ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನಸಭೆ ಚುನಾವಣೆ ಫಲಿತಾಂಶ: ಜಯನಗರ ಮರು ಎಣಿಕೆ, ಉದ್ವಿಗ್ನ ವಾತಾವರಣ

ಎಣಿಕೆಯಲ್ಲಿ ಕಾಂಗ್ರೆಸ್‌ಗೆ ಮುನ್ನಡೆ; ಮರು ಎಣಿಕೆಯಲ್ಲಿ ಬಿಜೆಪಿ ಮುನ್ನಡೆ: ಗೊಂದಲ ಸೃಷ್ಟಿ
Published 13 ಮೇ 2023, 19:39 IST
Last Updated 13 ಮೇ 2023, 19:39 IST
ಅಕ್ಷರ ಗಾತ್ರ

ಬೆಂಗಳೂರು: ಪ್ರತಿಷ್ಠಿತ ಬಡಾವಣೆಗಳ ಜಯನಗರ ವಿಧಾನಸಭೆ ಕ್ಷೇತ್ರದ ಮತ ಎಣಿಕೆಯಲ್ಲಿ ಗೊಂದಲ ಸೃಷ್ಟಿಯಾಗಿ, ಕಾಂಗ್ರೆಸ್‌ ಹಾಗೂ ಬಿಜೆಪಿ ಕಾರ್ಯಕರ್ತರು ಪರಸ್ಪರ ಕೂಗಾಟ, ತಳ್ಳಾಟದಲ್ಲಿ ತೊಡಗಿದ್ದರು. ಸ್ಥಳದಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿ, ಪೊಲೀಸರು ಹೆಚ್ಚಿನ ಭದ್ರತೆ ಒದಗಿಸಿದರು. ತಡರಾತ್ರಿಯವರೆಗೂ ಗೊಂದಲವಿತ್ತು.

ಮರು ಎಣಿಕೆ ವಿಚಾರದಲ್ಲಿ ಅಕ್ರಮವಾಗಿದೆ ಎಂದು ಕಾಂಗ್ರೆಸ್‌ ಹಾಗೂ ಬಿಜೆಪಿ ನಾಯಕರು ಪರಸ್ಪರ ಆರೋಪಿಸಿದ್ದರು. ಎಲ್ಲ ಸುತ್ತುಗಳ ಮತ ಎಣಿಕೆ ಮುಗಿದ ಮೇಲೆ ಕಾಂಗ್ರೆಸ್‌ನ ಸೌಮ್ಯ ರೆಡ್ಡಿ 294 ಮತಗಳ ಅಂತರದಿಂದ ಬಿಜೆಪಿಯ ಸಿ.ಕೆ. ರಾಮಮೂರ್ತಿ ಅವರಿಗಿಂತ ಮುಂದಿದ್ದರು. ಈ ಸಂದರ್ಭದಲ್ಲಿ ರಾಮಮೂರ್ತಿ ಮರು ಎಣಿಕೆಗೆ ಮನವಿ ಮಾಡಿದರು. ಅದನ್ನು ಪುರಸ್ಕರಿಸಿದ ಚುನಾವಣೆ ಅಧಿಕಾರಿ ಮರು ಎಣಿಕೆ ಮಾಡಿದರು. ಆಗ ಬಿಜೆಪಿ ಅಭ್ಯರ್ಥಿಗೆ ಮುನ್ನಡೆ ದೊರೆಯಿತು.

‘ಮರುಎಣಿಕೆಯಲ್ಲಿ ಅಕ್ರಮವಾಗಿದೆ’ ಎಂದು ಕಾಂಗ್ರೆಸ್‌ ಕಾರ್ಯಕರ್ತರು ಘೋಷಣೆ ಕೂಗಿದರು. ಇದರ ವಿರುದ್ಧ ಬಿಜೆಪಿಯವರೂ ಘೋಷಣೆ ಕೂಗಿದರು. ಕಾಂಗ್ರೆಸ್‌ ಮುಖಂಡರಾದ ಡಿ.ಕೆ. ಶಿವಕುಮಾರ್‌, ರಾಮಲಿಂಗಾರೆಡ್ಡಿ ಸ್ಥಳದಲ್ಲಿ ಕುಳಿತು ಚುನಾವಣೆ ಅಧಿಕಾರಿ ವಿರುದ್ಧ ಆರೋಪಿಸಿದರು. ‘ಸಂಸದ ತೇಜಸ್ವಿ ಸೂರ್ಯ ಅವರನ್ನು ಏಕೆ ಒಳಗೆ ಬಿಟ್ಟಿರಿ’ ಎಂದು ಪ್ರಶ್ನಿಸಿದರು. ಸ್ಥಳದಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಯಾಯಿತು.

ಜಯನಗರದ ಎಸ್‌ಎಸ್‌ಎಂಆರ್‌ವಿ ಪಿಯು ಕಾಲೇಜಿನಲ್ಲಿ ಮತ ಎಣಿಕೆ ಕೇಂದ್ರದ ಸುತ್ತ ಸಾಕಷ್ಟು ಜನರು ಸೇರಿದ್ದರು. ಸಂಸದ ಡಿ.ಕೆ. ಸುರೇಶ್‌ ಹಾಗೂ ಬೆಂಬಲಿಗರು ಮತ ಎಣಿಕೆ ಕೇಂದ್ರದ ಒಳಗೆ ಹೋಗಲು ಗೇಟ್‌ ಅನ್ನು ತಳ್ಳಾಡಿದರು. ಪೊಲೀಸರು ಮಧ್ಯೆಪ್ರವೇಶಿಸಿ ಅವರನ್ನು ಸಮಾಧಾನಗೊಳಿಸಿದರು.

‘ಮತ ಮರು ಎಣಿಕೆ ಸಂದರ್ಭದಲ್ಲಿ ಅಂಚೆ ಮತಗಳನ್ನು ಸೇರಿಸಲಾಗಿದೆ. ಮೊದಲು ತಿರಸ್ಕರಿಸಿದ ಅಂಚೆ ಮತಗಳನ್ನು ಪರಿಗಣನೆಗೆ ತೆಗೆದುಕೊಂಡು ಚುನಾವಣೆ ಅಧಿಕಾರಿಗಳು ಅಕ್ರಮ ಎಸಗಿದ್ದಾರೆ. ಮೊದಲು ಎಣಿಕೆ ಮುಗಿದ ಸಂದರ್ಭದಲ್ಲಿ ಸೌಮ್ಯ ರೆಡ್ಡಿ ಮುಂದಿದ್ದರು. ಸುಮಾರು 160 ಮತಗಳ ಅಂತರವಿತ್ತು. ಆದರೆ, ತಿರಸ್ಕೃತ ಮತಗಳನ್ನು ಸೇರಿಸಿಕೊಂಡು 17 ಮತಗಳ ಅಂತರದಿಂದ ಬಿಜೆಪಿಯ ಸಿ.ಕೆ. ರಾಮಮೂರ್ತಿ ಗೆದ್ದಿದ್ದಾರೆ ಎಂದು ಘೋಷಿಸಲು ಹೊರಟರು. ಅದಕ್ಕೆ ನಮ್ಮ ವಿರೋಧವಿದೆ’ ಎಂದು ಕಾಂಗ್ರೆಸ್‌ ಮುಖಂಡ ರಾಮಲಿಂಗಾರೆಡ್ಡಿ ಹೇಳಿದರು.

‘ಸೌಮ್ಯ ರೆಡ್ಡಿ 160 ಮತಗಳಿಂದ ಮುಂದಿದ್ದಾರೆ ಎಂದು ವೆಬ್‌ ಸೈಟ್‌ನಲ್ಲೂ ಪ್ರಕಟಿಸಲಾಗಿತ್ತು. ಅದನ್ನು ಫಲಿತಾಂಶ ಎಂದು ಪ್ರಕಟಿಸಿ ಎಂಬುದು ನಮ್ಮ ಒತ್ತಾಯ. ಆದರೆ ಇಲ್ಲಿನ ಕೆಲವು ಅಧಿಕಾರಿಗಳು ಬಿಜೆಪಿ ಪರವಾಗಿ ಕೆಲಸ ಮಾಡಿ, ತಿರಸ್ಕೃತ ಮತಗಳನ್ನೆಲ್ಲ ಸರಿ ಎಂದು ಪರಿಗಣಿಸಿದ್ದಾರೆ’ ಎಂದು ಆರೋಪಿಸಿದರು.

‘ಮತಗಳ ಎಣಿಕೆಯನ್ನು ಎಣಿಕೆ ಕೇಂದ್ರದಲ್ಲಿರುವ ಬೋರ್ಡ್‌ನಲ್ಲಿ ಸಂಪೂರ್ಣವಾಗಿ ಬರೆಯಲಾಗಿದೆ. ಅದನ್ನು ಎಣಿಕೆ ಮಾಡಿ ಫಲಿತಾಂಶ ಪ್ರಕಟಿಸಬೇಕು ಎಂಬುದು ನಮ್ಮ ಒತ್ತಾಯ. ಅದರಂತೆ ಸಿ.ಕೆ. ರಾಮಮೂರ್ತಿ ಗೆದ್ದಿದ್ದಾರೆ. ಆದರೆ ಕಾಂಗ್ರೆಸ್‌ನವರು ಬಿಡುತ್ತಿಲ್ಲ’ ಎಂದು ಬಿಜೆಪಿ ಮುಖಂಡ ಆರ್‌. ಅಶೋಕ ತಿಳಿಸಿದರು.

‘ಯಾವ ಮತಗಳನ್ನು ಪರಿಗಣಿಸಬೇಕು, ಪರಿಗಣಿಸಬಾರದು ಎಂಬುದು ನಿಯಮಗಳ ಪುಸ್ತಕದಲ್ಲಿ ವಿವರವಾಗಿ ಬರೆಯಲಾಗಿದೆ. ಅದರಂತೆ ಇಬ್ಬರು ಚುನಾವಣೆ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿದ್ದಾರೆ. ನಿಯಮಗಳು ಏನು ಎಂಬುದನ್ನು ರಾಮಲಿಂಗಾರೆಡ್ಡಿ ಅವರ ಮುಂದೆಯೇ ನಮಗೂ ಅಧಿಕಾರಿಗಳು ತಿಳಿಸಿದ್ದಾರೆ. ಅದರಂತೆ ಕ್ರಮ ಕೈಗೊಳ್ಳಬೇಕು ಎಂಬುದು ನಮ್ಮ ಒತ್ತಾಯವಾಗಿದೆ’ ಎಂದರು.

‘ಮತ ಎಣಿಕೆ ಕೇಂದ್ರಕ್ಕೆ ಸಂಸದ ತೇಜಸ್ವಿ ಸೂರ್ಯ ಹೋಗಬಾರದು ಎಂದಿದ್ದಾರೆ. ಆದರೆ, ಅದಕ್ಕೂ ಮೊದಲು ಎಣಿಕೆ ಕೇಂದ್ರದಲ್ಲಿ ಹೋಗಿ ಕುಳಿತಿದ್ದು ರಾಮಲಿಂಗಾರೆಡ್ಡಿ ಹಾಗೂ ಅವರ ಬೆಂಬಲಿಗರು. ನಾವು ಬಂದು ಅವರನ್ನೆಲ್ಲ ಹೊರಗೆ ಕಳಿಸಿದೆವು. ಈಗ ಜನರನ್ನೆಲ್ಲ ಕರೆದುಕೊಂಡು ಬಂದು ರೌಡಿಸಂ ಮಾಡುತ್ತಿದ್ದಾರೆ. ಈಗಲೇ ಇವರ ಗೂಂಡಾಗಿರಿ, ದೌರ್ಜನ್ಯ ಆರಂಭವಾಗಿದೆ’ ಎಂದು ಅಶೋಕ ದೂರಿದರು.

‘ಗಾಂಧಿನಗರದಲ್ಲಿ ದಿನೇಶ್‌ ಗುಂಡೂರಾವ್‌ ಕಡಿಮೆ ಅಂತರದಲ್ಲಿ ಗೆದ್ದರು. ನಾವು ಅದನ್ನು ಒಪ್ಪಿಕೊಂಡಿಲ್ಲವೇ? ಇವರು ಸೋಲನ್ನು ಒಪ್ಪಿಕೊಳ್ಳಬೇಕು. ಸುಮ್ಮನೇ ಆರೋಪ, ದೌರ್ಜನ್ಯ, ಗಲಾಟೆ ಮಾಡುತ್ತಿದ್ದಾರೆ’ ಎಂದರು.

ಜಯನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಸೌಮ್ಯ ರೆಡ್ಡಿ ಬೆಂಬಲಿಗರು ಮತಎಣಿಕೆ ಕೇಂದ್ರದಲ್ಲಿ ಪೊಲೀಸರೊಂದಿಗೆ ವಾಗ್ವಾದ ನಡೆಸಿದರು –ಪ್ರಜಾವಾಣಿ ಚಿತ್ರ/ ಕಿಶೋರ್‌ ಕುಮಾರ್ ಬೋಳಾರ್
ಜಯನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಸೌಮ್ಯ ರೆಡ್ಡಿ ಬೆಂಬಲಿಗರು ಮತಎಣಿಕೆ ಕೇಂದ್ರದಲ್ಲಿ ಪೊಲೀಸರೊಂದಿಗೆ ವಾಗ್ವಾದ ನಡೆಸಿದರು –ಪ್ರಜಾವಾಣಿ ಚಿತ್ರ/ ಕಿಶೋರ್‌ ಕುಮಾರ್ ಬೋಳಾರ್
ಜಯನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಿ.ಕೆ. ರಾಮಮೂರ್ತಿ ಮತ ಎಣಿಕೆ ಕೇಂದ್ರ ಮುಂದೆ ಕಾರ್ಯಕರ್ತರೊಂದಿಗಿದ್ದರು –ಪ್ರಜಾವಾಣಿ ಚಿತ್ರ/ ಕಿಶೋರ್‌ ಕುಮಾರ್ ಬೋಳಾರ್
ಜಯನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಿ.ಕೆ. ರಾಮಮೂರ್ತಿ ಮತ ಎಣಿಕೆ ಕೇಂದ್ರ ಮುಂದೆ ಕಾರ್ಯಕರ್ತರೊಂದಿಗಿದ್ದರು –ಪ್ರಜಾವಾಣಿ ಚಿತ್ರ/ ಕಿಶೋರ್‌ ಕುಮಾರ್ ಬೋಳಾರ್

16 ಮತದಿಂದ ಬಿಜೆಪಿಗೆ ಜಯ

ಜಯನಗರ ವಿಧಾನಸಭೆ ಕ್ಷೇತ್ರದ ಫಲಿತಾಂಶ ಹಲವು ಅಡೆತಡೆಗಳನ್ನು ಮೀರಿ ತಡರಾತ್ರಿ ಪ್ರಕಟಗೊಂಡಿತು. ಬಿಜೆಪಿಯ ಸಿ.ಕೆ. ರಾಮಮೂರ್ತಿ ಅವರು ಕಾಂಗ್ರೆಸ್ ನ ಸೌಮ್ಯ ರೆಡ್ಡಿ ವಿರುದ್ಧ 16 ಮತಗಳಿಂದ ವಿಜಯ ಸಾಧಿಸಿದರು.

ಮರು ಎಣಿಕೆ ಪ್ರಕ್ರಿಯೆಯಲ್ಲಾದ ಗೊಂದಲದಿಂದ ತಡರಾತ್ರಿಯವರೆಗೂ ಮೂಡಿ ಫಲಿತಾಂಶ ಘೋಷಣೆಯಾಗಿರಲಿಲ್ಲ. ಮೂರು ಬಾರಿ ಮತ ಎಣಿಕೆ ಮಾಡಲಾಯಿತು. ಅಧಿಕಾರಿಗಳ ಈ ಮರು ಎಣಿಕೆಯನ್ನು ಕಾಂಗ್ರೆಸ್ ಮುಖಂಡರು ಒಪ್ಪದೇ ಗೊಂದಲ ಸೃಷ್ಟಿಯಾಗಿತ್ತು.

ಕಾಂಗ್ರೆಸ್‌ ಹಾಗೂ ಬಿಜೆಪಿ ಅಭ್ಯರ್ಥಿಗಳು ಮತ್ತು ನಾಯಕರು ತಮ್ಮದೇ ವಾದ ಮಂಡಿಸಿ ಅವರಂತೆಯೇ ಫಲಿತಾಂಶ ಘೋಷಣೆಯಾಗಬೇಕೆಂದು ಒತ್ತಾಯಿಸಿದರು.

ಜಯನಗರ ಮತ ಎಣಿಕೆ ಕೇಂದ್ರಕ್ಕೆ ಬಂದ ಜಿಲ್ಲಾ ಚುನಾವಣಾಧಿಕಾರಿ ತುಷಾರ್‌ ಗಿರಿನಾಥ್‌ ಅವರು ಮತ ಎಣಿಕೆ ಕೇಂದ್ರದಲ್ಲಿ ಅಧಿಕಾರಿಗಳು ಮರು ಎಣಿಕೆ ಸಂದರ್ಭದಲ್ಲಿ ಕೈಗೊಂಡ ಕ್ರಮಗಳನ್ನು ಪರಿಶೀಲಿಸಿದರು. ನಂತರ ಬಿಜೆಪಿ ಗೆಲುವನ್ನು ನಿರ್ಧರಿಸಲಾಯಿತು. ಸಿ.ಕೆ. ರಾಮಮೂರ್ತಿ ಅವರಿಗೆ ಪ್ರಮಾಣ ಪತ್ರ ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT