ಭಾನುವಾರ, ಸೆಪ್ಟೆಂಬರ್ 26, 2021
25 °C

ಈಶ್ವರಪ್ಪ ಹೆಸರನ್ನು ‘ಮೇರಾ ನಾಮ್ ಜೋಕರ್’ ಎಂದು ಬದಲಾಯಿಸಿಕೊಳ್ಳಲಿ: ಹರಿಪ್ರಸಾದ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಸಚಿವ ಕೆ.ಎಸ್‌. ಈಶ್ವರಪ್ಪ ತಮ್ಮ ಹೆಸರನ್ನು ಮೇರಾ ನಾಮ್ ಜೋಕರ್ ಎಂದು ಬದಲಾಯಿಸಿಕೊಳ್ಳಲಿ. ಅವರು ದ್ವೇಷದ ಭಾಷಣ ಮಾಡಿದ್ದಾರೆ. ಅದು ಈಶ್ವರಪ್ಪ ತಪ್ಪಲ್ಲ. ಅವರು ಕಲಿತ ನಾಗಪುರ ಯುನಿವರ್ಸಿಟಿ ಹೇಳಿಕೊಟ್ಟ ಪಾಠ’ ಎಂದು ವಿಧಾನ ಪರಿಷತ್‌ ಕಾಂಗ್ರೆಸ್‌ ಸದಸ್ಯ ಬಿ.ಕೆ. ಹರಿಪ್ರಸಾದ್‌ ಟೀಕಿಸಿದರು.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ‘ಉಪ ಮುಖ್ಯಮಂತ್ರಿ ಆಗಬೇಕೆಂದು ಈಶ್ವರಪ್ಪ ಎಷ್ಟೆಲ್ಲಾ ಕಾರ್ಯಾಚರಣೆ ಮಾಡಿದ್ದರು. ಉಪ ಮುಖ್ಯಮಂತ್ರಿ ಆಗದೇ ಇರುವುದರಿಂದ ಅವರಿಗೆ ಹುಚ್ಚು ಹಿಡಿದಿದೆ. ಆದಷ್ಟು ಬೇಗ ಅವರನ್ನು ನಿಮ್ಹಾನ್ಸ್​ಗೆ ಸೇರಿಸಬೇಕು’ ಎಂದು ವ್ಯಂಗ್ಯವಾಡಿದರು

‘ಈಶ್ವರಪ್ಪ ತಮ್ಮ ಮನೆಯಲ್ಲೇ ನೋಟು ಲೆಕ್ಕ ಮಾಡುವ ಮೆಷಿನ್‌ ಇಟ್ಟುಕೊಂಡಿದ್ದಾರೆ. ಆದರೂ ಅವರಿಗೆ ಮುಖ್ಯಮಂತ್ರಿ ಅಥವಾ ಉಪಮುಖ್ಯಮಂತ್ರಿ ಆಗಲು ಸಾಧ್ಯವಾಗಲಿಲ್ಲ. ಹೀಗಾಗಿ, ಅವರು ಹತಾಶೆಯಿಂದ ಮಾತನಾಡಿದ್ದಾರೆ. ಅವರನ್ನು ಸಚಿವ ಸಂಪುಟದಿಂದ ಉಚ್ಛಾಟಿಸಬೇಕು’ ಎಂದು ಆಗ್ರಹಿಸಿದರು.

‘ಪ್ರಚೋದನಕಾರಿ ಭಾಷಣ ಮಾಡಿದ ಈಶ್ವರಪ್ಪ ವಿರುದ್ಧ ತಕ್ಷಣ ಪೊಲೀಸರು ಎಫ್ಐಆರ್ ದಾಖಲಿಸಬೇಕು. ರಾಜ್ಯದ ಪೊಲೀಸರು ನಿಷ್ಕ್ರಿಯ ಆಗಿದ್ದಾರೆ. ಸ್ವಯಂ ಪ್ರೇರಿತ ಮೊಕದ್ದಮೆ ದಾಖಲಿಸಬೇಕು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈಶ್ವರಪ್ಪ ಅವರ ಹೇಳಿಕೆಯನ್ನು ಸಮರ್ಥಿಸಿಕೊಳ್ಳುತ್ತಾರೆ ಎಂದು ಅಂದುಕೊಂಡಿರಲಿಲ್ಲ ಎಂದರು.

‘ಇಂದಿರಾ ಕ್ಯಾಂಟೀನ್ ಹೆಸರು ಬದಲಾಯಿಸುವುದು ಹೀನ ಕುತಂತ್ರ, ಕೆಟ್ಟ ರಾಜಕಾರಣ ಮಾಡುತ್ತಿದ್ದಾರೆ.  ಬಿಜೆಪಿಯಿಂದ ವಾಜಪೇಯಿ, ಸಾವರ್ಕರ್, ದೀನ್ ದಯಾಳ್ ಉಪಾಧ್ಯಾಯ ಹೆಸರಿಡಲಾಗಿದೆ. ಹೆಸರು ಬದಲಿಸಿದರೆ ಆ ಹೆಸರಿಗೆ ಮಸಿ ಬಳಿಯುತ್ತೇವೆ. ಅವರ ನಾಮಫಲಕಗಳು ಎಲ್ಲೆಲ್ಲಿ ಇರುತ್ತೋ, ಅಲ್ಲೆಲ್ಲ ನಾವು ಮಸಿ ಬಳಿದು ಹೋರಾಟ ಮಾಡಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

‘ಮೊದಲು ಬಿಜೆಪಿಯವರು ಗೇಮ್ ಚೇಂಜರ್ ಎಂದು ಅಧಿಕಾರಕ್ಕೆ ಬಂದರು. ಈಗ ನೇಮ್ ಚೇಂಜರ್ ಆಗಿದ್ದಾರೆ. ಇಂದಿರಾ ಗಾಂಧಿ, ರಾಜೀವ್ ಗಾಂಧಿ ಹೆಸರು ಬಿಜೆಪಿಯವರು ಬದಲಾಯಿಸಬಹುದು. ಆದರೆ, ಈ ನೆಲದ ಮೇಲೆ ಬಿದ್ದ ಹೋರಾಟಗಾರರ ರಕ್ತ ಅಳಿಸಲು ಯಾರಿಗೂ ಸಾಧ್ಯವಿಲ್ಲ. ಅವರು ಎಷ್ಟು ದೂರ ಹೋಗುತ್ತಾರೊ ಹೋಗಲಿ ನೋಡೋಣ’ ಎಂದು ಹೇಳಿದರು.

‘ಇಂದಿರಾ ಕ್ಯಾಂಟೀನ್ ಮುಚ್ಚಿಸಲು ಬಿಜೆಪಿಯವರು ಮೊದಲಿಂದಲೂ ತಂತ್ರ ಮಾಡುತ್ತಿದ್ದರು. ಹೀಗಾಗಿ, ಹಲ್ಲಿ, ಜಿರಲೆ ಹಾಕುವ ಕೆಲಸ ಮಾಡುತ್ತಿದ್ದರು. ಇಂದಿರಾ ಕ್ಯಾಂಟೀನ್ ಮುಚ್ಚಿಸಲು ಏನು ಬೇಕಾದರೂ ಮಾಡುತ್ತಾರೆ’ ಎಂದೂ ದೂರಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು