ಶನಿವಾರ, ಜನವರಿ 29, 2022
17 °C

ತಮಗಿಂತ ಕಿರಿಯ ಪುರುಷರನ್ನು ವಿವಾಹವಾಗುತ್ತಿರುವ ಮಹಿಳೆಯರ ಬಗ್ಗೆ ಖುಷಿ ಇದೆ: ಕಂಗನಾ

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಮುಂಬೈ: ಯಶಸ್ವಿ ಮಹಿಳೆಯರು ತಮಗಿಂತ ಕಿರಿಯ ಪುರುಷರನ್ನು ಮದುವೆಯಾಗುತ್ತಿರುವ ವಿಚಾರ ನನಗೆ ಖುಷಿ ತಂದಿದೆ ಎಂದು ಬಾಲಿವುಡ್‌ ನಟಿ ಕಂಗನಾ ಹೇಳಿದ್ದಾರೆ. 

ಬಾಲಿವುಡ್ ತಾರೆಗಳಾದ ಕತ್ರಿನಾ ಕೈಫ್(38) ಮತ್ತು ವಿಕ್ಕಿ ಕೌಶಲ್(33) ಅವರ ವಿವಾಹ ಸಮಾರಂಭವು ರಾಜಸ್ಥಾನದಲ್ಲಿ ನಡೆಯುತ್ತಿದೆ. 

ಇದರ ನಡುವೆಯೇ ತಮ್ಮ ಇನ್‌ಸ್ಟಾಗ್ರಾಮ್‌ ಸ್ಟೋರಿಯಲ್ಲಿ ಬರೆದುಕೊಂಡಿರುವ ಕಂಗನಾ, ‘ತಮಗಿಂತ ಚಿಕ್ಕ ವಯಸ್ಸಿನ ಪುರುಷರನ್ನು ಮದುವೆಯಾಗುವ ಮೂಲಕ  ಸಿನಿಮಾ ಉದ್ಯಮದ ಯಶಸ್ವಿ ಮಹಿಳೆಯರು ಸಂಪ್ರದಾಯವನ್ನು ಮುರಿಯುತ್ತಿದ್ದಾರೆ. ಈ ಬೆಳವಣಿಗೆಯನ್ನು ನೋಡಲು ಖುಷಿಯಾಗುತ್ತಿದೆ‘ ಎಂದು ಶ್ಲಾಘಿಸಿದ್ದಾರೆ. 

‘ಶ್ರೀಮಂತ ಪುರುಷರು ಕಿರಿಯ ವಯಸ್ಸಿನ ಮಹಿಳೆಯರನ್ನು ಮದುವೆಯಾಗಿರುವ ಬಗ್ಗೆ ನಾವು ಕೇಳುತ್ತಲೇ ಬೆಳೆದಿದ್ದೇವೆ. ಈ ಹಿಂದೆ ಮಹಿಳೆಯರು ತಮ್ಮ ಪತಿಗಿಂತ ಹೆಚ್ಚು ಯಶಸ್ವಿಯಾಗುವುದು ಕಷ್ಟದ ಕೆಲಸವಾಗಿತ್ತು. ನಿರ್ದಿಷ್ಟ ವಯಸ್ಸಿನ ನಂತರ ಮಹಿಳೆಯರಿಗೆ ಮದುವೆಯೇ ಅಸಾಧ್ಯವಾಗಿತ್ತು. ಭಾರತೀಯ ಚಿತ್ರೋದ್ಯಮದ ಪ್ರಮುಖ ಮಹಿಳೆಯರು ಈ ಸಂ‍ಪ್ರದಾಯವನ್ನು ಮುರಿಯುತ್ತಿದ್ದಾರೆ. ಈ ಬೆಳವಣಿಗೆಗಳನ್ನು ನೋಡಲು ನನಗೆ ಸಂತಸವಾಗುತ್ತದೆ‘ ಎಂದು ಕಂಗನಾ ತಿಳಿಸಿದ್ದಾರೆ.

ಬಾಲಿವುಡ್‌ ತಾರೆಯರಾದ ಐಶ್ವರ್ಯಾ ರೈ, ಪ್ರಿಯಾಂಕಾ ಚೋಪ್ರಾ ಅವರು ತಮಗಿಂತ ಕಿರಿಯ ವಯಸ್ಸಿನ ಪುರುಷರನ್ನು ಮದುವೆಯಾಗಿರುವುದನ್ನು ಇಲ್ಲಿ ಸ್ಮರಿಸಬಹುದು.

ಡಿಸೆಂಬರ್ 7 ರಿಂದ 9ರವರೆಗೆ ರಾಜಸ್ಥಾನದಲ್ಲಿ ಕತ್ರಿನಾ–ವಿಕ್ಕಿ ವಿವಾಹ ಸಮಾರಂಭ ನಡೆಯತ್ತಿದೆ. ಈ ಕಾರ್ಯಕ್ರಮವನ್ನು ಅತ್ಯಂತ ಖಾಸಗಿ ಸಮಾರಂಭವಾಗಿ ನಡೆಸಲು ವಿಕ್ಕಿ-ಕತ್ರೀನಾ ಜೋಡಿ ಬಯಸಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು