ಶುಕ್ರವಾರ, ಮೇ 7, 2021
24 °C

ರೈತರ ಪ್ರತಿಭಟನೆ: ಸರ್ಕಾರ ಆಹ್ವಾನಿಸಿದರೆ ನಾವು ಮಾತುಕತೆಗೆ ಸಿದ್ಧ- ಟಿಕಾಯತ್

ಪಿಟಿಐ‌ Updated:

ಅಕ್ಷರ ಗಾತ್ರ : | |

Prajavani

ಗಾಜಿಯಾಬಾದ್‌: ‘ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿ ಗಡಿ ಪ್ರದೇಶಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಕೇಂದ್ರ ಸರ್ಕಾರ ಮಾತುಕತೆ ಆಹ್ವಾನಿಸಿದರೆ, ನಾವು ಅದಕ್ಕೆ ಸಿದ್ಧರಿದ್ದೇವೆ’ ಎಂದು ಬಿಕೆಯು ನಾಯಕ ರಾಕೇಶ್‌ ಟಿಕಾಯತ್ ಅವರು ತಿಳಿಸಿದ್ದಾರೆ.

‘ದೆಹಲಿ ಗಡಿ ಪ್ರದೇಶಗಳಾದ ಸಿಂಘು, ತಿಕ್ರಿ ಮತ್ತು ಗಾಜಿಪುರದಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಪ್ರತಿನಿಧಿಸುವ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಸಂಘಟನೆಯನ್ನು ಸರ್ಕಾರವು ಮಾತುಕತೆಗೆ ಆಹ್ವಾನಿಸಬೇಕು. ಹಾಗಿದ್ದಲ್ಲಿ ಮಾತ್ರ ಸರ್ಕಾರದೊಂದಿಗಿನ ಮಾತುಕತೆಯು ಪುನರಾರಂಭಗೊಳ್ಳಲಿದೆ’ ಎಂದು ಅವರು ಹೇಳಿದ್ದಾರೆ.

‘ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸಬೇಕು’ ಎಂಬ ನಮ್ಮ ಬೇಡಿಕೆಯಲ್ಲಿ ಯಾವುದೇ ಬದಲಾವಣೆಗಳಿಲ್ಲ. ಜನವರಿ 22ರಂದು ಮಾತುಕತೆ ಆಗಿತ್ತು. ಪುನಃ ಆ ಹಂತದಿಂದಲೇ ಮಾತುಕತೆ ಪುನರಾರಂಭಗೊಳಿಸಬೇಕು ಎಂದು ಬಿಕೆಯು ರಾಷ್ಟ್ರೀಯ ವಕ್ತಾರ ಧರ್ಮೇಂದ್ರ ಮಲಿಕ್ ಅವರು ಬಿಡುಗಡೆ ಮಾಡಿರುವ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ದೇಶದಲ್ಲಿ ಕೊರೊನಾ ಭೀತಿ ಹೆಚ್ಚುತ್ತಿದೆ. ಹಾಗಾಗಿ ಪ್ರತಿಭಟನೆ ನಿರತ ರೈತರೊಂದಿಗೆ ಮಾತುಕತೆಯನ್ನು ಮುಂದುವರಿಸಿ’ ಎಂದು ಹರಿಯಾಣದ ಗೃಹ ಸಚಿವ ಅನಿಲ್ ವಿಜ್‌ ಅವರು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರಿಗೆ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ ಬಿಕೆಯು ಈ ಹೇಳಿಕೆಯನ್ನು ಬಿಡುಗಡೆ ಮಾಡಿದೆ.

‘ಕೊರೊನಾ ಪ್ರಕರಣಗಳು ತೀವ್ರವಾಗಿ ಹೆಚ್ಚುತ್ತಿವೆ. ಹರಿಯಾಣದಲ್ಲಿ ಪರಿಸ್ಥಿತಿ ಹದಗೆಟ್ಟಿದೆ. ನನಗೆ ದೆಹಲಿಯ ಗಡಿಪ್ರದೇಶದಲ್ಲಿ ಪ್ರತಿಭಟಿಸುತ್ತಿರುವ ರೈತರ ಬಗ್ಗೆ ಚಿಂತೆಯಾಗುತ್ತಿದೆ’ ಎಂದು ಅನಿಲ್‌ ವಿಜ್‌ ಹೇಳಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು