ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಲಿ ಉಗುರು: ವನ್ಯಲೋಕದ ಕತ್ತಲ ಕಥನಗಳು– ನಾಗೇಶ ಹೆಗಡೆ ಲೇಖನ

Published 4 ನವೆಂಬರ್ 2023, 23:30 IST
Last Updated 5 ನವೆಂಬರ್ 2023, 9:57 IST
ಅಕ್ಷರ ಗಾತ್ರ

ವನ್ಯಜೀವಿಗಳ ಕಳ್ಳಸಾಗಣೆಯನ್ನು ತಪ್ಪಿಸಲೆಂದು ಏನೆಲ್ಲ ಸಾಧನಗಳು ಬರುತ್ತಿವೆ. ಆ ಸಾಧನಗಳೇ ವನ್ಯಹಂತಕರ ಬತ್ತಳಿಕೆಗೂ ಸೇರುತ್ತಿವೆ. ಮುಗ್ಧಜೀವಿಗಳ ಉಳಿವು ಅಳಿವಿನ ಈ ಸಮರವನ್ನು ನಾವು ಕೈಕಟ್ಟಿ ನೋಡುತ್ತೇವೆ. ಜೀವಸಂಕುಲ ಅಳಿವಿನಂಚಿಗೆ ಬಂದರೆ ನಮಗೆ ನೆಮ್ಮದಿಯುಂಟೆ?

***

ಹುಲಿ ಉಗುರುಗಳನ್ನು ಬಿಡಿ, ಉಗುರಿನ ಗಾತ್ರದ ಈ ಜೀವಿಯ ಕತೆ ಕೇಳಿ: ಮನುಷ್ಯನ ಉಗುರಿನ ಮೇಲೆ ಸಲೀಸಾಗಿ ಕೂರಬಲ್ಲ ಒಂದು ಪುಟ್ಟ ಕಾಡುಹಲ್ಲಿಯೊಂದು 2005ರಲ್ಲಿ ವೆಸ್ಟ್‌ ಇಂಡೀಸ್‌ ಬಳಿಯ ಪುಟ್ಟ ದ್ವೀಪದಲ್ಲಿ ಪತ್ತೆಯಾಯಿತು. ಬರೀ ಅರ್ಧ ಬೆರಳಷ್ಟುದ್ದದ ಈ ಹಲ್ಲಿಯ ಹೆಸರು ದೌಡಿನಿ. ಪೂರ್ತಿ ಹೆಸರು ಗೊನಾಟೋಡಿಸ್‌ ದೌಡಿನಿ. ಪುಟ್ಟದಿದ್ದರೂ ಹುಲಿಯಷ್ಟೇ ಅಥವಾ ಹುಲಿಗಿಂತ ಚಂದದ ಜೀವಿ. ಅದರ ಮೈಯೆಲ್ಲ ಹವಳ, ಪಚ್ಚೆ, ನೀಲ ನವರತ್ನಗಳ ಖಚಿತ. ಈ ಜೀವಿಯ ಫೋಟೊ ಪ್ರಕಟವಾಗಿದ್ದೇ ತಡ, ಜನ ಅತ್ತ ಲಗ್ಗೆ ಇಟ್ಟರು. ಭೂಪಟದಲ್ಲೂ ಸುಲಭಕ್ಕೆ ಕಾಣದ ‘ಸೇಂಟ್‌ ವಿನ್ಸೆಂಟ್‌ ಅಂಡ್‌ ದಿ ಗ್ರನೆಡೈನ್ಸ್‌’ ಎಂಬ ಮಾರುದ್ದ ಹೆಸರಿನ ದೇಶದ ಯೂನಿಯನ್‌ ಐಲ್ಯಾಂಡ್‌ ಎಂಬ ಚೋಟುದ್ದ ದ್ವೀಪಕ್ಕೆ ಜನ ನುಗ್ಗಿದರು. ‘ಜನ’ ಅಂದರೆ, ವನ್ಯಪ್ರೇಮಿಗಳು, ವಿಜ್ಞಾನಿಗಳು, ಛಾಯಾಗ್ರಾಹಕರು, ಬೇಟೆಗಾರರು, ಕಳ್ಳ ಸಾಗಣೆದಾರರು ಎಲ್ಲ.

ಪುಟ್ಟ ಪ್ರಾಣಿ, ಪುಟ್ಟ ದ್ವೀಪ. ಪುರಾತನ ದಟ್ಟ ಕಾಡು. ಹೆಜ್ಜೆಹೆಜ್ಜೆಗೂ ಅನೂಹ್ಯ ಜೀವಿಗಳ ಸೊಗಸಿನ ಲೋಕ. ರಕ್ಷಣೆಯ ಹೇಳ ಹೆಸರಿಲ್ಲ. ನೋಡನೋಡುತ್ತ ಈ ಮುದ್ದು ಸರೀಸೃಪದ ಸಂಖ್ಯೆ ಕಡಿಮೆಯಾಗತೊಡಗಿತು. ‘ದೌಡಿನಿ ಕಾಣ್ತಾ ಇಲ್ಲ’ ಎಂದು ಏಳೆಂಟು ವರ್ಷಗಳಲ್ಲಿ ಮತ್ತೆ ಹುಯಿಲೆಬ್ಬಿತು. ಈ ಬಾರಿ ಸಹಾಯಕ್ಕೆ ಜನ ಬಂದರು. ‘ರೀ:ವೈಲ್ಡ್‌’ ಹೆಸರಿನ ಅಂತರರಾಷ್ಟ್ರೀಯ ವನ್ಯರಕ್ಷಣಾ ಸಂಸ್ಥೆ ದೌಡಿನಿಯ ರಕ್ಷಣೆಗೆ ದೌಡಾಯಿಸಿ ಬಂತು (84 ದೇಶಗಳಲ್ಲಿನ ಇದರ 400ಕ್ಕೂ ಹೆಚ್ಚಿನ ಸಂಘಟನೆಗಳಿವೆ). ಅದಕ್ಕೆ ಜೊತೆಯಾಗಿ ‘ಫೌನಾ ಅಂಡ್‌ ಫ್ಲೋರಾ’ ಹೆಸರಿನ ಇನ್ನೊಂದು ವನ್ಯರಕ್ಷಣಾ ಸಂಸ್ಥೆಯೂ ಕೈಜೋಡಿಸಿತು. ಸ್ಥಳೀಯ ಸರ್ಕಾರದ ಸಹಕಾರ ಪಡೆದು, ವಿವಿಧ ದೇಶಗಳ ತಜ್ಞರ ನೆರವಿನಿಂದ ದ್ವೀಪವಾಸಿಗಳಿಗೆ ಕಾವಲು ತರಬೇತಿ ಕೊಟ್ಟು, ವನ್ಯ ವಾರ್ಡನ್‌ಗಳೆಂದು ನೇಮಕ ಮಾಡಿ, ಗಿಡಮರಗಳಿಗೆ ಕ್ಯಾಮರಾ ಹಾಕಿ ಭದ್ರ ಮಾಡಲಾಯಿತು. ಕಳೆದ ನವಂಬರಿನಲ್ಲಿ ಸಮೀಕ್ಷೆ ಮಾಡಿದಾಗ ದೌಡಿನಿಯ ಸಂಖ್ಯೆ 18 ಸಾವಿರಕ್ಕೇರಿದೆ ಎಂಬುದು ಗೊತ್ತಾಗಿದೆ.
ಉಗುರು, ಬೆರಳುಗಳ ಕತೆ ಹಾಗಿರಲಿ; ಈಗ ಮೊಣಕೈ ಗಾತ್ರಕ್ಕೆ ಬರೋಣ.

ತುಮಕೂರಿನ ಬಳಿಯ ನಾಗವಲ್ಲಿ ಸರ್ಕಾರಿ ಹೈಸ್ಕೂಲಿನ ಮಕ್ಕಳಿಗೆ ಗುಂಡಪ್ಪ ಮೇಷ್ಟ್ರು ‘ಅಳಿವಿನಂಚಿನಲ್ಲಿರುವ ಪ್ರಾಣಿಗಳು’ ಎಂಬ ಪಾಠವನ್ನು ಓದಿಸುತ್ತಿದ್ದರು. ಪಠ್ಯದಲ್ಲಿರುವ ಅಂಥ ಪ್ರಾಣಿಗಳ ಪಟ್ಟಿಯನ್ನು ಓದುತ್ತಿದ್ದಾಗ ಹುಡುಗನೊಬ್ಬ ಎದ್ದು ನಿಂತು, ‘ಸರ್‌ ಕಾಡುಪಾಪ ಹೆಂಗೆ ಅಳಿವಿನಂಚಿನಲ್ಲಿದೆ? ಇಂದು ಬೆಳಿಗ್ಗೆ ನಾನೇ ಎರಡು ಪಾಪಾಗಳನ್ನ ನೋಡಿ ಬಂದಿದೀನಿ’ ಎಂದ. ಅಚ್ಚರಿಗೊಂಡ ಮೇಷ್ಟ್ರು ಮಕ್ಕಳನ್ನು ಎಬ್ಬಿಸಿಕೊಂಡು ಸಮೀಕ್ಷೆಗೆ ಹೊರಟೇಬಿಟ್ಟರು. ಪೊದೆಗಳಲ್ಲಿ ಹಗಲನಿದ್ದೆಯಲ್ಲಿದ್ದ ಐದು ಕಾಡುಪಾಪಗಳು ಪತ್ತೆಯಾದವು. ಈ ಸಂಗತಿ ತುಮಕೂರಿಗೂ ನಂತರ ಕೋಲ್ಕತ್ತಕ್ಕೂ ತಲುಪಿ ಅಲ್ಲಿಂದಲೂ ತಜ್ಞರು ಬಂದು ರಾತ್ರಿಸಮೀಕ್ಷೆ ನಡೆಸಿದಾಗ ಮೊಣಕೈ ಉದ್ದದ, ವಾನರಗಳ ಗುಂಪಿಗೆ ಸೇರಿದ 55 ‘ಸ್ಲೆಂಡರ್‌ ಲೋರಿಸ್‌’ಗಳು ಪತ್ತೆಯಾದವು. ಊರವರಿಗೂ ಅವುಗಳ ಮಹತ್ವ ಗೊತ್ತಾಯಿತು. ಗಾಯಗೊಂಡ, ಬೇಟೆಗೆ ಬಲಿಯಾಗಿ ಸಾವಿನಂಚಿಗೆ ಬಂದವುಗಳ ಆರೈಕೆ ವಿಧಾನಗಳು (ಮಿಡತೆಗಳು, ಜಿರಲೆಗಳು ಅವಕ್ಕೆ ಪಂಚಪ್ರಾಣ) ಗೊತ್ತಾದವು. ಒಂದು ನಿಷ್ಪಾಪಿ, ‘ನಿರುಪಯುಕ್ತ’ ಜೀವಿ ಅಲ್ಲಿನ ಜನಸಮುದಾಯದ ಮಧ್ಯೆಯೇ ಸಹಜೀವನ ನಡೆಸುವುದು ಸಾಧ್ಯವಾಯಿತು.

ಇನ್ನು ಮುಂದಿನದು ಮನುಷ್ಯಗಾತ್ರದ ಜೀವಿಯ ಕತೆ: ಆಫ್ರಿಕಾದ ಸಿಯೆರಾ ಲಿಯೋನ್‌ ದೇಶದ ಕಾಡಿನಲ್ಲಿ ಚಿಂಪಾಂಜಿಗಳಿಗೆ ಆತ್ಮರಕ್ಷಣೆಯ ಸೂತ್ರವನ್ನು ಕಲಿಸಿದ ಕತೆ ಇದು: ಅಲ್ಲಿ ಮಾಂಸಕ್ಕಾಗಿ ಚಿಂಪಾಂಜಿಗಳಿಗೆ ಗುಂಡೇಟು ಹಾಕಿ ಕೊಲ್ಲಲಾಗುತ್ತಿತ್ತು. ವನ್ಯರಕ್ಷಕರು ಒಂದುಪಾಯ ಮಾಡಿದರು. ಚಿಂಪಾಂಜಿಗಳು ಗುಂಪಾಗಿ ಕೂರುವ ತಾಣದಲ್ಲಿ ಎತ್ತರದ ಮರಗಳ ಮೇಲೆ ಕೊಳವೆಗಳನ್ನು ಕಟ್ಟಿದರು. ಅದರಲ್ಲಿ ಹಣ್ಣುಹಂಪಲು, ಗೆದ್ದಲು-ಮಿಡತೆಗಳನ್ನು ತುಂಬಿಟ್ಟರು. ರಿಮೋಟ್‌ ಒತ್ತಿದಾಗ ಕೊಳವೆಗಳಿಂದ ಅವು ಕೆಳಕ್ಕೆ ಬೀಳುವಂತೆ ಮಾಡಿದರು. ಕಾವಲುಗಾರ ಬಂದಾಗ ಚಿಂಪಾಂಜಿಗಳೆಲ್ಲ ಒಟ್ಟಾಗಿ ಕೂಗಿದರೆ ಮಾತ್ರ ರಿಮೋಟ್‌ ಒತ್ತಲಾಗುತ್ತಿತ್ತು. ಕ್ರಮೇಣ ಆ ಕಾಡಿಗೆ ಯಾರೇ ಕಾಲಿಟ್ಟರೂ ಥೈಥೈ ಕುಣಿದು ಅವು ಕೂಗು ಹಾಕುವುದನ್ನು ರೂಢಿಸಿಕೊಂಡವು. ಗನ್‌ ಹಿಡಿದು ಬೇಟೆಗಾರರು ಬಂದಾಗಲೂ ಅವು ಊಟಕ್ಕಾಗಿ ಕೂಗು ಹಾಕುತ್ತಿದ್ದವು. ಅರಣ್ಯ ರಕ್ಷಕರಿಗೆ ಬೇಟೆಗಾರರ ಸುಳಿವು ಸಿಗುವಂತಾಯಿತು. ಬೇಟೆ ಕ್ರಮೇಣ ಕಡಿಮೆಯಾಗುತ್ತ ಬಂತು.

<div class="paragraphs"><p>-ಐಸ್ಟಾಕ್ ಚಿತ್ರ</p></div>

-ಐಸ್ಟಾಕ್ ಚಿತ್ರ

ಮನುಷ್ಯರಿಗಿಂತ ದೊಡ್ಡ, ಬಲಾಢ್ಯ ಪ್ರಾಣಿಗಳ ಉಳಿವಿಗೂ ನಾನಾ ಉಪಾಯಗಳ ಸಂಶೋಧನೆ ನಡೆಯುತ್ತಿದೆ. ಕೊಂಬುಗಳಿಗಾಗಿ ಪ್ರತಿವರ್ಷ ಆಫ್ರಿಕಾ ಖಂಡದಲ್ಲಿ ಸರಾಸರಿ 500 ಘೇಂಡಾಗಳ ಹತ್ಯೆಯಾಗುತ್ತಿದೆ. ಕೊಂಬು ಎಂದರೆ ಮತ್ತೇನಲ್ಲ; ಕೂದಲುಗಳೇ ಜಡೆಗಟ್ಟಿದಂತೆ ದಟ್ಟಗಟ್ಟಿಯಾಗಿ ಮೂಗಿನ ಮೇಲೆ ಬೆಳೆಯುತ್ತದೆ. ಕೂದಲಿನಲ್ಲಿರುವ ಕೆರಾಟಿನ್‌ ಎಂಬ ದ್ರವ್ಯವೇ ಎಲ್ಲ ಪ್ರಾಣಿಗಳಲ್ಲೂ ಕೊಂಬು, ಕೂದಲು, ಉಗುರು ಮತ್ತು ಹುರುಪೆಗಳನ್ನು ಸೃಷ್ಟಿಸುತ್ತದೆ. ‘ಮನುಷ್ಯನ ಉಗುರು, ಕೂದಲಿನಲ್ಲಿರುವುದೇ ಘೇಂಡಾ, ಹುಲಿ, ಚಿಪ್ಪುಹಂದಿಗಳ ರಕ್ಷಾಸಾಧನವಾಗಿ ಬೆಳೆಯುತ್ತದೆ. ವಿಶೇಷ ಔಷಧೀಯ ದ್ರವ್ಯದ ಲವಲೇಶವೂ ಇರುವುದಿಲ್ಲ’ ಎಂದು ವಿಜ್ಞಾನಿಗಳು ಅದೆಷ್ಟು ವಿಧದದಲ್ಲಿ ಹೇಳಿದರೂ ಅಂಧವಿಶ್ವಾಸವನ್ನು ತೊಲಗಿಸಲು ಸಾಧ್ಯವಾಗುತ್ತಿಲ್ಲ. ಕುದುರೆಯ ಕೂದಲಿನ ದಟ್ಟ ಚಟ್ನಿ ಮಾಡಿ, ಒತ್ತಿ ಒಣಗಿಸಿ ಗಟ್ಟಿ ಪೇಸ್ಟ್‌ ಮಾಡಿ ಅದನ್ನೇ ಥ್ರೀಡೀ ಪ್ರಿಂಟರ್‌ ಮೂಲಕ ಘೇಂಡಾ ಕೊಂಬಿನ ಆಕಾರದಲ್ಲೇ ರೂಪಿಸಿ ಚೀನಾ ಮತ್ತು ವಿಯೆಟ್ನಾಮ್‌ ದೇಶಗಳಿಗೆ ಮಾರುವ ಯತ್ನ ನಡೆಯಿತು. ಆದರೆ ಸುಂಕದ ಅಧಿಕಾರಿಗಳಿಗೆ ಅದು ಕೃತಕ ಎಂಬುದು ಗೊತ್ತಾಗಬೇಕಲ್ಲ? ಅವರಿಗೆ ಮಾತ್ರ ಗೊತ್ತಾಗುವಂತೆ ಎಂಥದ್ದೇ ಸೂಕ್ಷ್ಮ ಗುರುತಿನ ಬಿಲ್ಲೆಯನ್ನು ಅಡಗಿಸಿದರೂ ಅದು ಮಾರಾಟಗಾರರಿಗೂ ಗೊತ್ತಾಗಿ ಇಡೀ ಸಾಹಸವೇ ವಿಫಲವಾಯಿತು. ಸರಿ, ಘೇಂಡಾವನ್ನು ಕೊಲ್ಲುವ ಬದಲು ಅದಕ್ಕೆ ನಿದ್ದೆ ಬರಿಸಿ, ಕೊಂಬನ್ನು ಮಾತ್ರ ಕತ್ತರಿಸಿ ಅಧಿಕೃತವಾಗಿ ಮಾರುವ ಯತ್ನಗಳೂ ವಿಫಲವಾದವು. ಏಕೆಂದರೆ ಕಾಳಸಂತೆಯ ಜಾಲಗಾರರಿಗೆ ಅದು ಇಷ್ಟವಿಲ್ಲ. ಅಷ್ಟೇಕೆ, ಕೊಟ್ಟಿಗೆಯಲ್ಲಿ ಸಾಕಿದ ಘೇಂಡಾಗಳ ಕೊಂಬೂ ಅವರಿಗೆ ಬೇಕಾಗಿಲ್ಲ. ಬೇಟೆಗಾರರು, ಕಳ್ಳಸಾಗಣೆದಾರರು, ದಲ್ಲಾಳಿಗಳ ಮತ್ತು ಗ್ರಾಹಕರ ನಡುವಣ ಬಂಧವನ್ನು ಸಡಿಲಿಸಬಲ್ಲ ಯಾವ ವಿಧಾನಗಳೂ ಜಾರಿಗೆ ಬರುವುದು ಅವರಿಗೆ ಇಷ್ಟವಿಲ್ಲ. ಪ್ರಕೃತಿಯಲ್ಲಿ ತಮ್ಮ ಪಾಡಿಗೆ ತಾವಿರುವ ಘೇಂಡಾ, ಆನೆ, ಹುಲಿ, ಹಿಮಚಿರತೆ, ಚಿಪ್ಪುಹಂದಿಗಳೇ ಅವರಿಗೆ ಬೇಕು. ಇಂಥ ಬೇಟೆಯನ್ನು ನಿಯಂತ್ರಿಸಲೆಂದು ವಿಜ್ಞಾನ ತಂತ್ರಜ್ಞಾನದ ಹೊಸ ಹೊಸ ಉಪಾಯಗಳೇನೋ ಜಾರಿಗೆ ಬರುತ್ತಿವೆ, ನಿಜ. ವನ್ಯಲೋಕದ ಸ್ಥಿತಿಗತಿಯನ್ನು ಅರಿಯಲೆಂದು ಕ್ಯಾಮರಾ ಟ್ರ್ಯಾಪ್‌ಗಳಿವೆ. ಕತ್ತಲಲ್ಲಿ ವನ್ಯಮೃಗಗಳ ಜಾಡನ್ನು ತೋರಿಸಬಲ್ಲ ಇನ್‌ಫ್ರಾರೆಡ್‌ ಟಾರ್ಚ್‌ಗಳು, ದುರ್ಬೀನ್‌ಗಳು, ಕ್ಯಾಮರಾಗಳು ಇವೆ. ಕಾಡಿನ ಜೀವಿಯ ಚಲನವಲನವನ್ನು ಎಸ್ಸೆಮ್ಮೆಸ್‌ ಮೂಲಕ ಕಾಲಕಾಲಕ್ಕೆ ತಿಳಿಸುವ ರೇಡಿಯೊ ಕಾಲರ್‌ಗಳು ಬಂದಿವೆ. ನಾನಾ ಗಾತ್ರದ ಡ್ರೋನ್‌ಗಳು, ಪಕ್ಷಿಯ ವೇಷದಲ್ಲೇ ಕಾಡಿನಲ್ಲಿ ಸುತ್ತಾಡಬಲ್ಲ ಡ್ರೋನ್‌ಗಳು ಬರುತ್ತಿವೆ. ಸಮಸ್ಯೆ ಏನೆಂದರೆ, ಯಾವ ಹೊಸ ಶಸ್ತ್ರಾಸ್ತ್ರ ಬಂದರೂ ಅವು ಕಳ್ಳಸಾಗಣೆದಾರರ ಬತ್ತಳಿಕೆಗೂ ಬರುತ್ತವೆ.

ಮಂತ್ರವಾದಿಗಳಿಗೆ, ನಾಟಿವೈದ್ಯರಿಗೆ, ಮೂಢನಂಬಿಕೆಗಳಿಗೆ ಜೋತುಬಿದ್ದವರಿಗೆ ಉಗುರು, ದಂತ, ಕೊಂಬು, ನಕ್ಷತ್ರ ಆಮೆ, ಎರಡು ತಲೆಯ ಹಾವು ಇತ್ಯಾದಿ ಬೇಕು. ವಿಶಿಷ್ಟ ವನ್ಯ ಸಂಗ್ರಾಹಕರಿಗೆ ಅಪರೂಪದ ಆರ್ಕಿಡ್‌ ಹೂ, ಬಣ್ಣದ ಚಿಟ್ಟೆ, ಉಗುರುದ್ದದ ಉಡ ಬೇಕು. ವೆಚ್ಚಕ್ಕೆ ಹೇರಳ ಹೊನ್ನಿರುವ ಲೋಲುಪರಿಗೆ ಜಿಂಕೆ ಮಾಂಸ, ಚಮರೀಮೃಗದ ಶಾಲು, ಶಾರ್ಕ್‌ ಪಕ್ಕೆಯ ಸೂಪು, ಸೀಲ್‌ ಪ್ರಾಣಿಯ ತುಪ್ಪಳ, ಮೊಸಳೆ ಚರ್ಮದ ಪಾದರಕ್ಷೆ ಬೇಕು. ಇಂಥ ಕೃತ್ಯಗಳಿಗೆ ಪರೋಕ್ಷ ನೆರವು ನೀಡುವ ಅರಣ್ಯ ಸಿಬ್ಬಂದಿಗೆ ಈ ಲೂಟಿಯಲ್ಲಿ ಪಾಲು ಬೇಕು (ಮೊನ್ನೆ ಅಕ್ಟೋಬರ್‌ 30ರಂದು ಲೋಕಾಯುಕ್ತ ಬೇಟೆಗೆ ಸಿಕ್ಕವರಲ್ಲಿ ನಾಲ್ವರು ಅರಣ್ಯಾಧಿಕಾರಿಗಳೇ ಇದ್ದರಲ್ಲ).

<div class="paragraphs"><p>-ಐಸ್ಟಾಕ್ ಚಿತ್ರ</p></div>

-ಐಸ್ಟಾಕ್ ಚಿತ್ರ

ಮಾದಕ ದ್ರವ್ಯ ಸಾಗಣೆ, ಮಾನವ ಸಾಗಣೆ, ಶಸ್ತ್ರಾಸ್ತ್ರ ಮಾರಾಟವೇ ಮುಂತಾದ ಕರಾಳ ದಂಧೆಗಳ ಸಾಲಿನಲ್ಲಿ ವನ್ಯಹಂತಕರನ್ನು ಸೇರಿಸಿ ಮರೆತುಬಿಡುತ್ತೇವೆ. ಈ ಹಿಂದೆ ಐದು ಬಾರಿ ಜೀವಸಂಕುಲಗಳ ಸಾಮೂಹಿಕ ಅವಸಾನ ನಡೆದಿವೆಯಾದರೂ ಈಗಿನ ವನ್ಯಜೀವ ಪ್ರಳಯ ಅವೆಲ್ಲಕ್ಕಿಂತ ತ್ವರಿತ ಮತ್ತು ಭೀಕರದ್ದಾಗಿದೆ. ಹೆದ್ದಾರಿ ನಿರ್ಮಾಣ, ಕೃಷಿ ವಿಸ್ತರಣೆ, ಗಣಿಗಾರಿಕೆಯಂಥ ಕಾನೂನುಬದ್ಧ ಚಟುವಟಿಕೆಗಳೇ ವನ್ಯಲೋಕಕ್ಕೆ ಧ್ವಂಸಕಾರಿಯಾಗಿವೆ. ಜೊತೆಗೆ ದುರ್ಬಲ ಕಾನೂನುಗಳಿಂದಾಗಿ ರಾಸಾಯನಿಕ ವಿಷ ಸೇಂಚನ, ಜಲಮಾಲಿನ್ಯ, ಪ್ಲಾಸ್ಟಿಕ್‌ ಹಾವಳಿ ಹೆಚ್ಚುತ್ತಿದೆ. ವನ್ಯಜೀವಿಗಳ ರಕ್ಷಣೆಗೆಂದೇ ಶೇಕಡಾ 3ರಷ್ಟು ಭೂಭಾಗವನ್ನು ಮೀಸಲಿಟ್ಟರೂ ಅಲ್ಲಿ ಬೇಟೆಗಾರರ ನಿಯಂತ್ರಣ ಕಷ್ಟವಾಗುತ್ತಿದೆ. ಇದರ ಮೇಲೆ, ಜಾಗತಿಕ ಮಟ್ಟದಲ್ಲಿ ಬಿಸಿಪ್ರಳಯದ ಚುರುಕು ತೀವ್ರವಾಗುತ್ತಿದೆ. ರಕ್ಷಿತ ಅರಣ್ಯಗಳಲ್ಲೂ ಕೊಳವೆಬಾವಿಗೆ ಕೊರೆಯಬೇಕಾದ, ಅಥವಾ ಪ್ರವಾಹಕ್ಕೆ ಸಿಕ್ಕ ಘೇಂಡಾಗಳನ್ನು ಹೆಲಿಕಾಪ್ಟರ್‌ ಮೂಲಕ ರಕ್ಷಿಸಬೇಕಾದ ಪರಿಸ್ಥಿತಿ ಬರುತ್ತಿದೆ. ನಮ್ಮ ಅನುಕೂಲಕ್ಕೆಂದು ನಾವು ಕಟ್ಟಿಕೊಂಡ ಸಂಪರ್ಕ ಸಾಧನಗಳು ಕಾಡಿನ ಬೇಟೆಗಾರರಿಗೂ ಸಿಗುತ್ತಿವೆ. ಅಲ್ಲೆಲ್ಲೋ ನಿಸರ್ಗದಲ್ಲಿ ಅವಿತಿದ್ದ ವೈರಾಣುಗಳು ಇದೇ ಸಾಧನಗಳ ಬೆನ್ನೇರಿ ಹಂದಿಜ್ವರ, ಪಕ್ಷಿಜ್ವರ, ನಿಫಾ, ಹಾಂಟಾ, ಎಬೊಲಾ, ಕೋವಿಡ್‌ಗಳಂಥ ಮಹಾಮಾರಿಗಳಾಗುವುದನ್ನು ನಾವು ನೋಡಿದ್ದೇವೆ. ಆದರೂ ಬೇಟೆ ನಡೆಯುತ್ತಿದೆ. ಯಾರದೋ ತೆವಲಿಗೆ, ಇನ್ಯಾರದೋ ಅಂಧವಿಶ್ವಾಸಕ್ಕೆ ಮುಗ್ಧ ಪ್ರಾಣಿಗಳು ಬಲಿಯಾಗುತ್ತಿವೆ. ಅಂಧಶ್ರದ್ಧೆ ಬೇಡವೆಂದು ಹೇಳುವವರೂ ಗುಂಡಿಗೆ ಬಲಿಯಾಗುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT