ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳ ವಿಧಾನಸಭಾ ಚುನಾವಣೆ: ‘ಸಿಪಿಎಂ-–ಆರ್‌ಎಸ್‌ಎಸ್‌ ಒಳಮೈತ್ರಿ’

ಚುನಾವಣೆ ಉದ್ದೇಶದಿಂದ ಶ್ರೀ ಎಂಗೆ ಭೂಮಿ ಮಂಜೂರು: ಕಾಂಗ್ರೆಸ್ ಆರೋಪ
Last Updated 3 ಮಾರ್ಚ್ 2021, 20:20 IST
ಅಕ್ಷರ ಗಾತ್ರ

ತಿರುವನಂತಪುರ: ಯೋಗಿ ಶ್ರೀ ಎಂ ಅವರ ಸತ್ಸಂಗ ಫೌಂಡೇಷನ್‌ಗೆ ತಿರುವನಂತಪುರದಲ್ಲಿ ನಾಲ್ಕು ಎಕರೆ ಭೂಮಿಯನ್ನು ಭೋಗ್ಯಕ್ಕೆ ನೀಡುವ ಕೇರಳ ಸರ್ಕಾರದ ನಿರ್ಧಾರವು ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ. ಚುನಾವಣೆಯನ್ನು ಎದುರಿಸಲು ಆಡಳಿತಾರೂಢ ಸಿಪಿಎಂ, ಆರ್‌ಎಸ್‌ಎಸ್‌ ಜತೆ ಕೈಜೋಡಿಸಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಯೋಗ ಕೇಂದ್ರ ನಡೆಸಲು ತಿರುವನಂತಪುರದ ಬಳಿ 4 ಎಕರೆ ಜಾಗ ಬೇಕು ಎಂದು ಶ್ರೀ ಎಂ ಅವರು ಈಚೆಗಷ್ಟೇ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಈ ಮನವಿಯನ್ನು ಸರ್ಕಾರ ಕಳೆದ ವಾರ ಪುರಸ್ಕರಿಸಿತ್ತು. 4 ಎಕರೆ ಜಾಗವನ್ನು 10 ವರ್ಷಗಳ ಅವಧಿಗೆ ಭೋಗ್ಯಕ್ಕೆ ಮಂಜೂರು ಮಾಡಿತ್ತು. ಈ ಜಾಗವನ್ನು ಯೋಗ ಕೇಂದ್ರ ನಡೆಸಲು ಮಾತ್ರ ಬಳಸಬೇಕು ಎಂಬ ಷರತ್ತನ್ನು ಸರ್ಕಾರ ಹಾಕಿದೆ.

ಸರ್ಕಾರದ ಈ ನಿರ್ಧಾರದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ, ಕಾಂಗ್ರೆಸ್ ಅಭಿಯಾನ ಆರಂಭಿಸಿದೆ.

ಆಡಳಿತಾರೂಢ ಎಲ್‌ಡಿಎಫ್‌ನಲ್ಲಿ ಪ್ರಧಾನ ಪಕ್ಷವಾಗಿರುವ ಸಿಪಿಎಂ ಮತ್ತು ಆರ್‌ಎಸ್ಎಸ್‌ ಮಧ್ಯೆ ಶಾಂತಿಮಾತುಕತೆಗೆ ಶ್ರೀ ಎಂ ಅವರು ಮಧ್ಯಸ್ಥಿಕೆ ವಹಿಸಿದ್ದರು. ಸಿಪಿಎಂ ಮತ್ತು ಆರ್‌ಎಸ್‌ಎಸ್‌ ಕಾರ್ಯಕರ್ತರ ಹತ್ಯೆಗಳನ್ನು ನಿಲ್ಲಿಸುವ ಉದ್ದೇಶದಿಂದ ಈ ಶಾಂತಿ ಮಾತುಕತೆ ನಡೆಸಲಾಗಿತ್ತು. ಸಿಪಿಎಂ-ಆರ್‌ಎಸ್‌ಎಸ್‌-ಬಿಜೆಪಿ ಕೈಜೋಡಿಸುವಲ್ಲಿ ಶ್ರೀ ಎಂ ಅವರು ಮಧ್ಯಸ್ಥಿಕೆ ವಹಿಸಿದ್ದಾರೆ. ಹೀಗಾಗಿಯೇ ಸರ್ಕಾರ ಅವರಿಗೆ ಜಾಗವನ್ನು ಮಂಜೂರು ಮಾಡಿದೆ.ಆರ್‌ಎಸ್‌ಎಸ್‌ಗೆ ಹತ್ತಿರವಾಗುವ ಉದ್ದೇಶದಿಂದಲೇ ಸರ್ಕಾರ ಈ ಕ್ರಮ ತೆಗೆದುಕೊಂಡಿದೆ ಎಂದು ವಿರೋಧ ಪಕ್ಷದ ನಾಯಕ ರಮೇಶ್ ಚೆನ್ನಿತ್ತಲ ಆರೋಪಿಸಿದ್ದಾರೆ.

ಈ ಆರೋಪವನ್ನು ಸಿಪಿಎಂ ಅಲ್ಲಗೆಳೆದಿದೆ. ಶ್ರೀ ಎಂ ಅವರು ಸಹ ಈ ಆರೋಪವನ್ನು ನಿರಾಕರಿಸಿದ್ದಾರೆ.

ಕ್ರೈಸ್ತರ ಮತ ಸೆಳೆಯಲು ಆರ್‌ಎಸ್‌ಎಸ್‌-ಬಿಜೆಪಿ ತಂತ್ರ: ಕೇರಳದಲ್ಲಿ ಕ್ರೈಸ್ತರ ಮತಗಳನ್ನು ಸೆಳೆಯಲು ಆರ್‌ಎಸ್‌ಎಸ್‌-ಬಿಜೆಪಿ ಸಿದ್ಧತೆ ನಡೆಸಿವೆ. ಈ ಸಂಬಂಧ ಈಗಾಗಲೇ ಕೇರಳದ ಪ್ರಮುಖ ಚರ್ಚ್‌ಗಳ ಜತೆ ಆರ್‌ಎಸ್‌ಎಸ್‌-ಬಿಜೆಪಿ ನಾಯಕರು ಮಾತುಕತೆ ನಡೆಸಿದ್ದಾರೆ. ಮಲಂಕರ ಚರ್ಚ್‌, ಆರ್‌ಎಸ್‌ಎಸ್‌ ನಾಯಕರನ್ನು ಬುಧವಾರ ಮಾತುಕತೆಗೆಕರೆದಿತ್ತು.

***

ಜಾಗ ನೀಡಿ ಎಂದು ಶ್ರೀ ಎಂ ಅವರು ಮನವಿ ಮಾಡಿ ಒಂದು ತಿಂಗಳೂ ಕಳೆದಿಲ್ಲ. ಆದರೆ ಪಿಣರಾಯಿ ವಿಜಯನ್ ಅವರ ಸರ್ಕಾರವು ಅತ್ಯಂತ ಕ್ಷಿಪ್ರವಾಗಿ ಜಮೀನು ಮಂಜೂರು ಮಾಡಿದೆ

- ವಿ.ಟಿ.ಬಲರಾಂ, ಕಾಂಗ್ರೆಸ್ ಶಾಸಕ

***

ಶ್ರೀ ಎಂ ಅವರೇ ಮಾತುಕತೆಯನ್ನು ಆರಂಭಿಸಿದ್ದರು. ಆರ್‌ಎಸ್‌ಎಸ್‌ ಮತ್ತು ಬಿಜೆಪಿ ಜತೆ ಕೈಜೋಡಿಸುವ ಮಾತುಕತೆಯಾಗಿರಲಿಲ್ಲ

- ಪಿ.ಜಯರಾಜನ್, ಸಿಪಿಎಂ ಹಿರಿಯ ನಾಯಕ

***

ಆ ಮಾತುಕತೆಗಳಲ್ಲಿ ಯಾವುದೇ ರಾಜಕೀಯ ಕಾರ್ಯಸೂಚಿ ಇರಲಿಲ್ಲ, ಅದು ಶಾಂತಿ ಮಾತುಕತೆಯಾಗಿತ್ತು. ನಮಗೆ ಜಮೀನು ಮಂಜೂರು ಮಾಡುವಲ್ಲಿ ಯಾವುದೇ ರಾಜಕೀಯ ನಡೆದಿಲ್ಲ

- ಎಂ, ಸತ್ಸಂಗ ಪ್ರತಿಷ್ಠಾನದ ಸಂಸ್ಥಾಪಕ

****

ದಿನದ ಬೆಳವಣಿಗೆ

*ಪಶ್ಚಿಮ ಬಂಗಾಳದಲ್ಲಿ ನೀಡುತ್ತಿರುವ ಕೋವಿಡ್‌-19 ಲಸಿಕೆಗಳ ಬಾಟಲಿ, ಬಾಕ್ಸ್‌, ಲಸಿಕೆ ಪ್ರಮಾಣಪತ್ರ ಮತ್ತು ಬ್ಯಾನರ್‌ಗಳ ಮೇಲೆ ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರವಿದೆ. ಇದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ ಎಂದು ಟಿಎಂಸಿಯು ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಲಸಿಕೆ ಕಾರ್ಯಕ್ರಮವು ಚುನಾವಣೆ ಘೋಷಣೆಯಾಗುವುದಕ್ಕೆ ಮುನ್ನವೇ ಆರಂಭವಾಗಿದೆ. ಹೀಗಾಗಿ ಅದು ನೀತಿ ಸಂಹಿತೆಯ ಉಲ್ಲಂಘನೆ ಅಲ್ಲ ಎಂದು ಬಿಜೆಪಿ ಹೇಳಿದೆ

*ಮೊದಲ ಹಂತದಲ್ಲಿ ಚುನಾವಣೆ ಎದುರಿಸಲಿರುವ ರಾಜ್ಯಗಳಲ್ಲಿ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಬಿಜೆಪಿ ಕಾರ್ಯಕಾರಿಣಿಯು ಗುರುವಾರ ಸಭೆ ನಡೆಸಲಿದೆ. ಮಾರ್ಚ್‌ 27ರಂದು ಅಸ್ಸಾಂ ಮತ್ತು ಪಶ್ಚಿಮ ಬಂಗಾಳದಲ್ಲಿ ನಡೆಯಲಿರುವ ಮೊದಲ ಹಂತದ ಚುನಾವಣೆಗೆ ಅಭ್ಯರ್ಥಿಗಳನ್ನು ಈ ಸಭೆಯಲ್ಲಿ ಅಂತಿಮಗೊಳಿಸಲಾಗುತ್ತದೆ

*ಅಸ್ಸಾಂನ 47 ಕ್ಷೇತ್ರಗಳಿಗೆ ಮಾರ್ಚ್‌ 27ರಂದು ನಡೆಯಲಿರುವ ಮೊದಲ ಹಂತದ ಚುನಾವಣೆಗೆ ಅಧಿಸೂಚನೆ ಹೊರಡಿಸಿದ ಚುನಾವಣಾ ಆಯೋಗ. ಅಸ್ಸಾಂನ ಉತ್ತರ ಮತ್ತು ಈಶಾನ್ಯದ ಜಿಲ್ಲೆಗಳಲ್ಲಿ ಮತದಾನ ನಡೆಯಲಿದೆ. 80 ಲಕ್ಷಕ್ಕೂ ಹೆಚ್ಚು ಮತದಾರರು ಈ ಹಂತದಲ್ಲಿ ತಮ್ಮ ಹಕ್ಕು ಚಲಾಯಿಸಲಿದ್ದಾರೆ

*ಅಸ್ಸಾಂ ಚುನಾವಣೆಯಲ್ಲಿ ಮಿತ್ರಪಕ್ಷಗಳ ಜತೆ ಸೀಟು ಹಂಚಿಕೆ ಸಂಬಂಧ ಬಿಜೆಪಿ ನಾಯಕರು ಸಭೆ ನಡೆಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ದೆಹಲಿಯ ನಿವಾಸದಲ್ಲಿ ಸಭೆ ನಡೆದಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT