ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

MOVIE REVIEW | ಕಾಂತಾರ ಸಿನಿಮಾ ವಿಮರ್ಶೆ: ಮಣ್ಣಿನ ಘಮಲಿನಲ್ಲಿ ಸಂಘರ್ಷ–ಸೌಹಾರ್ದ

Last Updated 30 ಸೆಪ್ಟೆಂಬರ್ 2022, 12:41 IST
ಅಕ್ಷರ ಗಾತ್ರ

ಸಿನಿಮಾ: ಕಾಂತಾರ–ಒಂದು ದಂತಕಥೆ(ಕನ್ನಡ)

ನಿರ್ದೇಶನ: ರಿಷಬ್‌ ಶೆಟ್ಟಿ

ನಿರ್ಮಾಪಕ: ವಿಜಯ್‌ ಕಿರಗಂದೂರು

ತಾರಾಗಣ: ರಿಷಬ್‌ ಶೆಟ್ಟಿ, ಕಿಶೋರ್‌, ಅಚ್ಯುತ್‌ ಕುಮಾರ್‌, ಸಪ್ತಮಿ ಗೌಡ, ಪ್ರಮೋದ್‌ ಶೆಟ್ಟಿ, ಮಾನಸಿ ಸುಧೀರ್‌

ಬಿಸಿಲ ಧಗೆಯುಂಡ ಮಣ್ಣಿಗೊಮ್ಮೆ ಮುಂಗಾರಿನ ಮೊದಲ ಹನಿಗಳು ಬಿದ್ದಾಗ ಏಳುವ ಘಂ ಎನ್ನುವ ಪರಿಮಳ ಯಾರಿಗಾದರೂ ಮತ್ತೆ ಬೇರನ್ನು ನೆನಪಿಸುತ್ತದೆ. ‘ಕಾಂತಾರ’ವೂ ಅದೇ ರೀತಿ. ಕರಾವಳಿಗರಿಗೊಮ್ಮೆ ತಮ್ಮ ಬೇರು ನೆನಪಾದರೆ, ಕನ್ನಡಿಗರಿಗೆ ಸಂಸ್ಕೃತಿಯ ಹೊಸ ಲೋಕವೊಂದು ಕಂಡೀತು. ಇಲ್ಲಿ ಮಣ್ಣಿನ ಕಥೆ ಹೆಣೆಯುತ್ತಾ, ಸಂಘರ್ಷದ ಮಿಳಿತದಲ್ಲಿ ಸೌಹಾರ್ದದ ತೆರೆ ಎಳೆಯುತ್ತಾರೆ ರಿಷಬ್‌ ಶೆಟ್ಟಿ. ನಟನೆ ಹಾಗೂ ನಿರ್ದೇಶನದಲ್ಲಿ ರಿಷಬ್‌ ಅವರು ಇಲ್ಲಿ ಪ್ರಬುದ್ಧ.

ಮೂರ್ನಾಲ್ಕು ಶತಮಾನದ ಹಿಂದಿನ ಕಥೆ. ಊರಿನಲ್ಲೊಬ್ಬ ರಾಜ. ಸುಖವಾದ ಸಂಸಾರವಿದ್ದರೂ ಆತನಿಗೆ ನೆಮ್ಮದಿ ಹಾಗೂ ನಿದ್ದೆಯಿಲ್ಲ. ಇದನ್ನರಸಿ ಏಕಾಂಗಿಯಾಗಿ ಹೊರಟ ರಾಜನಿಗೆ ಕಾಂತಾರದಲ್ಲಿ(ದಟ್ಟ ಅರಣ್ಯ) ಎದುರಾಗುವುದೇ ದೈವದ ಕಲ್ಲು.. ಇದನ್ನು ಕಂಡೊಡನೆ ರಾಜನ ಕಣ್ಣಲ್ಲಿ ಚೈತನ್ಯ. ಇದನ್ನು ತನ್ನ ಮನೆಯಲ್ಲಿರಿಸಿ ಪೂಜೆ ಮಾಡಲು ಪಂಜುರ್ಲಿಯ(ವರಾಹ ರೂಪದ ದೈವ) ಅಪ್ಪಣೆ ಕೇಳುತ್ತಾನೆ ರಾಜ. ತನ್ನ ಧ್ವನಿ ಎಲ್ಲಿಯವರೆಗೆ ಕೇಳುತ್ತದೆಯೋ ಅದಷ್ಟು ಜಾಗವನ್ನು ತಾನು ಕಾಯುವ ಕಾಡಿನ ಜನರಿಗೆ ಕೊಡಲು ಸಮ್ಮತಿಸಿದರಷ್ಟೇ ರಾಜನ ಮನೆಯಲ್ಲಿರಲು ಒಪ್ಪುವುದಾಗಿ ದೈವವು ತಿಳಿಸುತ್ತದೆ. ರಾಜ ಸಮ್ಮತಿಸುತ್ತಾನೆ. ಆತನ ಕಾಲಾವಧಿಯ ಬಳಿಕ ಮುಂದಿನ ಪೀಳಿಗೆಗೆ ಈ ನೂರಾರು ಎಕರೆಯ ಜಾಗದ ಮೇಲೆ ಕಣ್ಣು. ಇದು ಮುಖ್ಯ ಕಥೆಗೆ ವೇದಿಕೆ. ಮುಂದೆ ಇದೇ ಕಾಡಿನಲ್ಲಿ ವಾಸಿಸುವ ಭೂತ ಕಟ್ಟುವ ಕುಟುಂಬದಲ್ಲಿ ಜನಿಸುವ ಶಿವ(ರಿಷಬ್‌ ಶೆಟ್ಟಿ), ರಾಜನ ಪೀಳಿಗೆಯ ದೇವೇಂದ್ರ(ಅಚ್ಯುತ್‌ ಕುಮಾರ್‌) ಹಾಗೂ ಅರಣ್ಯಾಧಿಕಾರಿಯಾಗಿ ಕಾಣಿಸಿಕೊಳ್ಳುವ ಮುರಳೀಧರ್‌(ಕಿಶೋರ್‌) ಸುತ್ತ ಈ ಕಥೆ ಸುತ್ತುತ್ತದೆ.

ಕರಾವಳಿ ಭಾಗದಲ್ಲಿ ದೇವರಿಗಿಂತ ದೈವಗಳ ಆರಾಧನೆಯೇ ಹೆಚ್ಚು. ತುಳು ಸಂಸ್ಕೃತಿಯ ಬಹುಮುಖ್ಯ ಭಾಗವೂ ಆಗಿರುವ ಈ ಅಂಶವನ್ನು ಕಥಾಭಾಗವನ್ನಾಗಿ ಆರಿಸಿಕೊಂಡು, ಆಚರಣೆಗೆ ಚ್ಯುತಿ ಬಾರದಂತೆ ತೆರೆಯ ಮೇಲೆ ತಂದಿರುವ ರಿಷಬ್‌ ಅವರ ಪ್ರಯತ್ನ ಇಲ್ಲಿ ಉಲ್ಲೇಖಾರ್ಹ. ‘ರಿಕ್ಕಿ’, ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಸಿನಿಮಾಗಳಲ್ಲಿ ಮಣ್ಣಿನ ಘಮವನ್ನೇ ಕಥಾಹಂದರವಾಗಿಸಿದ ರಿಷಬ್‌, ಇಲ್ಲಿ ಕರಾವಳಿಯ ಸಂಸ್ಕೃತಿ, ಆಚರಣೆಯ ಆಳಕ್ಕಿಳಿದು ಈಜಿದ್ದಾರೆ. ವ್ರತವಾಗಿ ಇದನ್ನು ನಿಭಾಯಿಸಿರುವುದು ತೆರೆಯ ಮೇಲೆ ಸ್ಪಷ್ಟವಾಗಿ ಕಾಣುತ್ತದೆ. ಪ್ರಕೃತಿಗೂ, ಅದರೊಳಗಿರುವ ಮನುಷ್ಯನಿಗೂ ಇರುವ ಸಂಬಂಧ, ಭೂತಾರಾಧನೆ,ಈ ಆಚರಣೆ ನ್ಯಾಯದ ವೇದಿಕೆಯಾಗಿ ಹೇಗೆ ಮಹತ್ವ ಪಡೆದಿದೆ ಎನ್ನುವುದನ್ನು ವಿವರಿಸುತ್ತಾ ಪ್ರಸಕ್ತ ಸಮಾಜದಲ್ಲಿರುವ ದುರಾಸೆ ಮತ್ತದರ ಪರಿಣಾಮ, ಅಸ್ಪೃಶ್ಯತೆಯನ್ನು ಸ್ಥೂಲವಾಗಿ ಚಿತ್ರಿಸಿದ್ದಾರೆ ರಿಷಬ್‌.

‘ಕಾಂತಾರ’ದಲ್ಲಿ ಒಂದೊಮ್ಮೆ ನಿರ್ದೇಶಕನಾಗಿ ಮೇಲುಗೈ ಸಾಧಿಸುವ ರಿಷಬ್‌ ಮತ್ತೊಮ್ಮೆ ನಟನೆಯಲ್ಲಿ ತಮ್ಮ ಪ್ರಬುದ್ಧತೆಯನ್ನು ತೋರಿಸುತ್ತಾರೆ. ಕೆಲವೊಮ್ಮೆ ಇವೆರಡರ ನಡುವೆ ಸ್ಪರ್ಧೆಗೆ ಬಿದ್ದಂತೆ ಕಾಣುತ್ತಾರೆ. ಯಾಕೋ ಅವರಿಲ್ಲಿ ಮೈಕೊಡವಿ ಎದ್ದು ನಿಂತಂತೆ ಕಾಣುತ್ತಾರೆ! ‘ಗರುಡ ಗಮನ ವೃಷಭ ವಾಹನದಲ್ಲಿ’ನ ‘ಶಿವ’ನ ಛಾಯೆ ಇಲ್ಲಿಯ ‘ಶಿವ’ನಿಗೂ ಇರುವುದು ಕಾಕತಾಳೀಯ!

ಸಿನಿಮಾದ ಬೆನ್ನೆಲುಬಾಗಿರುವ ಭೂತಾರಾಧನೆ, ತೆರೆಯ ಮೇಲೆ ಸೂಕ್ಷ್ಮವಾಗಿ, ಅದ್ಭುತವಾಗಿ ಕಾಣುವುದರ ಹಿಂದೆ ನಟ ರಾಜ್‌ ಬಿ.ಶೆಟ್ಟಿ ಅವರ ಪ್ರಯತ್ನ ಉಲ್ಲೇಖಾರ್ಹ.ಭೂತಾರಾಧನೆಯ ಬಗ್ಗೆ ಕೊಂಚ ಮಾಹಿತಿ ಇದ್ದವರಿಗೆ ಈ ಸಿನಿಮಾ ಮನಸ್ಸಿನಾಳಕ್ಕೆ ಇಳಿದೀತು. ಮೇಕಿಂಗ್‌ನಲ್ಲಿ ಈ ಸಿನಿಮಾ ಮೇಲುಗೈ ಸಾಧಿಸಿದೆ. ಅರವಿಂದ್‌ ಕಶ್ಯಪ್‌ ಕಣ್ಣುಗಳು ಕರಾವಳಿಯ ಸಂಸ್ಕೃತಿ, ಆಚರಣೆಗೆ ಮತ್ತಷ್ಟು ಬಣ್ಣತುಂಬಿವೆ. ಅಜನೀಶ್‌ ಲೋಕನಾಥ್‌ ಸಂಗೀತ ಚಿತ್ರಕ್ಕೆ ಜೀವಾಳ, ಹೀಗಿದ್ದರೂ ಮೊದಲಾರ್ಧದಲ್ಲಿ ಭೂತಾರಾಧನೆ ಸಂದರ್ಭ ತಾಸೆ ಪೆಟ್ಟಿನ ಬದಲಾಗಿ ಹಾಡನ್ನು ತುರುಕಿದ್ದು ಜೀರ್ಣಿಸಿಕೊಳ್ಳಲು ಕಷ್ಟ. ಕ್ಲೈಮ್ಯಾಕ್ಸ್‌ನಲ್ಲಿ ಈ ಕೊರತೆಯನ್ನು ನೀಗಿಸಿದ್ದಾರೆ ಎನ್ನಬಹುದು.

ತುಳು ನಾಟಕ ‘ಶಿವದೂತೆ ಗುಳಿಗೆ’ ಖ್ಯಾತಿಯ ಸ್ವರಾಜ್‌ ಶೆಟ್ಟಿ ‘ಗುರುವ’ನಾಗಿ ಬಹಳ ನೈಜವಾಗಿ ತೆರೆ ಮೇಲೆ ಕಾಣಿಸುತ್ತಾರೆ. ಅಚ್ಯುತ್‌ ಕುಮಾರ್‌, ಕಿಶೋರ್‌ ಹಾಗೂ ಪ್ರಮೋದ್‌ ಶೆಟ್ಟಿ ಅವರ ಅಭಿನಯದ ಬಗ್ಗೆ ಎರಡು ಮಾತಿಲ್ಲ. ‘ಲೀಲ’ಳಾಗಿ ಸಪ್ತಮಿ ಗೌಡ, ‘ಶಿವ’ನ ಅಮ್ಮ ‘ಕಮಳ’ಲಾಗಿ ಮಾನಸಿ ಸುಧೀರ್‌ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ. ನಗಿಸುವ ಗುತ್ತಿಗೆ ಪ್ರಕಾಶ್‌ ತೂಮಿನಾಡ್, ದೀಪಕ್‌ ರೈ ಪಾಣಾಜೆ ಪಾಲಾಗಿದೆ. ಕ್ಲೈಮ್ಯಾಕ್ಸ್‌ನಲ್ಲಿ ಒಂದಿಷ್ಟು ಕತ್ತರಿ ಪ್ರಯೋಗ ಮಾಡಿದ್ದರೆ, ಕೆಲವೊಂದು ದೃಶ್ಯಗಳು ನಾಟಕೀಯವಾಗಿ ಕಾಣಿಸುವುದನ್ನು ತಪ್ಪಿಸಬಹುದಿತ್ತು.

ಕೊನೆಯ 20–30 ನಿಮಿಷ ತೆರೆ ಮೇಲೆ ‘ಶಿವ’ನಾಗಿ ರಿಷಬ್‌ ಕಾಣಿಸುವುದಿಲ್ಲ! ಕ್ಲೈಮ್ಯಾಕ್ಸ್‌ ಭೋರ್ಗರೆದು ಧುಮ್ಮಿಕ್ಕುವ ಜಲಪಾತ. ಸೌಹಾರ್ದತೆ, ಒಗ್ಗಟ್ಟಿನ ಬಗ್ಗೆ ಆಂಗಿಕ ಭಾಷೆಯಲ್ಲೇ ಲೋಕಜ್ಞಾನ ಪಸರಿಸುವ ದೈವದ ಸಂದೇಶ ಪ್ರಸ್ತುತ ಅಗತ್ಯವಾಗಿರುವ ನಡೆ. ಹೀಗೆ ತೆರೆ ಎಳೆಯುತ್ತದೆ ‘ಕಾಂತಾರ’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT