ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಳೆ 'ಭಾರತ್‌ ಬಂದ್‌'; ಸಾರಿಗೆ, ಮಾರುಕಟ್ಟೆ ಸ್ಥಗಿತ?

Last Updated 25 ಮಾರ್ಚ್ 2021, 14:35 IST
ಅಕ್ಷರ ಗಾತ್ರ

ನವದೆಹಲಿ: ರೈತ ಸಂಘಟನೆಗಳು ಶುಕ್ರವಾರ (ಮಾರ್ಚ್‌ 26ರಂದು) ಸಂಪೂರ್ಣ 'ಭಾರತ್‌ ಬಂದ್‌ಗೆ' ಕರೆ ನೀಡಿರುವುದರಿಂದ ಸಂಚಾರ ವ್ಯವಸ್ಥೆ ಹಾಗೂ ಮಾರುಕಟ್ಟೆ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರಬಹುದಾಗಿದೆ. ಚುನಾವಣೆ ಘೋಷಣೆಯಾಗಿರುವ ನಾಲ್ಕು ರಾಜ್ಯಗಳು ಹಾಗೂ ಪುದುಚೇರಿಯಲ್ಲಿ ಬಹುತೇಕ ಬಂದ್ ಆಚರಣೆ ಇರುವುದಿಲ್ಲ.

ಕೇಂದ್ರ ಸರ್ಕಾರದ ಹೊಸ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯ ಗಡಿ ಭಾಗಗಳಲ್ಲಿ ನಡೆಸುತ್ತಿರುವ ರೈತರ ಪ್ರತಿಭಟನೆ ನಾಲ್ಕು ತಿಂಗಳು ಪೂರ್ಣಗೊಳಿಸುತ್ತಿರುವ ಬೆನ್ನಲ್ಲೇ ರೈತ ಸಂಘಟನೆಗಳ ಒಕ್ಕೂಟ ಬಂದ್‌ಗೆ ಕರೆ ನೀಡಿದೆ.

ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ದೇಶದಾದ್ಯಂತ ಬೆಳಿಗ್ಗೆ 6ರಿಂದ ಸಂಜೆ 6ರವರೆಗೂ ಶಾಂತಿಯುತ ಬಂದ್ ಆಚರಿಸಲಾಗುತ್ತದೆ ಎಂದು ಸಂಯುಕ್ತ ಕಿಸಾನ್‌ ಮೋರ್ಚಾ ಹೇಳಿದೆ.

ಮಾರುಕಟ್ಟೆಗಳು ಮುಚ್ಚಿರಲಿವೆ, ರೈಲು ಮತ್ತು ರಸ್ತೆ ಸಂಚಾರವನ್ನು ನಿರ್ಬಂಧಿಸಲಾಗುತ್ತದೆ ಎಂದು ರೈತ ಮುಖಂಡ ಬಲ್ಬೀರ್‌ ಸಿಂಗ್‌ ರಾಜೇವಾಲ್‌ ಹೇಳಿದ್ದಾರೆ. ಕಾರ್ಮಿಕ ಸಂಘಟನೆಗಳು, ಅಸಂಘಟಿತ ವಲಯ, ಸಾರಿಗೆ ಸೇರಿದಂತೆ ಹಲವು ಒಕ್ಕೂಟಗಳು ಭಾರತ್‌ ಬಂದ್‌ಗೆ ಬೆಂಬಲ ನೀಡಿರುವುದಾಗಿ ತಿಳಿಸಿದ್ದಾರೆ.

ಆದರೆ, ದೇಶದಾದ್ಯಂತ ಮಾರುಕಟ್ಟೆಗಳು ಕಾರ್ಯಾಚರಿಸಲಿವೆ ಎಂದು ಕಾನ್ಫೆಡೆರೇಷನ್‌ ಆಫ್‌ ಆಲ್‌ ಇಂಡಿಯಾ ಟ್ರೇಡರ್ಸ್‌ ಹೇಳಿದೆ.

ಚುನಾವಣೆ ನಡೆಯಲಿರುವ ತಮಿಳುನಾಡು, ಅಸ್ಸಾಂ, ಪಶ್ಚಿಮ ಬಂಗಾಳ, ಕೇರಳ ಹಾಗೂ ಪುದುಚೇರಿಯಲ್ಲಿ ಬಂದ್‌ ಆಚರಿಸದಂತೆ ಸಂಯುಕ್ತ ಕಿಸಾನ್ ಮೋರ್ಚಾ ಜನರಲ್ಲಿ ವಿನಂತಿಸಿದೆ.

ಪ್ರತಿಭಟನೆ ನಡೆಸುತ್ತಿರುವ ರೈತ ಸಂಘಟನೆಗಳು ಹಾಗೂ ಕೇಂದ್ರ ಸರ್ಕಾರದ ನಡುವೆ ಈವರೆಗೂ 11 ಸುತ್ತಿನ ಮಾತುಕತೆ ನಡೆದಿದ್ದು, ಸಮಸ್ಯೆ ಇತ್ಯರ್ಥವಾಗಿಲ್ಲ. ಹೊಸ ಕೃಷಿ ಕಾಯ್ದೆಗಳನ್ನು 12–18 ತಿಂಗಳ ವರೆಗೂ ಅಮಾನತಿನಲ್ಲಿ ಇಡುವ ಪ್ರಸ್ತಾಪವನ್ನು ಸರ್ಕಾರ ಜನವರಿಯಲ್ಲಿ ಮುಂದಿಟ್ಟಿತ್ತು. ರೈತ ಸಂಘಟನೆಗಳು ಆ ಪ್ರಸ್ತಾಪವನ್ನು ತಿರಸ್ಕರಿಸಿ ಪ್ರತಿಭಟನೆ ಮುಂದುವರಿಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT