ಶುಕ್ರವಾರ, ಆಗಸ್ಟ್ 6, 2021
24 °C

ಗರ್ಭಿಣಿಯರಲ್ಲಿ ಕಾಲು ನೋವು ಸಾಮಾನ್ಯವೇ?

ಡಾ. ವೀಣಾ ಎಸ್‌. ಭಟ್‌ Updated:

ಅಕ್ಷರ ಗಾತ್ರ : | |

ಪ್ರಶ್ನೆ: ನನಗೆ 26 ವರ್ಷ. ಮೊದಲ ಬಾರಿಗೆ ಗರ್ಭಿಣಿ. ಏಳು ತಿಂಗಳಾಗಿದೆ. ನನಗೆ ಆಗಾಗ ಕಾಲಿನ ಮೀನಖಂಡ ಸೆಳೆತ ಬಂದು ರಾತ್ರಿಯಲ್ಲಿ ನಿದ್ರೆಯೂ ಹಾಳಾಗುತ್ತದೆ. ವೈದ್ಯರು ಕ್ಯಾಲ್ಸಿಯಂ, ಕಬ್ಬಿಣಾಂಶ ಮಾತ್ರೆ ಎಲ್ಲಾ ಕೊಟ್ಟಿದ್ದಾರೆ. ಆದರೂ ಕಡಿಮೆ ಆಗಿಲ್ಲ. ಏನು ಮಾಡಲಿ?

–ಸುಮಿತ್ರಾ, ಊರಿನ ಹೆಸರಿಲ್ಲ

ಉತ್ತರ: ಸುಮಿತ್ರಾರವರೇ ಶೇ 50ರಷ್ಟು ಗರ್ಭಿಣಿಯರಿಗೆ ಕಾಲುನೋವು, ಮೀನಖಂಡ ಸೆಳೆತ ಇವೆಲ್ಲಾ ಉಂಟಾಗಬಹುದು. ಗರ್ಭಧಾರಣೆಯಲ್ಲಿ ಹೆಚ್ಚು ತೂಕ ಗಳಿಸುವುದರಿಂದ, ಬೆಳೆಯುತ್ತಿರುವ ಗರ್ಭಸ್ಥ ಶಿಶುವಿನ ಕಾರಣದಿಂದ, ಸೂಕ್ಷ್ಮ ರಕ್ತನಾಳ ಹಾಗೂ ನರಗಳ ಜಾಲದ ಮೇಲೆ ಒತ್ತಡ ಉಂಟಾಗುವುದರಿಂದ, ದೀರ್ಘಾವಧಿ ಒಂದೇ ಕಡೆ ಒಂದೇ ಭಂಗಿಯಲ್ಲಿ ಕುಳಿತುಕೊಳ್ಳುವುದು, ನಿಲ್ಲುವುದರಿಂದ, ಅತಿಯಾದ ಆಯಾಸ ಹಾಗೂ ನಿರ್ಜಲತೆಯಿಂದ, ಕೆಲವು ಸೂಕ್ಷ್ಮ ಪೋಷಕಾಂಶ ಹಾಗೂ ಖನಿಜಾಂಶಗಳ ಕೊರತೆ ಇತ್ಯಾದಿಗಳಿಂದ ಇಂತಹ ಕಾಲುಸೆಳೆತ ಉಂಟಾಗಬಹುದು. ಪರಿಹಾರವಾಗಿ ದಿನಾ ಕನಿಷ್ಠ 3-4 ಲೀಟರ್ ಉಗುರು ಬೆಚ್ಚಗಿನ ನೀರನ್ನು ಕುಡಿಯಬೇಕು. ನಿತ್ಯ ಕೈ ಹಾಗೂ ಕಾಲುಗಳ ವ್ಯಾಯಾಮಗಳನ್ನು ಮಾಡಬೇಕು. ಒಂದೇ ಭಂಗಿಯಲ್ಲಿ ಹೆಚ್ಚು ಹೊತ್ತು ನಿಲ್ಲುವುದು, ಕೂರುವುದು ಮಾಡಬಾರದು. ಕನಿಷ್ಠ ಅರ್ಧ ಗಂಟೆಯಾದರೂ ವಾಕಿಂಗ್ ಮಾಡುವುದು, ಮೀನಖಂಡ ಹಾಗೂ ಪಾದಗಳನ್ನು ಆಗಾಗ ಮಸಾಜ್ ಮಾಡಿಕೊಳ್ಳುವುದು ಮತ್ತು ಬಿಸಿನೀರಿನ ಶಾಖ ಕೊಡುವುದು, ಕಾಲುಚೀಲ ಬಳಸುವುದು, ಕಾಲುಗಳನ್ನು ಬೆಚ್ಚಗೆ ಇಟ್ಟುಕೊಳ್ಳುವುದು ಮಾಡಿ. ಮುಖ್ಯವಾಗಿ ನೀವು ಆಗಲೇ ಕಬ್ಬಿಣ ಮತ್ತು ಕ್ಯಾಲ್ಸಿಯಂ ಮಾತ್ರೆ ಸೇವಿಸುತ್ತಿದ್ದರೂ ಸ್ಥಳೀಯವಾಗಿ ಸಿಗುವಂತಹ ಹಣ್ಣು, ತರಕಾರಿ, ಹಸಿರುಸೊಪ್ಪುಗಳನ್ನು ಹೆಚ್ಚು ಹೆಚ್ಚು ಸೇವಿಸಿ. ದಿನಕ್ಕೆ 8-10 ಬಾರಿ ತುದಿಗಾಲಲ್ಲಿ ಹತ್ತು ಹೆಜ್ಜೆ, ಹಿಮ್ಮಡಿಯಿಂದ ಹತ್ತು ಹೆಜ್ಜೆ, ಕಾಲುಗಳ ಬದಿಯಿಂದ ಹತ್ತು ಹೆಜ್ಜೆ ನಡೆಯಬೇಕು. ಮಲಗುವ ಮುನ್ನವೂ ಹೀಗೆ ನಡೆದು ಮಲಗಿದರೆ ಕಾಲುಸೆಳೆತ ಬರುವುದು ಕಡಿಮೆಯಾಗುತ್ತದೆ. ನಂತರವೂ ಈ ಸಮಸ್ಯೆ ಇದ್ದರೆ ಸೆಳೆತ ಬಂದ ಕಾಲುಗಳನ್ನು ನೇರವಾಗಿ ಚಾಚಿ ನಂತರ ಎಲ್ಲಾ ಬೆರಳುಗಳನ್ನು ಮೇಲ್ಮುಖವಾಗಿ ತಿರುಗಿಸಿ ಸೆಳೆತ ಬಂದ ಜಾಗವನ್ನು ಕೈಯಿಂದ ಮಸಾಜ್ ಮಾಡಿದಾಗ ನೋವು ಕಡಿಮೆಯಾಗುತ್ತದೆ.

**

ಪ್ರಶ್ನೆ: ನನಗೆ 28 ವರ್ಷ. ನಾರ್ಮಲ್ ಹೆರಿಗೆಯಾಗಿ ಒಂದು ತಿಂಗಳು. ಮಲ ವಿಸರ್ಜನೆ ಮಾಡುವಾಗ ನೋವಾಗುತ್ತದೆ, ಏನೋ ಹೊರಗೆ ಬಂದ ಹಾಗಾಗುತ್ತದೆ. ಕೆಲವೊಮ್ಮೆ ರಕ್ತಾನೂ ಹೋಗುತ್ತದೆ. ಮನೆಯಲ್ಲಿ ಎಲ್ಲರೂ ಇದು ಮೂಲವ್ಯಾಧಿ ಅಂತಿದ್ದಾರೆ. ಕೆಲವರು ಹೀಟಾಗಿದೆ ಅಂತಿದ್ದಾರೆ. ಏನು ಮಾಡಲಿ? ತುಂಬಾ ಗಾಬರಿ, ಒತ್ತಡ ಎನಿಸುತ್ತಿದೆ.

–ಮಾಧುರಿ, ಹಾನಗಲ್

ಉತ್ತರ: ಮಾಧುರಿಯವರೇ- ನೀವು ಅಷ್ಟೆಲ್ಲಾ ಗಾಬರಿಯಾಗಬೇಡಿ. ಎಲ್ಲಾ ಮನುಷ್ಯರಿಗೂ ಬರಬಹುದಾದ ಸಾಮಾನ್ಯ ಸಮಸ್ಯೆ ನಿಮಗೆ ಬಂದಿರುವುದೇ ಹೊರತು ಜೀವ ಹೋಗುವಂತಹ ಸಮಸ್ಯೆಯೇನಲ್ಲ. ಆದರೆ ನಿರ್ಲಕ್ಷಿಸಿದಾಗ ತೊಂದರೆ ಆಗಬಹುದು. ನಮ್ಮ ಜೀರ್ಣಾಂಗವ್ಯೂಹದ ಕೊನೆಯ ಭಾಗವಾದ ದೊಡ್ಡ ಕರುಳಿನ ಅಂತಿಮ ಭಾಗ ಗುದದ್ವಾರ. ದೊಡ್ಡ ಕರುಳಿನಲ್ಲಿ ಪೋಷಕಾಂಶಗಳು ಮತ್ತು ನೀರಿನ ಜೊತೆಗೆ ಇತರ ಖನಿಜಾಂಶಗಳ ಹೀರುವಿಕೆಯಾಗುತ್ತದೆ. ಗುದದ್ವಾರದಲ್ಲಿ ಚರ್ಮದ ಕೆಳಗೆ ರಕ್ತನಾಳಗಳ ಜಾಲವೇ ಇದ್ದು ಇವುಗಳಲ್ಲಿನ ಅಭಿಧಮನಿಗಳಲ್ಲಿ (ವೀನ್ಸ್) ಕವಾಟಗಳಿವೆ. ಇಲ್ಲಿಂದ ಗುರುತ್ವಾಕರ್ಷಣ ಶಕ್ತಿಯ ವಿರುದ್ಧ ರಕ್ತ ಪ್ರವಾಹವು ಹೃದಯಕ್ಕೆ ಹರಿಯಬೇಕಾಗುತ್ತದೆ. ಇವುಗಳ ಕವಾಟಗಳ ದಕ್ಷತೆ ಕಡಿಮೆಯಾದಾಗ ದೀರ್ಘಾವಧಿ ನಿಂತು– ಕೂತು ಮಾಡುವುದು, ಯಾವುದೇ ಚಟುವಟಿಕೆ ಇಲ್ಲದೇ ಇರುವುದು, ಪದೇ ಪದೇ ಆಗುವ ಮಲಬದ್ಧತೆ ಇವುಗಳಿಂದ ಮಲವಿಸರ್ಜನೆಯಾಗುವ ಸಂದರ್ಭದಲ್ಲಿ ಹೆಚ್ಚು ಹೆಚ್ಚು ತಿಣುಕಿ ಒತ್ತಡ ಹಾಕುವಾಗ ಮಲದ್ವಾರದ ರಕ್ತನಾಳಗಳು ಹೊರಬರುತ್ತವೆ. ಈ ರಕ್ತನಾಳ, ಲೋಳೆಪದರಗಳೆಲ್ಲಾ ಉಬ್ಬಿ ಒಂದು ರೀತಿ ವಿರೂಪಗೊಂಡು ಗುದದ್ವಾರದಿಂದ ಹೊರಬಂದು ಗಂಟಿನ ತರಹ ಕಾಣಿಸಿಕೊಳ್ಳುತ್ತವೆ. ಇದರಿಂದ ನೋವಾಗುತ್ತದೆ, ಮಲವಿಸರ್ಜನೆಗೂ ಕಷ್ಟವಾಗುತ್ತದೆ, ರಕ್ತಸ್ರಾವವೂ ಉಂಟಾಗಿ ಮೂಲವ್ಯಾಧಿ (ಪೈಲ್ಸ್) ಎನಿಸಿಕೊಳ್ಳುತ್ತದೆ. ಹೆಮರಾಯ್ಡ್ಸ್‌ಎಂದೂ ಕರೆಯುತ್ತಾರೆ.


–ಡಾ. ವೀಣಾ ಎಸ್‌. ಭಟ್‌

ನಿಮಗೆ ಗುದದ್ವಾರದಲ್ಲಿ ಗಂಟಿದೆ ಎಂದಿದ್ದೀರಿ. ಅದು ಪೈಲ್ಸ್ ಇರಬಹುದು. ಕೆಲವೊಮ್ಮೆ ದೀರ್ಘಾವಧಿ ಮಲಬದ್ಧತೆಯಾದಾಗ ಗುದದ್ವಾರದ ಮೂಲೆಗಳು ಸೀಳುಬಿಟ್ಟ ಹಾಗಾಗುವುದೇ ‘ಫಿಷರ್’. ಪದೇ ಪದೇ ಆಗುವ ಸೀಳು, ಗುಣವಾಗುವಿಕೆ ಇದ್ದವರಲ್ಲಿ ಒಂದು ರೀತಿಯ ಮಾಂಸದ ತುಂಡಿನ ಹಾಗೆ ಹೊರಗೆ ಬರುವುದು ಸೆಂಟಿನೈಲ್ ಪೈಲ್ ಎನಿಸಿಕೊಳ್ಳುತ್ತದೆ. ನಿಮಗೆ ಫಿಷರ್ ಇರಬಹುದು ಅಥವಾ ಎರಡೂ ಇರಬಹುದು. ನೀವು ನಿಮ್ಮ ವೈದ್ಯರನ್ನು ಭೇಟಿ ಮಾಡಿ ಖಾತ್ರಿಪಡಿಸಿಕೊಳ್ಳಿ. ಆರಂಭಿಕ ಹಂತದಲ್ಲಿ ಮೂಲವ್ಯಾಧಿಗೆ ನೀವು ಜೀವನಶೈಲಿ ಬದಲಿಸಿಕೊಳ್ಳಬೇಕು. ಸರಿಯಾದ ಮಲವಿಸರ್ಜನೆಗೆ 3-4 ಲೀಟರ್ ನೀರು ಹಾಗೂ ಸಾಕಷ್ಟು ನಾರಿನಾಂಶ (25 ರಿಂದ 30 ಗ್ರಾಂ ಪ್ರತಿದಿನ ಸೊಪ್ಪು, ತರಕಾರಿಗಳ ರೂಪದಲ್ಲಿ) ನಿತ್ಯವೂ ಸೇವಿಸಬೇಕು. ಬಾಣಂತನಕ್ಕೆ ಎಂದು ನೀರು ಕುಡಿಯುವುದನ್ನು ಕಡಿಮೆ ಮಾಡಿ ಸೊಪ್ಪು, ನಾರಿನಾಂಶವುಳ್ಳ ತರಕಾರಿ ಸೇವಿಸದೇ ಇದ್ದುದಕ್ಕೆ ನಿಮಗೆ ಹೀಗಾಗಿರಬಹುದು. ಮಲಬದ್ಧತೆಯಾಗದ ಹಾಗೇ ನೋಡಿಕೊಂಡರೆ, ಜೀವನಶೈಲಿ ಬದಲಿಸಿಕೊಂಡರೆ, ತಜ್ಞರ ಸಲಹೆ ಪಡೆದು ಅನುಸರಿಸಿದರೆ ಶಸ್ತ್ರಚಿಕಿತ್ಸೆ ಸಂಭವ ಕಡಿಮೆ. ಹಾಗೆ ಮಾಡದೇ ನೀವು ಮುಜುಗರ ಪಟ್ಟುಕೊಂಡರೆ ಪೈಲ್ಸ್ ಸದಾ ಹೊರಗೇ ಇದ್ದು ಅದನ್ನು ಒಳಹಾಕಲು ಸಾಧ್ಯವಾಗದೇ ಇದ್ದಾಗ ರಕ್ತಸ್ರಾವ ಜಾಸ್ತಿ ಆಗಬಹುದು. ಅಂತಹ ಸಂದರ್ಭದಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಬೇಕಾಗಬಹುದು. ಅದಕ್ಕೆ ಉತ್ತಮವಾದ ವಿಧಾನಗಳು ಈಗ ಪ್ರಚಲಿತದಲ್ಲಿವೆ. ಯಾವುದಕ್ಕೂ ತಜ್ಞರನ್ನು ಭೇಟಿ ಮಾಡಿ. ನಿರ್ಲಕ್ಷಿಸಬೇಡಿ.

**
ಪ್ರಶ್ನೆ: ನನಗೆ ಮುಟ್ಟಿನ ಸಮಯದಲ್ಲಿ ತೀವ್ರವಾದ ಹೊಟ್ಟೆನೋವು, ವಾಂತಿ ಮತ್ತು ಸುಸ್ತು ಯಾವಾಗಲೂ ಇರುತ್ತದೆ. ಇದಕ್ಕೆ ಪರಿಹಾರ ಏನು?

ತೇಜಸ್ವಿನಿ ಎಸ್‌., ಊರಿನ ಹೆಸರು ತಿಳಿಸಿಲ್ಲ.

ಉತ್ತರ: ಹೆಚ್ಚಿನವರಿಗೆ ಮುಟ್ಟಿನ ಸಂದರ್ಭದಲ್ಲಿ ಕಿಬ್ಬೊಟ್ಟೆ ನೋವು, ಸೆಳೆತ ಉಂಟಾಗುವುದು, ವಾಂತಿ ಆಗಬಹುದು. ಮುಟ್ಟಿನ ಸಂದರ್ಭದಲ್ಲಿ ಪ್ರೋಸ್ಟೋಗ್ಲಾಂಡಿನ್‌ನಂತಹ ಸ್ಥಳೀಯ ಹಾರ್ಮೋನ್‌ಗಳ ಉತ್ಪಾದನೆಯಾಗಿ ಅವುಗಳ ಪ್ರಭಾವದಿಂದ ಈ ರೀತಿ ಆಗಬಹುದು. ವೈದ್ಯರ ಸಲಹೆಯ ಮೇರೆಗೆ ಸೂಕ್ತ ನೋವು ನಿವಾರಕ ಮಾತ್ರೆಗಳನ್ನು ತೆಗೆದುಕೊಂಡು ಆ ಸಮಯದಲ್ಲಿ ಅವಶ್ಯಕತೆಗೆ ಅನುಗುಣವಾಗಿ ಸೇವಿಸಿ. ಚಟುವಟಿಕೆಯಿಂದಿರಿ. ದಿನಾ ಬದ್ಧಕೋಣಾಸನ, ಜಾನುಶಿರ್ಷಾಸನ, ಚಕ್ಕಿಚಲನಾಸನ ಹಾಗೂ ಸೂರ್ಯನಮಸ್ಕಾರ ಇತ್ಯಾದಿ ನಿಯಮಿತವಾಗಿ ಮಾಡುವುದರಿಂದ ನೋವಿನ ತೀವ್ರತೆ ಕಡಿಮೆಯಾಗುತ್ತದೆ.

ಸ್ಪಂದನ...
ಮುಟ್ಟು, ಗರ್ಭಧಾರಣೆ, ಋತುಬಂಧ, ಹಾರ್ಮೋನ್‌ ಮುಂತಾದ ಸಮಸ್ಯೆಗಳಿದ್ದರೆ ಪ್ರಶ್ನೆಗಳನ್ನು ನಮಗೆ ಕಳುಹಿಸಬಹುದು. ನಿಮ್ಮ ಪ್ರಶ್ನೆಗಳಿಗೆ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ. ವೀಣಾ ಎಸ್‌. ಭಟ್‌ ಅವರು ಉತ್ತರಿಸಲಿದ್ದಾರೆ. ಪ್ರಶ್ನೆಗಳನ್ನು bhoomika@prajavani.co.in ಗೆ ಕಳಿಸಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು