ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

RCB vs CSK: ಚೆನ್ನೈ ವಿರುದ್ಧ ಸ್ಮರಣೀಯ ಗೆಲುವು, ದಾಖಲೆ ಬರೆದ ಕಿಂಗ್ ಕೊಹ್ಲಿ

Published 19 ಮೇ 2024, 2:39 IST
Last Updated 19 ಮೇ 2024, 2:39 IST
ಅಕ್ಷರ ಗಾತ್ರ

ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಉತ್ತಮ ರನ್‌ರೇಟ್‌ನೊಂದಿಗೆ ಗೆಲ್ಲಲೇಬೇಕಾದ ಪಂದ್ಯದಲ್ಲಿ ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 27 ರನ್ ಅಂತರದ ಗೆಲುವು ದಾಖಲಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು, ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಪ್ಲೇ-ಆಫ್‌ಗೆ ಪ್ರವೇಶಿಸಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಆರ್‌ಸಿಬಿ ವಿರಾಟ್ ಕೊಹ್ಲಿ (47), ನಾಯಕ ಫಫ್ ಡುಪ್ಲೆಸಿ (54), ರಜತ್ ಪಾಟೀದಾರ್ (41) ಹಾಗೂ ಕ್ಯಾಮರಾನ್ ಗ್ರೀನ್ (38*) ಉಪಯುಕ್ತ ಬ್ಯಾಟಿಂಗ್ ನೆರವಿನಿಂದ ಐದು ವಿಕೆಟ್ ನಷ್ಟಕ್ಕೆ 218 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಸಿಎಸ್‌ಕೆ ಏಳು ವಿಕೆಟ್ ನಷ್ಟಕ್ಕೆ 191 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಇದರೊಂದಿಗೆ ರಚಿನ್ ರವೀಂದ್ರ (61), ರವೀಂದ್ರ ಜಡೇಜ (42*) ಹಾಗೂ ಮಹೇಂದ್ರ ಸಿಂಗ್ ಧೋನಿ (25) ಹೋರಾಟವು ವ್ಯರ್ಥವೆನಿಸಿತು.

ಈ ಪಂದ್ಯದ ಹೈಲೈಟ್ಸ್ ಇಲ್ಲಿದೆ.

ಮೊದಲ 8 ಪಂದ್ಯಗಳಲ್ಲಿ ಒಂದು ಗೆಲುವು ಮಾತ್ರ ಗಳಿಸಿದ್ದ ಆರ್‌ಸಿಬಿ...

ಐಪಿಎಲ್ 17ನೇ ಆವೃತ್ತಿಯ ಮೊದಲ ಎಂಟು ಪಂದ್ಯಗಳಲ್ಲಿ ಆರ್‌ಸಿಬಿ ಒಂದೇ ಒಂದು ಪಂದ್ಯದಲ್ಲಿ ಮಾತ್ರ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಅಲ್ಲದೆ ಸತತ ಆರು ಪಂದ್ಯಗಳಲ್ಲಿ ಸೋಲು ಕಂಡಿತ್ತು. ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿತ್ತು. ಆದರೆ ಬಳಿಕದ ಎಲ್ಲ ಆರು ಪಂದ್ಯಗಳನ್ನು ಗೆದ್ದು ಆರ್‌ಸಿಬಿ, ಅಂತಿಮ ನಾಲ್ಕರ ಘಟ್ಟಕ್ಕೆ ಪ್ರವೇಶಿಸಿದೆ. ಇನ್ನು 2011ರ ಆವೃತ್ತಿಯಲ್ಲಿ ಆರ್‌ಸಿಬಿ ಸತತ ಏಳು ಮತ್ತು 2009 ಹಾಗೂ 2016ರಲ್ಲಿ ಸತತ ಐದು ಪಂದ್ಯಗಳಲ್ಲಿ ಜಯ ಗಳಿಸಿತ್ತು.

ಕೊಹ್ಲಿ 700 ರನ್ ಸಾಧನೆ...

ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ 700 ರನ್‌ಗಳ ಸಾಧನೆ ಮಾಡಿದ್ದಾರೆ. ಒಟ್ಟಾರೆಯಾಗಿ ಐಪಿಎಲ್‌ನಲ್ಲಿ ಎರಡನೇ ಬಾರಿ 700ಕ್ಕೂ ಹೆಚ್ಚು ರನ್‌ ಗಳಿಸಿರುವ ವಿರಾಟ್, ಮಾಜಿ ಆಟಗಾರ ಕ್ರಿಸ್ ಗೇಲ್ ದಾಖಲೆಯನ್ನು ಸರಿಗಟ್ಟಿದ್ದಾರೆ. 2016ರ ಆವೃತ್ತಿಯಲ್ಲಿ ಕೊಹ್ಲಿ ದಾಖಲೆಯ 973 ರನ್‌ ಗಳಿಸಿದ್ದರು. ಮತ್ತೊಂದೆಡೆ ಗೇಲ್ 2012ರಲ್ಲಿ 733 ಹಾಗೂ 2013ರಲ್ಲಿ 708 ರನ್ ಗಳಿಸಿದ್ದರು.

ಕೊಹ್ಲಿ ಸಿಕ್ಸರ್‌ಗಳ ಅಬ್ಬರ...

2024ನೇ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಅತಿ ಹೆಚ್ಚು ಸಿಕ್ಸರ್ ಗಳಿಸಿದ ಬ್ಯಾಟರ್ ಎಂಬ ಖ್ಯಾತಿಗೂ ವಿರಾಟ್ ಕೊಹ್ಲಿ ಭಾಜನರಾಗಿದ್ದಾರೆ. ಚೆನ್ನೈ ವಿರುದ್ದ ನಾಲ್ಕು ಸಿಕ್ಸರ್ ಗಳಿಸಿರುವ ವಿರಾಟ್ ಈವರೆಗೆ 37 ಸಿಕ್ಸರ್‌ಗಳನ್ನು ಗಳಿಸಿದ್ದಾರೆ. ನಿಕೋಲಸ್ ಪೂರನ್ (36) ಹಾಗೂ ಅಭಿಷೇಕ್ ಶರ್ಮಾ (35) ನಂತರದ ಸ್ಥಾನದಲ್ಲಿದ್ದಾರೆ.

ಚಿನ್ನಸ್ವಾಮಿಯಲ್ಲಿ 3,000 ರನ್ ಸಾಧನೆ...

ಐಪಿಎಲ್‌ನಲ್ಲಿ ಕಿಂಗ್ ಕೊಹ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 3,000 ರನ್‌ಗಳ ಸಾಧನೆ ಮಾಡಿದ್ದಾರೆ. ಆ ಮೂಲಕ ಐಪಿಎಲ್ ತಾಣವೊಂದರಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿದ್ದಾರೆ. ಮುಂಬೈನ ವಾಂಖೆಡೆ ಮೈದಾನದಲ್ಲಿ ರೋಹಿತ್ ಶರ್ಮಾ 2,295 ರನ್ ಹಾಗೂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ಎಬಿ ಡಿವಿಲಿಯರ್ಸ್ 1,960 ರನ್ ಗಳಿಸಿದ್ದಾರೆ. ಹಾಗೆಯೇ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಭಾರತ ನೆಲದಲ್ಲಿ 9,000ಕ್ಕೂ ಅಧಿಕ ರನ್ ಗಳಿಸಿದ ಹಿರಿಮೆಗೆ ವಿರಾಟ್ ಕೊಹ್ಲಿ ಭಾಜನರಾಗಿದ್ದಾರೆ.

ಫಫ್ ಡುಪ್ಲೆಸಿ ಹಾಗೂ ವಿರಾಟ್ ಕೊಹ್ಲಿ

ಫಫ್ ಡುಪ್ಲೆಸಿ ಹಾಗೂ ವಿರಾಟ್ ಕೊಹ್ಲಿ

(ಪಿಟಿಐ ಚಿತ್ರ)

ಒಂಬತ್ತನೇ ಸಲ ಪ್ಲೇ-ಆಫ್‌ಗೆ ಲಗ್ಗೆ...

ಐಪಿಎಲ್ ಇತಿಹಾಸದಲ್ಲಿ ಒಂಬತ್ತನೇ ಸಲ ಆರ್‌ಸಿಬಿ ಪ್ಲೇ-ಆಫ್‌ಗೆ ಪ್ರವೇಶಿಸಿದೆ. ಈ ಪೈಕಿ ಮೂರು ಬಾರಿ ರನ್ನರ್-ಅಪ್ ಆಗಿತ್ತು. ಮತ್ತೊಂದೆಡೆ ಚೆನ್ನೈ ಮೂರನೇ ಬಾರಿಗೆ ಅಂತಿಮ ನಾಲ್ಕರ ಘಟ್ಟಕ್ಕೆ ಪ್ರವೇಶಿಸುವಲ್ಲಿ ಎಡವಿದೆ.

ಮೇ 18 ಲಕ್ಕಿ ನಂಬರ್...

ಐಪಿಎಲ್ ಇತಿಹಾಸದಲ್ಲಿ ಮೇ 18ರಂದು ಆಡಿದ ಪಂದ್ಯಗಳಲ್ಲಿ ಆರ್‌ಸಿಬಿ ಎಂದೂ ಸೋತಿಲ್ಲ ಎಂಬುದು ಗಮನಾರ್ಹ. 2013, 2014, 2024ರಲ್ಲಿ ಸಿಎಸ್‌ಕೆ ವಿರುದ್ಧ, 2016ರಲ್ಲಿ ಪಂಜಾಬ್ ಕಿಂಗ್ಸ್ ಮತ್ತು 2023ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಆರ್‌ಸಿಬಿ ಗೆಲುವು ದಾಖಲಿಸಿದೆ. ವಿರಾಟ್ ಕೊಹ್ಲಿ ಜೆರ್ಸಿ ನಂಬರ್ ಸಹ 18 ಎಂಬುದು ಕಾಕತಾಳೀಯವೇ ಸರಿ.

157 ಸಿಕ್ಸರ್...

ಐಪಿಎಲ್ ಟೂರ್ನಿಯಲ್ಲಿ 150ಕ್ಕೂ ಹೆಚ್ಚು ಸಿಕ್ಸರ್ ಗಳಿಸಿದ ಮೊದಲ ತಂಡವೆಂಬ ಖ್ಯಾತಿಗೆ ಆರ್‌ಸಿಬಿ ಪಾತ್ರವಾಗಿದೆ. ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ಬ್ಯಾಟರ್‌ಗಳು ಈವರೆಗೆ 157 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ.

6ನೇ ಸಲ 200ಕ್ಕೂ ಅಧಿಕ ರನ್ ಸಾಧನೆ...

ಇನ್ನು ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ 6ನೇ ಸಲ 200ಕ್ಕೂ ಅಧಿಕ ರನ್‌ಗಳ ಸಾಧನೆ ಮಾಡಿದೆ. ಕಳೆದ ವರ್ಷ ಮುಂಬೈ ಇಂಡಿಯನ್ಸ್ ಮತ್ತು ಪ್ರಸಕ್ತ ಸಾಲಿನಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ಸಹ ಇದೇ ಸಾಧನೆ ಮಾಡಿದೆ.

ಯಶ್ ದಯಾಳ್ ಪುನರಾಗಮನ...

ಕೊನೆಯ ಓವರ್‌ನಲ್ಲಿ ಚೆನ್ನೈಗೆ ಪ್ಲೇ-ಆಫ್‌ಗೆ ಪ್ರವೇಶಿಸಲು 17 ರನ್‌ಗಳ ಅವಶ್ಯಕತೆಯಿತ್ತು. ಯಶ್ ದಯಾಳ್ ಎಸೆದ ಮೊದಲ ಎಸೆತದಲ್ಲೇ ಧೋನಿ ಸಿಕ್ಸರ್ ಗಳಿಸಿದರು. ಆದರೂ ಛಲ ಬಿಡದ ಎಡಗೈ ವೇಗಿ ದಯಾಳ್, ನಂತರದ ಎಸೆತದಲ್ಲಿ ಮಹಿ ವಿಕೆಟ್ ಪಡೆದು ಚೆನ್ನೈ ಬ್ಯಾಟರ್‌ಗಳನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾದರು. ಆ ಮೂಲಕ ಆರ್‌ಸಿಬಿಗೆ ರೋಚಕ ಗೆಲುವು ಒದಗಿಸಿಕೊಟ್ಟರು. ಈ ಹಿಂದೆ ಯಶ್ ದಯಾಳ್ ಓವರ್‌ವೊಂದರಲ್ಲಿ ರಿಂಕು ಸಿಂಗ್ ಸತತ ಐದು ಸಿಕ್ಸರ್ ಗಳಿಸಿದ್ದರು. ಆದರೆ ಆರ್‌ಸಿಬಿ ಪರ ದಯಾಳ್ ಭರ್ಜರಿ ಪುನರಾಗಮನವನ್ನೇ ಮಾಡಿದ್ದು, ಯುವ ಆಟಗಾರರಿಗೆ ಸ್ಫೂರ್ತಿಯಾಗಿದ್ದಾರೆ. ಯಶ್ ದಯಾಳ್ ಅವರನ್ನು ಕೊಂಡಾಡಿರುವ ನಾಯಕ ಫಫ್ ಡುಪ್ಲೆಸಿ, ತಮಗೆ ಲಭಿಸಿರುವ ಪಂದ್ಯಶ್ರೇಷ್ಠ ಗೌರವವನ್ನು ದಯಾಳ್‌ಗೆ ಅರ್ಪಿಸಿದ್ದಾರೆ.

ಮಹೇಂದ್ರ ಸಿಂಗ್ ಧೋನಿ ಹಾಗೂ ವಿರಾಟ್ ಕೊಹ್ಲಿ

ಮಹೇಂದ್ರ ಸಿಂಗ್ ಧೋನಿ ಹಾಗೂ ವಿರಾಟ್ ಕೊಹ್ಲಿ

(ಪಿಟಿಐ ಚಿತ್ರ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT