ಆಧುನಿಕ ಸೇನಾ ಸಂಘರ್ಷದಲ್ಲಿ ಕ್ಷಿಪಣಿಗಳು, ಯುದ್ಧವಿಮಾನಗಳು, ಡ್ರೋನ್‌ಗಳು ಹೆಚ್ಚು ಬಳಕೆಯಾಗುತ್ತಿವೆ. ಇವುಗಳ ದಾಳಿಯನ್ನು ತಡೆಯಲು ಯಾವುದೇ ದೇಶ ಸುವ್ಯವಸ್ಥಿತ ವಾಯು ರಕ್ಷಣಾ ವ್ಯವಸ್ಥೆ ಹೊಂದುವುದು ಮುಖ್ಯ. ಭಾರತ ಮತ್ತು ಪಾಕಿಸ್ತಾನ ನಡುವಿನ ಇತ್ತೀಚಿನ ಸೇನಾ ಸಂಘರ್ಷದಲ್ಲಿ ಇದರ ಪ್ರಾಮುಖ್ಯ ಜಗಜ್ಜಾಹೀರಾಗಿದೆ. ಪಾಕಿಸ್ತಾನದ ಎಲ್ಲ ವಾಯು ದಾಳಿಗಳನ್ನು ದೇಶದ ವಾಯು ರಕ್ಷಣಾ ವ್ಯವಸ್ಥೆ ಸಮರ್ಥವಾಗಿ ತಡೆಯಿತು; ಭಾರತದ ವಾಯುದಾಳಿಯನ್ನು ತಡೆಯಲು ಪಾಕ್ ವಾಯು ರಕ್ಷಣಾ ವ್ಯವಸ್ಥೆ ವಿಫಲವಾಗಿತ್ತು. ದೇಶದ ವಾಯು ರಕ್ಷಣಾ ವ್ಯವಸ್ಥೆಯನ್ನು ಇನ್ನಷ್ಟು ಸುಧಾರಿಸಲು ಮುಂದಡಿ ಇಟ್ಟಿರುವ ಭಾರತ, ಇತ್ತೀಚೆಗೆ ದೇಶೀಯವಾಗಿ ಅಭಿವೃದ್ಧಿ ಪಡಿಸಿದ ಸಮಗ್ರ ವಾಯು ರಕ್ಷಣಾ ವ್ಯವಸ್ಥೆಯ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾತಂತ್ರ್ಯದ ದಿನ ಪ್ರಸ್ತಾಪಿಸಿರುವ ‘ಸುದರ್ಶನ ಚಕ್ರ’ ವಾಯು ರಕ್ಷಣಾ ವ್ಯವಸ್ಥೆಯ ಅಭಿವೃದ್ಧಿಗೆ ಈ ಪರೀಕ್ಷೆ ಮುನ್ನುಡಿ ಬರೆದಿದೆ.
ಆಗಸ್ಟ್ 23ರಂದು ಐಎಡಿಡಬ್ಲ್ಯುಎಸ್ ಪರೀಕ್ಷೆ ನಡೆಸಿದ ಸಂದರ್ಭದ ಚಿತ್ರ