ತಮಿಳುನಾಡಿನ ರಾಜ್ಯಪಾಲ ಆರ್.ಎನ್.ರವಿ ಅವರು ಅಲ್ಲಿನ ಸರ್ಕಾರದ 10 ಮಸೂದೆಗಳ ಬಗ್ಗೆ ತೀರ್ಮಾನ ಕೈಗೊಳ್ಳದೇ ತಮ್ಮ ಬಳಿಯೇ ಉಳಿಸಿಕೊಂಡು ವಿಳಂಬ ಮಾಡಿದ ಬಗ್ಗೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಹಲವು ನೆಲೆಗಳಿಂದ ಐತಿಹಾಸಿಕವಾಗಿದೆ. ನ್ಯಾಯಮೂರ್ತಿಗಳ ಮಾತು ರಾಜ್ಯಪಾಲರ ಅಧಿಕಾರ ಮತ್ತು ರಾಜ್ಯ ಸರ್ಕಾರಗಳ ಹಕ್ಕಿನ ಬಗ್ಗೆ ಮತ್ತೊಮ್ಮೆ ಬೆಳಕು ಚೆಲ್ಲಿದೆ. ಕರ್ನಾಟಕವೂ ಸೇರಿದಂತೆ ಕೇರಳ, ಪಶ್ಚಿಮ ಬಂಗಾಳ, ಪಂಜಾಬ್, ತೆಲಂಗಾಣ ರಾಜ್ಯಗಳ ಹಲವು ಮಸೂದೆಗಳು ರಾಜ್ಯಪಾಲರ ಬಳಿ ಬಾಕಿ ಇದ್ದು, ಅವುಗಳಿಗೆ ಶೀಘ್ರದಲ್ಲೇ ಅಂಕಿತ ಸಿಗುವ ವಿಶ್ವಾಸ ಮೂಡಿಸಿದೆ. ಭವಿಷ್ಯದಲ್ಲಿಯೂ ಇದು ರಾಜ್ಯಪಾಲ ಮತ್ತು ಸರ್ಕಾರದ ನಡುವಿನ ಸಂಘರ್ಷದ ಸಂದರ್ಭದಲ್ಲಿ ದಿಕ್ಸೂಚಿಯಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.