ಗುರುವಾರ, 3 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಡುವ ಬೆನ್ನು ನೋವು: ವ್ಯಾಯಾಮವೇ ಮದ್ದು

ಜಾವಾಣಿ ಫೋನ್‌–ಇನ್‌ ಕಾರ್ಯಕ್ರಮದಲ್ಲಿ ಮೂಳೆ ಮತ್ತು ಕೀಲು ನೋವುಗಳಿಗೆ ಪರಿಹಾರ ತಿಳಿಸಿದ ಡಾ.ಗಯಾ ಕುಶಾಲ್‌
Published : 22 ಜೂನ್ 2022, 3:55 IST
ಫಾಲೋ ಮಾಡಿ
Comments

ಹಾವೇರಿ: ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಒಮ್ಮೆಯಾದರೂ ಬೆನ್ನು ನೋವು ಕಂಡು ಬರುತ್ತದೆ.ಏರುತ್ತಿರುವ ಬೊಜ್ಜು ಮತ್ತು ದೇಹಕ್ಕೆ ವ್ಯಾಯಾಮ ನೀಡದೆ ಗಂಟೆಗಟ್ಟಲೆ ಕುಳಿತು ಕೆಲಸ ಮಾಡುವುದೇ ಇದಕ್ಕೆ ಕಾರಣ ಎನ್ನುತ್ತಾರೆ ಹಾವೇರಿಯ ಸಾಯಿ ಕ್ಲಿನಿಕ್‌ನ ಎಲುಬು, ಕೀಲು ಮತ್ತು ನರರೋಗ ವೈದ್ಯ ಡಾ.ಗಯಾ ಕುಶಾಲ್‌.

ಕೆಳ ಬೆನ್ನು ನೋವು ಸಾಮಾನ್ಯವಾಗಿ ಆಟವಾಡುವಾಗ, ಬೊಜ್ಜಿದ್ದವರಲ್ಲಿ, ನಿಷ್ಕ್ರಿಯರಾಗಿದ್ದಾಗ, ಒತ್ತಡ ಅಥವಾ ಆರ್ಥರೈಟಿಸ್‌ನಿಂದ ಬರುತ್ತದೆ. ಸಾಮಾನ್ಯವಾಗಿ ಒಂದು ಅಥವಾ ಕೆಲವು ವಾರಗಳಲ್ಲಿ ನೋವು ಗುಣವಾಗುತ್ತದೆ. ಆಗಲೂ ಸರಿಯಾಗದಿದ್ದರೆ ವೈದ್ಯರ ಸಲಹೆ ಮತ್ತು ಕೆಲ ಪರೀಕ್ಷೆಗಳ ಅಗತ್ಯ ಎಂಬುದು ವೈದ್ಯರ ಸಲಹೆ.

ಬೆಳಗಾವಿ, ಕೊಡಗು, ಬೆಂಗಳೂರು ಹಾಗೂ ಹಾವೇರಿ ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಬಂದ ಕರೆಗಳಲ್ಲಿ ಮಂಡಿ ನೋವು, ಕುತ್ತಿಗೆ ನೋವು ಸಮಸ್ಯೆ ಬಗ್ಗೆಯೇ ಹೆಚ್ಚು ಪ್ರಶ್ನೆಗಳಿದ್ದವು. ನಿಯಮಿತ ವ್ಯಾಯಾಮ, ಯೋಗ, ನಡಿಗೆ ಜತೆಗೆ ಸಮಸ್ಯೆಗೆ ಸೂಕ್ತ ಚಿಕಿತ್ಸೆಗಳನ್ನು, ಅಗತ್ಯವಿದ್ದಾಗ ಶಸ್ತ್ರಚಿಕಿತ್ಸೆಯಿಂದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ. ಸುಧಾರಿಸಿದ ತಂತ್ರಜ್ಞಾನದಿಂದ ಎಲ್ಲ ಕಾಯಿಲೆಗೂ ಸೂಕ್ತ ಚಿಕಿತ್ಸೆ ಲಭ್ಯವಿದೆ ಎಂದು ಸಲಹೆ ನೀಡಿದರು.

ಮೂಳೆ ಸಮಸ್ಯೆ (Orthipedic) ಹಾಗೂ ಕೀಲು ನೋವಿನಿಂದ (Joint pain) ಬಳಲುತ್ತಿರುವವರು ಕೇಳಿದ ಪ್ರಶ್ನೆಗಳಿಗೆ ವಿವರವಾಗಿ ವೈದ್ಯಡಾ.ಗಯಾ ಕುಶಾಲ್‌ ಈ ರೀತಿ ಉತ್ತರಿಸಿದರು.

* ರಮೇಶ ದೇವರಗುಡ್ಡ, ಮೆಡ್ಲೇರಿ– ಅಮ್ಮನಿಗೆ 75 ವರ್ಷವಾಗಿದ್ದು, ಮಂಡಿನೋವಿನಿಂದ ಬಳಲುತ್ತಿದ್ದಾರೆ, ಪರಿಹಾರ ತಿಳಿಸಿ

ವಯಸ್ಸಾದ ನಂತರ ಮೂಳೆಗಳೂ ಸವೆಯುತ್ತವೆ. ನೆಲದ ಮೇಲೆ ಕೂರುವ ಪ್ರಯತ್ನ ಬೇಡ. ಟಾಯ್ಲೆಟ್‌ಗೆ ಹೋದಾಗ ಕಮೋಡ್‌ ಚೇರ್‌ ಬಳಸಬೇಕು. ಮಂಡಿಗೆ ಉಪ್ಪಿನ ಶಾಖ ಕೊಡಬೇಕು. ತೀವ್ರ ನೋವು ಇದ್ದರೆ ಪಿಆರ್‌ಪಿ (ಪ್ಲೆಟ್‌ಲೆಟ್‌ ರಿಚ್‌ ಪ್ಲಾಸ್ಮಾ) ಅಂದರೆ ‘ಮಂಡಿಯೊಳಗೆ ಸೂಜಿ’ ಚಿಕಿತ್ಸೆ ಪಡೆಯಬಹುದು.

*ವಿಜಯಲಕ್ಷ್ಮಿ ಹಾವೇರಿ; ಚಿತ್ರಮ್ಮ, ಶಿವಾಜಿನಗರ, ಹಾವೇರಿ– ನನಗೆ 68 ವರ್ಷವಾಗಿದ್ದು ಒಂದು ವರ್ಷದಿಂದ ಎರಡೂ ಮಂಡಿಗಳಲ್ಲೂ ನೋವಿದೆ. ಮಂಚದಿಂದ ಎದ್ದ ತಕ್ಷಣ ಓಡಾಡುವುದು ಕಷ್ಟವಾಗುತ್ತಿದೆ

– ನಿಮಗೆ ರಕ್ತದೊತ್ತಡ, ಸಕ್ಕರೆಕಾಯಿಲೆ ಯಾವುದೂ ಇಲ್ಲ, ಪೆಟ್ಟೂ ಬಿದ್ದಿಲ್ಲವಾಗಿದ್ದರೆ ಉಸುಕಿನ ಕಾವು ಕೊಡಿ. ಮಲಗಿದಾಗ ಕಾಲುಗಳನ್ನು ಮಡಚದಂತೆ ಮೇಲೆತ್ತುವ ವ್ಯಾಯಾಮ ಮಾಡಿ. ಮಾಂಸಖಂಡ ದುರ್ಬಲವಾದರೆ ಈ ರೀತಿಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ‘ನೋವು ನಿವಾರಕ’ ಮಾತ್ರೆ ಜಾಸ್ತಿ ಬಳಸಬೇಡಿ. ನೀವು ಚಟುವಟಿಕೆಯಾಗಿದ್ದರೆ ನೋವು ಕ್ರಮೇಣ ಕಡಿಮೆಯಾಗುತ್ತದೆ.

* ವಿದ್ಯಾಧರ ಕುತನಿ ಸವಣೂರು; ಸುಭಾಷ ಬಣಕಾರ, ದೇವಗಿರಿ, ಹಾವೇರಿ– ನನಗೆ 35 ವರ್ಷ, 10ನೇ ವಯಸ್ಸಿನಲ್ಲಿದ್ದಾಗ ಬಿದ್ದಿದ್ದೆ. ಈಗ ಎರಡು ವರ್ಷದಿಂದ ಬೆನ್ನು ನೋವು ಸಮಸ್ಯೆ ಕಾಣಿಸಿಕೊಂಡಿದೆ.

– ವಿಶ್ರಾಂತಿ ಪಡೆಯುವಾಗ ಮತ್ತು ಮಲಗಿದ್ದಾಗಲೂ ನೋವು ಬರುತ್ತದೆ ಅಂದರೆ, ಅದು ಗಂಭೀರ ಸಮಸ್ಯೆ ಎಂಬುದಕ್ಕೆ ‘ವಾರ್ನಿಂಗ್‌ ಸಿಗ್ನಲ್‌’. ಡಿಸ್ಕ್‌ ಪ್ರಾಬ್ಲಮ್‌ ಇದೆ ಅನಿಸುತ್ತದೆ. ಎಂಆರ್‌ಐ ಸ್ಕ್ಯಾನ್‌ ಮಾಡಿಸಿದ್ರೆ ಸಮಸ್ಯೆ ನಿಖರವಾಗಿ ಗೊತ್ತಾಗುತ್ತದೆ. ಜಾಸ್ತಿ ನೋವಿದ್ರೆ ಆಪರೇಷನ್‌ ಮಾಡಿಸುವುದು ಒಳ್ಳೆಯದು. ಆಪರೇಷನ್‌ ಮಾಡಿಸಿದ 3 ತಿಂಗಳ ನಂತರ ಶೇ 80 ಮಂದಿ ಎಲ್ಲ ಕೆಲಸವನ್ನೂ ಮಾಡಬಹುದು. ಶೇ 20 ಮಂದಿಗೆ ಇತರ ಕಾರಣಗಳಿಗೆ ಸ್ವಲ್ಪ ರಿಸ್ಕ್‌ ಇರುತ್ತದೆ.

* ಸುಬಿನಾ, ಸೋಮವಾರಪೇಟೆ, ಕೊಡಗು ಜಿಲ್ಲೆ– ಬೆಳಿಗ್ಗೆ ಎದ್ದ ತಕ್ಷಣ ತುಂಬಾ ಮಂಡಿನೋವು ಕಾಣಿಸಿಕೊಳ್ಳುತ್ತದೆ. ಹಿಮ್ಮಡಿ ನೋವು ಕೂಡ ಇದೆ.

– ಹೆಚ್ಚು ಹೊತ್ತು ನಿಂತುಕೊಳ್ಳುವುದರಿಂದ, ಎತ್ತರದ ಚಪ್ಪಲಿ ಬಳಸುವುದರಿಂದ ಅಥವಾ ಹಳೆಯ ಪೆಟ್ಟಿನಿಂದ ನೋವು ಕಾಣಿಸಿಕೊಂಡಿರಬಹುದು. ಹೀಗಾಗಿ ಮೈಕ್ರೊ ಸೆಲ್ಯುಲರ್‌ ರಬ್ಬರ್‌ (ಎಂಸಿಆರ್‌) ಚಪ್ಪಲಿಗಳನ್ನು ಬಳಸಿ. ಗಾಜಿನ ಬಟ್ಟಲು ಮೇಲೆ ಬಟ್ಟೆ ಹಾಕಿ, ಅದನ್ನು ಕೈಯಿಂದ ರೋಲ್‌ ಮಾಡಬೇಕು. ಸ್ಮೈಲಿ ಬಾಲ್‌ ಪ್ರೆಸ್‌ ಮಾಡುವುದರಿಂದ ನೋವು ಕಡಿಮೆಯಾಗುತ್ತದೆ.

* ವೆಂಕಟೇಶ ಹೊಸಮನಿ, ಬೇಲೂರು, ರಾಣೆಬೆನ್ನೂರು ತಾ.,– ನನಗೆ ಡಿಸ್ಕ್‌ ಆಪರೇಷನ್‌ ಆಗಿದೆ. ಎಡಗಾಲಿನ ಹೆಬ್ಬೆರಳಿನಿಂದ ಸೊಂಟದವರೆಗೆ ನೋವು ಕಾಣಿಸಿಕೊಳ್ಳುತ್ತದೆ. ಪರಿಹಾರವೇನು?

– ನರಗಳ ಬ್ಲಾಕ್‌ನಿಂದ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಡಿಸ್ಕ್‌ ಆಪರೇಷನ್‌ ಆದಾಗ ನರಕ್ಕೆ ಪೆಟ್ಟು ಬಿದ್ದಿರಬಹುದು. ಬಿಸಿನೀರು ಮತ್ತು ಉಪ್ಪಿನ ಶಾಖ ಕೊಡಬೇಕು. ಬೆಲ್ಟ್‌ ಬಳಕೆ ಮಾಡಿ. ನ್ಯೂರೋಪಥಿಕ್‌ ಚಿಕಿತ್ಸೆ ಪಡೆಯಬಹುದು.

* ಸಂದೀಪ್‌, ಬೆಂಗಳೂರು– ನನಗೆ 50 ವರ್ಷವಾಗಿದ್ದು, ಬೆಳಿಗ್ಗೆ ಎದ್ದ ತಕ್ಷಣ ಅಂಗಾಲಿನಲ್ಲಿ ನೋವು ಕಾಣಿಸುತ್ತದೆ. ಸ್ವಲ್ಪ ಓಡಾಡಿದ ನಂತರ ನೋವು ಕಡಿಮೆಯಾಗುತ್ತದೆ.

– ಚಿಕ್ಕಮೂಳೆ (Spur) ಬೆಳೆದಿರುವ ಕಾರಣ ನೋವು ಕಾಣಿಸಿಕೊಂಡಿರಬಹುದು. ಇದು ಗಂಭೀರ ಸಮಸ್ಯೆಯಲ್ಲ. ‘ಎಂಸಿಆರ್‌ ಸ್ಲಿಪ್ಪರ್‌’ ಬಳಕೆ ಮತ್ತು ‘ಸ್ಮೈಲಿ ಬಾಲ್‌ ಪ್ರೆಸ್‌’ ಮಾಡುವ ಮೂಲಕ ನೋವು ನಿವಾರಿಸಿಕೊಳ್ಳಬಹುದು.

* ಸುನಂದಾ, ಸವಣೂರು– ನನ್ನ 11 ವರ್ಷದ ಮಗ ಸೈಕಲ್‌ ಓಡಿಸುವಾಗ ಬಿದ್ದಾಗ ಕಟ್ಟು ಹಾಕಿಸಿದ್ದೆವು. ನಂತರ ಕೈ ಸ್ವಲ್ಪ ಸೊಟ್ಟ ಕಾಣಿಸುತ್ತದ್ದು, ಪರಿಹಾರವೇನು?

– ಮೂಳೆ ಸೊಟ್ಟವಾಗಿ ಕೂಡಿದಾಗ ಕೈ ಡೊಂಕಾಗಿ ಕಾಣುತ್ತದೆ. ಆದರೆ ನೋವು ಇರುವುದಿಲ್ಲ. 15 ಡಿಗ್ರಿಗಿಂತ ಕಡಿಮೆ ಇದ್ದರೆ ಮುಂದೆ ಸರಿ ಹೋಗುತ್ತದೆ. ಅದಕ್ಕಿಂತ ಜಾಸ್ತಿ ಸೊಟ್ಟಗಾಗಿದ್ದರೆ, ಆಪರೇಷನ್‌ ಮಾಡಿಸುವುದು ಅಗತ್ಯ. ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ವೈದ್ಯರು, ಹೆರಿಗೆ ಸಂದರ್ಭ ಒಂದು ಅನಸ್ತೇಷಿಯಾ ಇಂಜೆಕ್ಷನ್‌ ತೆಗೆದುಕೊಂಡರೆ ಸೊಂಟ ನೋವು ಬರುತ್ತದೆ ಎಂಬುದು ಮೂಢನಂಬಿಕೆ. ಬೇರೆ ಕಾರಣದಿಂದ ಬಂದಿರಬಹುದು. ಎಕ್ಸ್‌ರೇ ಮಾಡಿಸಿಕೊಳ್ಳಿ.

* ಲಕ್ಷ್ಮಿ ಹಾವೇರಿ– ನನಗೆ 60 ವರ್ಷವಾಗಿದ್ದು, ಒಂದು ವರ್ಷದಿಂದ ಮಂಡಿನೋವಿನಿಂದ ಬಳಲುತ್ತಿದ್ದೇನೆ. ಹೊರಗಡೆ ಓಡಾಡುವುದಕ್ಕೆ ಸಾಧ್ಯವಾಗುತ್ತಿಲ್ಲ.

– ಎಕ್ಸ್‌ರೇ ಮಾಡಿ ನೋಡಿದರೆ ಏನಾಗಿದೆ ಎಂಬುದು ನಿಖರವಾಗಿ ಗೊತ್ತಾಗುತ್ತದೆ. ಸ್ಟಿರಾಯ್ಡ್‌ ಇಂಜೆಕ್ಷನ್‌ ತೆಗೆದುಕೊಳ್ಳಬೇಡಿ. ಒಮ್ಮೆ ವೈದ್ಯರ ಬಳಿ ತೋರಿಸಿಕೊಳ್ಳಿ.

* ವೀಣಾ, ಬೆಂಗಳೂರು– ನನಗೆ 51 ವರ್ಷ, ಕುತ್ತಿಗೆಯಿಂದ ಕಾಲಿನವರೆಗೆ ನೋವಿದೆ. ಒಮ್ಮೊಮ್ಮೆ ಸುಸ್ತಾಗಿ ಬಿದ್ದಂತಾಗುತ್ತದೆ.

– ‘ಶಾರ್ಟ್‌ ನೆಕ್‌’ ಇರುವವರಿಗೆ ಈ ಸಮಸ್ಯೆ ಜಾಸ್ತಿ. ಮಲಗುವಾಗ ತಲೆದಿಂಬು ಬಳಸಬೇಡಿ. ನೆಕ್‌ ಕಾಲರ್‌ ನೆರವು ಪಡೆಯಿರಿ. ಉಪ್ಪಿನ ಶಾಖ ಕೊಟ್ಟುಕೊಳ್ಳಿ. ಫಿಜಿಕಲ್‌ ಥೆರಪಿಯಲ್ಲಿ ಕಡಿಮೆ ಆಗದಿದ್ದರೆ, ಎಂಆರ್‌ಐ ಸ್ಕ್ಯಾನ್‌ ಮಾಡಿಸಿ.

* ಶೋಭಾಬಾಯಿ ಕುಲಕರ್ಣಿ, ರಟ್ಟೀಹಳ್ಳಿ– ನನಗೆ 78 ವರ್ಷ, ಐದಾರು ವರ್ಷಗಳಿಂದ ಕಾಲು ಮತ್ತು ಮಂಡಿ ನೋವು ಇದ್ದು, ಮನೆಯೊಳಗೆ ಓಡಾಡಿದರೂ ಬಾವು ಬರುತ್ತದೆ.

– ಮಲಗಿಕೊಂಡು, ಮಂಡಿ ಮಡಚದಂತೆ ಕಾಲು ನೇರವಾಗಿ ಮೇಲೆತ್ತುವ ವ್ಯಾಯಾಮ ಮಾಡಿ. ಕುರ್ಚಿ ಮೇಲೆ ಕುಳಿತು ನೇರವಾಗಿ ಕಾಲನ್ನು ಮೇಲೆತ್ತುವ ವ್ಯಾಯಾಮ ಮಾಡಿ. ‘ಹಾಟ್‌ ವಾಟರ್‌ ಬ್ಯಾಗ್‌’ ಬಳಕೆ ಮಾಡಿ. ತುಂಬಾ ನೋವು ಇದ್ದರೆ ಎಕ್ಸ್‌ರೇ ಮಾಡಿಸಿ.

* ರಾಜೇಂದ್ರಪ್ರಸಾದ್, ಹಾವೇರಿ– ಎರಡು ವರ್ಷಗಳ ಹಿಂದೆ ಎಡಗೈನ ತೋರು ಬೆರಳು, ಮಧ್ಯದ ಬೆರಳು ಮರಗಟ್ಟಿದ್ದವು. ಪ್ರಯಾಣ ಮಾಡಿದರೆ ಈಗಲೂ ಕೈ ಮತ್ತು ಕುತ್ತಿಗೆ ನೋವು ಬರುತ್ತದೆ.

ಕುತ್ತಿಗೆಗೆ ಬೆಲ್ಟ್‌ ಹಾಕಿ ತೂಕ ಹಾಕುವುದು, ಕುತ್ತಿಗೆ ಕಾಲರ್‌ ಬಳಸುವುದು ಮತ್ತು ತೋಳು ಮತ್ತು ಕುತ್ತಿಗೆ ವ್ಯಾಯಾಮದಿಂದ ನೋವು ಕಡಿಮೆಯಾಗುತ್ತದೆ. ಗಂಭೀರ ಸಮಸ್ಯೆ ಇದ್ದರೆ ಮಾತ್ರ ಆಪರೇಷನ್‌ ಮಾಡಿಸಿಕೊಳ್ಳಬೇಕು.

* ನವೀನ ತಿಪ್ಪಣ್ಣನವರ, ತುಮ್ಮಿನಕಟ್ಟಿ– ನನಗೆ 35 ವರ್ಷ, ವಾಕ್‌ ಮಾಡಿದರೆ ಮಂಡಿ ನೋವು ಬರುತ್ತದೆ.

– ಎಂಆರ್‌ಐ ಸ್ಕ್ಯಾನ್‌ನಲ್ಲಿ ನಾರ್ಮಲ್‌ ಬಂದಿರುವ ಕಾರಣ, ನೀವು 78 ಕೆ.ಜಿ. ಇರುವ ಕಾರಣ ತೂಕ ಕಡಿಮೆ ಮಾಡಿಕೊಳ್ಳಬೇಕು. ‘Knee Cap' ಬಳಸಿ. ಯೋಗಾಭ್ಯಾಸದಿಂದಲೂ ನೋವು ನಿವಾರಣೆಯಾಗುತ್ತದೆ. ಎಣ್ಣೆ ಪದಾರ್ಥ, ಜಂಕ್‌ ಫುಡ್‌ ಕಡಿಮೆ ಮಾಡಿ, ಪೌಷ್ಟಿಕ ಆಹಾರ ಬಳಸಿ. ಸ್ಥೂಲಕಾಯದಿಂದ ಇಂಥ ಸಮಸ್ಯೆ ಕಾಣಿಸಿಕೊಳ್ಳುತ್ತವೆ.

* ಮಂಜುನಾಥ ಪಾಟೀಲ, ಸವದತ್ತಿ, ಬೆಳಗಾವಿ ಜಿಲ್ಲೆ– ಕುರ್ಚಿ ಮೇಲೆ ಕುಳಿತು ಏಳೆಂಟು ಗಂಟೆ ಕೆಲಸ ಮಾಡುತ್ತೇನೆ.ಬೆನ್ನು ನೋವಿನಿಂದ ಬಳಲುತ್ತಿದ್ದೇನೆ ಪರಿಹಾರ ತಿಳಿಸಿ

– ಗಂಟೆಗಟ್ಟಲೆ ಕುರ್ಚಿ ಮೇಲೆ ಕುಳಿತು ಕೆಲಸ ಮಾಡುವವರು ಆಗಾಗ್ಗಾ ಎದ್ದು ಓಡಾಡಬೇಕು. ನೇರವಾಗಿ ಕುಳಿತುಕೊಳ್ಳಬೇಕು. ನಿತ್ಯ ವ್ಯಾಯಾಮ, ಯೋಗ ರೂಢಿಸಿಕೊಂಡರೆ ತೂಕ ಇಳಿಸಿಕೊಂಡು, ಚಟುವಟಿಕೆಯಿಂದ ಇರಬಹುದು. ನೋವು ಕ್ರಮೇಣ ಕಡಿಮೆಯಾಗುತ್ತದೆ.

* ವಿನೋದಮ್ಮ ತುಮ್ಮಿನಕಟ್ಟಿ; ಪುಷ್ಪಾ ಹಾವೇರಿ– ಎರಡೂ ಮಂಡಿ ಆಪರೇಷನ್‌ ಆಗಿದ್ದು, ಬೆನ್ನು ನೋವು, ಕಾಲು ಜೋಮು ಸಮಸ್ಯೆ ಇದೆ.

ಫಿಜಿಯೋಥೆರಪಿ ಮತ್ತು ವೈದ್ಯರು ಕೊಟ್ಟ ಮಾತ್ರೆಗಳನ್ನು ಮುಂದುವರಿಸಿ. ಬೆಲ್ಟ್‌ ಬಳಕೆ ಮಾಡಿ. ಸಮಸ್ಯೆ ತೀವ್ರವಾದರೆ, ವೈದ್ಯರ ಸಲಹೆ ಪಡೆಯಿರಿ. ಬೋನ್‌ ಮಿನರಲ್‌ ಡೆನ್‌ಸಿಟಿ ದುರ್ಬಲವಾದಾಗ ಕೆಲವರಿಗೆ ನೋವು ಕಾಣಿಸಿಕೊಳ್ಳುತ್ತದೆ.ವಿಟಮಿನ್‌ ಡಿ ಮಾತ್ರೆ ಬಳಸಬೇಕು. ಎಳೆ ಬಿಸಿಲಿಗೆ ಮೈಯೊಡ್ಡುವುದು ಉತ್ತಮ. ‘ಕ್ಯಾಲ್ಸಿಯಂ ರಿಚ್‌ ಡಯಟ್‌’ ಪ್ರಯೋಜನಕಾರಿಯಾಗುತ್ತದೆ.

ಈ ಅಂಶಗಳನ್ನು ನೆನಪಿಡಿ...

* ಕೂರುವಾಗ, ನಿಲ್ಲುವಾಗ, ಮಲಗುವಾಗ ದೇಹವನ್ನು ನೇರವಾಗಿ ಸರಿಯಾಗಿ ಇಟ್ಟುಕೊಳ್ಳಬೇಕು

* ಮೂಳೆ ಕಟ್ಟಿಸಿಕೊಳ್ಳುವುದನ್ನು ನಿಯಂತ್ರಿಸಿ, ಪಿಒಪಿ ಬ್ಯಾಂಡೇಜ್‌ನಿಂದ ಪರಿಹಾರ ಕಂಡುಕೊಳ್ಳಿ

* ನಿಮ್ಮ ಕೀಲುಗಳು ಆರೋಗ್ಯಕರವಾಗಿರಲು ತೂಕವನ್ನು ಕಳೆದುಕೊಳ್ಳಿ

* ಸೊಂಟದ ಹತ್ತಿರ ಬೊಜ್ಜು ಸೇರದಂತೆ ಜಾಗರೂಕರಾಗಿರಿ

* ಪೌಷ್ಟಿಕ ಆಹಾರ ಸೇವಿಸಿ, ನಿಯಮಿತ ವ್ಯಾಯಾಮ ರೂಢಿಸಿಕೊಳ್ಳಿ

* ಮೂಳೆ ಸವಕಲಾಗದಂತೆ ಕ್ಯಾಲ್ಸಿಯಂ ಮತ್ತು ವಿಟಮಿನ್‌ ಡಿ ಮುಂತಾದವುಗಳ ಪ್ರಮಾಣ ಗಮನದಲ್ಲಿರಲಿ.

***

ಹೆಚ್ಚಿನ ಮಾಹಿತಿಗೆ: ಶ್ರೀ ಸಾಯಿ ಕ್ಲಿನಿಕ್‌ ಎಲುಬು, ಕೀಲು, ನರ, ಬೆನ್ನುಹುರಿ ಚಿಕಿತ್ಸಾ ಕೇಂದ್ರ,ಹಿತೈಷಿ ಪ್ಯಾಲೇಸ್‌1ನೇಮಹಡಿ, ಅಶ್ವಿನಿನಗರ3ನೇ ಅಡ್ಡರಸ್ತೆ, ಪಿ.ಬಿ.ರಸ್ತೆ, ಹಾವೇರಿ.ಮೊ:87623 38838

***

ಫೋನ್‌ ಇನ್‌ ನಿರ್ವಹಣೆ: ಎಂ.ವಿ.ಗಾಡದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT