ಮಂಗಳವಾರ, ಸೆಪ್ಟೆಂಬರ್ 21, 2021
23 °C

ಆದಿತ್ಯ ಠಾಕ್ರೆಗೆ ಡ್ರಗ್ಸ್‌ ಜಾಲದೊಂದಿಗೆ ನಂಟು: ನಟಿ ಕಂಗನಾ ರನೌತ್ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಮಹಾರಾಷ್ಟ್ರ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ನಟಿ ಕಂಗನಾ ರನೌತ್‌, ಮುಖ್ಯಮಂತ್ರಿ ಅವರ ಮಗ ಸಚಿವ ಆದಿತ್ಯ ಠಾಕ್ರೆ ಅವರಿಗೆ ಡ್ರಗ್ಸ್‌ ಜಾಲದೊಂದಿಗೆ ಸಂಪರ್ಕವಿದೆ ಎಂದು ಆರೋಪಿಸಿದ್ದಾರೆ. 

‘ಮೂವಿ ಮಾಫಿಯಾ, ಸುಶಾಂತ್‌ ಸಿಂಗ್‌ ರಜಪೂತ್‌ ಕೊಲೆ ಮತ್ತು ಮಾದಕ ದ್ರವ್ಯ ದಂಧೆಯ ಕುರಿತು ಬಯಲಿಗೆಳೆಯಲು ನಾನು ಮುಂದಾಗಿದ್ದೇ ಮುಖ್ಯಮಂತ್ರಿ ಅವರಿಗೆ ಸಹಿಸಿಕೊಳ್ಳಲಾಗಲಿಲ್ಲ. ಏಕೆಂದರೆ, ಅವರ ಪ್ರೀತಿಯ ಮಗ ಆದಿತ್ಯ ಠಾಕ್ರೆ ಈ ಜಾಲದೊಂದಿಗೆ ಸ್ನೇಹ ಹೊಂದಿದ್ದಾರೆ. ಹಾಗಾಗಿ ನಾನು ಮಾಡಿರುವುದು ಅವರಿಗೆ ದೊಡ್ಡ ಅಪರಾಧ ಎನಿಸಿದೆ. ಈಗ ಅವರು ನನ್ನನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರಯತ್ನಿಸುತ್ತಿದ್ದಾರೆ. ಸರಿ ನೋಡೋಣ, ಯಾರು ಯಾರನ್ನು ಬಿಕ್ಕಟ್ಟಿಗೆ ಸಿಲುಕಿಸುತ್ತಾರೆ’ ಎಂದು ಕಂಗನಾ ಟ್ವೀಟ್‌ ಮೂಲಕ ಸವಾಲು ಹಾಕಿದ್ದಾರೆ.  

‘ಒಂದು ವೇಳೆ ದೇವೇಂದ್ರ ಫಡಣವೀಸ್‌ ಅವರು ಮುಖ್ಯಮಂತ್ರಿ ಆಗಿದ್ದರೆ, ಮಾಫಿಯಾ ಪ್ರಿಯರಾದ ಭ್ರಷ್ಟ ಸೋನಿಯಾ ಸೇನಾ ಆಡಳಿತದಲ್ಲಿ ಇಲ್ಲದಿದ್ದರೆ, ಮುಂಬೈ ಪೊಲೀಸರು ತಮ್ಮ ಕರ್ತವ್ಯವನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದರು. ನ್ಯಾಯಕ್ಕಾಗಿ ಮಾಧ್ಯಮದವರು ಮತ್ತು ಜನರು ಅಭಿಯಾನವನ್ನು ಪ್ರಾರಂಭಿಸುವ ಅಗತ್ಯ ಇರಲಿಲ್ಲ’ ಎಂದು ಹೇಳಿದ್ದಾರೆ. 

ವೈ–ಪ್ಲಸ್‌ ಶ್ರೇಣಿ ಭದ್ರತೆ ಹಿಂಪಡೆಯಲು ಕಾಂಗ್ರೆಸ್‌ ಆಗ್ರಹ: ‘ಡ್ರಗ್ಸ್‌ ಜಾಲದೊಂದಿಗೆ ನಂಟು ಹೊಂದಿರುವವರ ಹೆಸರನ್ನು ಹೇಳಲು ಬಾಲಿವುಡ್‌ ನಟಿ ಕಂಗನಾ ರನೌತ್‌ ವಿಫಲವಾಗಿದ್ದಾರೆ. ಹಾಗಾಗಿ ಕೇಂದ್ರ ಸರ್ಕಾರ ಅವರಿಗೆ ನೀಡಿರುವ ವೈ–ಪ್ಲಸ್‌ ಶ್ರೇಣಿಯ ಭದ್ರತೆಯನ್ನು ಹಿಂಪಡೆಯಬೇಕು’ ಎಂದು ಕಾಂಗ್ರೆಸ್‌ ಆಗ್ರಹಿಸಿದೆ.

‘ಮಹಾರಾಷ್ಟ್ರವನ್ನು ಅವಮಾನಿಸುವ ಜೊತೆಗೆ ಮುಂಬೈ ಪೊಲೀಸರ ಸಾಮರ್ಥ್ಯ ಕುರಿತು ಅನುಮಾನ ವ್ಯಕ್ತಪಡಿಸಿರುವ ಕಂಗನಾ ಅವರ ಫ್ಲಾಪ್‌ ಶೋ ಕೊನೆಗೊಂಡಿದೆ. ಕಂಗನಾ ಅವರು ಡ್ರಗ್ಸ್‌‌ ಮಾಫಿಯಾದ ಕುರಿತು ಸಂಪೂರ್ಣ ಮಾಹಿತಿ ಇದೆ ಎಂದಿದ್ದರು. ಆದರೆ, ಯಾವುದನ್ನು ಬಹಿರಂಗಪಡಿಸಿಲ್ಲ. ಕಂಗನಾ ಅವರ ಭಾವೋದ್ರೇಕ ಆರೋಪಗಳ ಪ್ರಯೋಜನವನ್ನು ಬಿಜೆಪಿ ಪಡೆಯಲು ಪ್ರಯತ್ನಿಸಿದರೂ ಅದರಿಂದ ಉಪಯೋಗವಾಗಲಿಲ್ಲ’ ಎಂದು ಮುಂಬೈ ಪ್ರಾದೇಶಿಕ ಕಾಂಗ್ರೆಸ್ ಸಮಿತಿಯ ವಕ್ತಾರ ಮತ್ತು ಮಾಧ್ಯಮ ಉಸ್ತುವಾರಿ ಆರ್.ಕೆ. ತ್ರಿವೇದಿ ಟೀಕಿಸಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು