ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Explainer | ನೈಟ್‌ಲೈಫ್‌ಗೆ 'ಬೆಂಗಳೂರು' ಹೇಳಿ ಮಾಡಿಸಿದಂತಿದೆ

Last Updated 24 ಜನವರಿ 2020, 21:02 IST
ಅಕ್ಷರ ಗಾತ್ರ
ADVERTISEMENT
"ಬೆಂಗಳೂರಿನ ಶಿವಾಜಿನಗರದಲ್ಲಿ ರಾತ್ರಿ ಹೊತ್ತು ಬೀದಿ ಬದಿ ವ್ಯಾಪಾರ"
""

ಇದೇ 27ರಿಂದ ಮುಂಬೈ ನಗರದ ಶಾಪಿಂಗ್‌ ಮಾಲ್‌, ಹೋಟೆಲ್‌, ಸಿನಿಮಾ ಮಂದಿರಗಳು ರಾತ್ರಿಯಿಡೀ ತೆರೆದಿರಲು ಅವಕಾಶ ಇದೆ. ಬೆಂಗಳೂರಿನಲ್ಲಿಯೂ ಇಂತಹ ಅವಕಾಶ ಬೇಕು ಎಂಬ ಬಗ್ಗೆ ಚರ್ಚೆ ಆರಂಭವಾಗಿದೆ. ನಗರದಲ್ಲಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರ ಸಂಖ್ಯೆ ದೊಡ್ಡದು. ರಾತ್ರಿಯಿಡೀ ನಗರ ತೆರೆದಿದ್ದರೆ ಅವರಿಗೆ ಹಲವು ಅನುಕೂಲಗಳಿವೆ.

ಇಲ್ಲಿನ ಬಹುತೇಕ‘ಶಾಪಿಂಗ್‌ ಮಾಲ್‌’ಗಳು ಬೆಳಿಗ್ಗೆ 10ಕ್ಕೆ ಆರಂಭವಾಗಿ, ರಾತ್ರಿ 10ಕ್ಕೆ ಮುಚ್ಚುತ್ತವೆ. ಕೆಲವು ಮಾಲ್‌ಗಳು ವಾರಾಂತ್ಯದಲ್ಲಿ ರಾತ್ರಿ 10.30ರವರೆಗೆ ಕಾರ್ಯನಿರ್ವಹಿಸುತ್ತವೆ. ಸೋಮವಾರ, ಮಂಗಳವಾರ ಮತ್ತು ಬುಧವಾರ ಬಿಟ್ಟು ಉಳಿದ ಎಲ್ಲಾ ದಿನಗಳಲ್ಲೂ ಈ ಮಾಲ್‌ಗಳ ಸಮೀಪ ಸಂಚಾರ ದಟ್ಟಣೆ ವಿಪರೀತವಾಗಿರುತ್ತದೆ. ಮಾಲ್‌ಗಳು ತಡರಾತ್ರಿವರೆಗೆ ಅಥವಾ ರಾತ್ರಿಯಿಡೀ ಕಾರ್ಯನಿರ್ವಹಿಸಲು ಅವಕಾಶ ದೊರೆತರೆ, ಸಂಚಾರ ದಟ್ಟಣೆಯನ್ನು ತಪ್ಪಿಸಲು ಅವಕಾಶವಿದೆ.

‘ಬೆಂಗಳೂರು ಹೇಳಿ ಮಾಡಿಸಿದಂತಿದೆ’
ಬೆಂಗಳೂರು: ‘ಬೆಂಗಳೂರು ನಗರದಲ್ಲಿ ಈ ಹಿಂದೆ ನೈಟ್‌ಲೈಫ್‌ಗೆ ಅವಕಾಶ ಇದ್ದಾಗ ಅಪರಾಧಗಳ ಸಂಖ್ಯೆ ಕಡಿಮೆ ಇತ್ತು. ನೈಟ್‌ಲೈಫ್ ನಿಷೇಧದ ನಂತರ ನಗರದಲ್ಲಿ ರಾತ್ರಿ ನಡೆಯುವ ಅಪರಾಧಗಳ ಸಂಖ್ಯೆ ಏರಿಕೆಯಾಗಿದೆ. ನಗರದಲ್ಲಿ ಮತ್ತೆ ನೈಟ್‌ಲೈಫ್‌ಗೆ ಅವಕಾಶ ನೀಡಿದರೆ, ಅಪರಾಧಗಳ ಸಂಖ್ಯೆ ಇಳಿಕೆಯಾಗುತ್ತದೆ...’

ಮುಂಬೈನಲ್ಲಿ ನೈಟ್‌ಲೈಫ್‌ಗೆ ಅವಕಾಶ ನೀಡಿದಂತೆ, ಬೆಂಗಳೂರಿನಲ್ಲೂ ನೈಟ್‌ಲೈಫ್‌ಗೆ ಅವಕಾಶ ನೀಡುವುದರ ಬಗ್ಗೆ ನಗರದ ರೆಸ್ಟೊರೆಂಟ್ ಮತ್ತು ಹೋಟೆಲ್‌ ಉದ್ಯಮಿಗಳ ಅಭಿಮತವಿದು.

‘ಬೆಂಗಳೂರಿನಲ್ಲಿ ನೈಟ್‌ಲೈಫ್‌ಗೆ ಅವಕಾಶ ಇಲ್ಲದ ಕಾರಣ, ನಗರವಾಸಿಗಳು ರಾತ್ರಿಯಾಗುತ್ತಿದ್ದಂತೆಯೇ ನಿದ್ದೆಗೆ ಜಾರುತ್ತಾರೆ. ಇದು ತಡರಾತ್ರಿಯಲ್ಲಿ ನಿರ್ಜನ ಪರಿಸ್ಥಿತಿಗೆ ಕಾರಣವಾಗುತ್ತದೆ. ಈ ಅವಧಿಯಲ್ಲಿ ಅಪರಾಧ ಚಟುವಟಿಕೆಗಳು ನಡೆಯುತ್ತವೆ. ನೈಟ್‌ಲೈಫ್‌ಗೆ ಅವಕಾಶವಿದ್ದರೆ, ರಾತ್ರಿಯಲ್ಲೂ ನಗರವು ಚಟುವಟಿಕೆಯಿಂದ ಇರುತ್ತದೆ. ಇದು ಅಪರಾಧಗಳನ್ನು ಎಸಗಲು ದೊರೆಯುವ ಅವಕಾಶವನ್ನು ಕಡಿಮೆ ಮಾಡುತ್ತದೆ’ ಎನ್ನುತ್ತಾರೆ ಬಿವೈಜಿ ಬ್ರೀವ್‌ಸ್ಕಿ ಬ್ರೀವಿಂಗ್ ಕಂಪನಿ ರೆಸ್ಟೊರೆಂಟ್‌ನ ನಿರ್ದೇಶಕ ಪ್ರವೀಶ್ ಪಾಂಡೆ.

ಪ್ರವೀಶ್ ಅವರು ಭಾರತೀಯ ರೆಸ್ಟೊರೆಂಟ್‌ಗಳ ರಾಷ್ಟ್ರೀಯ ಸಂಘಟನೆಯ ಬೆಂಗಳೂರು ಘಟಕದ ಸದಸ್ಯರೂ ಆಗಿದ್ದಾರೆ.

‘ಬೆಂಗಳೂರು ನಗರದ ಸಂಸ್ಕೃತಿ ಮತ್ತು ಇಲ್ಲಿನ ವೃತ್ತಿ ಸಂಸ್ಕೃತಿ ನೈಟ್‌ಲೈಫ್‌ಗೆ ಹೇಳಿ ಮಾಡಿಸಿದಂತೆ ಇದೆ. ಜನರಿಗೆ ಬಿಡುವು ದೊರೆತಾಗ ಹೊರಗಡೆ ಊಟ ಮತ್ತು ಮನೋರಂಜನೆ ದೊರೆಯುವಂತಿದ್ದರೆ, ತಡರಾತ್ರಿಯಲ್ಲೇ ಹೊರಗೆ ಬರುತ್ತಾರೆ. ಇದರಿಂದ ಸಂಚಾರ ದಟ್ಟಣೆಯೂ ಕಡಿಮೆಯಾಗುತ್ತದೆ’ ಎಂಬುದು ಪ್ರವೀಶ್ ಅವರ ನಿರೀಕ್ಷೆ.‘ಬೆಂ

ಗಳೂರಿನಲ್ಲಿ ಹಲವು ಮಾಹಿತಿ ತಂತ್ರಜ್ಞಾನ ಕಂಪನಿಗಳು ಮತ್ತು ಕಾಲ್‌ಸೆಂಟರ್‌ಗಳು ರಾತ್ರಿಯೂ ಕಾರ್ಯನಿರ್ವಹಿಸುತ್ತವೆ. ಹೀಗಾಗಿ ಸಾವಿರಾರು ಜನರು ತಡರಾತ್ರಿಯಲ್ಲಿ ಕಚೇರಿಯಿಂದ ಮನೆಗೆ ಹೊರಡುತ್ತಾರೆ. ಅಂತಹ ಸಮಯದಲ್ಲಿ ಊಟ–ತಿಂಡಿಗಾಗಿ ಹುಡುಕಾಡುವುದು ದೊಡ್ಡ ಸಮಸ್ಯೆ. ನಗರದ ಹಲವೆಡೆ ಈಗಲೂ ಸಣ್ಣ–ಪುಟ್ಟ ಹೋಟೆಲ್‌ಗಳು ತಡರಾತ್ರಿವರೆಗೆ ತೆರೆದಿರುತ್ತವೆ. ಆದರೆ ಈ ಹೋಟೆಲ್‌ಗಳು ಜನದಟ್ಟಣೆ ಪ್ರದೇಶದಿಂದ ದೂರವಿರುವ ಕಾರಣ, ಮಹಿಳೆಯರಿಗೆ ಸುರಕ್ಷತೆ ಇರುವುದಿಲ್ಲ.ನೈಟ್‌ಲೈಫ್‌ಗೆ ಅವಕಾಶ ನೀಡಿದರೆ, ಹೋಟೆಲ್ ಮತ್ತು ರೆಸ್ಟೊರೆಂಟ್‌ಗಳು ತಡರಾತ್ರಿಯಲ್ಲೂ ತೆಗೆದಿರುತ್ತವೆ. ಊಟವೂ ದೊರೆಯುತ್ತದೆ ಮತ್ತು ಸುರಕ್ಷತೆ ಬಗ್ಗೆ ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ’ ಎನ್ನುತ್ತಾರೆ ಪ್ರವೀಶ್ ಪಾಂಡೆ.

‘ನೈಟ್‌ಲೈಫ್‌ಗೆ ಅವಕಾಶ ನೀಡುವುದು ಉತ್ತಮ ಬೆಳವಣಿಗೆ’ ಎನ್ನುತ್ತಾರೆ ಇಂಪ್ರೆಸಾರಿಯೊ ಎಂಟರ್‌ಟೈನ್‌ಮೆಂಟ್ ಆ್ಯಂಡ್ ಹಾಸ್ಪಿಟಾಲಿಟಿ ಸಿಇಒ ರಿಯಾಜ್ ಅಮ್ಲಾನಿ. ಈ ಕಂಪನಿಯು ಬೆಂಗಳೂರಿನಲ್ಲಿ ‘ಸೋಷಿಯಲ್’ ಹೆಸರಿನ ಹಲವು ರೆಸ್ಟೊರೆಂಟ್‌ಗಳನ್ನು ನಡೆಸುತ್ತಿದೆ.

ಮುಂಬೈನಲ್ಲಿನ ತಮ್ಮ ರೆಸ್ಟೊರೆಂಟ್‌ಗಳನ್ನು ನೈಟ್‌ಲೈಫ್‌ಗೆ ಒಗ್ಗಿಸಲು ಕಂಪನಿ ಸಿದ್ಧತೆ ನಡೆಸಿದೆ.‘ಸಿಬ್ಬಂದಿಗೆ ತರಬೇತಿ ನೀಡುತ್ತಿದ್ದೇವೆ. ಹೊಸ ಪಾಳಿ ಮತ್ತು ಹೊಸ ಉದ್ಯೋಗಗಳನ್ನು ಸೃಷ್ಟಿಸಿದ್ದೇವೆ. ಭದ್ರತೆಯನ್ನು ಹೆಚ್ಚಿಸಬೇಕಿರುವ ಕಾರಣ, ಹೊಸ ಹುದ್ದೆಗಳೂ ಸೃಷ್ಟಿಯಾಗಿವೆ’ ಎಂದು ರಿಯಾಜ್ ವಿವರಿಸಿದ್ದಾರೆ.

‘ಬೆಂಗಳೂರಿನಲ್ಲೂ ನೈಟ್‌ಲೈಫ್‌ ವಿಸ್ತರಿಸಲು ಅವಕಾಶವಿದೆ. ಆದರೆ, ಸುರಕ್ಷತೆಗೆ ಆದ್ಯತೆ ನೀಡಬೇಕು. ನಗರದಲ್ಲಿ ಪೊಲೀಸರು ತಡರಾತ್ರಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗಸ್ತು ತಿರುಗಬೇಕು. ಬಸ್‌ ಮತ್ತು ಮೆಟ್ರೊ ಸೇವೆ ರಾತ್ರಿಯಿಡೀ ಲಭ್ಯವಿರಬೇಕು. ಜತೆಗೆ ಸಾರ್ವಜನಿಕರಿಗೆ ತೊಂದರೆ ಆಗದಂತೆಯೂ ಎಚ್ಚರಿಕೆ ವಹಿಸಬೇಕು’ ಎಂದು ರಿಯಾಜ್ ಹೇಳಿದ್ದಾರೆ.

ಬೆಂಗಳೂರಿನ ಶಿವಾಜಿನಗರದಲ್ಲಿ ರಾತ್ರಿ ಹೊತ್ತು ಬೀದಿ ಬದಿ ವ್ಯಾಪಾರ

ಊಟಕ್ಕಾಗಿ ಅಲೆಯಬೇಕಿಲ್ಲ
ನಗರದ ಹೆಚ್ಚಿನ ವಾಣಿಜ್ಯ ಮತ್ತು ವಸತಿ ಪ್ರದೇಶಗಳಲ್ಲಿ ರಾತ್ರಿ 10ರ ಸುಮಾರಿಗೆ ಹೆಚ್ಚಿನ ಹೋಟೆಲ್‌ಗಳು ಬಾಗಿಲು ಹಾಕುತ್ತವೆ. ಕೆಲವೇ ಪ್ರದೇಶಗಳಲ್ಲಿ ಮಾತ್ರ ಹೋಟೆಲ್‌ಗಳು ತಡರಾತ್ರಿವರೆಗೆ ತೆರೆದಿರುತ್ತವೆ.

ನಗರದ ಮೆಜೆಸ್ಟಿಕ್, ಆನಂದರಾವ್ ವೃತ್ತ, ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್‌ ನಿಲ್ದಾಣ, ಶಿವಾಜಿನಗರದಲ್ಲಿ ಮಾತ್ರ ತಡರಾತ್ರಿಯಲ್ಲೂ ಕೆಲವು ಹೋಟೆಲ್‌ಗಳು ತೆರೆದಿರುತ್ತವೆ. ಕೆಲವಾರು ಪೆಟ್ರೋಲ್‌ ಬಂಕ್‌ಗಳಲ್ಲಿ ಇರುವ ತಿನಿಸು ಮಳಿಗೆಗಳು ಮಾತ್ರ ತಡ ರಾತ್ರಿಯಲ್ಲೂ ತೆರೆದಿರುತ್ತವೆ.

ರಾತ್ರಿ 10ರ ನಂತರ ಊಟ ಬೇಕಿರುವವರು, ಹೋಟೆಲ್‌ಗಳನ್ನು ಹುಡುಕಿಕೊಂಡು ಹತ್ತಾರು ಕಿ.ಮೀ. ಅಲೆಯಬೇಕಾದ ಅನಿವಾರ್ಯ ಇದೆ.

‘ನೈಟ್‌ಲೈಫ್‌’ಗೆ ಅನುಮತಿ ನೀಡಿದರೆ, ಬೇರೆ ಪ್ರದೇಶಗಳಲ್ಲೂ ಹೋಟೆಲ್‌ಗಳು ತಡರಾತ್ರಿಯಲ್ಲಿ ತೆರೆಯಲು ಅವಕಾಶವಿರುತ್ತದೆ. ಆಗ ತಡರಾತ್ರಿಯಲ್ಲಿ ಊಟ ಹುಡುಕಿಕೊಂಡು, ಕಿ.ಮೀ.ಗಟ್ಟಲೆ ತಿರುಗಾಡುವ ಸಂಕಷ್ಟ ತಪ್ಪುತ್ತದೆ.

ಉದ್ಯೋಗಾವಕಾಶ
ಹೆಚ್ಚಿನ ಮಾಲ್‌ಗಳಲ್ಲಿ ಈಗ ಎರಡು ಪಾಳಿಗಳಲ್ಲಿ ಕೆಲಸ ನಡೆಯುತ್ತದೆ. ‘ನೈಟ್‌ಲೈಫ್‌’ ಆರಂಭವಾದರೆ ಮತ್ತೊಂದು ಪಾಳಿಯ ಉದ್ಯೋಗಾವಕಾಶ ಸೃಷ್ಟಿಯಾಗುತ್ತದೆ. ತಡರಾತ್ರಿಯಲ್ಲಿ ಕಾರ್ಯನಿರ್ವಹಿಸುವ ಮಳಿಗೆಗಳು, ಹೋಟೆಲ್‌ಗಳು, ಗೇಮ್‌ಸೆಂಟರ್‌ಗಳು ಮತ್ತು ಸಿನಿಮಾ ಮಂದಿರಗಳಲ್ಲಿ ಮತ್ತೊಂದು ಪಾಳಿಯ ಉದ್ಯೋಗಗಳು ಸೃಷ್ಟಿಯಾಗುತ್ತವೆ.

‘ನೈಟ್‌ಲೈಫ್‌’ನಿಂದ ಸಂಚಾರ ದಟ್ಟಣೆ ಇಳಿಮುಖ
ಬೆಂಗಳೂರು ನಗರದಲ್ಲೂ ‘ನೈಟ್‌ಲೈಫ್‌’ಗೆ ಅವಕಾಶ ನೀಡಿದರೆ, ಶಾಪಿಂಗ್‌ ಮಾಲ್‌ಗಳೂ ತಡರಾತ್ರಿಯವರೆಗೆ ಕಾರ್ಯನಿರ್ವಹಿಸಲು ಅವಕಾಶ ದೊರೆಯುತ್ತದೆ. ಮಾಲ್‌ಗಳಲ್ಲಿ ಇರುವ ಮಳಿಗೆಗಳು, ಹೋಟೆಲ್‌ಗಳು ಮತ್ತು ಸಿನಿಮಾ ಮಂದಿರಗಳು ತಡರಾತ್ರಿಯವರೆಗೆ ತೆರೆದಿರುತ್ತವೆ. ಆಗ ಜನರು ತಡ ರಾತ್ರಿಯಲ್ಲಿ ಮಾಲ್‌ಗಳಿಗೆ ಭೇಟಿ ನೀಡಲು ಅವಕಾಶ ಇರುತ್ತದೆ.

ಇದರಿಂದ ಕಚೇರಿ ಅವಧಿಯಲ್ಲಿ ಶಾಪಿಂಗ್‌ ಮಾಲ್‌ಗಳಿಗೆ ಬರುವವರ ಸಂಖ್ಯೆ ಇಳಿಕೆಯಾಗುವ ಸಾಧ್ಯತೆ ಇದೆ. ಇದರ ಪರಿಣಾಮವಾಗಿ ಸಂಚಾರ ದಟ್ಟಣೆ ಕಡಿಮೆಯಾಗುತ್ತದೆ. ನಗರದ ಜನರ ಚಟುವಟಿಕೆಗಳು ರಾತ್ರಿಗೂ ವಿಸ್ತರಿಸುತ್ತವೆ.

ಸದ್ಯದ ಸ್ಥಿತಿ

1. ಬಹುತೇಕ ಮಾಲ್‌ಗಳು ರಾತ್ರಿ 10ಕ್ಕೆ ಮುಚ್ಚುತ್ತವೆ. ರಾತ್ರಿ 7ರವರೆಗೂ ಮಾಲ್‌ಗಳಿಗೆ ಬರುವವರ ಸಂಖ್ಯೆ ವಿಪರೀತ

2. ಗುರುವಾರದಿಂದ ಭಾನುವಾರದವರೆಗೆ ಮಧ್ಯಾಹ್ನ 3ರಿಂದ ರಾತ್ರಿ 7ಗಂಟೆವರೆಗೆ ಮಾಲ್‌ಗಳಿಗೆ ಬರುವವರ ಸಂಖ್ಯೆ ಅಧಿಕ

3. ಕಚೇರಿ ಬಿಡುವ ಸಮಯದಲ್ಲಿ (ಮಧ್ಯಾಹ್ನ 3ರಿಂದ–ರಾತ್ರಿ 7), ಮಾಲ್‌ಗಳ ಸಮೀಪ ವಿಪರೀತ ಸಂಚಾರ ದಟ್ಟಣೆ ಇರುತ್ತದೆ

4. ಮಾಲ್‌ಗಳಲ್ಲಿರುವ ಮಳಿಗೆಗಳು ಮುಚ್ಚುವುದಕ್ಕೆ (ರಾತ್ರಿ 10) 2 ಗಂಟೆ ಮೊದಲು, ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಬರುತ್ತಾರೆ

5. ರಾತ್ರಿ 7 ಗಂಟೆಯ ಆಸುಪಾಸಿನಲ್ಲಿ ಮಲ್ಟಿಫ್ಲೆಕ್ಸ್‌ ಸಿನಿಮಾ ಮಂದಿರಗಳಲ್ಲಿ ಪ್ರದರ್ಶನ ಆರಂಭವಾಗುವ ಕಾರಣ, ಈ ಅವಧಿಯಲ್ಲೂ ಮಾಲ್‌ಗಳಿಗೆ ಬರುವವರ ಸಂಖ್ಯೆ ಅಧಿಕ

6. ರಾತ್ರಿ 7 ಗಂಟೆಯ ನಂತರ ಸಂಚಾರ ದಟ್ಟಣೆಯಲ್ಲಿ ಗಣನೀಯ ಪ್ರಮಾಣದ ಇಳಿಕೆಯಾಗುತ್ತದೆ

ಬೆಂಗಳೂರು ಪೊಲೀಸ್ ಬಲ

18,060:ಮಂಜೂರಾದ ಹುದ್ದೆಗಳು

14,758:ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರು

3,302:ಖಾಲಿ ಇರುವ ಹುದ್ದೆಗಳು

ಆಧಾರ: ಶಾಪಿಂಗ್‌ ಮಾಲ್‌ಗಳು ಮತ್ತು ಬೆಂಗಳೂರಿನ ಮೇಲೆ ಅವುಗಳ ಪರಿಣಾಮ: ಅಧ್ಯಯನ ವರದಿ (ಅಜೀಂ ಪ್ರೇಮ್‌ ಜಿ ವಿಶ್ವವಿದ್ಯಾಲಯದ ಸಹಯೋಗದಲ್ಲಿ ನಡೆದ ಅಧ್ಯಯನ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT