ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಆರೋಗ್ಯ | ಮನಸ್ಸಿನ ಕಸದಿಂದ ರಸ!

Published : 2 ಸೆಪ್ಟೆಂಬರ್ 2024, 23:30 IST
Last Updated : 2 ಸೆಪ್ಟೆಂಬರ್ 2024, 23:30 IST
ಫಾಲೋ ಮಾಡಿ
Comments

ಒಬ್ಬ ವ್ಯಕ್ತಿಗೆ ತನ್ನ ಪಕ್ಕದ ಮನೆಯವರನ್ನು ಕಂಡರೆ ಬಲು ಸಿಟ್ಟು. ಆದರೆ ಸಿಟ್ಟನ್ನು ಹೊರಹಾಕಿ, ಜಗಳವಾಡುವ ಬದಲು, ಆತ ತನ್ನ ಸುತ್ತಮುತ್ತಲ ಖಾಲಿ ಜಾಗದಲ್ಲಿ ಚಿಕ್ಕದೊಂದು ಕೈತೋಟ ಮಾಡುವುದನ್ನು ಆರಂಭಿಸಿದ್ದಾನೆ. ಗುದ್ದಲಿಯಿಂದ ಅಗೆಯುವುದರಲ್ಲಿ, ಪ್ರತಿನಿತ್ಯ ಮಣ್ಣು ತೋಡಿ, ಕಳೆ ತೆಗೆದು, ನೀರನ್ನು ಹಾಕುವಾಗ ವ್ಯಯವಾಗುವ ಶಕ್ತಿಯಲ್ಲಿ ಕೋಪದಿಂದ-ನೆರೆಯವರ ಮೇಲಿರುವ ಅಸಹನೆಯಿಂದ ಉಂಟಾದ ಶಕ್ತಿಯೂ ಅಡಕವಾಗಿಬಿಡುತ್ತದೆ. ಗುದ್ದುವ-ತೋಡುವ-ಅಗೆಯುವ-ನೆಡುವ -ನೀರು ಹಾಕುವ ಕ್ರಿಯೆಗಳೆಲ್ಲಾ ಆತನ ನಕಾರಾತ್ಮಕ ಭಾವನೆಗಳನ್ನು ಹೊರ ಹಾಕಿ ಈಗ ಆತನ ಕೈತೋಟ ಬಣ್ಣ ಬಣ್ಣದ ಹೂಗಳಿಂದ ನಳನಳಿಸುತ್ತಿದೆ. ಆತನೀಗ ನೆರೆಹೊರೆಯವರ ಮೇಲೆ ಸಿಡುಕುವ ಸಿಡಿಮಿಡಿ ವ್ಯಕ್ತಿಯಲ್ಲ. ತನ್ನ ಕೈತೋಟದಲ್ಲಿ ಬಣ್ಣದ ಹೂಗಳನ್ನು ನೋಡುತ್ತ ಆನಂದಿಸುವ, ಸಂತೃಪ್ತ ಮನುಷ್ಯ.

ಮತ್ತೊಬ್ಬ ಮಹಿಳೆಗೆ ಅವರ ಆಫೀಸಿನ ಮೇಲಧಿಕಾರಿ ಮತ್ತೆ ಮತ್ತೆ ಕೆಲಸದ ಬಗ್ಗೆ ಗದರಿಸುತ್ತಾರೆ. ಅವರ ಸ್ವಭಾವವೇ ಹಾಗೆ ಎಂಬುದು ಆಫೀಸಿನ ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಆದರೆ ಬೈದರೆ ಬೇಸವರಾಗದಿರುತ್ತೆಯೆ? ಅದೂ ಕೆಲಸವೆಲ್ಲವನ್ನೂ ಮಾಡಿಯೂ ಬೈಸಿಕೊಂಡರೆ? ಆದರೇನು ಮಾಡುವುದು! ಒಳ್ಳೆಯ ಸಂಬಳ-ಸವಲತ್ತು; ಈ ಕೆಲಸ ಬದುಕಿಗೆ ಅನಿವಾರ್ಯ. ಕೆಲಸ ಬಿಡುವುದು, ಆ ಮೇಲೆ ಪಶ್ಚಾತ್ತಾಪ ಪಡುವಂತೆ ಥಟ್ಟೆಂದು ಏನಾದರೂ ಹೇಳಿಬಿಡುವುದು, ಇವ್ಯಾವುದನ್ನೂ ಮಾಡದೆ, ಆ ಮಹಿಳೆ ಮಾಡಿದ್ದೇನು ಗೊತ್ತೆ? ಹೀಗೆ ಮಾಡಿಬಿಡಬೇಕೆಂದು ಅನ್ನಿಸಿದ ತುಡಿತಗಳನ್ನೆಲ್ಲ ತಡೆದು, ಪ್ರತಿನಿತ್ಯ ಬಸ್ಸು ಹಿಡಿದು ಮನೆಗೆ ಮೂರು ಕಿ.ಮೀ. ಬರುವುದರ ಬದಲು, ಲುಟಲುಟನೆ ನಡೆದು ಅದರ ಮೂಲಕ ಹೊರಹಾಕಿದ್ದು! ದೇಹಕ್ಕೆ ವ್ಯಾಯಾಮವೂ ಆದಂತಾಯಿತು, ಮನಸ್ಸೂ ಸಮಾಧಾನಕ್ಕೆ ಬಂತು.

ಮತ್ತೊಬ್ಬ ವ್ಯಕ್ತಿಗೆ ಅದೆಷ್ಟು ಕೋಪ! ಎಲ್ಲರನ್ನೂ ಚಚ್ಚಿ ಹಾಕಿ ಬಿಡಬೇಕು ಅನ್ನುವಷ್ಟು! ಮೊಬೈಲ್ ಒಡೆದು ಹಾಕುವ-ಗೋಡೆಗೆ ಗುದ್ದುವ ಬದಲು, ಇತ್ತೀಚೆಗೆ ಬಾಕ್ಸಿಂಗ್‍ಗೆ ಆತ ಸೇರಿದ್ದಾರೆ. ದೇಹ-ಮನಸ್ಸು ಎರಡನ್ನೂ ಬಾಕ್ಸಿಂಗ್-ಜಿಮ್ ಮೂಲಕ ಹದಗೊಳಿಸುತ್ತಿದ್ದಾರೆ!

ಈ ಮೂರೂ ನಿದರ್ಶನಗಳು ಏನು ತೋರಿಸುತ್ತವೆ? ನಮ್ಮ ಮನಸ್ಸಿನ ನಕಾರಾತ್ಮಕ ಭಾವನೆಗಳನ್ನು ಸಕಾರಾತ್ಮಕ ಕ್ರಿಯೆಯಾಗಿ ಪರಿವರ್ತಿಸಲು ಸಾಧ್ಯವಿದೆ ಎಂಬ ಕೌಶಲವನ್ನು ಇವು ತೋರಿಸುತ್ತವೆ. ನಮ್ಮ ‘ಮನಸ್ಸು’ ಎಂಬ ಅಂಗ ತನ್ನನ್ನು ರಕ್ಷಿಸಿಕೊಳ್ಳಲು ಹಲವು ರಕ್ಷಣಾತಂತ್ರಗಳನ್ನು ಇರಿಸಿಕೊಂಡಿರುತ್ತದೆ. ಅಂತಹ ರಕ್ಷಣಾತಂತ್ರಗಳಲ್ಲಿ ಕೆಲವು ಆತುರದಿಂದ ಮಾಡುವ ಬಾಲಿಶ ತಂತ್ರಗಳು. ಎಂದರೆ ಅಂಕಗಳು ಕಡಿಮೆ ಬಂದಾಗ ‘ತಾನು ಸರಿಯಾಗಿ ಓದಿಲ್ಲ’ ಎಂದು ಒಪ್ಪುವ ಬದಲು ಶಿಕ್ಷಕರೇ ಸರಿಯಾಗಿ ಮೌಲ್ಯಮಾಪನ ಮಾಡಿಲ್ಲ ಎನ್ನುವ ರೀತಿ. ಕೆಲವು ಪ್ರಬುದ್ಧ, ಆರೋಗ್ಯಕರ ರಕ್ಷಣಾತಂತ್ರಗಳು. ಅವುಗಳಲ್ಲಿ ಒಂದು ನಕಾರಾತ್ಮಕ ಭಾವನೆಗಳನ್ನು ಒಂದು ಉಪಯುಕ್ತ, ಇತರರು ಪ್ರಶಂಸಿಸಬಹುದಾದ, ಹಲವರಿಗೆ ಸಂತಸವನ್ನು ಉಂಟುಮಾಡಬಹುದಾದ ಕ್ರಿಯೆಯಾಗಿ ಬದಲಾಯಿಸುವುದು. ಅದನ್ನು ಮನೋವೈಜ್ಞಾನಿಕವಾಗಿ ‘ಮೇಲೇರುವುದು’ ‘Sublimation’ ಎಂದು ಕರೆಯಲಾಗುತ್ತದೆ. ಈ ಪದದ ಮೂಲವನ್ನು ಅರ್ಥಮಾಡಿಕೊಳ್ಳಲು ನಾವು ಭೌತಶಾಸ್ತ್ರದ ಮೊರೆ ಹೋಗಬೇಕು. ಸಾಮಾನ್ಯವಾಗಿ ಘನಪದಾರ್ಥಗಳು ಅನಿಲವಾಗಿ ಆವಿಯಾಗುವ ಸ್ಥಿತಿಗೆ ತಲುಪುವ ಬಗೆ ಹೇಗೆ? ಮೊದಲು ದ್ರವವಾಗಿ ಆಮೇಲೆ ಅನಿಲವಾಗುತ್ತವೆ ತಾನೆ? ಕೆಲವೊಮ್ಮೆ ಹಾಗೆ ದ್ರವಸ್ಥಿತಿಗೆ ಬರದೆ ನೇರವಾಗಿ ಅನಿಲವಾಗುವ ಸಂಭವವೂ ಇದೆ. ಈ ಪ್ರಕ್ರಿಯೆಯನ್ನೇ ಉತ್ಪತನ ಅಥವಾ ಮೇಲೇರುವುದು ಎಂದು ಕರೆಯುವುದು. ಇದಕ್ಕೆ ಶಕ್ತಿಯ ಅವಶ್ಯಕತೆ ಮತ್ತಷ್ಟು.

ಈಗ ‘ಕಸದಿಂದ ರಸ’ವಾಗುವ ವಿಷಯಕ್ಕೆ ಬರೋಣ. ಮನುಷ್ಯರಾಗಿ ನಮಗೆ ಮನಸ್ಸಿಗೆ ತುಂಬಾ ಒತ್ತಡ ತರುವ ಕೋಪ-ದುಃಖ-ಹತಾಶೆ-ಲೈಂಗಿಕ ತುಡಿತಗಳು ಆಗಾಗ್ಗೆ ಅನುಭವಕ್ಕೆ ಬರುವುದು ಸಹಜವಷ್ಟೆ. ಅವುಗಳನ್ನು ಅನುಭವಿಸುವ ತೀವ್ರತೆಯ ಸ್ಥಿತಿಯಲ್ಲಿ ಅವುಗಳಲ್ಲಿ ಅಪಾರವಾದ ಶಕ್ತಿಯಿದೆ ಎಂಬುದನ್ನು ನಾವು ಗಮನಿಸಲಾರೆವು. ಇಂತಹ ತೀವ್ರ ನಕಾರಾತ್ಮಕ ಭಾವನೆಗಳಲ್ಲಿ ಇರುವ ಅಪಾರ ಶಕ್ತಿಯನ್ನು ಉಪಯೋಗಿಸುವುದು ಸಾಧ್ಯವಾದರೆ ಅದರಿಂದ ಉಪಯುಕ್ತವಾದ - ನಾಲ್ಕು ಜನರು ಗಮನಿಸುವಂತೆ ಮಾಡುವ, ನಮಗೆ ಸಂತೋಷವಾಗುವಂತ ಕ್ರಿಯೆ ಸಾಧ್ಯವಾದೀತು. ಘನಪದಾರ್ಥ ನೇರವಾಗಿ ಆವಿಯಾಗುವಂತಹ ಸ್ಥಿತಿಯಲ್ಲಿ ಬೇಕಾದ್ದು ಹೆಚ್ಚಿನ ತಾಪ ಮತ್ತು ಒತ್ತಡ ಎಂಬುದನ್ನು ನಾವು ಮರೆಯುವಂತಿಲ್ಲ!

ನಮ್ಮ ಸುತ್ತಮುತ್ತಲಲ್ಲಿ ಹಲವು ಉದಾಹರಣೆಗಳನ್ನು ‘ಕಸ ಹೇಗೆ ರಸ’ವಾಗುತ್ತದೆ ಎಂಬುದಕ್ಕೆ ನಾವು ನೋಡುತ್ತಲೇ ಇರುತ್ತೇವೆ. ಸುಂದರ ಚಿತ್ರಕಲೆಯ ಮೂಲಕ ತನ್ನ ಅತೃಪ್ತ ಲೈಂಗಿಕ ಕಾಮನೆಗಳನ್ನು ವ್ಯಕ್ತಿಯೊಬ್ಬ ಹರಿಯಬಿಡುವುದು, ಮಕ್ಕಳನ್ನು ಕಳೆದುಕೊಂಡ ತಂದೆ-ತಾಯಿ ದೊಡ್ಡ ಬೆಂಬಲದ ಸಂಘಟನಾ ಕಾರ್ಯವನ್ನು ಬೆಳೆಸಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವುದು, ಸದಾ ಇತರರ ಬಗೆಗೆ ಸಂದೇಹ ಪಡುವ ವ್ಯಕ್ತಿಯೊಬ್ಬ ಸೈನ್ಯ-ಪತ್ತೇದಾರಿಯಂತಹ ವೃತ್ತಿಗಳನ್ನು ಆರಿಸಿಕೊಂಡು ಯಶಸ್ಸು ಸಾಧಿಸುವುದು ಇವೆಲ್ಲ ‘ಕಸದಿಂದ ರಸ ತೆಗೆಯುವ’ ಉದಾಹರಣೆಗಳೇ. ದಾಂಪತ್ಯಕಲಹಗಳಲ್ಲಿಯೂ ಈ ತಂತ್ರ ಉಪಯುಕ್ತವೇ.

‘ಕಸದಿಂದ ರಸವಾಗಿಸುವ’ ರಕ್ಷಣಾತಂತ್ರ ಉಪಯುಕ್ತವೇನೋ ಸರಿ. ಆದರೆ ಅದು ನಕಾರಾತ್ಮಕ ಭಾವನೆಗಳನ್ನು ಹಿನ್ನೆಲೆಯಲ್ಲಿ ಹೊಂದಿದೆ ಎಂಬ ಅರಿವು ಮುಖ್ಯ. ಕ್ರಮೇಣ ಅದರ ಹಿನ್ನೆಲೆಯಲ್ಲಿರುವ ಸಮಸ್ಯೆಗೆ ಚರ್ಚೆ-ಸೂಕ್ತ ಪರಿಹಾರ ಕಂಡುಕೊಳ್ಳುವುದು ಅತ್ಯಗತ್ಯ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT