ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲೆಯಲ್ಲಿ‌ ಭಾರತೀಯ‌ ಸೇನೆ: ಒತ್ತಡಕ್ಕೆ ಸಿಲುಕಿದ ಚೀನಾ

Last Updated 17 ಅಕ್ಟೋಬರ್ 2020, 4:29 IST
ಅಕ್ಷರ ಗಾತ್ರ

ನವದೆಹಲಿ: ವಾಸ್ತವ ನಿಯಂತ್ರಣ ರೇಖೆಯ ಕನಿಷ್ಠ 7 ಸ್ಥಳಗಳಲ್ಲಿ ಭಾರತೀಯ ಸೇನೆಯು ಈ ಹಿಂದೆ ಚೀನಾದ ವಶದಲ್ಲಿದ್ದ ಆಯಕಟ್ಟಿನ ಪ್ರದೇಶಗಳನ್ನು ತನ್ನ ಸುಪರ್ದಿಗೆ ತೆಗೆದುಕೊಂಡಿದೆ ಎಂದು ರಕ್ಷಣಾ ಇಲಾಖೆಯ ಉನ್ನತ ಮೂಲಗಳನ್ನು ಉಲ್ಲೇಖಿಸಿ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಚೀನಾ ಸರ್ಕಾರವನ್ನು ಮಾತುಕತೆಗೆ ಬಂದು ಕೂರುವಂತೆ ಮಾಡಲು ಮತ್ತು ಮಾತುಕತೆ ವೇಳೆ ತೆಗೆದುಕೊಳ್ಳುವ ನಿರ್ಣಯಗಳಿಗೆ ಚೀನಾ ಸೇನೆಯು ಬದ್ಧವಾಗಿರುವ ಮಾಡಲು ಇದೀಗ ಭಾರತ ಸರ್ಕಾರವು ಒತ್ತಡ ತಂತ್ರ ಅನುಸರಿಸಲು ಮುಂದಾಗಿದೆ. ಈ ಬೆಳವಣಿಗೆಯ ಬೆನ್ನಲ್ಲೇ ಸೇನೆಯ ಉನ್ನತ ವಲಯಗಳಲ್ಲಿ‘ಕುಚ್‌ ಭಿ ಹೋ ಸಕ್ತಾ ಹೈ, ವಿಶ್ವಾಸ್ ನಹಿ ಹೋತಾ ಹೈ ಚೀನಾ ಪರ್’ (ಚೀನಾ ಮೇಲೆ ವಿಶ್ವಾಸವಿಲ್ಲ, ಏನು ಬೇಕಾದರೂ ಆಗಬಹುದು) ಎಂಬ ಮಾತುಗಳೂ ಕೇಳಿಬರುತ್ತಿವೆ.

ಲಡಾಖ್‌ನಲ್ಲಿ ಈಗಾಗಲೇ ತಾಪಮಾನ ಶೂನ್ಯಡಿಗ್ರಿಗಿಂತ ಕೆಳಗೆ ಕುಸಿಯುತ್ತಿದೆ. ಬೆನ್ನುಮೂಳೆ ನಡುಗಿಸುವ ಲಡಾಖ್‌ನ ಚಳಿಗಾಲವನ್ನು ಭಾರತೀಯ ಸೈನಿಕರುಚೀನಾ ಗಡಿಯತ್ತ ಹದ್ದಿನ ಕಣ್ಣಿಟ್ಟೇ ಕಳೆಯಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ.

ಚೀನಾಗೆ ಅಚ್ಚರಿ ತಂದ ಭಾರತದ ನಡೆ

ಪಾಂಗೊಂಗ್‌ ತ್ಸೊ ಸರೋವರದ ದಕ್ಷಿಣ ದಂಡೆಯಲ್ಲಿ ಭಾರತೀಯ ಸೇನೆಯು ತಾನು ಸುಪರ್ದಿಗೆ ತೆಗೆದುಕೊಂಡಿರುವ ಶಿಖರಗಳಿಂದ ಹಿಂದೆ ಸರಿಯಬೇಕೆಂದು ಚೀನಾ ಪ್ರಬಲವಾಗಿ ಒತ್ತಾಯಿಸಿದೆ. ಲಡಾಖ್‌ನಲ್ಲಿ ಉದ್ಭವಿಸಿರುವ ಸಂಘರ್ಷ ಪರಿಸ್ಥಿತಿ ತಿಳಿಗೊಳಿಸುವ ಉದ್ದೇಶದಿಂದ ನಡೆಯುತ್ತಿರುವ ಮಾತುಕತೆಗಳಲ್ಲಿ ಏಪ್ರಿಲ್‌ನಲ್ಲಿ ಎರಡೂ ಸೇನೆಗಳು ಇದ್ಧ ಸ್ಥಳಗಳಿಗೆ ಹಿಂದಿರುಗಬೇಕೆಂಬ ಅಂಶವೂ ಪ್ರಮುಖವಾಗಿ ಚರ್ಚೆಗೆ ಬರುತ್ತಿದೆ.

ಭಾರತವು ವಾಸ್ತವ ನಿಯಂತ್ರಣ ರೇಖೆ ಎಂದು ಗುರುತಿಸಿರುವ ಹಲವು ಎಲ್ಲೆಗಳನ್ನು ಚೀನಾ ಪಡೆಗಳು ಪಾಂಗೊಂಗ್‌ ತ್ಸೊ ಸರೋವರದ ಉತ್ತರ ದಂಡೆಯಲ್ಲಿ ಅತಿಕ್ರಮಿಸಿವೆ. ಇದಕ್ಕೆ ಪ್ರತಿಯಾಗಿ ಭಾರತೀಯ ಸೇನೆಯೂ ಏಳು ಸ್ಥಳಗಳಲ್ಲಿ ವಾಸ್ತವ ನಿಯಂತ್ರಣ ರೇಖೆಯನ್ನು ದಾಟಿ ಮುಂದೆ ಹೋಗಿದೆ. ಭಾರತದಿಂದ ಇಂಥ ಪ್ರತಿನಡೆಯನ್ನು ಚೀನಾ ನಿರೀಕ್ಷಿಸಿರಲಿಲ್ಲ.

ಹೀಗಾಗಿ ಶಾಂತಿ ಮಾತುಕತೆಯನ್ನು ಗಂಭೀರವಾಗಿ ನಡೆಸಬೇಕಾದ ಮತ್ತು ಸಭೆಯಲ್ಲಿ ತೆಗೆದುಕೊಳ್ಳುವ ನಿರ್ಣಯಗಳಿಗೆ ಬದ್ಧವಾಗಿರಬೇಕಾದ ಒತ್ತಡ ಇದೀಗ ಚೀನಾ ಸರ್ಕಾರದ ಮೇಲೆ ನಿರ್ಮಾಣವಾಗಿದೆ.

‘ಪ್ರತಿ ಬಾರಿ ಭಾರತವೂ ಶಾಂತಿ ಮಾತುಕತೆಗೆ ಒತ್ತಾಯಿಸುತ್ತಿತ್ತು, ಚೀನಾ ಉದ್ಧಟತನದಿಂದ ಅಥವಾ ಉದಾರವಾದಿ ನಾಟಕದ ಧೋರಣೆಯೊಂದಿಗೆ ಸಭೆಯಲ್ಲಿ ಪಾಲ್ಗೊಳ್ಳುತ್ತಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಭಾರತೀಯ ಸೇನೆಯ ಹಿಡಿತವು ಪ್ರಬಲವಾಗಿರುವ ಕಾರಣದಿಂದಾಗಿ ಚೀನಾ ಇಂದಿಗೂ ಮಾತುಕತೆಯಿಂದ ಹಿಂದೆ ಸರಿಯುತ್ತಿಲ್ಲ. ಆಸಕ್ತಿಯಿಂದ ಮಾತುಕತೆ ಸಭೆಗಳಿಗೆ ಬರುತ್ತಿದೆ’ ಎಂದು ರಕ್ಷಣಾ ಇಲಾಖೆಯ ಉನ್ನತ ಮೂಲಗಳನ್ನು ಉಲ್ಲೇಖಿಸಿ ‘ಇಂಡಿಯನ್ ಎಕ್ಸ್‌ಪ್ರೆಸ್‌’ನ ಹಿರಿಯ ವರದಿಗಾರ ರವೀಶ್ ತಿವಾರಿ ಹೇಳಿದ್ದಾರೆ.

ಭಾರತೀಯ ಸೇನೆಯ ಕಣ್ಗಾವಲಿನಲ್ಲಿ ಚೀನಾದ ಮಾಲ್ಡೊ ನೆಲೆ

ಪಾಂಗೊಂಗ್‌ ತ್ಸೊ ದಕ್ಷಿಣ ದಂಡೆಯಲ್ಲಿ ಭಾರತೀಯ ಸೇನೆ ತನ್ನ ಸುಪರ್ದಿಗೆ ತೆಗೆದುಕೊಂಡು, ಕಾವಲು ಠಾಣೆಗಳನ್ನು ಸ್ಥಾಪಿಸಿರುವ ಗಿರಿಶಿಖರಗಳು ಸೈನಿಕ ಕಾರ್ಯತಂತ್ರದ ದೃಷ್ಟಿಯಿಂದ ಮಹತ್ವ ಪಡೆದಿವೆ. ಚೀನಾ ಪಡೆಗಳು ಭಾರತದ ಗಡಿಗೆ ಟ್ಯಾಂಕ್ ಸೇರಿದಂತೆ ಭಾರೀ ಸೇನಾ ವಾಹನಗಳು ಮತ್ತು ದೊಡ್ಡಮಟ್ಟದಲ್ಲಿ ಪದಾತಿದಳವನ್ನು ಮುನ್ನಡೆಸಬೇಕಾದಾಗ ಅನಿವಾರ್ಯವಾಗಿ ಸ್ಪಂಗೂರ್‌ ಬಯಲನ್ನು ಬಳಸಬೇಕು. ಈ ಬಯಲಿಗೆ ಸನಿಹದಲ್ಲಿರುವ ಮಾಲ್ಡೊದಲ್ಲಿ ಚೀನಾ ದೊಡ್ಡ ಸೈನಿಕ ನೆಲೆ ಹೊಂದಿದೆ.

ಭಾರತೀಯ ಸೇನೆ ಆಕ್ರಮಿಸಿಕೊಂಡಿರುವ ಗಿರಿಶಿಖರಗಳಿಂದ ಈ ಎರಡೂ ಸ್ಥಳಗಳೂ ಈಗ ನೇರವಾಗಿ ಭಾರತೀಯ ಸೇನೆಯ ಕಣ್ಗಾವಲು ಮತ್ತು ಪ್ರಹಾರ ಸಾಮರ್ಥ್ಯಕ್ಕೆ ಸಿಕ್ಕಿವೆ. ಸೈನಿಕ ಕಾರ್ಯಾಚರಣೆ ಮತ್ತು ಕಾರ್ಯತಂತ್ರದ ದೃಷ್ಟಿಯಿಂದ ಚೀನಾ ಸಂಕಷ್ಟಕ್ಕೆ ಸಿಲುಕಿದೆ. ಹೀಗಾಗಿಯೇ ಚೀನಾ ಸಂಘರ್ಷದಿಂದ ಹಿಂದೆ ಸರಿದು ಮಾತುಕತೆಯಿಂದ ಸಮಸ್ಯೆ ಪರಿಹರಿಸಿಕೊಳ್ಳಲು ಮುಂದಾಗಿದೆ ಎನ್ನಲಾಗಿದೆ.

‘ದಕ್ಷಿಣ ದಂಡೆಯಿಂದ ಭಾರತೀಯ ಸೇನೆ ಹಿಂದೆ ಸರಿಯಬೇಕು’ ಎಂದು ಈಚೆಗೆ ನಡೆದ 7ನೇ ಸುತ್ತಿನ ಉನ್ನತ ಸೇನಾಧಿಕಾರಿಗಳ ಮಾತುಕತೆಗಳಲ್ಲಿ ಚೀನಾ ಒತ್ತಾಯಿಸಿತ್ತು. ‘ಎರಡೂ ಸೇನಾಪಡೆಗಳು ಎರಡೂ ದಂಡೆಗಳಿಂದ ಒಂದೇ ಸಲಕ್ಕೆ ಹಿಂದೆ ಸರಿಯಬೇಕು’ ಎಂದು ಭಾರತ ಹೇಳಿತ್ತು.

ತಿಳಿಯಾಗುತ್ತಿಲ್ಲ ಅನುಮಾನ

ಗಡಿಯಲ್ಲಿ ಶಾಂತಿ ಸ್ಥಾಪಿಸುವ ಕುರಿತು ಚೀನಾದ ಬದ್ಧತೆಯ ಬಗ್ಗೆ ಭಾರತ ಸರ್ಕಾರದ ಅನುಮಾನ ಮುಂದುವರಿದಿದೆ. ರಷ್ಯಾ ರಾಜಧಾನಿ ಮಾಸ್ಕೊದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಎಸ್‌. ಜೈಶಂಕರ್ ಚೀನಾದ ಸಹವರ್ತಿಗಳೊಂದಿಗೆ ಈ ಕುರಿತು ಚರ್ಚಿಸಿದ್ದರು.

ಮಾತುಕತೆ ವೇಳೆ ‘ಶಾಂತಿ ಸ್ಥಾಪನೆಗೆ ನಾನು ಬದ್ಧ’ ಎಂದು ಚೀನಾ ಹೇಳುತ್ತದೆ. ಆದರೆ ಗಡಿಯಲ್ಲಿ ಸೇನಾ ಜಮಾವಣೆ ಮುಂದುವರಿಸಿದೆ. ಚೀನಾ ಸರ್ಕಾರದ ಮಾತು ಮತ್ತು ನಡೆಯಲ್ಲಿ ಇರುವ ಈ ವ್ಯತ್ಯಾಸವು ಭಾರತ ಸರ್ಕಾರದಲ್ಲಿ ಅನುಮಾನಕ್ಕೆ ಕಾರಣವಾಗಿದೆ.

‘ಕುಚ್‌ ಭಿ ಹೋ ಸಕ್ತಾ ಹೈ, ವಿಶ್ವಾಸ್ ನಹಿ ಹೋತಾ ಹೈ ಚೀನಾ ಪರ್’ ಎಂಬ ಮಾತು ರಕ್ಷಣಾ ಇಲಾಖೆಯ ಉನ್ನತ ವಲಯದಲ್ಲಿ ಕೇಳಿಬರುತ್ತಿದೆ. ಚೀನಾ ಗಡಿಯಲ್ಲಿ ಭಾರತೀಯ ಸೇನೆಯು ನಿಯೋಜನೆ ಹೆಚ್ಚಿಸಿದ್ದು, ಚಳಿಗಾಲದುದ್ದಕ್ಕೂ ಸೈನಿಕರನ್ನು ಅಲ್ಲಿಯೇ ನೆಲೆಗೊಳಿಸಲು ನಿರ್ಧರಿಸಿದೆ. ಅಗತ್ಯ ಪ್ರಮಾಣದಲ್ಲಿ ಯುದ್ಧೋಪಕರಣ ಮತ್ತು ಅಗತ್ಯ ವಸ್ತುಗಳ ಪೂರೈಕೆಗೆ ಸತತ ಪ್ರಯತ್ನ ನಡೆಸಿದೆ.

ಚೀನಾ ಸರ್ಕಾರದ ಮಾತು ಮತ್ತು ಚೀನಾ ಸೇನೆಯ ಕೃತಿಯ ನಡುವಣ ವ್ಯತ್ಯಾಸ ಕಡಿಮೆಯಾಗಿ, ಭಾರತೀಯ ಸೇನೆಯ ಉನ್ನತ ಅಧಿಕಾರಿಗಳಲ್ಲಿ ಚೀನಾ ನಡೆಯ ಬಗ್ಗೆ ವಿಶ್ವಾಸ ಮೂಡದ ಹೊರತು ಪರಿಸ್ಥಿತಿ ತಿಳಿಯಾಗದು. ಭಾರತೀಯ ಸೇನೆಯು ತಾನು ಅತಿಕ್ರಮಿಸಿಕೊಂಡಿರುವ ಗಿರಿಶಿಖರಗಳಿಂದ ಸುಲಭಕ್ಕೆ ಹಿಂದೆ ಸರಿಯದು ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT