ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಯದ್ದು ಮನುವಾದಿ ಮನಸ್ಥಿತಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕೆ

Published 22 ಮಾರ್ಚ್ 2024, 15:48 IST
Last Updated 22 ಮಾರ್ಚ್ 2024, 15:48 IST
ಅಕ್ಷರ ಗಾತ್ರ

ಬೆಂಗಳೂರು: ‘ಬಿಜೆಪಿಯು ಮಾರಕ ಮನುವಾದಿ ಮನಸ್ಥಿತಿಯನ್ನು ಹೊಂದಿದೆ. ಮನುಸ್ಮೃತಿಯ ಪ್ರತಿಪಾದನೆಯಂತೆ ಅಸಮಾನತೆ ಮತ್ತು ಜಾತಿ ವ್ಯವಸ್ಥೆ ಮುಂದುವರಿಯಬೇಕು ಎಂದು ಆ ಪಕ್ಷ ಬಯಸುತ್ತದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು.

ರಾಜ್ಯ ಕಾಂಗ್ರೆಸ್‌ ಉಸ್ತುವಾರಿಯಾಗಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರೊಂದಿಗೆ ಶುಕ್ರವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಬೇಕು ಹಾಗೂ ರೈತರ ಸಮಸ್ಯೆಗಳಿಗೆ ಪರಿಹಾರ ದೊರಕಬಾರದು ಎಂಬುದು ಬಿಜೆಪಿಯ ಆಸೆ. ಈ ಕಾರಣದಿಂದ ಅದು ಕಾಂಗ್ರೆಸ್‌ನ ಹೋರಾಟಗಳನ್ನು ತಡೆಯುವ ಪ್ರಯತ್ನ ಮಾಡುತ್ತಿದೆ’ ಎಂದರು.

‘ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ), ಪುಲ್ವಾಮಾ ದಾಳಿ, ಅಯೋಧ್ಯೆಯಂತಹ ವಿಷಯಗಳ ಹೆಸರಿನಲ್ಲಿ ಇನ್ನೂ ಎಷ್ಟು ವರ್ಷ ಮತದಾರರನ್ನು ಭಾವನಾತ್ಮಕವಾಗಿ ಮರಳು ಮಾಡುತ್ತೀರಿ? ಜನರ ಜೀವನದ ಸಮಸ್ಯೆಗಳಿಗೆ ನೆಪಮಾತ್ರಕ್ಕೂ ಸ್ಪಂದಿಸದ ನೀವು, ಭಾವನಾತ್ಮಕವಾಗಿ ಕೆರಳಿಸುವ ಕೆಲಸವನ್ನು ಮಾತ್ರ ಮಾಡುತ್ತಿದ್ದೀರಿ. ಭಾರತದ ಜನರು ಈ ಚುನಾವಣೆಯಲ್ಲಿ ನಿಮ್ಮನ್ನು ಅಧಿಕಾರದಿಂದ ಕೆಳಕ್ಕೆ ಇಳಿಸುತ್ತಾರೆ’ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.

‘ಕಾಂಗ್ರೆಸ್‌ ಪಕ್ಷವು ಚುನಾವಣೆ ಎದುರಿಸದಂತೆ ಕಿರುಕುಳ ನೀಡುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಬ್ರಿಟೀಷರ ವಿರುದ್ಧ ಹೋರಾಟ ನಡೆಸಿದ ಇತಿಹಾಸವಿರುವ ಕಾಂಗ್ರೆಸ್‌ ಪಕ್ಷ ಇಂತಹ ಬೆದರಿಕೆಗಳಿಗೆ ಮಣಿಯುವುದಿಲ್ಲ’ ಎಂದರು.

ಸರ್ವಾಧಿಕಾರಿ ಧೋರಣೆ: ಸುರ್ಜೇವಾಲಾ ಮಾತನಾಡಿ, ‘ಪ್ರಧಾನಿ ನರೇಂದ್ರ ಮೋದಿ ಅವರು ಹಿಟ್ಲರ್‌ ಮಾದರಿಯ ಸರ್ವಾಧಿಕಾರಿ ಧೋರಣೆಯನ್ನು ಪ್ರದರ್ಶಿಸುತ್ತಿದ್ದಾರೆ. ಅದರ ಭಾಗವಾಗಿಯೇ ಕಾಂಗ್ರೆಸ್ ಪಕ್ಷದ ಬ್ಯಾಂಕ್‌ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ’ ಎಂದು ದೂರಿದರು.

‘ನಮ್ಮ ಪಕ್ಷದ 11 ಬ್ಯಾಂಕ್‌ ಖಾತೆಗಳನ್ನು ಆದಾಯ ತೆರಿಗೆ ಇಲಾಖೆ ಮೂಲಕ ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ ಜಾಹೀರಾತು ಪ್ರಕಟಣೆ, ನಾಯಕರ ಪ್ರವಾಸಕ್ಕೆ ವೆಚ್ಚ ಮಾಡಲು ನಮ್ಮ ಬಳಿ ಹಣವಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT