ಒಬ್ಬರ ಜೀವನಾನುಭವವು ಅಪಾರ ಜ್ಞಾನ, ಮಾಹಿತಿ ನೀಡುವುದರ ಜತೆಗೆ ಕೆಲವೊಮ್ಮೆ ವಿವಾದವನ್ನೂ ಸೃಷ್ಟಿಸುತ್ತವೆ ಎನ್ನುವುದಕ್ಕೆ ತಾಜಾ ಉದಾಹರಣೆ ಸೇನೆಯ ನಿವೃತ್ತ ಜನರಲ್ ಮನೋಜ್ ಮುಕುಂದ ನರವಣೆ ಅವರ ಇನ್ನೂ ಪ್ರಕಟವಾಗದ ‘ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ’. ಆದರೆ ಸಂಸತ್ತಿನಲ್ಲಿ ಕೋಲಾಹಲ ಸೃಷ್ಟಿಸಿದ್ದು ಇದೊಂದೇ ಪುಸ್ತಕವಲ್ಲ.

ಸ್ವತಂತ್ರ ಭಾರತದ ಇತಿಹಾಸದುದ್ದಕ್ಕೂ ಕೆಲವು ಪುಸ್ತಕಗಳು ರಾಜಕೀಯ ಸಂಘರ್ಷವನ್ನು ಸೃಷ್ಟಿಸಿವೆ. ಸೇನಾಧಿಕಾರಿಗಳು, ಸಾಹಿತಿಗಳು, ವಿಚಾರವಾದಿಗಳು ರಚಿಸಿದ ಪುಸ್ತಕಗಳು ಎಬ್ಬಿಸಿದ ಬಿರುಗಾಳಿಗೆ ಕೆಲವೊಮ್ಮೆ ಪುಸ್ತಕಗಳು ನಿಷೇಧವಾದರೆ, ಇನ್ನೂ ಕೆಲ ಸನ್ನಿವೇಶಗಳಲ್ಲಿ ಸರ್ಕಾರವೇ ಅಲ್ಲೋಲ ಕಲ್ಲೋಲವಾದ ಉದಾಹರಣೆಗಳೂ ಇವೆ.

‘ಫೋರ್ ಸ್ಟಾರ್ ಆಫ್ ಡೆಸ್ಟಿನಿ’ ಎಂಬ ಆತ್ಮಚರಿತ್ರೆಯನ್ನು ಜನರಲ್ ಮನೋಜ್ ಮುಕುಂದ ನರವಣೆ ಅವರು ರಚಿಸಿದ್ದಾರೆ. ಆದರೆ ಇದು ಪ್ರಕಟಗೊಂಡಿಲ್ಲ. ಯಾವ ಕಾರಣಕ್ಕಾಗಿ ಈ ಪುಸ್ತಕವನ್ನು ಸರ್ಕಾರದ ಪರಿಶೀಲನೆಗೆ ಸಲ್ಲಿಸಲಾಗಿದೆ ಹಾಗೂ ಭಾರತದಲ್ಲಿ ಪ್ರಕಟಣೆಗೆ ಈವರೆಗೆ ಯಾಕೆ ಅನುಮತಿ ನೀಡಲಾಗಿಲ್ಲ ಎನ್ನುವುದಕ್ಕೆ ಉತ್ತರ ದೊರೆತಿಲ್ಲ. ‘ಅಪ್ರಕಟಿತ ಪುಸ್ತಕ’ದ ಆಯ್ದ ಭಾಗಗಳನ್ನು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಸದನದಲ್ಲಿ ಪ್ರಸ್ತಾಪಿಸುವುದಕ್ಕೂ ಅನುಮತಿ ನಿರಾಕರಿಸಲಾಗಿದೆ. ಇದೇ ವಿಚಾರಕ್ಕಾಗಿ ಸದನದಲ್ಲಿ ಅಡಚಣೆ ಉಂಟುಮಾಡಿದ ಆರೋಪದಲ್ಲಿ 8 ಸಂಸದರನ್ನು ಸದನದಿಂದ ಅಮಾನತುಗೊಳಿಸಿರುವುದು ವಿವಾದವನ್ನು ಮಾತ್ರವಲ್ಲ, ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ವಿರೋಧ ಪಕ್ಷದ ನಾಯಕರು ಸರ್ಕಾರದ ವಿರುದ್ಧ ಆರೋಪ ಮಾಡಿದ್ದಾರೆ.
.ಸಂಪಾದಕೀಯ: ಜನರಲ್ ನರವಣೆ ಪುಸ್ತಕ ವಿವಾದ; ಸರ್ಕಾರ ಪ್ರಶ್ನೆಗಳಿಗೆ ಉತ್ತರಿಸಲಿ.ನರವಣೆ ಅಪ್ರಕಟಿತ ‘ಆತ್ಮಚರಿತ್ರೆ’ ವಿವಾದ: ವಿಪಕ್ಷಗಳ ಸಂಸದರಿಂದ ಪ್ರತಿಭಟನೆ.
2020ರಲ್ಲಿ ವಾಸ್ತವ ಗಡಿ ನಿಯಂತ್ರಣ ರೇಖೆಗೆ ಸಂಬಂಧಿಸಿದಂತೆ ಚೀನಾದೊಂದಿಗೆ ನಡೆದ ಭಾರತೀಯ ಸೇನೆಯ ಸಂಘರ್ಷದ ಸನ್ನಿವೇಶ ಈ ಪುಸ್ತಕದಲ್ಲಿದೆ. ಲೇಖಕರೂ ಆಗಿರುವ ಜನರಲ್ ನರವಣೆ ಹಾಗೂ ಕೇಂದ್ರ ಸರ್ಕಾರದ ನಾಯಕರೊಂದಿಗೆ ನಡೆದ ಮಾತುಕತೆಗಳಿವೆ ಎನ್ನಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಸಮಾಲೋಚನೆಯ ನಂತರ ಸೇನಾ ಮುಖ್ಯಸ್ಥರೊಂದಿಗೆ ಮಾತನಾಡಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಚೀನಾದ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ‘ತಮಗೆ ಸರಿಯೆನ್ನಿಸಿದ್ದನ್ನು ಮಾಡಿ’ ಎಂಬ ಹೇಳಿಕೆ ಇರುವ ವಿವರಗಳು ಪುಸ್ತಕದಲ್ಲಿ ಇವೆ ಎಂದು ಹೇಳಲಾಗಿದ್ದು, ಆ ವಿವರಗಳೇ ವಿವಾದಕ್ಕೆ ಕಾರಣವಾಗಿವೆ.

ಇದೇ ರೀತಿ 2014ರಲ್ಲಿ ಲೇಖಕ ಸಂಜಯ್ ಬಾರು ಅವರ ‘ದಿ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ ಎಂಬ ಕೃತಿಯು ಪ್ರಕಟಗೊಂಡಾಗ ರಾಜಕೀಯ ವಲಯದಲ್ಲಿ ಸಾಕಷ್ಟು ಬಿರುಗಾಳಿಯನ್ನೇ ಎಬ್ಬಿಸಿತ್ತು. ‘ಇದೊಂದು ಕಪೋಕಲ್ಪಿತ ಕೃತಿ’ ಎಂದು ಪ್ರಧಾನಿ ಕಾರ್ಯಾಲಯ ಹೇಳಿತ್ತು. ಈ ಕೃತಿಯಲ್ಲಿ ಅಂದಿನ ಪ್ರಧಾನಿ ಡಾ. ಮನಮೋಹನ ಸಿಂಗ್ ಅವರನ್ನು ಗಾಂಧಿ ಕುಟುಂಬವು ಬಾಹ್ಯದಿಂದ ನಿಯಂತ್ರಿಸುತ್ತಿದೆ ಎಂಬಂತೆ ಬಿಂಬಿಸಲಾಗಿತ್ತು.

2009ರಲ್ಲಿ ಜಸ್ವಂತ್ ಸಿಂಗ್ ಅವರ ಕೃತಿ ‘ಜಿನ್ನಾ: ಇಂಡಿಯಾ ಪಾರ್ಟಿಷನ್ ಇಂಡಿಪೆಂಡೆನ್ಸ್’ ಎಂಬ ಕೃತಿಯು ಸಂಸತ್ತಿನಲ್ಲಿ ವಾಗ್ಯುದ್ಧಕ್ಕೆ ಕಾರಣವಾಯಿತು. ಕೃತಿಯಲ್ಲಿ ಜಿನ್ನಾ ಅವರನ್ನು ಹೊಗಳಿದ್ದ ಬಿಜೆಪಿ ನಾಯಕ ಜಸ್ವಂತ್ ಸಿಂಗ್, ದೇಶ ಇಬ್ಭಾಗವಾಗಲು ನೆಹರು ಕೇಂದ್ರಿತ ನೀತಿಗಳೇ ಕಾರಣ ಎಂದಿದ್ದು ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ತೀವ್ರ ಚರ್ಚೆಗೆ ಕಾರಣವಾಗಿತ್ತು.

ಈ ಕೃತಿಯಲ್ಲಿ ನೆಹರು ಮತ್ತು ಸರ್ದಾರ್ ಪಟೇಲ್ ಅವರನ್ನೂ ಸಿಂಗ್ ಟೀಕಿಸಿದ್ದರು. ಇದಕ್ಕೆ ಕಾಂಗ್ರೆಸ್ ಮಾತ್ರವಲ್ಲ ಬಿಜೆಪಿ ನಾಯಕರೂ ಆಕ್ಷೇಪ ವ್ಯಕ್ತಪಡಿಸಿದ್ದರು. ನಂತರ ಜಸ್ವಂತ್ ಅವರನ್ನು ಬಿಜೆಪಿ ಉಚ್ಛಾಟಿಸಿದರೆ, ಗುಜರಾತ್ ಸರ್ಕಾರವು ಪುಸ್ತಕಕ್ಕೆ ನಿಷೇಧ ಹೇರಿತು. ನಂತರ ಗುಜರಾತ್ ಹೈಕೋರ್ಟ್ ನಿಷೇಧವನ್ನು ತೆರವುಗೊಳಿಸಿತು.
.ನರವಣೆ ಅವರ 'ಅಪ್ರಕಟಿತ ಆತ್ಮಚರಿತ್ರೆ' ವಿಚಾರ: ಲೋಕಸಭೆಯಲ್ಲಿ ಮುಂದುವರಿದ ಗದ್ದಲ.ಲೋಕಸಭೆಯಲ್ಲಿ ಎಂ.ಎಂ. ನರವಣೆ ಆತ್ಮಚರಿತ್ರೆಯನ್ನು ‘ದೃಢೀಕರಿಸಿದ’ ರಾಹುಲ್ ಗಾಂಧಿ.
ಇಷ್ಟೇ ಏಕೆ 1978ರಲ್ಲಿ ಜವಾಹರಲಾಲ್ ನೆಹರು ಅವರ ಆಪ್ತ ಕಾರ್ಯದರ್ಶಿ ಎಂ.ಒ.ಮಥಾಯ್ ಅವರು ಹೊರತಂದ ‘ರೆಮಿನಿಸೆನ್ಸಸ್ ಆಫ್ ದಿ ನೆಹರು ಏಜ್’ ಕೃತಿಯಲ್ಲಿ ನೆಹರು ಮತ್ತು ಗಾಂಧಿ ಕುಟುಂಬದ ನಡುವಿನ ಖಾಸಗಿ ಬದುಕಿನ ಕ್ಷಣಗಳನ್ನು ದಾಖಲಿಸಲಾಗಿತ್ತು ಎಂಬುದು ವಿವಾದ ಸ್ವರೂಪವನ್ನು ಪಡೆದಿತ್ತು.

2010ರಲ್ಲಿ ಜೇವಿಯರ್ ಮೊರೊ ಅವರು ಬರೆದ ‘ದಿ ರೆಡ್ ಸ್ಯಾರಿ’ ಕೃತಿಯನ್ನು ನಿಷೇಧಿಸಬೇಕು ಎಂದು ಕಾಂಗ್ರೆಸ್ ಪಕ್ಷದ ಸದಸ್ಯರು ಆಗ್ರಹಿಸಿದ್ದರು. ಈ ಕೃತಿಯು ಸೋನಿಯಾ ಗಾಂಧಿ ಕುರಿತಾಗಿತ್ತು ಮತ್ತು ಪಕ್ಷದ ಮೇಲೆ ಗಾಂಧಿ ಕುಟುಂಬದ ಹಿಡಿತವನ್ನು ಪ್ರಸ್ತಾಪಿಸಿದ್ದು ರಾಜಕೀಯ ವಲಯದಲ್ಲಿ ವಿವಾದ ಸೃಷ್ಟಿಸಿತ್ತು.

1959ರಲ್ಲಿ ಬಿಡುಗಡೆಯಾದ ಮೌಲಾನಾ ಅಬುಲ್ ಕಲಾಮ್ ಆಜಾದ್ ಅವರ ‘ಇಂಡಿಯಾ ವಿನ್ಸ್ ಫ್ರೀಡಂ’ ಎಂಬ ಕೃತಿಯೂ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು ಎಂದು ಇತಿಹಾಸ ಹೇಳುತ್ತದೆ. ಈ ಕೃತಿಯಲ್ಲಿ ಸ್ವಾತಂತ್ರ್ಯ ಹೋರಾಟದ ಚಿತ್ರಣ ಮಾತ್ರವಲ್ಲದೇ, ಕಾಂಗ್ರೆಸ್ ನಾಯಕರ ನಡುವಿನ ಭಿನ್ನಾಭಿಪ್ರಾಯಗಳನ್ನೂ ವಿವರಿಸಲಾಗಿತ್ತು. ಇದು ರಾಜಕೀಯ ಅಂಗಳದಲ್ಲಿ ಬಿಸಿ ಬಿಸಿ ಚರ್ಚೆಗೆ ಆಹಾರವಾಗಿತ್ತು.

1960ರಲ್ಲಿ ಬಿಡುಗಡೆಯಾದ ರಾಮ ಮನೋಹರ ಲೋಹಿಯಾ ಅವರ ‘ಗಿಲ್ಟಿ ಮೆನ್ ಆಫ್ ಇಂಡಿಯಾಸ್ ಪಾರ್ಟಿಷನ್’ ಕೃತಿಯೂ ವಿವಾದವನ್ನು ಹುಟ್ಟುಹಾಕಿತ್ತು. ದೇಶದ ವಿಭಜನೆಗೆ ಕಾರಣರಾದವರಾರು ಎಂಬ ಅಂಶ ಹಲವು ಚರ್ಚೆಗಳಿಗೆ ಕಾರಣವಾಗಿತ್ತು.

ಸಲ್ಮಾನ್ ರಶ್ದಿ ಅವರ ‘ದಿ ಸೆಟಾನಿಕ್ ವರ್ಸಸ್’ ಕೃತಿಯು 1988ರಲ್ಲಿ ಬಿಡುಗಡೆಗೊಂಡಿತು. ದೇವರನ್ನೇ ದೂಷಿಸುವ ಕೃತಿ ಇದು ಎಂದು ಮುಸ್ಲಿಮರು ಪ್ರತಿಭಟಿಸಿದರು. ಧಾರ್ಮಿಕ ನಂಬಿಕೆಗೆ ಧಕ್ಕೆಯನ್ನುಂಟು ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಮಣಿದ ಅಂದಿನ ಪ್ರಧಾನಿ ರಾಜೀವ್ ಗಾಂಧಿ ಅವರಿದ್ದ ಸರ್ಕಾರ ಕೃತಿಯ ಆಮದಿಗೆ ನಿಷೇಧ ಹೇರಿತು.

2025ರಲ್ಲಿ ಈ ಕೃತಿ ಮೇಲಿದ್ದ ನಿಷೇಧವನ್ನು ಈಗಿನ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಹಿಂಪಡೆಯಿತು. ಇದರಿಂದಾಗಿ ಸದ್ಯ ಅಮೆರಿಕದಲ್ಲಿರುವ ಸಲ್ಮಾನ್ ರಶ್ದಿ ಅವರ ‘ದಿ ಸೆಟಾನಿಕ್ ವರ್ಸಸ್’ ಕೃತಿ ಭಾರತದಲ್ಲಿ ಲಭ್ಯವಾಗುತ್ತಿದೆ.
.ಯುದ್ಧವೆಂದರೆ ಪ್ರಣಯ, ಬಾಲಿವುಡ್ ಸಿನಿಮಾ ಅಲ್ಲ: ಸೇನೆಯ ನಿವೃತ್ತ ಮುಖ್ಯಸ್ಥ ನರವಣೆ.ನರಿ ಬುದ್ಧಿಯ ಚೀನಾಕ್ಕೆ ಪಾಠ ಕಲಿಸಿದ ಭಾರತೀಯ ಸೇನೆ: ಮನೋಜ್ ಮುಕುಂದ ನರವಣೆ.
1983ರಲ್ಲಿ ಸೇಮೋರ್ ಹೆರ್ಷ್ ಅವರ ‘ದಿ ಪ್ರೈಸ್ ಆಫ್ ಪವರ್: ಕಿಸ್ಸಿಂಗರ್ ಅಂಡ್ ನಿಕ್ಸಾನ್ ಇನ್ ದಿ ವೈಟ್ ಹೌಸ್’ ಎಂಬ ಕೃತಿಯೂ ದೇಶದಲ್ಲಿ ಚರ್ಚೆಯನ್ನು ಹುಟ್ಟುಹಾಕಿತ್ತು. ಈ ಕೃತಿಯಲ್ಲಿ ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರು ಅಮೆರಿಕದ ಬೇಹುಗಾರಿಕಾ ಸಂಸ್ಥೆ ಸಿಐಎ ಮಾಹಿತಿದಾರರಾಗಿದ್ದರು ಎಂದು ಉಲ್ಲೇಖಿಸಿದ್ದು ವಿವಾದದ ಸ್ವರೂಪ ಪಡೆದಿತ್ತು. ಸರ್ಕಾರವು ಪುಸ್ತಕದ ಮೇಲೆ ತಾತ್ಕಾಲಿಕ ನಿಷೇಧ ಹೇರಿತ್ತು.

1988ರಲ್ಲಿ ಬಿಡುಗಡೆಯಾದ ಹಮಿಶ್ ಮೆಕ್ಡೊನಾಲ್ಡ್ ಅವರ ‘ದಿ ಪಾಲಿಸ್ಟರ್ ಪ್ರಿನ್ಸ್: ದ ರೈಸ್ ಆಫ್ ಧೀರೂಬಾಯಿ ಅಂಬಾನಿ’ ಕೃತಿಯೂ ವಿವಾದ ಹುಟ್ಟುಹಾಕಿತ್ತು. ಕಾರ್ಪೊರೇಟ್ ಬೇಹುಗಾರಿಕೆಯ ಕಥಾವಸ್ತುವನ್ನೊಳಗೊಂಡ ಈ ಕೃತಿಯಲ್ಲಿ ರಾಜಕೀಯ ನಾಯಕರ ಮೇಜಿನ ಕೆಳಗಿನ ವ್ಯವಹಾರಗಳ ಕುರಿತು ವಿವರಿಸಲಾಗಿತ್ತು. ರಿಲಾಯನ್ಸ್ ಸಮೂಹವು ಕಾನೂನು ಹೋರಾಟ ನಡೆಸುವ ಎಚ್ಚರಿಕೆ ನೀಡಿತ್ತು ಮತ್ತು ಮುದ್ರಿಸದಂತೆ ಪ್ರಕಾಶಕರಿಗೆ ತಾಕೀತು ಮಾಡಿತ್ತು ಎಂದು ತಜ್ಞರು ನೆನಪಿಸಿಕೊಳ್ಳುತ್ತಾರೆ.

‘ಶಿವಾಜಿ: ಹಿಂದು ಕಿಂಗ್ ಇನ್ ಇಸ್ಲಾಮಿಕ್ ಇಂಡಿಯಾ’ ಎಂಬ ಕೃತಿಯನ್ನು ಜೇಮ್ಸ್ ಲೈನ್ ರಚಿಸಿದ್ದರು. ಮರಾಠಾ ಚಕ್ರವರ್ತಿ ಶಿವಾಜಿ ಅವರ ಕುರಿತಾದ ಈ ಕೃತಿಯ ಕುರಿತು ಸಂಸತ್ ಮತ್ತು ಸಾರ್ವಜನಿಕ ವಲಯದಲ್ಲಿ ಕೋಲಾಹಲ ಉಂಟು ಮಾಡಿತ್ತು. ಸಂಶೋಧನಾ ಸಾಹಿತ್ಯವನ್ನು ಒಳಗೊಂಡ ಈ ಕೃತಿಗೆ ಲೇಖಕರು ಅಧ್ಯಯನ ನಡೆಸಿದ್ದ ಪುಣೆಯ ಭಂಡಾರ್ಕರ್ ಓರಿಯಂಟಲ್ ಸಂಶೋಧನಾ ಸಂಸ್ಥೆಯ ಮೇಲೆ ದಾಳಿಯೂ ನಡೆಯಿತು. ನಂತರ ಮಹಾರಾಷ್ಟ್ರ ಸರ್ಕಾರವು ಕೃತಿಯನ್ನು ನಿಷೇಧಿಸಿತು. 2010ರಲ್ಲಿ ಈ ನಿಷೇಧವನ್ನು ಸುಪ್ರೀಂ ಕೋರ್ಟ್ ತೆರವುಗೊಳಿಸಿತು.

‘ಗ್ರೇಟ್ ಸೋಲ್: ಮಹಾತ್ಮಾ ಗಾಂಧಿ ಅಂಡ್ ಹಿಸ್ ಸ್ಟ್ರಗಲ್ ವಿಥ್ ಇಂಡಿಯಾ’ ಎಂಬ ಕೃತಿಯನ್ನು ಜೋಸೆಫ್ ಲೇವೆಲ್ಡ್ ಹೊರತಂದಿದ್ದರು. ಎಂ.ಕೆ. ಗಾಂಧಿ ಅವರ ಜೀವನಾಧಾರಿತ ಕೃತಿ ಇದಾಗಿದ್ದರೂ, ಅವರ ಖಾಸಗಿ ಬದುಕಿನ ಕುರಿತ ಕೆಲ ಹೇಳಿಕೆಗಳು ವಿವಾದ ಸೃಷ್ಟಿಸಿದ್ದವು.

2011ರಲ್ಲಿ ಕೃತಿ ನಿಷೇಧಕ್ಕೆ ರಾಜಕಾರಣಿಗಳು ಒತ್ತಡ ಹೇರಿದರು. ಗುಜರಾತ್ ಸರ್ಕಾರ ಕೃತಿಯನ್ನು ನಿಷೇಧಿಸಿತು. ದೇಶವ್ಯಾಪಿ ನಿಷೇಧದ ಸುಳಿವನ್ನು ಕೇಂದ್ರ ಕಾನೂನು ಮಂತ್ರಿಯೂ ನೀಡಿದ್ದರು.

ತಸ್ಲಿಮಾ ನಸ್ರೀನ್ ಅವರು 1993ರಲ್ಲಿ ಪ್ರಕಟಿಸಿದ ‘ಲಜ್ಜಾ’ ಕೃತಿಯಲ್ಲಿ ಬಾಬ್ರಿ ಮಸೀದಿ ಧ್ವಂಸ ನಂತರ ಬಾಂಗ್ಲಾದೇಶದಲ್ಲಿ ಹಿಂದೂ ವಿರೋಧಿ ದಂಗೆಯ ಕುರಿತು ಲೇಖಕಿ ಪ್ರಸ್ತಾಪಿಸಿದ್ದು ವಿವಾದಕ್ಕೆ ಕಾರಣವಾಗಿತ್ತು. ಮುಸ್ಲಿಮರ ಭಾವನೆಗಳಿಗೆ ಧಕ್ಕೆ ತರುತ್ತದೆ ಎಂದು ಪಶ್ಚಿಮ ಬಂಗಾಳ ಮತ್ತಿತರ ರಾಜ್ಯಗಳು ಈ ಕೃತಿಯನ್ನು ನಿಷೇಧಿಸಿದವು.

1969ರಲ್ಲಿ ಬಿಡುಗಡೆಗೊಂಡ ಪೆರಿಯಾರ್ ಇ.ವಿ. ರಾಮಸ್ವಾಮಿ ಅವರ ‘ದಿ ರಾಮಾಯಣ: ಎ ಟ್ರೂ ರೀಡಿಂಗ್’ ಕೃತಿ ಕುರಿತು ಸಾಕಷ್ಟು ಚರ್ಚೆಯ ಜತೆಗೆ ವಿವಾದವನ್ನೂ ಸೃಷ್ಟಿಸಿತ್ತು. ಉತ್ತರ ಪ್ರದೇಶ ಸರ್ಕಾರದ ವಿಧಾನಮಂಡಳದಲ್ಲಿ ಕೋಲಾಹಲ ಸೃಷ್ಟಿಸಿತು. ಹೀಗಾಗಿ ಅಲ್ಲಿನ ಸರ್ಕಾರ ಕೃತಿಯ ಮೇಲೆ ನಿಷೇಧ ಹೇರಿತು. 1976ರಲ್ಲಿ ಕೃತಿ ಮೇಲಿನ ನಿಷೇಧವು ಕಾನೂನು ಬಾಹಿರ ಎಂದು ಸುಪ್ರೀಂ ಕೋರ್ಟ್ ಹೇಳಿತು.

ಇದೇ ರೀತಿ ಅರುಂಧತಿ ರಾಯ್ ಅವರ ‘ಆಜಾದಿ’, ಎ.ಜಿ. ನೂರಾನಿ ಅವರ ‘ದಿ ಕಾಶ್ಮೀರ್ ಡಿಸ್ಪೂಟ್’ ಮತ್ತು ವಿಕ್ಟೋರಿಯಾ ಸ್ಕೊಫೀಲ್ಡ್ ಅವರ ‘ಕಾಶ್ಮೀರ್ ಇನ್ ಕಾನ್ಫ್ಲಿಕ್ಟ್’ ಒಳಗೊಂಡು 25 ಕೃತಿಗಳ ಮೇಲೆ ಜಮ್ಮು ಮತ್ತು ಕಾಶ್ಮೀರ ಸರ್ಕಾರ ನಿಷೇಧ ಹೇರಿದೆ. ಈ ಕೃತಿಗಳು ಭಾರತದ ಸಾರ್ವಭೌಮತ್ವಕ್ಕೆ ಧಕ್ಕೆ ಎಂಬ ಕಾರಣವನ್ನು ನೀಡಿದೆ.

ಸಮಾಜದಲ್ಲಿ ಜಾಗೃತಿ ಮೂಡಿಸಲು ಮತ್ತು ವ್ಯವಸ್ಥೆಯಲ್ಲಿ ಧನಾತ್ಮಕ ಬದಲಾವಣೆಯನ್ನು ತರಲು ಪ್ರಮುಖ ಪಾತ್ರ ವಹಿಸುವ ಸಾಹಿತ್ಯವು ಕೆಲವೊಮ್ಮೆ ಅಶಾಂತಿ, ಸಂಘರ್ಷ, ವಿವಾದ ಸೃಷ್ಟಿಸಿದ ಉದಾಹರಣೆಗಳು ಹಿಂದಿನಿಂದಲೂ ಇವೆ. ಅವು ಈಗಲೂ ಮುಂದುವರಿದಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.