ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ– ಅಗಲ: ಕೋವಿಡ್‌ ಒಂದು ಕೋಟಿ ಪ್ರಕರಣ ಈಗ, ಏರಿಕೆಗೆ ಲಗಾಮು

Last Updated 18 ಡಿಸೆಂಬರ್ 2020, 19:32 IST
ಅಕ್ಷರ ಗಾತ್ರ
ADVERTISEMENT
""
""
""

ಚೀನಾದ ವುಹಾನ್‌ನಲ್ಲಿ 2019ರ ಡಿಸೆಂಬರ್‌ 8ರಂದು ಮೊದಲ ಕೋವಿಡ್‌–19 ಪ‍್ರಕರಣ ಪತ್ತೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವೆಬ್‌ಸೈಟ್‌ ಮಾಹಿತಿ ನೀಡುತ್ತದೆ. ಚೀನಾದಲ್ಲಿ ನವೆಂಬರ್‌ನಲ್ಲಿಯೇ ಕೋವಿಡ್‌ ಪ್ರಕರಣಗಳು ಕಾಣಿಸಿಕೊಳ್ಳಲು ಆರಂಭವಾಗಿದ್ದವು ಎಂಬ ವರದಿಗಳೂ ಇವೆ. ಅದೇನೇ ಇದ್ದರೂ ಕಳೆದ ಒಂದು ವರ್ಷದಲ್ಲಿ ಕೋವಿಡ್‌ ಸಾಂಕ್ರಾಮಿಕವು ಜಗತ್ತಿನ ಯಾವ ಭಾಗಕ್ಕೂ ವಿನಾಯಿತಿ ನೀಡದೆ ಎಲ್ಲರನ್ನೂ ಕಾಡಿದೆ.

ಭಾರತದಲ್ಲಿ ಜನವರಿ 30ರಂದು ಕೇರಳದಲ್ಲಿ ಮೊದಲ ಪ್ರಕರಣ ಪತ್ತೆಯಾಗಿತ್ತು. ಜನವರಿ 23ರಂದು ವುಹಾನ್‌ನಿಂದ ಕೇರಳಕ್ಕೆ ಹಿಂದಿರುಗಿದ್ದ 20 ವರ್ಷದ ಯುವತಿಯಲ್ಲಿ ಕೋವಿಡ್‌ ಲಕ್ಷಣ ಕಾಣಿಸಿಕೊಂಡಿತ್ತು. ಬಳಿಕ, ಕೋವಿಡ್‌ ಪ್ರಕರಣಗಳ ಸಂಖ್ಯೆ ನಿಧಾನವಾಗಿ ಏರತೊಡಗಿತು. ಸಾಂಕ್ರಾಮಿಕವು ಗಂಭೀರ ಸ್ವರೂಪ ಪಡೆಯುವುದಕ್ಕೆ ಮೊದಲೇ ಎಚ್ಚೆತ್ತುಕೊಂಡ ದೇಶಗಳಲ್ಲಿ ಭಾರತವೂ ಒಂದು; ಪ್ರಕರಣಗಳ ಸಂಖ್ಯೆ ಅತ್ಯಂತ ಕಡಿಮೆ ಇದ್ದಾಗಲೇ ಮಾರ್ಚ್‌ 24ರಿಂದ ದೇಶವ್ಯಾಪಿ ಲಾಕ್‌ಡೌನ್‌ ಘೋಷಿಸಲಾಗಿತ್ತು. ಲಾಕ್‌ಡೌನ್‌ ಅವಧಿಯಲ್ಲಿಯೂ ದೇಶದಲ್ಲಿ ಪ್ರಕರಣಗಳ ಸಂಖ್ಯೆ ಇಳಿಮುಖವಾಗಲಿಲ್ಲ. ಲಾಕ್‌ಡೌನ್‌ ತೆರವಾದ ನಂತರ, ಏರಿಕೆಯು ಕಳವಳ ಮೂಡಿಸುವಷ್ಟು ವೇಗ ಪಡೆಯಿತು.

ಸೆಪ್ಟೆಂಬರ್‌ 16ರಂದು ಒಂದೇ ದಿನ ಲಕ್ಷಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿದ್ದವು. ಆದರೆ, ನಂತರದ ದಿನಗಳಲ್ಲಿ ಪ್ರಕರಣಗಳ ಸಂಖ್ಯೆ ಇಳಿಮುಖವಾಯಿತು. ಈಗ ದಿನದ ಏರಿಕೆಯು 20 ಸಾವಿರದ ಆಸುಪಾಸಿನಲ್ಲಿದೆ. ಅಕ್ಟೋಬರ್‌ ಅಂದರೆ ಭಾರತದಲ್ಲಿ ಹಬ್ಬಗಳ ಋತು. ನವರಾತ್ರಿ, ದಸರಾ, ದುರ್ಗಾಪೂಜೆ, ದೀಪಾವಳಿಗಳೆಲ್ಲ ಈ ತಿಂಗಳಲ್ಲಿ ಆಚರಣೆಯಾದವು. ಲಾಕ್‌ಡೌನ್ ಮತ್ತು ಲಾಕ್‌ಡೌನ್‌ ನಂತರದ ನಿರ್ಬಂಧಗಳ ಬಳಿಕ ಜನರು ಸ್ವಲ್ಪ ಸ್ವಚ್ಛಂದವಾಗಿಯೇ ಹಬ್ಬಗಳನ್ನು ಆಚರಿಸಿದ್ದಾರೆ. ಅಕ್ಟೋಬರ್‌–ನವೆಂಬರ್ ತಿಂಗಳಲ್ಲಿ ಬಿಹಾರದಲ್ಲಿ ವಿಧಾನಸಭಾ ಚುನಾವಣೆಯೂ ನಡೆಯಿತು. ಕೋವಿಡ್‌ ಪ್ರಕರಣಗಳು ಮತ್ತೆ ಏರಿಕೆಯಾಗಲು ಇವು ಕಾರಣವಾಗಬಹುದು ಎಂದು ಪರಿಣತರು ಕಳವಳ ವ್ಯಕ್ತಪಡಿಸಿದ್ದರು.

ಭಾರತದಲ್ಲಿ ಕೋವಿಡ್‌ ಎರಡನೇ ಅಲೆಯ ಬಗ್ಗೆ ನವೆಂಬರ್‌ ತಿಂಗಳ ಹೊತ್ತಿಗೆ ಭಾರಿ ಕಳವಳ ಸೃಷ್ಟಿಯಾಗಿತ್ತು. ಕೇರಳ, ಕರ್ನಾಟಕ, ಮಹಾರಾಷ್ಟ್ರ ಮತ್ತು ಇತರ ರಾಜ್ಯಗಳಲ್ಲಿ ಪತ್ತೆಯಾಗುತ್ತಿದ್ದ ಪ್ರಕರಣಗಳ ಸಂಖ್ಯೆ ಏರಿಕೆ ಆಗುತ್ತಿದ್ದುದು ಇದಕ್ಕೆ ಕಾರಣ. ದೆಹಲಿಯಲ್ಲಿ ಮೂರನೇ ಬಾರಿಗೆ ಪ್ರಕರಣಗಳ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆ ಆಗಲು ಶುರುವಾಗಿತ್ತು. ಜತೆಗೆ, ಚಳಿಗಾಲದ ವಾತಾವರಣದಲ್ಲಿ ಕೊರೊನಾ ವೈರಾಣು ಯಾವ ರೀತಿ ವರ್ತಿಸಬಹುದು ಎಂಬ ಬಗ್ಗೆಯೂ ಖಚಿತವಾದ ತಿಳಿವಳಿಕೆ ಇರಲಿಲ್ಲ. ಅದೃಷ್ಟವಶಾತ್‌, ಕೋವಿಡ್‌ ಪ್ರಕರಣಗಳು ಪತ್ತೆಯಾಗುವ ಪ್ರಮಾಣವು ನಿಯಂತ್ರಣ ಮೀರಿ ಹೋಗಲಿಲ್ಲ.

ಅಮೆರಿಕ ಯುರೋಪ್‌ ಸೇರಿದಂತೆ ಜಗತ್ತಿನ ವಿವಿಧೆಡೆ ಕೋವಿಡ್‌ ಎರಡನೇ ಅಲೆಯು ಸಮಸ್ಯೆ ಸೃಷ್ಟಿಸಿದೆ. ಅಮೆರಿಕದಲ್ಲಿ ಮಂಗಳವಾರ (24 ತಾಸುಗಳಲ್ಲಿ) 2,48,000 ಪ್ರಕರಣಗಳು ಪತ್ತೆಯಾಗಿವೆ ಎಂದು ಜಾನ್ಸ್‌ ಹಾಪ್‌ಕಿನ್ಸ್‌ ವಿ.ವಿ.ಯ ಕೊರೊನಾ ಮಾಹಿತಿ ಕೇಂದ್ರವು ಹೇಳಿದೆ. ಯುರೋಪ್‌ನ ಹಲವು ದೇಶಗಳು ಎರಡು ಮತ್ತು ಮೂರನೇ ಸುತ್ತಿನ ಲಾಕ್‌ಡೌನ್‌ನ ಮೊರೆ ಹೋಗುತ್ತಿವೆ. ಕ್ರಿಸ್ಮಸ್‌ ಮತ್ತು ಹೊಸ ವರ್ಷದ ಸಂಭ್ರಮಾಚರಣೆಯು ಕೊರೊನಾ ವೈರಾಣು ಹರಡುವಿಕೆಯನ್ನು ಇನ್ನಷ್ಟು ತೀವ್ರಗೊಳಿಸುವ ಭೀತಿ ಯುರೋಪ್‌ನ ದೇಶಗಳನ್ನು ಆವರಿಸಿದೆ. ಆಸ್ಟ್ರಿಯಾದಲ್ಲಿ ಕ್ರಿಸ್ಮಸ್‌ ಬಳಿಕ ಜನವರಿ 18ರವರೆಗೆ ಲಾಕ್‌ಡೌನ್‌ ಹೇರಲು ನಿರ್ಧರಿಸಲಾಗಿದೆ. ಇದು ಆ ದೇಶದಲ್ಲಿ ಹೇರಲಾಗುವ ಮೂರನೇ ಲಾಕ್‌ಡೌನ್‌.

ಮುಂಬೈನ ದಾದರ್‌ನಲ್ಲಿ ಕೋವಿಡ್‌ ತಪಾಸಣೆಗಾಗಿ ಸಾರ್ವಜನಿಕರ ಗಂಟಲು ದ್ರವ ಮಾದರಿ ಸಂಗ್ರಹಿಸಿದ ವೈದ್ಯಕೀಯ ಸಿಬ್ಬಂದಿ

ಭಾರತದಲ್ಲಿ ಎರಡನೇ ಅಲೆಯು ಕಾಣಿಸಿಕೊಳ್ಳದಿರಲು ಖಚಿತ ಕಾರಣಗಳೇನು ಎಂಬುದು ಗೊತ್ತಿಲ್ಲ. ಆದರೆ, ಸಾಂಕ್ರಾಮಿಕವು ತೀವ್ರವಾಗಿದ್ದ ಸಂದರ್ಭದಲ್ಲಿಯೂ ಒಂದು ಪ್ರಕರಣ ಪತ್ತೆಯಾದರೆ 90ರಷ್ಟು ಪ್ರಕರಣಗಳು ಪತ್ತೆಯೇ ಆಗಲಿಲ್ಲ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ವಿಜ್ಞಾನಿಗಳ ಗುಂಪು ನಡೆಸಿದ ಅಧ್ಯಯನವು ಹೇಳಿದೆ. ಭಾರತದಲ್ಲಿ ಈವರೆಗೆ 80 ಕೋಟಿಯಷ್ಟು ಜನರು ಕೊರೊನಾ ವೈರಾಣುವಿಗೆ ತೆರೆದುಕೊಂಡಿರಬಹುದು. ಅವರಲ್ಲಿ ಕೋವಿಡ್‌ ಲಕ್ಷಣಗಳು ಕಾಣಿಸಿಕೊಂಡಿಲ್ಲ ಅಷ್ಟೇ. ಇದರಿಂದಾಗಿ, ಭಾರತದಲ್ಲಿ ಎರಡನೇ ಅಲೆ ಕಾಣಿಸಿಕೊಳ್ಳದೇ ಇರುವ ಸಾಧ್ಯತೆಯೇ ಹೆಚ್ಚು ಎಂದು ಈ ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಕಳೆದ ಒಂದು ತಿಂಗಳಲ್ಲಿ ಭಾರತದಲ್ಲಿ ಪತ್ತೆಯಾಗುತ್ತಿರುವ ಪ್ರಕರಣಗಳ ಸಂಖ್ಯೆಯನ್ನು ಗಮನಿಸಿದರೆ, ವಿಜ್ಞಾನಿಗಳ ಅಂದಾಜು ಸರಿಯಾಗಿಯೇ ಇದೆ ಅನಿಸುತ್ತದೆ.

ಉತ್ತಮ ಸ್ಥಿತಿಯಲ್ಲಿ ಭಾರತ
ಜಾಗತಿಕ ಸರಾಸರಿಗೆ ಹೋಲಿಸಿದರೆ ಭಾರತದಲ್ಲಿ ಕೋವಿಡ್‌ನಿಂದ ಗುಣಮುಖರಾಗುತ್ತಿರುವವರ ಪ್ರಮಾಣ ಹೆಚ್ಚು. ವಿಶ್ವದಲ್ಲಿ ಈವರೆಗೆ ಪತ್ತೆಯಾದ ಒಟ್ಟು ಪ್ರಕರಣಗಳಲ್ಲಿ ಶೇ 70.26ರಷ್ಟು ಜನರಷ್ಟೇ ಗುಣಮುಖರಾಗಿದ್ದಾರೆ. ಆದರೆ, ಭಾರತದಲ್ಲಿ ಪತ್ತೆಯಾದ ಒಟ್ಟು ಪ್ರಕರಣಗಳಲ್ಲಿ ಶೇ 95.20ರಷ್ಟು ಜನರು ಗುಣಮುಖರಾಗಿದ್ದಾರೆ. ಜಾಗತಿಕ ಸರಾಸರಿಗೆ ಹೋಲಿಸಿದರೆ ದೇಶದಲ್ಲಿ ಕೋವಿಡ್‌ನಿಂದ ಮೃತಪಟ್ಟವರ ಪ್ರಮಾಣವೂ ಕಡಿಮೆ ಇದೆ. ವಿಶ್ವದಲ್ಲಿ ಈಗ ಶೇ 27ರಷ್ಟು ಕೋವಿಡ್‌ ಪ್ರಕರಣಗಳು ಸಕ್ರಿಯವಾಗಿವೆ. ಆದರೆ ಭಾರತದಲ್ಲಿ ಸಕ್ರಿಯ ಪ್ರಕರಣಗಳ ಪ್ರಮಾಣ ಶೇ 3.36ರಷ್ಟು ಮಾತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT