ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಚಳಿಚಳಿಯೆನ್ನದಿರಿ...ಯೋಗ, ವ್ಯಾಯಾಮ ಮರೆಯದಿರಿ...

Last Updated 27 ನವೆಂಬರ್ 2020, 3:07 IST
ಅಕ್ಷರ ಗಾತ್ರ
ADVERTISEMENT
""
""

ಈಗ ಎಲ್ಲೆಲ್ಲೂ ಬಗೆ ಬಗೆಯ ರೋಗಗಳದ್ದೇ ಮಾತು. ಅದರಲ್ಲೂ ಈ ವರ್ಷ ಕೊರೊನಾ ತಂದ ಸಂಕಷ್ಟ ಅಷ್ಟಿಷ್ಟಲ್ಲ. ಸೋಂಕು ವ್ಯಾಪಿಸದಂತೆ ಜನರೇ ಸ್ವಯಂ ಆಗಿ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕಾದ ಅನಿವಾರ್ಯ ಈಗಲೂ ಇದೆ. ಸ್ವಯಂ ರಕ್ಷಣೆಗೆ ಜನಜಂಗುಳಿಯಿಂದ ದೂರ ಇರುವುದು, ಮಾಸ್ಕ್‌ ಧರಿಸುವುದು ಮಾತ್ರವಲ್ಲ; ರೋಗ ನಿರೋಧಕ ಶಕ್ತಿಯನ್ನು ಕೂಡ ಹೆಚ್ಚಿಸಿಕೊಳ್ಳಬೇಕಿದೆ. ಈಗಷ್ಟೇ ಚಳಿಗಾಲವೂ ಆರಂಭವಾಗಿರುವುದರಿಂದ ಇನ್ನೆರಡು ತಿಂಗಳು ಸಾಕಷ್ಟು ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕಾಗಿದೆ. ಶೀತದಿಂದ ಮರಗಟ್ಟುವ ದೇಹ ಬೆಚ್ಚಗಾಗಿಟ್ಟುಕೊಳ್ಳಲು ವ್ಯಾಯಾಮ, ಯೋಗ, ಪ್ರಾಣಾಯಾಮದ ಮೊರೆ ಹೋಗುವುದು ಪರಿಣಾಮಕಾರಿ ಎನ್ನುವುದು ಯೋಗ ಶಿಕ್ಷಕರ ಅಭಿಮತ...

ಒರಟಾದ ಚರ್ಮ, ಒಡೆದು ಬಿರಿದ ತುಟಿ, ಜಿಗುಟು ತಲೆಕೂದಲು, ಸುರಿವ ಮೂಗು, ಗಂಟಲು ಕಿರಿಕಿರಿ, ಕೆಮ್ಮು, ಉಬ್ಬಸ, ಆಸ್ತಮಾ ಹಾವಳಿ, ಮೈ ಗಡಗಡ, ನಡೆಯಲಾಗದಷ್ಟು ಒಡೆದ ಹಿಮ್ಮಡಿ,...ಊಫ್‌...ಶೀತಕಾಲದ ಸಂಕಟ ಒಂದೆರಡೇ?

ಮೈ ಕೊರೆಯುವ ಚಳಿ ಈಗಷ್ಟೇ ಮೆಲ್ಲಗೆ ಅಡಿಯಿಟ್ಟಿದೆ. ಬೆಚ್ಚನೆಯ ಉಡುಪು, ಜಾಕೆಟ್, ಸ್ವೆಟರ್‌, ರಗ್ಗು ಮತ್ತೆ ತಮ್ಮತ್ತ ಸೆಳೆಯುತ್ತಿವೆ. ಹಾಸಿಗೆಯಿಂದ ಏಳುವುದೇ ಬೇಡ ಅನ್ನುವ ಸಮಯವಿದು. ಚಳಿಗಾಲದಲ್ಲಿ ಸೋಂಕಿನ ರೋಗಗಳ ಹಾವಳಿಯೂ ಹೆಚ್ಚು. ಈ ವರ್ಷವಂತೂ ಹಿಂದೆಂದೂ ಕಾಣದಂತಹ ಕೊರೊನಾ ಸಂಕಟ ಜನಜೀವನವನ್ನೇ ಅಸ್ತವ್ಯಸ್ತಗೊಳಿಸಿದೆ. ಹೀಗಾಗಿ ನಮ್ಮ ದೈನಂದಿನ ಜೀವನ ಶೈಲಿಯಲ್ಲಿ ಒಂದಿಷ್ಟು ಬದಲಾವಣೆಗಳೊಂದಿಗೆ ಚಳಿಯಿಂದ ಮುದುಡುವ ದೇಹವನ್ನು ಬೆಚ್ಚವಾಗಿಟ್ಟುಕೊಳ್ಳಲು ಸರಳ ವ್ಯಾಯಾಮ, ಯೋಗ, ಧ್ಯಾನವೂ ದೈನಿಕದ ಭಾಗವಾಗಬೇಕು. ಎಲ್ಲರಿಗೂ ಪ್ರತಿದಿನ ಒಂದಿಷ್ಟಾದರೂ ವ್ಯಾಯಾಮ, ವಾಕಿಂಗ್‌ ಬೇಕೇ ಬೇಕು. ಫಿಟ್ನೆಸ್‌ ಪ್ರೇಮಿಗಳು ಹೇಗಾದರೂ ವರ್ಕೌಟ್‌ ಮಾಡುತ್ತಾರೆ. ಆದರೆ ಈ ಹವ್ಯಾಸಿ ಫಿಟ್ನೆಸ್‌ ಪ್ರೇಮಿಗಳು ಮನೆಯಲ್ಲಿಯೇ ಒಂದಿಷ್ಟು ಹೊತ್ತು ವರ್ಕೌಟ್‌ ಮಾಡಲು ರಗ್‌ ಬದಿಗಿರಿಸಿ ತುಸು ಮೈಬಗ್ಗಿಸಬೇಕು...

ಸೂರ್ಯನ ಕಿರಣಕ್ಕೆ ಮೈಯೊಡ್ಡಿ...

ವೈರಾಣುಗಳಿಂದ ರಕ್ಷಣೆ ಪಡೆಯಲು ಮತ್ತು ದೇಹದ ರೋಗ ನಿರೋಧಕತೆಯನ್ನು ಹೆಚ್ಚಿಸಿಕೊಳ್ಳಲು ಪ್ರತಿನಿತ್ಯ 10–15 ನಿಮಿಷವಾದರೂ ಸೂರ್ಯ ಬಿಸಿಲಿಗೆ ಮೈಯೊಡ್ಡಬೇಕು. ಬೆಳಗಿನ ಬಿಸಿಲಿನಲ್ಲಿ ವಿಟಮಿನ್‌ ಡಿ ಅಂಶ ಹೆಚ್ಚಿರುವುದರಿಂದ ರೋಗ ನಿರೋಧಕ ಶಕ್ತಿಯು ಹೆಚ್ಚುತ್ತದೆ.

ಚಳಿಗಾಲದಲ್ಲಿ ದೇಹದ ರಕ್ತ ಸಂಚಾರ ಎಂದಿನಂತಿರುವುದಿಲ್ಲ. ಹೀಗಾಗಿ ಸಹಜವಾಗಿ ರಕ್ತ ಸಂಚಾರವಾಗುವಂತಹ ಯೋಗ, ಮುದ್ರೆ, ವ್ಯಾಯಾಮದ ಮೊರೆ ಹೋಗಬೇಕಾಗುತ್ತದೆ. ಸರಳ ವ್ಯಾಯಾಮ, ಯೋಗಾಸನಗಳನ್ನು ಮಾಡುವುದರಿಂದ ಆಲಸ್ಯ ನಿವಾರಣೆಯಾಗುತ್ತದೆ. ರಕ್ತ ಸಂಚಾರ ಸುಗಮವಾಗುತ್ತದೆ. ಜಿಮ್‌ಗೆ ಹೋಗಲು ಸಾಧ್ಯವಾಗದ ಕಾರಣ ಮನೆಯಲ್ಲಿಯೇ ಒಂದಿಷ್ಟು ಹೊತ್ತು ಇವುಗಳಲ್ಲಿ ತೊಡಗುವುದರಿಂದ ದೈನಂದಿನ ಚಟುವಟಿಕೆಗೆ ಲಯ ಸಿಗುತ್ತದೆ.

ವಿಶೇಷವಾಗಿ ಪ್ರತಿದಿನ ಪ್ರಾಣಾಯಾಮ ಅಭ್ಯಾಸ ಮಾಡುವುದರಿಂದ ದೇಹದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಶ್ವಾಸಕೋಶಗಳು ಹಿಗ್ಗುವುದರಿಂದ ಹೆಚ್ಚು ಹೆಚ್ಚು ಆಮ್ಲಜನಕವು ದೇಹದೊಳಕ್ಕೆ ಹೋಗುತ್ತದೆ. ನಮ್ಮ ಶ್ವಾಸಕೋಶ ಹಿಗ್ಗಿ ಆಮ್ಲಜನಕ ಸೇರಿ ರಕ್ತಸಂಚಾರ ಉತ್ತಮಗೊಳ್ಳುತ್ತದೆ. ತನ್ಮೂಲಕ ದೇಹಾರೋಗ್ಯ ಬಲಗೊಳ್ಳುತ್ತದೆ.

‘ಪ್ರತಿದಿನವೂ ಯೋಗಾಸನ, ಜೊತೆಯಲ್ಲಿ ಪ್ರಾಣಾಯಾಮವನ್ನು ಅಭ್ಯಾಸ ಮಾಡಿದರೆ ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ’ ಎನ್ನುತ್ತಾರೆ ಹುಬ್ಬಳ್ಳಿ ಯೋಗ ಶಿಕ್ಷಕ ವಿನಾಯಕ ತಲಗೇರಿ.

‘ದೇಹವನ್ನು ಬಲಗೊಳಿಸಲು ಯೋಗಾಸನಗಳೂ ಮುಖ್ಯ. ಆಸನಗಳಿಂದ ದೇಹ ಸದೃಢವಾಗುವುದರ ಜೊತೆ ಲವಲವಿಕೆ ಮೂಡುತ್ತದೆ. ಹೀಗಾಗಿ ಯೋಗಾಸನಗಳ ಮೊರೆ ಹೋಗುವುದು ಈ ಸಂದರ್ಭದಲ್ಲಿ ಹೆಚ್ಚು ಪ್ರಯೋಜನಕಾರಿ. ಯೋಗದೊಂದಿಗೆ ಮುದ್ರೆಗಳನ್ನು ಕೂಡ ಮಾಡಬಹುದು’ ಎನ್ನುತ್ತಾರೆ ಯೋಗಪಟು ಸಾಗರ ವಾಲದ್‌ ಅವರು.

ಧನುರಾಸನ

ಒಂದಿಷ್ಟು ಆಸನಗಳು:

*ಸೂರ್ಯ ನಮಸ್ಕಾರ: ಎಂಟು ಆಸನಗಳನ್ನು ಒಳಗೊಂಡಿರುವ ಸೂರ್ಯ ನಮಸ್ಕಾರ ಬಹುಮುಖ್ಯವಾದ ಆಸನಗಳಲ್ಲಿ ಒಂದು. ಪ್ರತಿನಿತ್ಯ ಸೂರ್ಯ ನಮಸ್ಕಾರ ಮಾಡುವುದರಿಂದ ದೇಹ ಬಲಗೊಳ್ಳುತ್ತದೆ.

* ಸರ್ವಾಂಗಾಸನ: ಶರೀರದ ಎಲ್ಲ ಅಂಗಗಳಿಗೂ ವ್ಯಾಯಾಮ ಸಿಗುವ ಆಸನವಿದು.

* ವಿಪರೀತ ಕರಣಿ: ಕತ್ತು ಮೆದುಳು ಮತ್ತು ಜಠರಕ್ಕೆ ಹೆಚ್ಚಿನ ರಕ್ತ ಸರಬರಾಜು ಮಾಡುವ ಆಸನ

* ಪಶ್ಚಿಮೋತ್ತಾನಾಸನ: ಜೀರ್ಣಶಕ್ತಿ ಹೆಚ್ಚಿಸುವ, ಮಲಬದ್ಧತೆ ನಿವಾರಣೆ ಮಾಡುವ, ಬೊಜ್ಜುಕರಗಿಸುವ ಈ ಆಸನ ಬಲು ಪರಿಣಾಮಕಾರಿ.

* ಹಾಗೆಯೇ ತಾಡಾಸನ, ವೃಕ್ಷಾಸನ, ಪಾದಹಸ್ತಾಸನ, ಭುಜಂಗಾಸನ, ಅರ್ಧಚಕ್ರಾಸನ, ವೀರಭದ್ರಾಸನ, ತ್ರಿಕೋಣಾಸನ, ಸುಪ್ತಬದ್ಧ ಕೋಣಾಸನ, ಜಠರ ಪರಿವರ್ತನಾಸನ ಇತ್ಯಾದಿಗಳನ್ನು ಪ್ರತಿದಿನ ಮಾಡುವುದು ಒಳಿತು.

ದೈನಂದಿನ ಬದುಕಿನಲ್ಲಿ ಯೋಗಾಸನಗಳು ಒಂದು ತೂಕವಾದರೆ ಪ್ರಾಣಾಯಾಮ ಮಾಡುವುದು ದೇಹಕ್ಕೆ ಇನ್ನಷ್ಟು ಬಲ ನೀಡುತ್ತವೆ. ಅಷ್ಟಾಂಗಯೋಗದ ನಾಲ್ಕನೇ ಮೆಟ್ಟಿಲಾಗಿರುವ ಪ್ರಾಣಾಯಾಮ ನರಮಂಡಲವನ್ನು ಉದ್ದೀಪಿಸುತ್ತದೆ ಎನ್ನುತ್ತಾರೆ ಯೋಗಪಟುಗಳು.

ಸರ್ವಾಂಗಾಸನ

ಪ್ರಾಣಾಯಾಮ...

ಪ್ರಾಣಾಯಾಮದಲ್ಲಿ ವಿಶೇಷವಾಗಿ ಭಸ್ತ್ರಿಕಾ, ಕಪಾಲಭಾತಿ, ನಾಡಿ ಶೋಧನ (ಅನುಲೋಮ–ವಿಲೋಮ) ಪ್ರಾಣಾಯಾಮಗಳು ಹೆಚ್ಚು ಪ್ರಯೋಜನಕಾರಿ. ಅದರಲ್ಲೂ ಕಪಾಲಭಾತಿ ಹಾಗೂ ಭಸ್ತ್ರಿಕಾ ಶ್ವಾಸಕೋಶಕ್ಕೆ ಹೆಚ್ಚಿನ ಪುಷ್ಟಿ ನೀಡುತ್ತವೆ. ಹೀಗಾಗಿ ಪ್ರತಿದಿನವೂ ಇವುಗಳ ಅಭ್ಯಾಸದಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು.

ಭಸ್ತ್ರಿಕಾ ಪ್ರಾಣಾಯಾಮ ಮಾಡುವುದು ಹೇಗೆ?: ಭಸ್ತ್ರಿಕಾ ಎಂದರೆ ಕುಲುಮೆಯೂದಿದ ಹಾಗೆ. ಇದರಿಂದ ಆಸ್ತಮಾ, ಕೆಮ್ಮು, ನೆಗಡಿಗೆ ಉತ್ತಮ ಪರಿಣಾಮ ಬೀರುತ್ತದೆ. ವಜ್ರಾಸನ ಅಥವಾ ಪದ್ಮಾಸನದಲ್ಲಿ ನೇರವಾಗಿ ಕುಳಿತುಕೊಳ್ಳಿ. ದೇಹ ಸಡಿಲಿಸಿ, ಮೂಗಿನ ಎರಡೂ ಹೊಳ್ಳೆಗಳ ಮೂಲಕ ಆಳವಾಗಿ ಉಸಿರು ತೆಗೆದುಕೊಂಡು ಶ್ವಾಸಕೋಶವನ್ನು ತುಂಬಿಸಿ. ನಂತರ ಅಷ್ಟೇ ರಭಸವಾಗಿ ಸಂಪೂರ್ಣವಾಗಿ ಉಸಿರನ್ನು ಹೊರಗೆ ಬಿಡಬೇಕು. ಕುಲುಮೆ ಊದಿದ ಹಾಗೇ. ನಿಧಾನ, ಮಧ್ಯಮ ಹಾಗೂ ವೇಗವಾಗಿ ಉಸಿರನ್ನು ತೆಗೆದುಕೊಳ್ಳುತ್ತ ಅಭ್ಯಾಸ ಮಾಡಬಹುದು. ಕಾಯಿಲೆ ಇರುವವರು ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು.

ಕಪಾಲಭಾತಿ: ನೇರವಾಗಿ ಕುಳಿತುಕೊಂಡು ಆಳವಾಗಿ ಉಸಿರೆಳೆದುಕೊಂಡು ಹೊಟ್ಟೆ ಹಿಂದಕ್ಕೆಳೆದು ಉಸಿರು ಒಮ್ಮೇಲೆ ಹೊರಬಿಡಿ. ಆರಂಭದಲ್ಲಿ 10–15 ಸಲ. ನಂತರ ಹೆಚ್ಚಿಸುತ್ತ ಹೋಗಿ.

ನಾಡಿಶೋಧನ: ನಾಡಿ ಶೋಧನ ಪ್ರಾಣಾಯಾಮವನ್ನು ಅನುಲೋಮ– ವಿಲೋಮ ಎಂದೂ ಕರೆಯಲಾಗುತ್ತದೆ. ಇದು ಸಹಜವಾಗಿ ಒಂದು ಮೂಗಿನಿಂದ ಉಸಿರೆಳೆದುಕೊಂಡು ಇನ್ನೊಂದು ಹೊಳ್ಳೆಯಿಂದ ಉಸಿರು ಬಿಡಬೇಕು. ಆಳವಾಗಿ ಉಸಿರಾಟ ಮಾಡಿ. ಈ ಕ್ರಿಯೆ ಪುನರಾವರ್ತಿಸಿ. ಇವೆಲ್ಲವುಗಳನ್ನು ಸರಿಯಾಗಿ ಕಲಿತು ಮಾಡಿದರೆ ಇನ್ನಷ್ಟು ಪ್ರಯೋಜನಕಾರಿ.

ಇನ್ನು ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಮುದ್ರೆಗಳೂ ಸಹಕಾರಿ. ಪ್ರಾಣಮುದ್ರೆ, ಪ್ರಥ್ವಿಮುದ್ರೆ, ಶೂನ್ಯ ವಾಯುಮುದ್ರೆಗಳನ್ನು ಕೂಡ ಮಾಡಬಹುದು ಎನ್ನುತ್ತಾರೆ ಯೋಗಪಟುಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT