ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಆರ್‌ಆರ್‌ ಸಿನಿಮಾ ವಿಮರ್ಶೆ: ರಾಜಮೌಳಿಯ ಮತ್ತೊಂದು ಮಾಯಾದರ್ಪಣ

Last Updated 25 ಮಾರ್ಚ್ 2022, 10:35 IST
ಅಕ್ಷರ ಗಾತ್ರ

ಚಿತ್ರ: ಆರ್‌ಆರ್‌ಆರ್ (ತೆಲುಗು)

ನಿರ್ಮಾಣ: ಡಿ.ವಿ.ವಿ ದಾನಯ್ಯ

ನಿರ್ದೇಶನ: ಎಸ್‌.ಎಸ್‌. ರಾಜಮೌಳಿ

ತಾರಾಗಣ: ಜೂನಿಯರ್ ಎನ್‌.ಟಿ.ಆರ್, ರಾಮ್‌ ಚರಣ್, ಅಜಯ್ ದೇವಗನ್, ಆಲಿಯಾ ಭಟ್, ಸಮುದ್ರಖಣಿ, ಆಲಿವಿಯಾ ಮಾರಿಸ್, ರೇ ಸ್ಟೀವನ್‌ಸನ್, ಅಲಿಸನ್ ಡೂಡಿ.

ಜೂನಿಯರ್ ಎನ್‌.ಟಿ.ಆರ್ ಭುಜದ ಮೇಲೆ ರಾಮ್‌ ಚರಣ್. ಅಟ್ಟಾಡಿಸಿಕೊಂಡು ಬರುವ ಬ್ರಿಟಿಷ್ ಪೊಲೀಸರನ್ನು ಇಬ್ಬರೂ ಸೇರಿ ಚಿಂದಿ ಚಿಂದಿ ಮಾಡುವ ಪರಿಗೆ ಕಣ್ಣು ಎವೆಯಿಕ್ಕದೆ ತೆರೆದುಕೊಂಡೇ ಇರುತ್ತದೆ. ಹುಲಿಯ ಬಾಯಿಗೆ ಇನ್ನೇನು ಜೂನಿಯರ್ ಎನ್‌.ಟಿ.ಆರ್ ಸಿಲುಕಿಯೇ ಬಿಟ್ಟರು ಎನ್ನುವಷ್ಟರಲ್ಲಿ ಊಹಿಸಲಾರದ್ದು ನಡೆಯುತ್ತದೆ. ಹುಲಿಯ ಕಣ್ಣಲ್ಲಿ ಕಣ್ಣಿಟ್ಟು ಅವರು ನೋಡುವಾಗ ನಮ್ಮಂಥ ನೋಡುಗರಿಗೆ ರೋಮಾಂಚನ. ಸೇತುವೆ ಮೇಲೆ ಗೂಡ್ಸ್ ರೈಲಿನಲ್ಲಿ ತೈಲ ಸೋರಿಕೆಯಾಗಿ ಒಂದೊಂದೇ ಬೋಗಿ ಹೊತ್ತಿ ಉರಿಯುತ್ತಾ ಅಡಿಯಲ್ಲಿನ ನದಿಗೆ ಬೀಳುತ್ತಿವೆ. ಆ ಬೆಂಕಿಯ ಕೆನ್ನಾಲಿಗೆಯಿಂದ ಪಾರಾಗಿ ಬದುಕಲೆಂದು ನದಿಯಲ್ಲಿ ತೆಪ್ಪ ನಡೆಸುವ ಬಾಲಕನೊಬ್ಬ ಮೊರೆ ಇಡುತ್ತಾನೆ. ಜೂನಿಯರ್ ಎನ್‌.ಟಿ.ಆರ್ ಹಾಗೂ ರಾಮ್ ಚರಣ್ ಇಬ್ಬರೂ ಒಂದಾಗುತ್ತಾರೆ. ಕುದುರೆ ಮೇಲೆ ಒಬ್ಬರು. ಬುಲೆಟ್‌ ಬೈಕ್‌ ಮೇಲೆ ಇನ್ನೊಬ್ಬರು. ಇಬ್ಬರೂ ಬಾಲಕನ ಕಾಪಾಡಲು ಗಾಳಿಯಲ್ಲಿ ತೇಲಾಡುತ್ತಾ ಮಾಡುವ ಸಾಹಸದ ದೃಶ್ಯ ನೋಡಿದಾಗ ರೋಮಾಂಚನವಾಗದೇ ಇದ್ದರೆ ನಾವು ಅರಸಿಕರೇ ಸರಿ.

ಬಹು ನಿರೀಕ್ಷಿತ ‘ಆರ್‌ಆರ್‌ಆರ್‌’ ಚಿತ್ರವನ್ನು ನಿರ್ದೇಶಕ ರಾಜಮೌಳಿ ಎಂದಿನ ತಮ್ಮ ರುಜುವಿನೊಂದಿಗೆ ತೋರುತ್ತಾರೆ. ಕಥನದ ಬಿಂದುಗಳನ್ನು ಅಲ್ಲಲ್ಲಿ ಇಟ್ಟು, ಒಂದನ್ನೊಂದು ಸಂಪರ್ಕಿಸುತ್ತಲೇ ಅವರು ಮೂಡಿಸುವ ದೃಶ್ಯದ ರಂಗವಲ್ಲಿಯೇ ಬೆರಗು. ಜನಪದ, ಫ್ಯಾಂಟಸಿ, ಸಸ್ಪೆನ್ಸ್‌ ಥ್ರಿಲ್ಲರ್, ಪುರಾಣದ ಉಪಕಥೆಗಳ ಮುರಿದು ಕಟ್ಟುವ ಜಾಣ್ಮೆ... ಹೀಗೆ ಎಲ್ಲವನ್ನೂ ಒಂದು ಸೂತ್ರದಲ್ಲಿ ಪೋಣಿಸಿದ ಚಿತ್ರವಿದು. ಮನರಂಜನೆಯ ಸಮುದ್ರದಲ್ಲಿ ಅದ್ದಿ ಅದ್ದಿ ತೆಗೆಯಬೇಕೆಂಬ ಉಮೇದಿಗೆ ತಂದೆ ಕೆ.ವಿ. ವಿಜಯೇಂದ್ರ ಪ್ರಸಾದ್ ಬರೆದ ಕಥೆ ರಾಜಮೌಳಿ ಅವರಿಗೆ ವರದಾನವಾಗಿದೆ. ಈ ಅಪ್ಪ–ಮಗ ದೊಡ್ಡ ಭಿತ್ತಿಯ ಮೇಲೆ ಚಿತ್ರಕಥೆಯನ್ನು ರೋಮಾಂಚನಕಾರಿಯಾಗಿ ತೋರುವ ಮಾರ್ಗಗಳನ್ನು ಕಂಡುಕೊಂಡು ಗೆಲ್ಲಲು ಆರಂಭಿಸಿ ದಶಕಗಳೇ ಆಗಿವೆ.

ಸ್ವಾತಂತ್ರ್ಯಪೂರ್ವ ಕಾಲದಲ್ಲಿ ನಡೆದ ಕಥೆಯನ್ನು ಎತ್ತಿಕೊಂಡು ರಾಜಮೌಳಿ ಅದಕ್ಕೆ ಕಲ್ಪನೆಯ ರೆಕ್ಕೆಪುಕ್ಕ ಕಟ್ಟಿದ್ದಾರೆ. ಬ್ರಿಟಿಷ್ ಅಧಿಕಾರಿಗಳು, ಸ್ತ್ರೀ ಪಾತ್ರಗಳು ತುಂಬಾ ಸಹಜವಾಗಿ ಪ್ರಕಟವಾಗುತ್ತಾರೆ.

ಚಿತ್ರದ ಶಿಲ್ಪ ಪಕ್ಕಾ ಕಮರ್ಷಿಯಲ್. ರಾಮ್‌ ಚರಣ್‌ಗೆ ಒಂದು ಅದ್ದೂರಿ ಪ್ರವೇಶಿಕೆ. ಜೂನಿಯರ್‌ ಎನ್‌ಟಿಆರ್‌ಗೆ ಅದಕ್ಕಿಂತ ಭಿನ್ನವಾದ ರೋಮಾಂಚನಕಾರಿ ಪ್ರವೇಶಿಕೆ. ಇಬ್ಬರ ಪಾತ್ರದ ರೂಹಿನಲ್ಲೂ ಅಜಗಜಾಂತರ. ಆ ಇಬ್ಬರಲ್ಲೂ ಸ್ನೇಹ ಮೂಡಿಸುವ ನಿರ್ದೇಶಕರು, ಅದು ಯಾವಾಗ ದ್ವೇಷವಾದೀತೋ ಎಂದು ನೋಡುಗರ ಎದೆಬಡಿತ ಪದೇ ಪದೇ ಹೆಚ್ಚಾಗುವಂತೆ ಮಾಡುತ್ತಾರೆ. ಆದರೆ, ದ್ವೇಷ ಮೂಡದಂತೆ ಸಾವಧಾನದಿಂದ ಚಿತ್ರಕಥೆಗೆ ಅನಿರೀಕ್ಷಿತ ತಿರುವುಗಳನ್ನು ಒದಗಿಸುತ್ತಾರೆ. ಸ್ನೇಹಿತರ ಕಥೆಗೆ ದೇಶಭಕ್ತಿಯ ರಸವನ್ನೂ ಸವರುತ್ತಾರೆ. ಮುಖ್ಯ ಕಥನದೊಳಗೆ ಉಪಕಥೆಗಳನ್ನೂ ಹೇಳುವುದರಲ್ಲಿ ರಾಜಮೌಳಿ ನಿಸ್ಸೀಮರು. ಆ ತಂತ್ರ ಇಲ್ಲಿಯೂ ಮುಂದುವರಿದಿದೆ. ಇಬ್ಬರೂ ಕಥಾನಾಯಕರ ಹಿನ್ನೆಲೆಯನ್ನು ಅವರು ಚೂರುಚೂರೇ ಬಿಚ್ಚಿಡುತ್ತಾ, ಅವರಿಬ್ಬರ ವರ್ತನೆಗೆ ಸಮರ್ಥನೆಯನ್ನು ಕೊಡುವ ರೀತಿ ಇದಕ್ಕೆ ಸಾಕ್ಷಿ.

ಎಂ.ಎಂ. ಕೀರವಾಣಿ ಹಿನ್ನೆಲೆ ಸಂಗೀತ ಸಿನಿಮಾದ ಮುಖ್ಯ ಪಾತ್ರವೇ ಹೌದು. ‘ಜನನಿ’ ಹಾಡಿನ ಶಾಸ್ತ್ರೀಯ ಪಲುಕುಗಳು ಹೃದಯದ ತಂತಿ ಮೀಟಿದರೆ, ‘ನಾಟು ನಾಟು’ ಹಾಡಿನ ನೃತ್ಯ ಲಾಲಿತ್ಯ ಟ್ರೆಂಡ್ ಆಗಬಲ್ಲ ಎಲ್ಲ ಗುಣಲಕ್ಷಣ ಹೊಂದಿದೆ. ಕೆ.ಕೆ. ಸೆಂಥಿಲ್ ಕುಮಾರ್‌ ಕ್ಯಾಮೆರಾ ಝೂಮ್‌ ಔಟ್‌ ಆಗುತ್ತಾ ತೋರುವ ದೃಶ್ಯಭಿತ್ತಿ ಬರೀ ತೋರಿಕೆಗಷ್ಟೆ ಅಲ್ಲದೆ ಕಥಾಕೇಂದ್ರದ ನಾಡಿಮಿಡಿತ ಹೇಳುವುದಕ್ಕೂ ಬಳಕೆಯಾಗಿದೆ. ಅವರ ಲೈಟಿಂಗ್, ಮಸೂರದ ತಾತ್ವಿಕತೆಯ ಕುರಿತು ಪ್ರತ್ಯೇಕ ಪ್ರಬಂಧವನ್ನೇ ಬರೆಯಬಹುದಾದಷ್ಟು ಸರಕು ಚಿತ್ರದಲ್ಲಿ ಇಡುಕಿರಿದಿದೆ.

ಜೂನಿಯರ್ ಎನ್‌.ಟಿ.ಆರ್ ತಾವು ಎಂತಹ ನಿಯಂತ್ರಿತ ನಟ ಎನ್ನುವುದನ್ನು ಚಿತ್ರದುದ್ದಕ್ಕೂ ಸಾರಿದ್ದಾರೆ. ಅವರ ಕಣ್ನೋಟ, ಆಂಗಿಕ ಅಭಿನಯ, ಭಾವ ತೀವ್ರ ದೃಶ್ಯಗಳಲ್ಲಿನ ಸಹಜತೆಗೆ ಹ್ಯಾಟ್ಸಾಫ್. ರಾಮ್‌ ಚರಣ್ ಮಿತಿಯನ್ನು ಅರಿತಿರುವ ನಿರ್ದೇಶಕರು, ದೃಢ ಕಾಯವನ್ನೇ ಬಂಡವಾಳವಾಗಿಸಿ ಅವರ ಪಾತ್ರದ ಗ್ರಾಫ್ ಮೂಡಿಸಿದ್ದಾರೆ. ಅಜಯ್ ದೇವಗನ್ ಹಾಗೂ ಆಲಿಯಾ ಭಟ್ ಪಾತ್ರಗಳಿಗೆ ಹೆಚ್ಚು ಅವಕಾಶವಿಲ್ಲದಿದ್ದರೂ ಅವು ಕಥನದ ತಿರುವಿನ ಪ್ರಮುಖ ಬಿಂದುಗಳಾಗಿವೆ. ಸಾಮಾನ್ಯವಾಗಿ ರಾಜಮೌಳಿ ಸಿನಿಮಾಗಳಲ್ಲಿ ಸ್ತ್ರೀ ಪಾತ್ರಗಳಿಗೆ ಹೆಚ್ಚು ಕಥನಾವಕಾಶ ಇರುತ್ತದೆ. ಈ ಸಿನಿಮಾದಲ್ಲಿ ಆ ವಿಷಯದಲ್ಲಿ ಯಾಕೋ ಅವರು ಹಿಂದೆ ಬಿದ್ದಿದ್ದಾರೆ.

ನೂರಾಎಂಬತ್ತಾರು ನಿಮಿಷ ಕೂರಿಸಿಕೊಂಡು, ‘ಮನರಂಜನೆಯ ರಸಪಾಕದಲ್ಲಿ ಮೀಯಿಸುತ್ತೇನೆ’ ಎಂಬ ದೊಡ್ಡ ಮಟ್ಟದ ಆತ್ಮವಿಶ್ವಾಸ ರಾಜಮೌಳಿ ಅವರಿಗೆ ಯಾಕೆ ಇದೆ ಎನ್ನುವುದಕ್ಕೆ ಈ ಸಿನಿಮಾದಲ್ಲಿ ಕಾರಣಗಳು ಸಿಗುತ್ತವೆ. ತರ್ಕಮುಖಿಯಾಗಳಾಗದೆ, ಮನರಂಜನಾಸುಖಿಗಳಾಗಬೇಕು. ಹಾಗಾದಲ್ಲಿ ‘ಆರ್‌ಆರ್‌ಆರ್‌’ನಲ್ಲಿನ ನೀರು–ಬೆಂಕಿಯ ಆಟ, ರಾಮ–ಭೀಮನ ಕಥಾಸಮೀಕರಣ ಬರೀ ಮೆಟಫರ್‌ ಆಗದೆ ಫ್ಯಾಂಟಸಿಯೂ ಆಗಿರುವ ಕಥನಾವಕಾಶ ಖುಷಿ ಕೊಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT