ಮಂಗಳವಾರ, ಮಾರ್ಚ್ 21, 2023
25 °C

ತೆಲುಗು ನಟನ ಪುತ್ರಿ ಮತ್ತು ನಟಿ ಸೇರಿ ಪಾರ್ಟಿ ಮಾಡುತ್ತಿದ್ದ 144 ಜನರ ಬಂಧನ

ಐಎಎನ್ಎಸ್‌ Updated:

ಅಕ್ಷರ ಗಾತ್ರ : | |

ಹೈದರಾಬಾದ್: ಹೈದರಾಬಾದ್‌ನಲ್ಲಿ ನಿಗದಿತ ಸಮಯವನ್ನು ಮೀರಿ ಪಬ್‌ನಲ್ಲಿ ಪಾರ್ಟಿ ಮಾಡುತ್ತಿದ್ದ ಆರೋಪದ ಮೇರೆಗೆ ಟಾಲಿವುಡ್ ನಟ ನಾಗ ಬಾಬು ಅವರ ಪುತ್ರಿ ಮತ್ತು ನಟಿ ನಿಹಾರಿಕಾ ಕೊನಿಡೇಲಾ ಹಾಗೂ ಗಾಯಕ ರಾಹುಲ್ ಸಿಪ್ಲಿಗುಂಜ್ ಸೇರಿದಂತೆ 144 ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಐಷಾರಾಮಿ ಬಂಜಾರಾ ಹಿಲ್ಸ್‌ನಲ್ಲಿರುವ ರಾಡಿಸನ್ ಬ್ಲು ಹೋಟೆಲ್‌ನ ಪಬ್‌ ಮೇಲೆ ಮುಂಜಾನೆ 3 ಗಂಟೆ ಸುಮಾರಿಗೆ ಹೈದರಾಬಾದ್ ಸಿಟಿ ಪೊಲೀಸ್‌ನ ಟಾಸ್ಕ್ ಫೋರ್ಸ್ ಸಿಬ್ಬಂದಿ ದಾಳಿ ನಡೆಸಿದ್ದಾರೆ. ಹೋಟೆಲ್ ಆವರಣದಲ್ಲಿ ಕೊಕೇನ್ ಸೇರಿ ಇತರೆ ನಿಷೇಧಿತ ವಸ್ತುಗಳು ಪತ್ತೆಯಾಗಿವೆ.

ಪಾರ್ಟಿ ಮಾಡುತ್ತಿದ್ದವರಲ್ಲಿ ಆಂಧ್ರಪ್ರದೇಶ ಪೊಲೀಸ್‌ನ ಮಾಜಿ ಮಹಾನಿರ್ದೇಶಕರ ಪುತ್ರಿ ಮತ್ತು ತೆಲುಗು ದೇಶಂ ಪಕ್ಷಕ್ಕೆ ಸೇರಿದ ಸಂಸದರ ಪುತ್ರ ಹಾಗೂ ಇತರೆ ಪ್ರಸಿದ್ಧ ವ್ಯಕ್ತಿಗಳ ಮಕ್ಕಳು ಸೇರಿದ್ದಾರೆ.

ದಾಳಿಯ ವೇಳೆ ಪಾರ್ಟಿಯಲ್ಲಿ ಭಾಗವಹಿಸಿದ್ದವರು ಎಸೆದಿದ್ದ ಕೆಲವು ಕೊಕೇನ್ ಪಟ್ಟಣಗಳು ಲಭ್ಯವಾಗಿವೆ. ಪಾರ್ಟಿಯಲ್ಲಿದ್ದವರನ್ನು ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ.

'ಡ್ರಗ್ಸ್ ಮುಕ್ತ ಹೈದರಾಬಾದ್' ಅಭಿಯಾನದ ಅಡಿಯಲ್ಲಿ ಪೊಲೀಸರು ಬಂಧಿಸಿರುವವರಲ್ಲಿ ಗಾಯಕ ಹಾಗೂ ಬಿಗ್ ಬಾಸ್ ತೆಲುಗು ರಿಯಾಲಿಟಿ ಶೋನ ರಾಹುಲ್ ಸಿಪ್ಲಿಗುಂಜ್ ಕೂಡ ಸೇರಿದ್ದಾರೆ. ಈ ಅಭಿಯಾನದ ಗೀತೆಯನ್ನು ಕೂಡ ಇವರು ಹಾಡಿದ್ದರು.

ಈ ಕುರಿತು ನಾಗಬಾಬು ಅವರು ವಿಡಿಯೊ ಹೇಳಿಕೆ ನೀಡಿದ್ದು, 'ಪಾರ್ಟಿಯಲ್ಲಿ ಹಾಜರಿದ್ದ ತಮ್ಮ ಪುತ್ರಿ ನಿಹಾರಿಕ ಅವರು ಯಾವುದೇ ತಪ್ಪು ಮಾಡಿಲ್ಲ. ಆಕೆಯದ್ದು ತಪ್ಪಿಲ್ಲ ಎಂಬುದನ್ನು ಪೊಲೀಸರು ಕೂಡ ಸ್ಪಷ್ಟಪಡಿಸಿದ್ದಾರೆ. ನಮ್ಮ ಮನಸಾಕ್ಷಿಗೆ ಅದು ತಿಳಿದಿದೆ' ಎಂದಿದ್ದಾರೆ.

ಅಲ್ಲದೆ, ಸಾಮಾಜಿಕ ಮಾಧ್ಯಮಗಳು ಅಥವಾ ಇತರೆ ಯಾವುದೇ ಮಾಧ್ಯಮಗಳ ಮೂಲಕ ತಮ್ಮ ಪುತ್ರಿ ನಿಹಾರಿಕ ಬಗ್ಗೆ ಯಾವುದೇ ರೀತಿಯ 'ಅನಗತ್ಯ ಊಹಾಪೋಹಗಳನ್ನು' ಹಬ್ಬಿಸದಂತೆ ಮನವಿ ಮಾಡಿದ್ದಾರೆ.

ಬಂಧಿತರಲ್ಲಿ 33 ಮಹಿಳೆಯರು ಮತ್ತು ಪಬ್‌ನ ಕೆಲವು ಸಿಬ್ಬಂದಿ ಸೇರಿದ್ದಾರೆ. ನಿಗದಿತ ಸಮಯ ಮೀರಿ ಪಾರ್ಟಿಗೆ ಅವಕಾಶ ನೀಡುವ ಮೂಲಕ ಪಬ್ ನಿಯಮಗಳನ್ನು ಉಲ್ಲಂಘಿಸುತ್ತಿರುವುದು ಕಂಡುಬಂದಿದೆ. ಈ ಪಬ್ ನಿಷೇಧಿತ ಪದಾರ್ಥಗಳ ಪೂರೈಕೆಗೆ ಕುಖ್ಯಾತವಾಗಿದೆ ಮತ್ತು ಹೋಟೆಲ್ ಅತಿಥಿಗಳಿಗೆ ನೀಡಲು ಮಾತ್ರ ಪರವಾನಗಿ ಹೊಂದಿದ್ದರೂ, ಹೊರಗಿನವರಿಗೆ ಮದ್ಯವನ್ನು ನೀಡುತ್ತಿದೆ ಎಂದು ವರದಿಯಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು