ಕೆ.ಜಿ.ಎಫ್ 2 ಸಿನಿಮಾ ಪ್ರಭಾವ: ಒಂದು ಪ್ಯಾಕ್ ಸಿಗರೇಟ್ ಸೇದಿ ಅಸ್ವಸ್ಥಗೊಂಡ ಬಾಲಕ

ಹೈದರಾಬಾದ್: ಜನಪ್ರಿಯ ಕೆ.ಜಿ.ಎಫ್ ಚಾಪ್ಟರ್–2 ಸಿನಿಮಾವನ್ನು ಮೂರು ಭಾರಿ ನೋಡಿ, ನಾಯಕ ನಟ ‘ರಾಕಿ ಬಾಯ್‘ (ಯಶ್)ನಿಂದ ಪ್ರಭಾವಿತನಾಗಿ ಬಾಲಕನೊಬ್ಬ ಒಂದು ಪ್ಯಾಕ್ ಸಿಗರೇಟ್ ಸೇದಿ ಅಸ್ವಸ್ಥಗೊಂಡಿದ್ದಾನೆ.
ಶನಿವಾರ ಅಸ್ವಸ್ಥಗೊಂಡ ಬಾಲಕನನ್ನು ಪೋಷಕರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಯಶಸ್ವಿ ಚಿಕಿತ್ಸೆ ಬಳಿಕ ಬಾಲಕ ಚೇತರಿಸಿಕೊಂಡಿದ್ದು ಆರೋಗ್ಯವಾಗಿದ್ದಾನೆ ಎಂದು ಪೋಷಕರು ಹೇಳಿದ್ದಾರೆ.
ಸಿನಿಮಾದಲ್ಲಿ ನಾಯಕನ ಪ್ರಭಾವದಿಂದಾಗಿ ಬಾಲಕ ಸಿಗರೇಟ್ ಸೇದಿದ್ದಾನೆ. ನಂತರ ಗಂಟಲು ನೋವು, ಕೆಮ್ಮಿನಿಂದ ಬಳಲುತ್ತಿದ್ದ ಬಾಲಕನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಬಾಲಕನಿಗೆ ಸೂಕ್ತ ಚಿಕಿತ್ಸೆ ಹಾಗೂ ಆಪ್ತ ಸಮಾಲೋಜನೆ ನೀಡಲಾಗಿದ್ದು ಬಾಲಕ ಆರೋಗ್ಯವಾಗಿದ್ದಾನೆ ಎಂದು ವೈದ್ಯರು ಹೇಳಿದ್ದಾರೆ.
ಈ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಶ್ವಾಸಕೋಶ ತಜ್ಞ ಡಾ.ರೋಹಿತ್ ರೆಡ್ಡಿ ಪಥೂರಿ, ಸಿನಿಮಾಗಳು ನಮ್ಮ ಸಮಾಜದಲ್ಲಿ ಹೆಚ್ಚು ಪ್ರಭಾವ ಬೀರುತ್ತವೆ. ಸಿಗರೇಟು ಸೇದುವುದು, ತಂಬಾಕು ಜಗಿಯುವುದು, ಮದ್ಯಪಾನದಂತಹ ದೃಶ್ಯಗಳನ್ನು ವೈಭವೀಕರಿಸಬಾರದು. ಆದ್ದರಿಂದ ಸಿನಿಮಾ ನಟರು, ಚಿತ್ರ ನಿರ್ಮಾಪಕರು ಇಂತಹ ವಿಚಾರಗಳಲ್ಲಿ ಎಚ್ಚರಿಕೆವಹಿಸಬೇಕು ಎಂದು ಹೇಳಿದ್ದಾರೆ.
ಈ ಘಟನೆಯಲ್ಲಿ ಬಾಲಕ 'ರಾಕಿ ಭಾಯ್' ಪಾತ್ರದಿಂದ ಸುಲಭವಾಗಿ ಪ್ರಭಾವಿತನಾಗಿ ಸಿಗರೇಟ್ ಸೇದಿ ನಂತರ ಅನಾರೋಗ್ಯಕ್ಕೆ ತುತ್ತಾಗಿದ್ದಾನೆ ಎಂದು ಡಾ.ರೋಹಿತ್ ರೆಡ್ಡಿ ಮಾಹಿತಿ ನೀಡಿದ್ದಾರೆ.
ಕೆಜಿಎಫ್–2 ಸಿನಿಮಾವನ್ನು ಪ್ರಶಾಂತ್ ನೀಲ್ ನಿರ್ದೇಶಿಸಿದ್ದಾರೆ. ವಿಜಯ್ ಕಿರಗಂದೂರು ಈ ಚಿತ್ರವನ್ನು ದೊಡ್ಡ ಪ್ರಮಾಣದಲ್ಲಿ ನಿರ್ಮಿಸಿದ್ದಾರೆ. ಯಶ್, ಸಂಜಯ್ ದತ್, ರವೀನಾ ಟಂಡನ್ ಮತ್ತು ಶ್ರೀನಿಧಿ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ರವಿ ಬಸ್ರೂರ್ ಸಂಗೀತ ನೀಡಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.