ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಲ್ಲದ ರೋಗಕ್ಕೆ ಎಲ್ಲೆಲ್ಲಿಂದಲೋ ಮದ್ದು!

Last Updated 24 ಜೂನ್ 2018, 5:29 IST
ಅಕ್ಷರ ಗಾತ್ರ

ಹೊಸ ಸರ್ಕಾರ ಬಂದಾಗಲೆಲ್ಲ ಜನರಲ್ಲಿ ಅದೇನೋ ಹೊಸ ನಿರೀಕ್ಷೆಗಳು ಗರಿಗೆದರಿಕೊಳ್ಳುತ್ತವೆ. ದೇಶದ ಆರ್ಥಿಕ ಚಟುವಟಿಕೆಯ ಪ್ರಮುಖ ಕೇಂದ್ರಗಳಲ್ಲಿ ಒಂದಾದ ಬೆಂಗಳೂರು ನಗರವಂತೂ ತನ್ನ ಕೆಲವಾದರೂ ಸಮಸ್ಯೆಗಳು ಈಗ ಪರಿಹಾರವಾದೀತು ಎಂದು ಕಾಯುತ್ತಿರುತ್ತದೆ. ಈ ನಗರವನ್ನು ಭಾರತದ ಸಿಲಿಕಾನ್ ವ್ಯಾಲಿ ಮಾಡುತ್ತೆವೆಂದೋ, ಸಿಂಗಪುರದಂತೆ ಕಂಗೊಳಿಸುತ್ತೆವೆಂತೆಲೋ ಜನನಾಯಕರು ಹಿಂದೆಲ್ಲ ಕನಸು ಬಿತ್ತಿದ್ದ ಸಂದರ್ಭಗಳಲ್ಲಿ ಜನರೂ ಒಂದಿನಿತು ಹಗಲುಗನಸು ಕಂಡಿದ್ದು ಇರಬಹುದು.

ಆದರೆ, ಇತ್ತೀಚಿನ ವರ್ಷಗಳಲ್ಲಿ ಮಳೆಗಾಲದಲ್ಲಿ ಸದಾ ಬರುತ್ತಿರುವ ಪ್ರವಾಹಗಳಲ್ಲಿ ಅಂಥ ಕನಸುಗಳೆಲ್ಲ ಕೊಚ್ಚಿಹೋಗಿವೆ ಅಥವಾ ಬೇಸಿಗೆಯ ನೀರಿನ ಕೊರತೆಯಲ್ಲಿ ಒಣಗಿಹೋಗಿವೆ! ಕನಿಷ್ಠ ಪ್ರಮಾಣದ ಕುಡಿಯುವ ನೀರಿನ ಪೂರೈಕೆ, ಒಳಚರಂಡಿಯ ಸುಗಮ ಕಾರ್ಯ ನಿರ್ವಹಣೆ, ನಿಯಮಿತವಾದ ಕಸ ವಿಲೇವಾರಿ- ಇಂಥ ಮೂಲಭೂತ ಸೌಲಭ್ಯಗಳಾದರೂ ದೊರಕಿದರೆ ಸಾಕೆಂಬ ಭಾವಕ್ಕೆ ಜನ ಬರುತ್ತಿದ್ದಾರೆ.

ಇದೀಗ ತಾನೇ ಅಧಿಕಾರದ ಗದ್ದುಗೆ ಏರಿರುವ ಹೊಸ ಸರ್ಕಾರಕ್ಕೆ ಜನರ ಈ ಇಂಗಿತ ತಿಳಿದಿರುವಂತಿದೆ. ಹಾಗೆಂದೇ, ಬೆಂಗಳೂರಿನ ಜನರ ಮನಗೆಲ್ಲಲು ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ನೀಗಿಸುವ ಹೊಸ ಕನಸೊಂದಕ್ಕೆ ಚಾಲನೆ ನೀಡಹೊರಟಿದೆ. ನಾಲ್ಕು ನೂರು ಕಿ.ಮೀ. ದೂರವಿಸುವ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಲಿಂಗನಮಕ್ಕಿ ಅಣೆಕಟ್ಟೆಯಿಂದ 24 ರಿಂದ 30 ಟಿ.ಎಂ.ಸಿ. ಅಡಿ ನೀರನ್ನು ಬೆಂಗಳೂರಿಗೆ ಪೂರೈಸುವ ಬೃಹತ್ ಯೋಜನೆಯೊಂದರ ವಿಸ್ತ್ರತ ಯೋಜನಾ ವರದಿ ತಯಾರಿಸಲು ಸರ್ಕಾರ ಒಪ್ಪಿಗೆ ನೀಡಿರುವುದಾಗಿ ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಕಳೆದ ವಾರ ಹೇಳಿದ್ದಾರೆ.

ನಮ್ಮದೇ ರಾಜ್ಯದ ಜಲಾಶಯವೊಂದರಿಂದ ನೀರು ತರುತ್ತೇವೆನ್ನಲು ಯಾರ ಅಪ್ಪಣೆಯನ್ನೂ ಕೇಳಬೇಕಿಲ್ಲವಲ್ಲ! ಹಾಗೆಂದು, ಇದೇನೂ ಒಮ್ಮೆಲೆ ಹುಟ್ಟಿಕೊಂಡ ಕನಸಲ್ಲ. 2014ರಲ್ಲೇ ಬೆಂಗಳೂರು ಜಲ ಮತ್ತು ತ್ಯಾಜ್ಯ ನಿರ್ವಹಣಾ ಮಂಡಳಿಯ ಹಿಂದಿನ ಮುಖ್ಯಸ್ಥರಾಗಿದ್ದ ಬಿ.ಎನ್. ತ್ಯಾಗರಾಜ್ ಅಧ್ಯಕ್ಷತೆಯ ತಜ್ಞರ ಸಮಿತಿಯು ಲಿಂಗನಮಕ್ಕಿಯಿಂದ 30 ಟಿ.ಎಂ.ಸಿ. ಅಡಿ ನೀರು ತರುವ ಸಲಹೆ ಮಾಡಿತ್ತು. ಆ ಪ್ರಸ್ತಾವ ಇದೀಗ ಮುನ್ನೆಲೆಗೆ ಬಂದಿದೆ. ಕುಳಿತಲ್ಲೇ ರೂಪಿಸುವ ಇಂಥ ಯೋಜನೆಗಳೆಂದರೆ ಸರ್ಕಾರಿ ಯಂತ್ರಕ್ಕೆ ಅದೆಷ್ಟು ಅಪ್ಯಾಯಮಾನ! ಇನ್ನಷ್ಟು ಸಮಯ ಬೆಂಗಳೂರಿನ ಜನ ಶರಾವತಿ ನದಿಯ ನೀರಿನ ನೆನಪಲ್ಲಿ ತಂಪಾಗಿರಬಹುದಲ್ಲವೇ?

ಬೆಂದಕಾಳೂರಿನಲ್ಲಿ ಭವಿಷ್ಯದಲ್ಲಿ ಬೇಳೆ ಬೇಯಿಸಲೂ ನೀರಿಗೆ ಕೊರತೆ ಕಾಣುವ ಭೀತಿ ಎದುರಾಗಿರುವುದು ಸುಳ್ಳಲ್ಲ. ಜನಸಂಖ್ಯೆ ಒಂದೂ ಕಾಲು ಕೋಟಿ ಮೀರುತ್ತಿದೆ. ಪ್ರತಿಯೊಬ್ಬರಿಗೆ ಪ್ರತಿದಿನ ಕನಿಷ್ಠ ಅಗತ್ಯವಾಗಿರುವ ನಿಗದಿತ 150 ಲೀಟರ್ ಹಾಗಿರಲಿ, 25 ಲೀಟರ್ ಪೂರೈಸಲೂ ಬೆಂಗಳೂರು ಜಲಮಂಡಳಿಗೆ ಕಷ್ಟವಾಗುತ್ತಿದೆ. ಬಾವಿಗಳು, ಕೆರೆಗಳು ಹಾಗೂ ಅರ್ಕಾವತಿ ನದಿ ಕಣಿವೆಯಿಂದ ನೀರು ಪಡೆಯುತ್ತಿದ್ದ ಕಳೆದ ಶತಮಾನದ ಸುಂದರ ನಗರವಾಗಿ ಉಳಿದಿಲ್ಲ ಬೆಂಗಳೂರು. ಬೃಹದಾಕಾರವಾಗಿ ಬೆಳೆಯುತ್ತಿದೆ. ಹಾಗೆಂದೇ, ನೂರು ಕಿ.ಮೀ. ದೂರದಿಂದ ಕಾವೇರಿ ನೀರು ತರಿಸಿಕೊಂಡದ್ದು. ಕಾವೇರಿ ಕಣಿವೆಯಿಂದ ನೀರು ಪೂರೈಸುವ ಯೋಜನೆಯ ಈಗಿನ ನಾಲ್ಕೂ ಹಂತಗಳನ್ನು ಸೇರಿಸಿದರೆ, ನಗರದಲ್ಲಿ ಬಳಕೆಯಾಗುತ್ತಿರುವ ನೀರಿನ ಶೇಕಡ 80 ಭಾಗವನ್ನು ಕಾವೇರಿ ಪೂರೈಸುತ್ತಿದೆ.

ಇದೀಗ, ಜಪಾನ್ ಸರ್ಕಾರದಿಂದ ದೊರಕಿದ ₹ 5,000 ಕೋಟಿಗೂ ಹೆಚ್ಚಿನ ಸಾಲದಲ್ಲಿ ಕಾವೇರಿ ಕುಡಿಯುವ ನೀರಿನ ಯೋಜನೇಯ ಐದನೇ ಹಂತದ ಕಾಮಗಾರಿ ಜಾರಿಯಲ್ಲಿದೆ. ಆದರೆ, ಇದೂ ಬೆಂಗಳೂರಿನ ದಾಹ ತೀರಿಸುವ ಯಾವ ಭರವಸೆಯೂ ಇಲ್ಲ. ಏಕೆಂದರೆ ಕಾವೇರಿ ನದಿ ಕಣಿವೆಯ ವ್ಯಾಜ್ಯದ ಕುರಿತಂತೆ ಸುಪ್ರೀಂ ಕೋರ್ಟ್ ಇತ್ತೀಚೆಗೆ ನೀಡಿದ ತೀರ್ಪಿನಂತೆ ಬೆಂಗಳೂರು ಗರಿಷ್ಠ 23 ಟಿ.ಎಂ.ಸಿ. ಅಡಿ ನೀರನ್ನು ಮಾತ್ರ ಬಳಸಿಕೊಳ್ಳಬಹುದು. ಅಂದರೆ ಈಗಾಗಲೇ ಪಡೆಯುತ್ತಿರುವ ಸುಮಾರು 19 ಟಿ.ಎಂ.ಸಿ. ಅಡಿ ಹೊರತುಪಡಿಸಿದರೆ, ಹೆಚ್ಚುವರಿ ಸಿಗುವುದು 4 ಟಿ.ಎಂ.ಸಿ. ಅಡಿ ಮಾತ್ರ! ನವದಿಕ್ಕುಗಳಲ್ಲಿ ಬೆಳೆಯುತ್ತಿರುವ ಬೆಂಗಳೂರಿಗೆ ನೀರು ತರುವುದಾದರೂ ಎಲ್ಲಿಂದ? ರಾಜಧಾನಿಯ ಈ ಶೋಚನೀಯ ಪರಿಸ್ಥಿತಿ ನೋಡಿ. ಪ್ರಸ್ಥಭೂಮಿಯ ಕಣಿವೆಯಲ್ಲಿ ಒಂದರ ಕೆಳಗೆ ಒಂದರ ಸರಪಳಿಯಂತೆ ಹಬ್ಬಿದ್ದ ಸಾವಿರಾರು ಕೆರೆಗಳ ಮಡಿಲಲ್ಲಿ ಅರಳಿದ ನಗರ ಬೆಂಗಳೂರು. ಸ್ವಾತಂತ್ರ್ಯ ಬರುವವರೆಗೂ ನೂರಾರು ಕೆರೆಗಳು ನಗರದ ವ್ಯಾಪ್ತಿಯಲ್ಲಿ ಇದ್ದುದಕ್ಕೆ ದಾಖಲೆಗಳಿವೆ. ಆದರೆ, ಕಳೆದ ನಾಲ್ಕೈದು ದಶಕಗಳ ನಗರದ ಬೆಳವಣಿಗೆಯ ಓಘದಲ್ಲಿ ಚಿತ್ರಣವೇ ಬದಲಾಗಿ ಹೋಯಿತು! ಕೆರೆಗಳೆಲ್ಲ ಬಸ್‌ನಿಲ್ದಾಣ, ಕಟ್ಟಡ ಸಂಕೀರ್ಣ, ಹೊಸ ಬಡಾವಣೆ ಇತ್ಯಾದಿಗಳಿಗೆ ಬಲಿಯಾಗುತ್ತ ಹೋದವು. ಅಳಿದುಳಿದ ಕೆರೆ-ಕಟ್ಟೆಗಳು ಬಲಾಢ್ಯರ ಅತಿಕ್ರಮಣಕ್ಕೆ ಬಲಿಯಾದವು. ಎಗ್ಗಿಲ್ಲದೆ ಕೊರೆದ ಕೊಳವೆಬಾವಿಗಳು ಅಂತರ್ಜಲವನ್ನು ಬರಿದು ಮಾಡಿದವು. ಇದೀಗ ಪಾತಾಳಕ್ಕಿಳಿದರೂ ನೀರಿಲ್ಲ; ದೊರಕಿದರೂ ಕುಡಿಯಲು ಯೋಗ್ಯವಲ್ಲ!

ಅನೇಕ ಬಡ ಬಡಾವಣೆಗಳಿಗೆ ಕನಿಷ್ಠ ನೀರನ್ನು ಪೂರೈಸಲೂ ಜಲಮಂಡಳಿಗೆ ಸಾಧ್ಯವಾಗುತ್ತಿಲ್ಲ. ಪ್ರಸ್ತುತ ಪ್ರತಿದಿನ ಅದು ಸುಮಾರು 90 ಕೋಟಿ ಲೀಟರ್ ಪೂರೈಸುತ್ತಿರುವುದಾದರೂ, ಇನ್ನೂ 40 ಕೋಟಿ ಲೀಟರ್ ನೀರಿನ ಕೊರತೆಯಿದೆ. ಹೊರಗಿನ ಆರ್ಥಿಕ ಸಹಾಯವಿಲ್ಲದೆ ಜಲಮಂಡಳಿ ಹೊಸ ಕಾಮಗಾರಿ ಕೈಗೊಳ್ಳುವ ಸ್ಥಿತಿಯಲ್ಲಿ ಅಲ್ಲ. ಜಲಮಂಡಳಿಯ ಅಂಕಿ–ಅಂಶಗಳೇ ಹೇಳುವಂತೆ ಅದರ ಅದಾಯದ ಸುಮಾರು ಶೇ 75ರಷ್ಟು ಭಾಗ ನೀರಿನ ಸಾಗಣೆ ವೆಚ್ಚಕ್ಕೆ ಖರ್ಚಾಗುತ್ತದೆ. ಅಂದರೆ, ಕೆರೆಗಳು ಕಾಣೆಯಾಗಿವೆ. ಅಂತರ್ಜಲ ಬತ್ತಿದೆ. ಕಾವೇರಿ ನೀರು ಸಣ್ಣದಾಗುತ್ತಿದೆ! ಹೀಗಾಗಿ, ಸರ್ಕಾರಕ್ಕೆ ಈಗ ಕಂಡ ಹೊಸ ನೀರಿನ ಮೂಲ ಲಿಂಗನಮಕ್ಕಿ!

ಮುಳುಗಡೆ ಪ್ರದೇಶದ ನೋಟ
ಮುಳುಗಡೆ ಪ್ರದೇಶದ ನೋಟ

ಶರಾವತಿಯ ಕಥೆ

ವಿಶ್ವಪ್ರಸಿದ್ಧ ಜೋಗದ ಜಲಪಾತವಿರುವ ನದಿ ಕಣಿವೆ ಶರಾವತಿ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಅಂಬುತೀರ್ಥದಲ್ಲಿ ಹುಟ್ಟುವ ಈ ನದಿ 130 ಕಿ.ಮೀ. ದೂರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುವ ಚಿಕ್ಕ ನದಿ. ಸಾಗರ ಹಾಗೂ ಹೊಸನಗರ ತಾಲ್ಲೂಕಿನಲ್ಲಿಯೇ ಶರಾವತಿ ನದಿಯ ಹೆಚ್ಚಿನ ಜಲಾನಯನ ಪ್ರದೇಶವಿದೆ. ಸುಮಾರು 3,000 ಚದರ ಕಿ.ಮೀ. ವ್ಯಾಪ್ತಿಯ ಈ ಜಲಾನಯನ ಪ್ರದೇಶದಿಂದಲೇ ನದಿಗೆ ಸದಾ ನೀರು ಹರಿಯುವುದು. ಇಲ್ಲಿನ ನಂದಿಹೊಳೆ, ಹರಿದ್ರಾವತಿ, ಮಾವಿನಹೊಳೆ, ಹಿಲಕುಂಜಿ, ಶರ್ಮಣಾವತಿ, ಎಣ್ಣೆಹೊಳೆ, ನಾಗೋಡಿಹೊಳೆ ಇವೆಲ್ಲ ಶರಾವತಿಗೆ ಸತತವಾಗಿ ನೀರುಣಿಸುವ ಉಪ ನದಿಗಳು.

ಮುಂದೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಹಾಗೂ ಹೊನ್ನಾವರ ತಾಲ್ಲೂಕುಗಳನ್ನು ಹಾದು ಸಾಗರ ಸೇರುವ ಜಲಧಾರೆಯಂತಿದೆ ಈ ನದಿ. ಇಷ್ಟು ಕಿರುವ್ಯಾಪ್ತಿಯಲ್ಲೇ ಮೊದಲು ಅದೆಷ್ಟು ಸಮೃದ್ಧ ಕಾಡಿತ್ತೆಂದರೆ, ಶರಾವತಿ ಸದಾ ತುಂಬಿ ಹರಿಯುತ್ತಿತ್ತು. ಜೋಗದಲ್ಲಿ ಮೈದುಂಬಿ ಜಲಪಾತ ಧುಮುಕುತ್ತಿತ್ತು! ಈ ನೀರಿನ ರಾಶಿಯನ್ನು ಕಂಡೇ ಸ್ವಾತಂತ್ರ್ಯಾನಂತರದ ರಾಜ್ಯದ ದೊಡ್ಡ ಸಾಧನೆಗಳಲ್ಲಿ ಒಂದು ಎಂದೇ ಬಿಂಬಿತವಾದ ಲಿಂಗನಮಕ್ಕಿ ಜಲಾಶಯವನ್ನು ಕಾರ್ಗಲ್‌ನಲ್ಲಿ ನಿರ್ಮಿಸಿದ್ದು. ಈ ಜಲಾಶಯ ಸುಮಾರು 320ಚದರ ಕಿ.ಮೀ.ಯಷ್ಟು ವಿಸ್ತಾರದಲ್ಲಿ ಹರಡಿದ್ದು, ಸುಮಾರು 152 ಟಿ.ಎಂ.ಸಿ. ಅಡಿ ನೀರು ಹಿಡಿದಿಡಬಲ್ಲದು. ರಾಜ್ಯದ ದೊಡ್ಡ ಜಲಭಂಡಾರ ಇದು.

ಆದರೆ, ಅರವತ್ತರ ದಶಕದಲ್ಲಿ ನಿರ್ಮಾಣವಾದ ಈ ಜಲಾಶಯದ ನೀರಿನ ಆಳದಲ್ಲಿ ಹಾಗೂ ಹಿನ್ನೀರಿನ ಹರವಿನಲ್ಲಿ ಹೇಳಿ ಮುಗಿಯದಷ್ಟು ಕಥೆಗಳಿವೆ. ಸಾಗರ ತಾಲ್ಲೂಕಿನ 99 ಹಾಗೂ ಹೊಸನಗರ ತಾಲ್ಲೂಕಿನ 76 ಹಳ್ಳಿಗಳು ಸಂಪೂರ್ಣ ಮುಳುಗಿಹೋಗಿವೆ. ಸಾವಿರಾರು ಕುಟುಂಬಗಳ 6,000 ಹೆಕ್ಟೇರ್‌ಗೂ ಹೆಚ್ಚು ಫಲವತ್ತಾದ ಕೃಷಿ ಜಮೀನು ಕರಗಿಹೋಗಿದೆ. ಉಳಿದಂತೆ ಹತ್ತು ಸಾವಿರ ಹೆಕ್ಟೇರಿಗೂ ಹೆಚ್ಚು ಪಶ್ಚಿಮ ಘಟ್ಟದ ಸಂಪದ್ಭರಿತ ನಿತ್ಯಹರಿದ್ವರ್ಣ ಕಾಡು ಕಣ್ಮರೆಯಾಗಿದೆ. ಇದನ್ನು ನೆನಪಿಸಲೋ ಎಂಬಂತೆ, ಜಲಾಶಯದ ಹಿನ್ನೀರಿನಲ್ಲಿ ಬೇಸಿಗೆಯಲ್ಲಿ ಈಗಲೂ ನೂರಾರು ದ್ವೀಪಗಳ ಶೃಂಗಗಳು ತಲೆ ಎತ್ತುತ್ತವೆ!

ಸುಮಾರು 20,000ಕ್ಕೂ ಹೆಚ್ಚು ಜನರು ಅಗ ಮನೆ, ಹೊಲ, ನೆಲೆ ಕಳೆದುಕೊಂಡು ನಿರಾಶ್ರಿತರಾದರೆಂದು ಅಂದಾಜು. ದೇಶಕ್ಕೆ ಬೆಳಕು ನೀಡಲು ಅವರು ತ್ಯಾಗಮಾಡುವುದು ಅನಿವಾರ್ಯ ಎಂದೇ ಎಲ್ಲ ಅಧಿಕಾರಸ್ಥರೂ ಆಗ ಹೇಳಿದ್ದು. ಈ ಎಲ್ಲ ನಾಶ ಹಾಗೂ ತ್ಯಾಗದ ಫಲವಾಗಿಯೇ ಶರಾವತಿ ಕಣಿವೆಯಲ್ಲಿ ನಾಲ್ಕು ಪ್ರಮುಖ ಜಲವಿದ್ಯುತ್ ಉತ್ಪಾದನಾ ಕೇಂದ್ರಗಳು ಇಂದಿಗೂ ಕಾರ್ಯನಿರ್ವಹಿಸುತ್ತಿರುವುದು (ಲಿಂಗನಮಕ್ಕಿ, ಶರಾವತಿ, ಮಹಾತ್ಮ ಗಾಂಧಿ ಹಾಗೂ ಗೇರುಸೊಪ್ಪ ಘಟಕ). ರಾಜ್ಯ ಉತ್ಪಾದಿಸುವ ಜಲವಿದ್ಯುತ್ತಿನ ಸುಮಾರು ಶೇಕಡ 50 ಭಾಗ ಇಲ್ಲಿಂದಲೇ ಬರುವುದು!

ಆದರೆ, ಜಲಾಶಯ ಯೋಜನೆಯಿಂದ ಪಲ್ಲಟಗೊಂಡ ಸಾವಿರಾರು ಕುಟುಂಬಗಳು ಇಂದಿಗೂ ಸರಿಯಾದ ಬದಲಿ ಭೂಮಿ ದೊರಕದೆ, ಸಿಕ್ಕರೂ ಪಟ್ಟಾ ಸಿಗದೆ ತ್ರಿಶಂಕು ಸ್ಥಿತಿಯಲ್ಲಿದ್ದಾರೆ. ಸಾಗರ, ತೀರ್ಥಹಳ್ಳಿ, ಹೊಸನಗರ ತಾಲ್ಲೂಕುಗಳ ಹಳ್ಳಿಗಳಲ್ಲಿ ಓಡಾಡಿದರೆ ಈ ನಿರಾಶ್ರಿತರ ಕೂಗು ಈಗಲೂ ಕೇಳಿಸುತ್ತದೆ. ಅಧುನಿಕ ಅಭಿವೃದ್ಧಿ ಯೋಜನೆಗಳು ಹುಟ್ಟಿಹಾಕುವ ಪರಿಸರ ನಿರಾಶ್ರಿತರಿಗೆ ಕರ್ನಾಟಕದಲ್ಲಿ ದೊರಕುವ ಜ್ವಲಂತ ಹಾಗೂ ದೊಡ್ಡ ನಿದರ್ಶನವಿದು! ಈಗ ಬೆಂಗಳೂರಿಗೆ ನೀರನ್ನು ಒಯ್ಯಲು ಯೋಜಿಸಿರುವುದು ಇಂಥ ನೋವನ್ನೆಲ್ಲ ಮಡಿಲಲ್ಲಿರಿಸಿಕೊಂಡ ಈ ಶರಾವತಿ ಜಲಾಶಯದಿಂದಲೇ.

ಹೊಸನಗರದ ಬಳಿ ಹರಿಯುತ್ತಿರುವ ಶರಾವತಿ ನದಿ
ಹೊಸನಗರದ ಬಳಿ ಹರಿಯುತ್ತಿರುವ ಶರಾವತಿ ನದಿ

ಯೋಜನೆಯ ಪರಿಣಾಮಗಳೇನಾಗಬಹುದು?

ನೀರು ತುಂಬಿರುವಂತೆ ಕಾಣುವ ಲಿಂಗನಮಕ್ಕಿ ಜಲಾಶಯದಿಂದ ಬೆಂಗಳೂರಿಗೆ ನೀರು ಒಯ್ಯುವ ಈ ಯೋಜನೆ ಮೇಲ್ನೋಟಕ್ಕೆ ಕಂಡಷ್ಟು ಸರಳವಾಗಲಿಕ್ಕಿಲ್ಲ. ಈ ಯೋಜನೆಯ ಸಾಧ್ಯತೆಗಳ ಕುರಿತು ಹಲವು ಪ್ರಶ್ನೆಗಳು ಏಳುತ್ತವೆ. ಮೊದಲನೆಯದು, ಅಲ್ಲಿ ನಿಜಕ್ಕೂ ಲಭ್ಯವಾಗುವ ನೀರಿನ ಪ್ರಮಾಣದ ಕುರಿತು. ಹೊಸನಗರ ಹಾಗೂ ಸಾಗರ ತಾಲ್ಲೂಕಿನಲ್ಲಿ ವ್ಯಾಪಿಸಿರುವ ಈ ಜಲಾಶಯದ ಹಿನ್ನೀರಿನ ಪ್ರದೇಶದಲ್ಲಿ ನಿರಂತರವಾಗಿ ಸಾಗಿದ ಕಾಡುನಾಶ ಹಾಗೂ ಅದರಿಂದಾದ ಮಣ್ಣಿನ ಸವೆತದಿಂದಾಗಿ ಲಿಂಗನಮಕ್ಕಿ ಜಲಾಶಯದಲ್ಲಿ ಈಗಾಗಲೇ ಅಪಾರ ಪ್ರಮಾಣದಲ್ಲಿ ಹೂಳುತುಂಬಿದೆ. ‘ಇದರಿಂದಾಗಿ ಇಲ್ಲಿನ ನೀರಿನ ಸಂಗ್ರಹಣಾ ಸಾಮರ್ಥ್ಯ ಗಣನೀಯ ಪ್ರಮಾಣದಲ್ಲಿ ಕುಸಿದಿದೆ’ ಎಂಬುದು ಈ ಶರಾವತಿ ಕಣಿವೆಯಲ್ಲಿ ಕಳೆದ ಮೂರು ದಶಕಗಳಿಂದ ಸಂಶೋಧನೆ ನಡೆಸುತ್ತಿರುವ ಭಾರತೀಯ ವಿಜ್ಞಾನ ಮಂದಿರದ ಪರಿಸರಶಾಸ್ತ್ರಜ್ಞ ಡಾ.ಟಿ.ವಿ. ರಾಮಚಂದ್ರ ಅವರ ಅಭಿಪ್ರಾಯ.

ಇದಕ್ಕೆ ಇನ್ನೊಂದು ಕಾರಣವೂ ಇದೆ. ಕಳೆದ ಮೂರು ದಶಕಗಳಿಂದ ಈ ಪ್ರದೇಶದಲ್ಲಿ ನೀಲಗಿರಿ- ಅಕೇಶಿಯಾ ಮರಗಳ ಏಕಪ್ರಭೇದ ನೆಡುತೋಪುಗಳ ನಿರ್ಮಾಣ ಲಗಾಮಿಲ್ಲದೆ ಸಾಗಿರುವುದು. ಇದರಲ್ಲಿ ಸರ್ಕಾರಿ ಸ್ವಾಮ್ಯದ ಮೈಸೂರು ಪೇಪರ್ ಮಿಲ್ಸ್‌ನದು (ಎಂ.ಪಿ.ಎಂ) ಸಿಂಹಪಾಲು. ಅದು ಗುತ್ತಿಗೆ ಆಧಾರದಲ್ಲಿ ಪಡೆದ ಸುಮಾರು 30,000 ಹೆಕ್ಟೇರ್ ಅರಣ್ಯ ಪ್ರದೇಶದಲ್ಲಿ ಈ ಬಗೆಯ ನೆಡುತೋಪು ಬೆಳೆಸುತ್ತಿದೆ. ‘ನೈಸರ್ಗಿಕ ಕಾಡು ಕಡಿದು ನೆಡುತೋಪು ನಿರ್ಮಿಸುವುದನ್ನು ನಾವು ಕಳೆದ ಮೂರು ದಶಕಗಳಿಂದ ವಿರೋಧಿಸುತ್ತಿದ್ದೇವೆ. ಆದರೆ, ಸರ್ಕಾರ ಕಿವಿಗೊಟ್ಟಿಲ್ಲ’ ಎಂದು ಖೇದ ವ್ಯಕ್ತಪಡಿಸುತ್ತಾರೆ ಪರಿಸರ ಹೋರಾಟಗಾರ ಅನಂತ ಹೆಗಡೆ ಅಶೀಸರ.

ಕೊನೆ ಪಕ್ಷ ಲಿಂಗನಮಕ್ಕಿ ಅಣೆಕಟ್ಟನ್ನು ನಿರ್ವಹಿಸುವ ಕೆ.ಪಿ.ಸಿ.ಯಾದರೂ ಜಲಾಶಯದ ಹಿನ್ನೀರಿನ ಪ್ರದೇಶವನ್ನು ವೈಜ್ನಾನಿಕವಾಗಿ ನಿರ್ವಹಿಸಬೇಕಿತ್ತು. ಆದರೆ, ಅದೂ ತಲೆ ಕೆಡಿಸಿಕೊಂಡಿಲ್ಲ. ಇನ್ನು ಕಳೆದ ಎರಡು ದಶಕಗಳಿಂದ ಸಾಗರ ಹಾಗೂ ಹೊಸನಗರ ತಾಲ್ಲೂಕಿನಲ್ಲಿ ಆಗುತ್ತಿರುವ ಡೀಮ್ಡ್ ಕಾಡಿನ ಅತಿಕ್ರಮಣ ಹಾಗೂ ಕಲ್ಲುಗಣಿಗಾರಿಕೆಯು ಈ ಪ್ರದೇಶದ ನೆಲ- ಜಲ ಸುಸ್ಥಿರತೆಯನ್ನೇ ಅಲ್ಲಾಡಿಸುತ್ತಿದೆ. ‘ಇವೆಲ್ಲವುಗಳಿಂದಾಗಿ ಲಿಂಗನಮಕ್ಕಿ ಜಲಾಶಯ ಹೂಳು ತುಂಬುತ್ತಿದ್ದು ನಿಧಾನವಾಗಿ ಸಾಯುತ್ತಿದೆ. ನೀರಿನ ಪ್ರಮಾಣ ಕ್ಷೀಣಿಸುತ್ತಿದೆ. ಇರುವ ನೀರನ್ನೂ ಬೇರೆ ಉದ್ದೇಶಕ್ಕೆ ಬಳಸಿದರೆ ರಾಜ್ಯದ ಜಲವಿದ್ಯುತ್ ಉತ್ಪಾದನೆಗೆ ತೀವ್ರ ಹೊಡೆತ ಬೀಳುವುದಿಲ್ಲವೆ?’ ಎಂದು ಕೇಳುತ್ತಾರೆ ಸಾಗರದ ರೈತ ಸಹಕಾರ ಮುಖಂಡ ಬಿ.ಎಚ್. ರಾಘವೇಂದ್ರ.

ಶರಾವತಿ ನದಿ ತಪ್ಪಲ್ಲಿನಲ್ಲಾದ ಈ ಬಗೆಯ ನಿರಂತರ ಪರಿಸರ ನಾಶದಿಂದಾಗಿ ನದಿಯಲ್ಲಿ ಮೊದಲಿನಷ್ಟು ಒಳಹರಿವಿಲ್ಲ. ಅದರ ತೊರೆಗಳು ಬತ್ತುತ್ತಿವೆ. ಬೇಸಿಗೆಯಲ್ಲಿ ಶರಾವತಿ ಕಣಿವೆಯ ಅದೆಷ್ಟೋ ಹಳ್ಳಿಗಳಲ್ಲಿ ಕೃಷಿ ಹಾಗೂ ಕುಡಿಯುವ ನೀರಿಗೂ ಕೊರತೆಯಾಗುತ್ತಿದೆ. ‘ಹೀಗಾಗಿ ಇಲ್ಲಿಂದ ನೀರನ್ನು ಒಯ್ಯುವುದು ಈ ಪ್ರದೇಶದ ಜನರನ್ನು ಜಲಸಮಾಧಿ ಮಾಡಿದಂತೆ’ ಎಂದು ಹೇಳುತ್ತಾರೆ ಹಿನ್ನೀರಿನ ಪ್ರದೇಶದ ಪ್ರಗತಿಪರ ರೈತ ಸುಬ್ಬುರಾವ್ ಹಕ್ರೆ. ಹೀಗಾಗಿ, ಈ ಯೋಜನೆಯ ಪ್ರಸ್ತಾವವನ್ನು ಕೇಳಿದಾಗಿನಿಂದ ಸ್ಥಳೀಯ ಜನರು ಪ್ರತಿರೋಧದ ಧ್ವನಿ ಎತ್ತುತ್ತಿದ್ದಾರೆ.

ನಗರೀಕರಣದ ವೇಗಕ್ಕೆ ಕಾವೇರಿ, ಎತ್ತಿನಹೊಳೆ ನದಿಗಳು ಬಲಿಯಾದಂತೆ ಇದೀಗ ಶರಾವತಿಯನ್ನೂ ಬಲಿಕೊಡಲು ಹೊರಟಿರುವುದು ಸರಿಯಲ್ಲ ಎಂಬುದೇ ಅನೇಕ ಪರಿಸರ ತಜ್ಞರ ಅಭಿಪ್ರಾಯ. ಏಕೆಂದರೆ, ಶರಾವತಿ ನದಿಕಣಿವೆ ಅತಿಸೂಕ್ಷ್ಮವಾದದ್ದು. ಪಶ್ಚಿಮಘಟ್ಟದ ಶ್ರೇಣಿಯಲ್ಲೇ ಅಳಿದುಳಿದ ಸಂಪದ್ಭರಿತವಾದ ನಿತ್ಯಹರಿದ್ವರ್ಣ ಕಾಡುಗಳಿರುವ ತಾಣವಿದು. ರಾಮಪತ್ರೆ ಜಡ್ಡಿಯಂಥ ಜೀವಪೋಷಕ ತಾಣಗಳಿರುವ ಇಲ್ಲಿನ ಶರಾವತಿ ಅಭಯಾರಣ್ಯ ಮತ್ತು ಅಳಿವಿನಂಚಿನಲ್ಲಿರುವ ಸಿಂಗಳೀಕ ಸಂರಕ್ಷಿತ ಪ್ರದೇಶಕ್ಕೆ ಈ ಪ್ರಸ್ತಾವಿತ ಯೋಜನೆಯಿಂದ ತೀವ್ರ ಆಘಾತವಾದೀತು.

ಹೊಳೆಹಿಪ್ಪೆ, ಹೊಳೆಹೊನ್ನೆ, ಹೇತಾರಿ, ರಾಮಪತ್ರೆ, ದೇವದಾರುವಿನಂಥ ನೂರಾರು ವಿನಾಶದಂಚಿನ ಸಸ್ಯಪ್ರಭೇದಗಳುಳ್ಳ ಈ ಜೀವವೈವಿಧ್ಯ ತಾಣಕ್ಕೆ ತಡೆಯಲಾರದ ಏಟು ಬೀಳಬಹುದು. ‘ಈಗಾಗಲೇ ಟೇಲ್-ರೇಸ್ ಯೋಜನೆ ಮತ್ತು ಲಿಂಗನಮಕ್ಕಿ ಜಲವಿದ್ಯುತ್ ಯೋಜನೆಗಳ ಕಾಮಗಾರಿಗಳಿಂದಾಗಿ ಬಹಳಷ್ಟು ನಾಶವಾಗಿವೆ. ಇರುವುದನ್ನಾದರೂ ಉಳಿಸುವುದು ಅವಶ್ಯ’ ಎನ್ನುತ್ತಾರೆ ಜೀವಶಾಸ್ತ್ರಜ್ಞ ಡಾ.ಎಂ. ಡಿ. ಸುಭಾಶ್ ಚಂದ್ರನ್.

ಶರಾವತಿ ನದಿಯಿಂದ ಪ್ರಸ್ಥಭೂಮಿಯ ದೂರದ ಕಣಿವೆಗೆ ನೀರು ಒಯ್ಯುವ ಈ ಯೋಜನೆ ಒಂದರ್ಥದಲ್ಲಿ ನದಿ ತಿರುವು ಯೋಜನೆಯೇ ಸರಿ. ಹೀಗಾಗಿ, ದಿನದಿಂದ ದಿನಕ್ಕೆ ನೀರಿನ ಅಭಾವ ಕಾಣುತ್ತಿರುವ ದಾವಣಗೆರೆ, ಚಿತ್ರದುರ್ಗ, ತುಮಕೂರು, ಚಿಕ್ಕಮಗಳೂರು ಜಿಲ್ಲೆಯ ಪೂರ್ವಭಾಗ- ಇವರೆಲ್ಲ ಮುಂಬರುವ ದಿನಗಳಲ್ಲಿ ಇಲ್ಲಿಂದಲೇ ನೀರಿಗಾಗಿ ಬೇಡಿಕೆ ಇಡತೊಡಗಬಹುದು. ‘ಆಗ, ಯಾರ ಅಗತ್ಯಕ್ಕೆ ಮೊದಲ ಆದ್ಯತೆ ನೀಡುವುದು ಎಂಬ ಪ್ರಶ್ನೆ ಎದ್ದು, ಮುಂಬರುವ ದಿನಗಳಲ್ಲಿ ಈ ಭಾಗದಲ್ಲಿ ದೊಡ್ಡದೊಂದು ಜಲವ್ಯಾಜ್ಯವೇ ಉದ್ಭವಿಸಬಹುದು’ ಎಂದು ಎಚ್ಚರಿಸುತ್ತಾರೆ ಸಾಗರದ ಸಮುದಾಯ ವಿಜ್ಞಾನ ಕೇಂದ್ರದ ಕೆ. ವೆಂಕಟೇಶ್.

‘ಈ ಯೋಜನೆಯ ಪ್ರಸ್ತಾವ ಆದಂದಿನಿಂದ ನಮಗೆ ದೊಡ್ಡ ಆಘಾತವೇ ಆಗಿದೆ. ಈಗ ಆಗಿರುವ ಅನಾಹುತವೇ ಸಾಕು. ನಾವಿದನ್ನು ಬಲವಾಗಿ ವಿರೋಧಿಸುತ್ತೇವೆ’ ಎಂದು ಕ್ರೋಧದಿಂದ ಹೇಳುತ್ತಾರೆ ಕಾರ್ಗಲ್‌ ಬಳಿಯ ಹೆನ್ನಿ ರಾಜುಗೌಡರು, ಗಣೇಶ ಪಡಂಬೈಲು, ಸುಬ್ರಾಯ ಮರಾಠಿ. ಈ ಯೋಜನೆ ವಿರೋಧಿಸಿ ಮಲೆನಾಡಿನಲ್ಲಿ ಒಂದು ಬೃಹತ್ ಹೋರಾಟ ಹುಟ್ಟುವ ಎಲ್ಲ ಲಕ್ಷಣಗಳು ಈಗ ಗೋಚರಿಸತೊಡಗಿವೆ.

ನಿರಾಶ್ರಿತರಿಗೆ ಮನೆ ತಲುಪಲು ದೋಣಿಯೇ ಆಸರೆ
ನಿರಾಶ್ರಿತರಿಗೆ ಮನೆ ತಲುಪಲು ದೋಣಿಯೇ ಆಸರೆ

ಬೆಂಗಳೂರಿನ ನೀರಿನ ಸಮಸ್ಯೆಗೆ ಪರಿಹಾರವೆಂತು?

ಹಾಗಾದರೆ, ಲಿಂಗನಮಕ್ಕಿಯ ನೀರು ಬಿಟ್ಟು ಬೆಂಗಳೂರಿನ ನೀರಿನ ಸಮಸ್ಯೆಗೆ ಪರಿಹಾರವಿಲ್ಲವೇ? ಖಂಡಿತಾ ಇದೆ ಎನ್ನುತ್ತಾರೆ ತಜ್ಞರು.ಬೆಂಗಳೂರಿನಲ್ಲಿ ಸಾಕಷ್ಟು ಮಳೆಯಾಗುತ್ತದೆಯಲ್ಲವೇ? ಅದನ್ನು ಮಳೆ ನೀರು ಸಂಗ್ರಹದ ಮೂಲಕ ಸಂಗ್ರಹಿಸಲು ಸಾಧ್ಯವಿದೆ. ಬೆಂಗಳೂರಿನಲ್ಲಿ ಕೆರೆ–ಕಟ್ಟೆ ತುಂಬಿಸುವ ಅಥವಾ ಅಂತರ್ಜಲ ಮರುಪೂರಣ ಮಾಡುವ ಕುರಿತಂತೆ ಯಶಸ್ವಿ ಮಾದರಿಗಳೂ ಇವೆ, ತಜ್ಞರೂ ಇದ್ದಾರೆ.

‘ಇವನ್ನೆಲ್ಲ ಆಡಳಿತಾತ್ಮಕ ಹಾಗೂ ಸಾಂಸ್ಥಿಕ ಸ್ವರೂಪಗಳ ಮೂಲಕ ಸಾಧಿಸುವ ಇಚ್ಛಾಶಕ್ತಿ ಬೇಕಷ್ಟೆ. ಜಲಮರುಪೂರಣವೊಂದರಿಂದಲೇ 15 ಟಿ.ಎಂ.ಸಿ. ಅಡಿ ನೀರನ್ನು ಬೆಂಗಳೂರಿನಲ್ಲಿ ದೊರಕಿಸಿಕೊಳ್ಳಲು ಸಾಧ್ಯ’ ಎನ್ನುತ್ತಾರೆ ಡಾ.ಟಿ.ವಿ. ರಾಮಚಂದ್ರ. ಬಳಸಿದ ನೀರಿನ ಶುದ್ಧೀಕರಣ ಹಾಗೂ ಮರುಬಳಕೆ ವಿಧಾನಗಳ ಅಳವಡಿಕೆಯಿಂದ ಸುಮಾರು ಮತ್ತೆ16 ಟಿ.ಎಂ.ಸಿ. ಅಡಿ ನೀರನ್ನು ಪಡೆಯಲು ಸಾಧ್ಯ ಎಂದು ಭಾರತೀಯ ವಿಜ್ಞಾನ ಮಂದಿರದ ವಿಜ್ಞಾನಿಗಳು ನಿಖರವಾಗಿ ತೋರಿಸಿದ್ದಾರೆ. ಹತ್ತಾರು ಸಾವಿರ ಕೋಟಿಗಳಲ್ಲಿ ನಿರ್ಮಾಣವಾಗುವ ಬೃಹತ್ ಯೋಜನೆಗಳಿಗೆ ಬದಲಾಗಿ ಅದಕ್ಕೆ ತಗಲುವ ವೆಚ್ಚದ ಒಂದಂಶದಲ್ಲಿ ಇವನ್ನೆಲ್ಲ ಸಾಧಿಸಬಹುದು. ಅಂದರೆ ಬೆಂಗಳೂರಿನಲ್ಲಿ ಜಲಮೂಲಕ್ಕೆ ಕೊರತೆಯಿಲ್ಲ. ದಾರಿದ್ರ್ಯವಿರುವುದು ಸರ್ಕಾರದ ಚಿಂತನಾ ಕ್ರಮದಲ್ಲಿ ಮತ್ತು ಆಡಳಿತ ವಿಧಾನದಲ್ಲಿ!

ಇಷ್ಟಕ್ಕೂ ಬೆಂಗಳೂರಿನಲ್ಲಿ ಈಗ ಆಗುತ್ತಿರುವ ನೀರಿನ ಅಪವ್ಯಯವಾದರೂ ಎಷ್ಟು? ಬೆಂಗಳೂರಿನ ಇನ್‌ಸ್ಟಿಟ್ಯೂಟ್ ಫಾರ್ ಸೋಸಿಯೋ ಇಕನಾಮಿಕ್ ಚೇಂಜ್ ಸಂಶೋಧನಾ ಸಂಸ್ಥೆಯ ತಜ್ಞರು 2013ರಲ್ಲಿ ಕೈಗೊಂಡ ಅಧ್ಯಯನದ ಪ್ರಕಾರ ಶೇಕಡ 50ರಷ್ಟು ಭಾಗ ನೀರು ಪೋಲಾಗುತ್ತದೆ! ಕೊಳವೆ ಮಾರ್ಗದಲ್ಲಿ ಸೋರಿಹೋಗುವುದು, ಚರಂಡಿ ನೀರಿನೊಂದಿಗೆ ಬೆರೆಯುವುದು, ಕದ್ದು ಬಳಸುವವರ ಕೈಸೇರುವುದು ಎಲ್ಲ ಇದರಲ್ಲಿ ಸೇರಿದೆ. ಅಂದರೆ ಜಲಮಂಡಳಿ ತಾನು ತರುವ ನೀರಿನಲ್ಲಿ ಸುಮಾರು ಅರ್ಧದಷ್ಟು ಭಾಗಕ್ಕೆ ಆದಾಯ ಪಡೆಯಲೂ ಸಾಧ್ಯವಾಗುತ್ತಿಲ್ಲ. ಈ ಬಗೆಯ ನೀರಿನ ಅಪವ್ಯಯದಲ್ಲಿ ಕೋಲ್ಕತ್ತಾ ನಂತರ ಬೆಂಗಳೂರಿಗೆ ದೇಶದಲ್ಲೇ ಅಗ್ರಸ್ಥಾನವಂತೆ! ಪ್ರತಿದಿನ 600 ಮಿಲಿಯನ್ ಲೀಟರಿಗೂ ಹೆಚ್ಚು ನೀರು ಹೀಗೆ ಸೋರಿಹೋಗುವುದನ್ನು ಜಲಮಂಡಳಿಯೂ ಒಪ್ಪಿಕೊಂಡಿದೆ.

ಅಂದರೆ, ಜಲಮಂಡಳಿ ತನ್ನ ಸಂಗ್ರಹಣೆ ಹಾಗೂ ವಿತರಣಾ ವ್ಯವಸ್ಥೆಯನ್ನು ಸರಿಪಡಿಸಿಕೊಳ್ಳುವುದರಿಂದಲೇ ಆರೆಂಟು ಟಿ.ಎಂ.ಸಿ. ಅಡಿ ನೀರನ್ನು ಉಳಿಸಿಕೊಳ್ಳಬಹುದೇನೋ! ಈ ಬಗೆಯ ಇದಕ್ಕೆ ಜೊತೆಯಾಗಿ, ನಾಗರಿಕರೂ ಹಿತಮಿತವಾಗಿ ನೀರನ್ನು ಬಳಸುವ ಶಿಸ್ತನ್ನು ಸಾಮೂಹಿಕವಾಗಿ ತೋರತೊಡಗಿದರೆಂದರೆ ಈಗಿರುವ ನೀರಿನಲ್ಲೇ ಬೆಂಗಳೂರು ಸುಖವಾಗಿರಬಹುದು.

‘ಹೌದು. ಅಂತ ವಿವೇಕ ಇಂದಿನ ಅಗತ್ಯ. ನೀರಿನ ಮೂಲದ ಸಂರಕ್ಷಣೆ, ಸಂಗ್ರಹಣೆ, ವಿತರಣೆ ಹಾಗೂ ಬಳಸಿದ ನೀರಿನ ಮರುಬಳಕೆ– ಇವನ್ನೆಲ್ಲ ವೈಜ್ನಾನಿಕವಾಗಿ ಮತ್ತು ಸಮಗ್ರವಾಗಿ ನಿರ್ವಹಿಸುವ ಯೋಜನೆ ಮತ್ತು ವ್ಯವಸ್ಥೆ ಇಂದಿನ ಜರೂರತ್ತಾಗಿದೆ. ಇದರಿಂದ ಬೆಂಗಳೂರನ್ನು ನೀರಿನಲ್ಲಿ ಸ್ವಾವಲಂಬಿ ಮಾಡಲು ಖಂಡಿತಾ ಸಾಧ್ಯ’ ಎನ್ನುತ್ತಾರೆ ಬೆಂಗಳೂರಿನ ಅಶೋಕ ಟ್ರಸ್ಟ್ ಫಾರ್ ರೀಸರ್ಚ್ ಇನ್ ಎನ್ವಿರಾನ್ಮೆಂಟ್ ಮತ್ತು ಇಕಾಲಜಿಯ ಹಿರಿಯ ವಿಜ್ಞಾನಿ ಪ್ರೊ.ಶರಚ್ಚಂದ್ರ ಲೇಲೆ. ಅವರು ಕಳೆದ ಮೂರು ದಶಕಗಳಿಂದ ಅರ್ಕಾವತಿ ಕಣಿವೆಯನ್ನೂ ಸೇರಿದಂತೆ ಬೆಂಗಳೂರಿನ ನೆಲ- ಜಲ ವಿಜ್ಞಾನವನ್ನು ಆಳವಾಗಿ ಅಧ್ಯಯನ ಮಾಡುತ್ತಿರುವ ಸಂಶೋಧನಾ ತಂಡದ ಮುಖ್ಯಸ್ಥರು.

ಅವರ ಪ್ರಕಾರ, ಬೆಂಗಳೂರಿಗೆ ಈಗ ಬೇಕಾದ್ದು ಹೊಸ ನೀರಿನ ಮೂಲವಲ್ಲ. ಬದಲಾಗಿ ಇರುವ ಸಂಪನ್ಮೂಲವನ್ನು ಸರಿಯಾಗಿ ಬಳಸಿಕೊಳ್ಳುವ ಸಂಘಟಿತ ವಿವೇಕ ಮತ್ತು ಸಾಂಸ್ಥಿಕ ಪ್ರಯತ್ನ.

ಗೊತ್ತುಗುರಿಯಿಲ್ಲದ ಯೋಜನೆಗಳನ್ನು ರೂಪಿಸುವುದು ಸರ್ಕಾರಕ್ಕೆ ವ್ಯಸನವಾಗುತ್ತಿರಬೇಕು. ಯಾವುದೋ ಹಿತಾಸಕ್ತಿಗಳ ಲಾಭಕ್ಕಾಗಿ, ಉದ್ಯಮ ಲಾಬಿಗಳು ತೋರುವ ಆಮಿಷಕ್ಕೆ ಒಳಗಾಗಿ, ಅವೈಜ್ಞಾನಿಕ ಯೋಜನೆಗಳು ರೂಪುಗೊಳ್ಳುತ್ತಲೇ ಇವೆ. ಯೋಜನೆಯೊಂದರಲ್ಲಿ ಪರಿಸರದ ಸುರಕ್ಷತೆಯಿದೆಯೆ? ಯೋಜನಾ ಪ್ರದೇಶದ ಜನರ ಅಭಿಪ್ರಾಯವೇನು? ಆರ್ಥಿಕವಾಗಿ ಅದು ಕಾರ್ಯಸಾಧ್ಯವೇ? ಈ ಬಗೆಯ ಪ್ರಶ್ನೆಗಳಿಗೆ ಉತ್ತರ ನೀಡದೆಯೆ ಯೋಜನೆಯ ಅನುಷ್ಠಾನಕ್ಕೆ ಇಳಿಯುವಷ್ಟು ಧಾರ್ಷ್ಟ ಸರ್ಕಾರಿ ಯಂತ್ರದ್ದು. ವ್ಯಾಪಕ ಜನಜಾಗೃತಿ ಮತ್ತು ಪ್ರಭಲ ನಾಗರಿಕ ಪ್ರತಿಭಟನೆಗಳು ಮಾತ್ರ ಸರ್ಕಾರದ ಈ ಲಗಾಮಿಲ್ಲದ ಓಟವನ್ನು ನಿಯಂತ್ರಿಸಬಲ್ಲವು.

ಶರಾವತಿ ನದಿ ತಪ್ಪಲು ಈಗಾಗಲೇ ಸೋತಿದೆ. ಈ ಹೊತ್ತಿನಲ್ಲೇ ಗೇರುಸೊಪ್ಪೆಯಿಂದ ಭೂಗತ ಕೊಳವೆಮಾರ್ಗದಲ್ಲಿ ನೀರನ್ನು ಮೇಲಕ್ಕೆ ಸಾಗಿಸಿ ವಿದ್ಯುತ್ ಉತ್ಪಾದಿಸುವ ಯೋಜನೆಯೊಂದನ್ನು ಕೆ.ಪಿ.ಸಿ. ಪ್ರಸ್ತಾಪಿಸಿದೆ. ಇನ್ನು ಜೋಗದ ಜಲಪಾತಕ್ಕೆ ಬೇಸಿಗೆಯಲ್ಲೂ ಕೃತಕವಾಗಿ ನೀರುಬಿಟ್ಟು ಪ್ರವಾಸಿಗರನ್ನು ಆಕರ್ಷಿಸುವ ಖಾಸಗಿ ಉದ್ಯಮಿಯೊಬ್ಬರ ಪ್ರವಾಸೋದ್ಯಮ ಯೋಜನೆಗೆ ಜೋಗ ಅಭಿವೃದ್ಧಿ ಪ್ರಾಧಿಕಾರ ಬಲಿಯಾಗಿ, ವಿವರವಾದ ಯೋಜನಾ ವರದಿ ಸಿದ್ಧವಾಗುತ್ತಿದೆ!

ಶರಾವತಿ ಕಣಿವೆಯ ನೈಜ ಪರಿಸರ ನಂತರ ಉಳಿಯುವುದಾರರೂ ಎಲ್ಲಿ? ಕರಾವಳಿ ಹಾಗೂ ಮಲೆನಾಡಿನ ಕಾಡು, ನದಿಕಣಿವೆ, ಅಳಿವೆಗಳು ಇವೆಲ್ಲ ನಾಡಿನ ನೆಲ- ಜಲ ಹಾಗೂ ಹವಾಮಾನದ ಸುರಕ್ಷತೆ ಕಾಯುವ ನೈಸರ್ಗಿಕ ನಿಧಿ ಎಂಬುದನ್ನೇ ಮರೆತು, ನಿರಂತರವಾಗಿ ಅವುಗಳನ್ನು ನಾಶಪಡಿಸುವ ಯೋಜನೆಗಳಿಗೇ ಸರ್ಕಾರ ಮುಂದಾಗುತ್ತಿರುವುದು ಖೇದಕರ ಸಂಗತಿ. ಜನ ಇದರಿಂದ ಕಂಗೆಟ್ಟು ಬೀದಿಗಿಳಿಯುವ ಮೊದಲು, ಲಿಂಗನಮಕ್ಕಿಯಿಂದ ನೀರು ತರುವ ಈ ಅವೈಜ್ಞಾನಿಕ ಯೋಜನೆಯನ್ನು ಸರ್ಕಾರ ಕೈಬಿಡುವುದೇ ಸೂಕ್ತವಾದೀತು.

ಮಹಾತ್ಮ ಗಾಂಧಿ ವಿದ್ಯುತ್‌ ಉತ್ಪಾದನಾ ಘಟಕ
ಮಹಾತ್ಮ ಗಾಂಧಿ ವಿದ್ಯುತ್‌ ಉತ್ಪಾದನಾ ಘಟಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT