೋಲಿಸಿದರೆ 67 ಕ್ಷೇತ್ರಗಳಲ್ಲಿ ಹಿನ್ನಡೆ ಅನುಭವಿಸಿದೆ. ಮತ್ತೊಂದೆಡೆ ಕಾಂಗ್ರೆಸ್ 100 ಕ್ಷೇತ್ರಗಳಲ್ಲಿ ಮುಂದಿದ್ದು, ಕಳೆದ ಬಾರಿಗಿಂತ 48 ಹೆಚ್ಚು ಕ್ಷೇತ್ರಗಳನ್ನು ಗಳಿಸುವತ್ತ ದಾಪುಗಾಲಿಟ್ಟಿದೆ. ಅಚ್ಚರಿ ಎಂಬಂತೆ ಬಿಜೆಪಿಯ ಶಕ್ತಿಕೇಂದ್ರ ಎಂದೇ ಬಿಂಬಿತವಾಗಿದ್ದ ಅಯೋಧ್ಯೆ ರಾಮಮಂದಿರವಿರುವ ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಾರ್ಟಿಯು ಬಿಜೆಪಿಗೆ ಪ್ರಬಲ ಪೈಪೋಟಿ ನೀಡಿದೆ. 

ರಾಜಸ್ಥಾನದಲ್ಲೂ ಬಿಜೆಪಿಗೆ ನಿರೀಕ್ಷಿತ ಸ್ಥಾನಗಳನ್ನು ಪಡೆಯಲು ಕಾಂಗ್ರೆಸ್‌ ಅವಕಾಶ ನೀಡಲಿಲ್ಲ. ಆದರೆ ಮಧ್ಯಪ್ರದೇಶದ 29 ಕ್ಷೇತ್ರಗಳೂ ಬಿಜೆಪಿ ಪಾಲಾಗಿದ್ದು, ಗುಜರಾತ್‌ನ 26 ಕ್ಷೇತ್ರಗಳಲ್ಲಿ ಬಿಜೆಪಿ 25ರಲ್ಲಿ ಗೆದ್ದಿದೆ.

ಪ.ಬಂಗಾಳ, ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಆಘಾತ: ಅತ್ತ ಪಶ್ಚಿಮ ಬಂಗಾಳದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಕೂಡಾ ಬಿಜೆಪಿಯ ಗೆಲುವಿಗೆ ತಡೆಯೊಡ್ಡಿದೆ. ಮಹಾರಾಷ್ಟ್ರದಲ್ಲಿ ಇಂಡಿಯಾ ಒಕ್ಕೂಟದ ಪಕ್ಷಗಳಾದ ಎನ್‌ಸಿಪಿ (ಶರದ್‌ ಪವಾರ್) ಮತ್ತು ಶಿವಸೇನೆ (ಉದ್ಧವ್ ಠಾಕ್ರೆ ಬಣ)ಗಳ ಕೈ ಮೇಲಾಗಿದೆ. 

ಈಶಾನ್ಯದಲ್ಲಿ ಎನ್‌ಡಿಎಗೆ ಅಲ್ಪ ಮುನ್ನಡೆ: ದೇಶದ ಈಶಾನ್ಯ ರಾಜ್ಯಗಳಲ್ಲಿ ಎನ್‌ಡಿಎ 9 ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿದರೆ, ಇಂಡಿಯಾ ಬಣ 7 ಕ್ಷೇತ್ರಗಳಲ್ಲಿ ಗೆದ್ದಿದೆ. 5 ಕ್ಷೇತ್ರಗಳು ಪ್ರಾದೇಶಿಕ ಪಕ್ಷಗಳ ಪಾಲಾಗಿವೆ.

ಎನ್‌ಡಿಎನಲ್ಲಿರುವ ಪ್ರಮುಖ ಮಿತ್ರ ಪಕ್ಷಗಳು: ಎನ್‌ಡಿಎನಲ್ಲಿರುವ ಪ್ರಮುಖ ಪಕ್ಷವಾಗಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಹಾಗೂ ಆಂಧ್ರಪ್ರದೇಶದ ಎನ್.ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಅಭ್ಯರ್ಥಿಗಳು ಉತ್ತಮ ಫಲಿತಾಂಶ ದಾಖಲಿಸಿದ್ದಾರೆ. ಹೀಗಾಗಿ ಬಿಜೆಪಿ ನೇತೃತ್ವದ ಎನ್‌ಡಿಎನಲ್ಲಿ ಈ ಎರಡೂ ಪಕ್ಷಗಳ ಪ್ರಬಲ್ಯ ಹೆಚ್ಚಾಗಿದೆ.

ದಕ್ಷಿಣ ಭಾರತ: ಕೇರಳದಲ್ಲಿ ಅರಳಿದ ಕಮಲ; ತಮಿಳುನಾಡಿನಲ್ಲಿ ಇಂಡಿಯಾ ಬಲ

ದಕ್ಷಿಣ ಭಾರತದಲ್ಲಿ ಗಮನಿಸಿದರೆ ಕೇರಳದಲ್ಲಿ ಬಿಜೆಪಿ ಖಾತೆ ತೆರೆದಿದೆ. ತಮಿಳುನಾಡಿನಲ್ಲಿ ಡಿಎಂಕೆ ಮತ್ತು ಕಾಂಗ್ರೆಸ್ ತನ್ನ ಹಿಡಿತ ಕಾಪಾಡಿಕೊಂಡಿದೆ. ತೆಲಂಗಾಣದಲ್ಲಿ ಇಂಡಿಯಾ ಮತ್ತು ಎನ್‌ಡಿಎ ಸಮಬಲದ ಹೋರಾಟ ನಡೆಸಿವೆ. ಕರ್ನಾಟಕದಲ್ಲಿ ಬಿಜೆಪಿ ಸ್ಥಾನಗಳನ್ನು ಕಳೆದುಕೊಂಡಿದ್ದರೂ, ಕಾಂಗ್ರೆಸ್‌ಗೆ ಹೆಚ್ಚಿನ ಸ್ಥಾನ ಗೆಲ್ಲುವುದನ್ನು ತಡೆಯುವಲ್ಲಿ ಜೆಡಿಎಸ್‌ ಜೊತೆಗಿನ ಮೈತ್ರಿ ನೆರವಾಗಿದೆ.

ಈ ಎಲ್ಲದರ ಪರಿಣಾಮ ಕೇಂದ್ರದಲ್ಲಿ ಎನ್‌ಡಿಎ 294 ಸ್ಥಾನಗಳನ್ನು ಪಡೆಯುವ ಸನಿಹದಲ್ಲಿದೆ. ಸರ್ಕಾರ ರಚಿಸಲು 272 ಸ್ಥಾನಗಳು ಅಗತ್ಯ. ಹೀಗಾಗಿ ಸರ್ಕಾರ ರಚನೆಗೆ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸಿದ್ಧತೆ ನಡೆಸಿದೆ.

ಈ ಬಾರಿ 400 ಸೀಟುಗಳನ್ನು ಗೆಲ್ಲುವ ಉಮೇದಿನಲ್ಲಿದ್ದ ಬಿಜೆಪಿಗೆ ಉತ್ತರ ಪ್ರದೇಶ, ಮಹಾರಾಷ್ಟ್ರ ಹಾಗೂ ರಾಜಸ್ಥಾನದಲ್ಲಿ ಹಿನ್ನಡೆ ಉಂಟಾಯಿತು. ಇದರ ಪರಿಣಾಮವಾಗಿ ಅದು 295 ಸ್ಥಾನಗಳ ಆಸುಪಾಸಿಗೆ ಸರಳ ಬಹುಮತಕ್ಕೆ ತೃಪ್ತಿಪಡಬೇಕಾಗಿದೆ. 

ಮತ್ತೊಂದೆಡೆ ಇಂಡಿಯಾ ಬಣ 228 ಕ್ಷೇತ್ರಗಳಲ್ಲಿ ಗೆಲುವು/ಮುನ್ನಡೆ ದಾಖಲಿಸಿ, ಅಧಿಕಾರ ಹಿಡಿಯುವ ತಂತ್ರ ರಚಿಸಿದೆ. ಜೂನ್ 1ರಂದು ವಿವಿಧ ಸಂಸ್ಥೆಗಳು ಪ್ರಕಟಿಸಿದ ಚುನಾವಣೋತ್ತರ ಸಮೀಕ್ಷೆಯಲ್ಲಿ 180 ಕ್ಷೇತ್ರಗಳಲ್ಲಿ ಇಂಡಿಯಾ ಬಣ ಗೆಲುವು ಸಾಧಿಸಬಹುದು ಎಂದು ಅಂದಾಜಿಸಲಾಗಿತ್ತು. ಆದರೆ 48 ಹೆಚ್ಚುವರಿ ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಸರ್ಕಾರ ರಚನೆಯ ಕಸರತ್ತು ಒಕ್ಕೂಟದೊಳಗೆ ಆರಂಭಗೊಂಡಿದೆ.  ಪ್ರಮುಖ ಪಕ್ಷಗಳಾದ ಮತ್ತು ಎನ್‌ಡಿಎ ಕೂಟದಲ್ಲಿರುವ ಆಂಧ್ರದ ಟಿಡಿಪಿ ಮತ್ತು ಬಿಹಾರದ ಜೆಡಿಯು ಜತೆ ಮಾತುಕತೆಗೆ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.

2019ರ ಲೋಕಸಭಾ ಚುನಾವಣೆಯ ಹಿನ್ನೋಟ

2019ರ ಮೇ 23ರಂದು ಪ್ರಕಟಗೊಂಡಿದ್ದ, 17ನೇ ಲೋಕಸಭೆಗೆ ನಡೆದಿದ್ದ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟ ಭಾರೀ ಬಹುಮತ ಪಡೆದಿತ್ತು. ಆಗ ಎನ್‌ಡಿಎ 353 ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿತ್ತು. ಯುಪಿಎ ಕೇವಲ 93 ಕ್ಷೇತ್ರಗಳನ್ನಷ್ಟೇ ಗೆದ್ದುಕೊಂಡಿತ್ತು. ಆಗ ಬಿಜೆಪಿ 303 ಸ್ಥಾನಗಳನ್ನು ಗೆದ್ದಿದ್ದರೆ, ಕಾಂಗ್ರೆಸ್ ಕೇವಲ 52 ಕ್ಷೇತ್ರಗಳನ್ನಷ್ಟೇ ಗೆದ್ದಿತ್ತು.

ಈ ಬಾರಿ 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಜೂನ್‌ 1ರಂದು ನಡೆದಿದ್ದ 7ನೇ ಹಾಗೂ ಅಂತಿಮ ಹಂತದ ಮತದಾನದ ನಂತರ ಪ್ರಕಟಗೊಂಡ ವಿವಿಧ ಸಂಸ್ಥೆಗಳ ಚುನಾವಣೋತ್ತರ ಸಮೀಕ್ಷೆಗಳಲ್ಲಿ ಇಂಡಿಯಾ ಟುಡೆ ಮೈ ಆ್ಯಕ್ಸಿಸ್‌, ಟುಡೇಸ್ ಚಾಣಕ್ಯ ಸಮೀಕ್ಷಾ ತಂಡಗಳು ಎನ್‌ಡಿಎ ಇ ಬಾರಿ 400ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಲಿದೆ ಎಂದೇ ಹೇಳಿದ್ದವು. ಎಬಿಪಿ–ಸಿವೋಟರ್ಸ್‌ 353ರಿಂದ 383 ಕ್ಷೇತ್ರಗಳನ್ನು ಎನ್‌ಡಿಎಗೆ ನೀಡಿತ್ತು. ಜನ್‌ ಕಿ ಬಾತ್‌ 362–392 ಸ್ಥಾನಗಳನ್ನು ಎನ್‌ಡಿಎ ಗೆಲ್ಲಬಹುದು ಎಂದಿತ್ತು.

ಸ್ವತಂತ್ರ ಭಾರತದಲ್ಲಿ 1951–52ರಲ್ಲಿ 44 ದಿನಗಳ ಸುದೀರ್ಘ ಅವಧಿಗೆ ಚುನಾವಣೆ ನಡೆದಿತ್ತು. ಇದಾದ ನಂತರ 82 ದಿನಗಳ ಕಾಲ ಚುನಾವಣೆ ನಡೆದಿದ್ದು 2024ರಲ್ಲೇ. ಒಟ್ಟು 543 ಕ್ಷೇತ್ರಗಳಿಗೆ ಮಾರ್ಚ್ 14ರಂದು ಚುನಾವಣೆ ಘೋಷಣೆಯಾಗಿತ್ತು. ಏ. 19ರಿಂದ ಜೂನ್ 1ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಿತು. ಈ ಇಡೀ ಪ್ರಕ್ರಿಯೆಯಲ್ಲಿ ಒಟ್ಟು 1.5 ಕೋಟಿ ಅಧಿಕಾರಿಗಳು ಪಾಲ್ಗೊಂಡಿದ್ದರು. 10.5 ಲಕ್ಷ ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ಹಬ್ಬ ಎಂದೇ ಕರೆಯಲಾಗುವ ಭಾರತದ ಸಾರ್ವತ್ರಿಕ ಚುನಾವಣೆಯಲ್ಲಿ 96 ಕೋಟಿ ಮತದಾರರಲ್ಲಿ 64 ಕೋಟಿಗೂ ಹೆಚ್ಚು ಜನ ತಮ್ಮ ಹಕ್ಕುಗಳ ಚಲಾವಣೆ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT