ಗುರುವಾರ , ಮೇ 26, 2022
29 °C

ಬಿಹಾರ: ತೇಜಸ್ವಿ ರ‍್ಯಾಲಿಗೆ ಜನ ಸಮೂಹವೇ ಹರಿದುಬರುತ್ತಿದ್ದುದೇಕೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Tejashwi Yadav

ಪಟ್ನಾ: ಬಿಹಾರ ಚುನಾವಣೆಯ ಮತ ಎಣಿಕೆ ಆರಂಭವಾಗುವ ಮುನ್ನ ತೇಜಸ್ವಿ ಯಾದವ್ ಅವರ ಬೆಂಬಲಿಗರು ಮಾಡಿದ ಎರಡು ಕಾರ್ಯಗಳು -ಮೊದಲನೆಯದ್ದು ಅವರಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿದ್ದು. ಎರಡನೆಯದ್ದು  ಅವರನ್ನು  ಬಿಹಾರದ ನೂತನ ಮುಖ್ಯಮಂತ್ರಿಯಾಗಿ ಘೋಷಿಸಿದ್ದು.

ಆರ್‌ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ ಅವರ ಪುತ್ರ ತೇಜಸ್ವಿ ಯಾದವ್ ಬಿಹಾರ ಚುನಾವಣೆಯ ಮೂಲಕ ರಾಜಕೀಯ ವಲಯದಲ್ಲಿ ಸಾಕಷ್ಟು ಭರವಸೆಗಳನ್ನು ಹುಟ್ಟು ಹಾಕಿರುವ ನಾಯಕರಾಗಿ ಹೊರಹೊಮ್ಮಿದ್ದಾರೆ. 

ತೇಜಸ್ವಿಯವರ  ಪ್ರಚಾರ ಕಾರ್ಯಕ್ರಮಗಳಲ್ಲಿ ಸೇರುತ್ತಿರುವ ಜನ ಸಮೂಹದಿಂದಲೇ  ಅವರ ಜನಪ್ರಿಯತೆಯನ್ನು ಅಂದಾಜಿಸಬಹುದು. ನಿತೀಶ್ ಕುಮಾರ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ತೇಜಸ್ವಿ ಅವರ ವಿರುದ್ಧ ಸದಾ ಟೀಕಾ  ಪ್ರಹಾರ ಮಾಡುತ್ತಿದ್ದು, 'ಜಂಗಲ್ ಕಾ ಯುವರಾಜ್' ಎಂದು ಕರೆದಿದ್ದರು. ಅದೇ ವೇಳೆ ತೇಜಸ್ವಿ ತಮ್ಮ ಚುನಾವಣಾ ಪ್ರಚಾರದಲ್ಲಿ ಬಿಹಾರದಲ್ಲಿನ ನಿರುದ್ಯೋಗ ಸಮಸ್ಯೆ, ಆರೋಗ್ಯ ಮತ್ತು ಶಿಕ್ಷಣ ವ್ಯವಸ್ಥೆಗಳ ಸುಧಾರಣೆ ಬಗ್ಗೆ ಮಾತನಾಡುವ ಮೂಲಕ ಯುವಜನರ ಗಮನ ಸೆಳೆದಿದ್ದರು.

ಬಹುತೇಕ ಚುನಾವಣಾ ರ‍್ಯಾಲಿಗಳಲ್ಲಿ ಅವರು ಆರ್‍‌ಜೆಡಿ ವಿರುದ್ಧ ಎನ್‍‌ಡಿಎ ನಡೆಸುತ್ತಿದ್ದ ಟೀಕೆ, ಆರೋಪಗಳಿಗೆ ಪ್ರತಿಕ್ರಿಯಿಸದೆ ಮತದಾರರ  ಸಮಸ್ಯೆಗಳನ್ನು ಆಲಿಸಿ ಅದಕ್ಕೆ ಪರಿಹಾರ ಒದಗಿಸುವ ಭರವಸೆ ನೀಡುತ್ತಿದ್ದರು. ಪ್ರತಿ ದಿನ 15 ರ‍್ಯಾಲಿಗಳಲ್ಲಿ ಭಾಗವಹಿಸುತ್ತಿದ್ದ ತೇಜಸ್ವಿ, ವಲಸೆ ಕಾರ್ಮಿಕರ  ಸಮಸ್ಯೆ, ನಿರುದ್ಯೋಗ ಸಮಸ್ಯೆಯ ಬಗ್ಗೆಯೇ ಮಾತನಾಡುತ್ತಿದ್ದರು.

ತೇಜಸ್ವಿ ರ‍್ಯಾಲಿಗಳಲ್ಲಿ ಜನರು ಭಾಗವಹಿಸುವುದನ್ನು ನೋಡಿ ನಿತೀಶ್ ಕುಮಾರ್ ಮತ್ತು ಮೋದಿಗೆ ತಲೆಬಿಸಿ ಆಗಿತ್ತು. ಅದೇ  ಹೊತ್ತಲ್ಲಿ ಆರ್‌ಜೆಡಿ ತೇಜಸ್ವಿ ಅವರಿಗೆ ಹೆಚ್ಚಿನ ಭದ್ರತೆ ನೀಡುವಂತೆ ಚುನಾವಣಾ ಆಯೋಗಕ್ಕೆ  ಪತ್ರಬರೆದಿತ್ತು ಎಂದು ಡೆಕ್ಕನ್ ಹೆರಾಲ್ಡ್ ಜತೆ ಮಾತನಾಡಿದ ಹಿರಿಯ ಪತ್ರಕರ್ತ ರಾಕೇಶ್ ಪಾಂಡೆ ಹೇಳಿದ್ದಾರೆ.

ಎನ್‌ಡಿಎ ಬಿಹಾರದಲ್ಲಿನ ಆರ್‌ಜೆಡಿ ಆಡಳಿತವನ್ನು ಜಂಗಲ್  ರಾಜ್ ಎಂದು ಹೇಳುತ್ತಲೇ ಇದ್ದರೂ ಆ ಆಡಳಿತ 15 ವರ್ಷಗಳ ಹಿಂದೆಯೇ ಮುಗಿದಿತ್ತು. ಆದರೆ ತೇಜಸ್ವಿ ಜನರ ಸಮಸ್ಯೆಗಳನ್ನು ಆಲಿಸಿದರು. ಅದೇ ಅವರ ರ‍್ಯಾಲಿಯ ಆಕರ್ಷಣೆಯೂ ಆಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು