ಮಂಗಳವಾರ, ಮಾರ್ಚ್ 21, 2023
23 °C

ಕೇಂದ್ರದ ಕೃಷಿ ಕಾಯ್ದೆಗಳಿಗೆ ಪ್ರತಿಯಾಗಿ 3 ಮಸೂದೆಗಳನ್ನು ಪರಿಚಯಿಸಿದ ಮಹಾರಾಷ್ಟ್ರ

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ಮಹಾರಾಷ್ಟ್ರದ ಶಿವಸೇನೆ ನೇತೃತ್ವದ ಮಹಾ ವಿಕಾಸ್ ಅಘಾಡಿ(ಎಂವಿಎ) ಸರ್ಕಾರವು ಮಂಗಳವಾರ ವಿಧಾನಸಭೆಯಲ್ಲಿ ಕೃಷಿ, ಸಹಕಾರ, ಆಹಾರ ಮತ್ತು ನಾಗರಿಕ ಸರಬರಾಜಿಗೆ ಸಂಬಂಧಿಸಿದ ಮೂರು ತಿದ್ದುಪಡಿ ಮಸೂದೆಗಳನ್ನು ಪರಿಚಯಿಸಿದೆ.

ತೀವ್ರ ವಿರೋಧ ವ್ಯಕ್ತವಾಗುತ್ತಿರುವ ಕೇಂದ್ರವು ಜಾರಿಗೆ ತಂದಿರುವ ಹೊಸ ಕೃಷಿ ಕಾನೂನುಗಳಿಗೆ ಪ್ರತಿಯಾಗಿ ಈ ಮಸೂದೆಗಳನ್ನು ಜಾರಿಗೆ ತರಲು ಉದ್ದೇಶಿಸಲಾಗಿದೆ.

ವ್ಯಾಪಾರಿಗಳೊಂದಿಗಿನ ಕೃಷಿ ಒಪ್ಪಂದ, ಸಕಾಲದಲ್ಲಿ ಬಾಕಿ ಪಾವತಿ, ರೈತರಿಗೆ ಕಿರುಕುಳ ನೀಡಿದರೆ ಮೂರು ವರ್ಷಗಳ ಜೈಲು ಶಿಕ್ಷೆ ಮತ್ತು ₹ 5 ಲಕ್ಷ ದಂಡ ಅಥವಾ ಎರಡೂ ಶಿಕ್ಷೆ, ಕೃಷಿ ಉತ್ಪನ್ನಗಳಿಗೆ ಎಂಎಸ್‌ಪಿ ದರಕ್ಕಿಂತ ಹೆಚ್ಚಿನ ಮೊತ್ತ ನಿಗದಿಪಡಿಸುವ ನಿಯಮವನ್ನು ಮಸೂದೆಗಳು ಹೊಂದಿದೆ. ಉತ್ಪಾದನೆ, ಪೂರೈಕೆ, ವಿತರಣೆಯನ್ನು ನಿಯಂತ್ರಿಸಲು ಮತ್ತು ನಿಷೇಧಿಸಲು ಮತ್ತು ಅಗತ್ಯ ವಸ್ತುಗಳ ಮೇಲೆ ಸ್ಟಾಕ್ ಮಿತಿಗಳನ್ನು ಹೇರಲು ರಾಜ್ಯ ಸರ್ಕಾರಕ್ಕೆ ಅಧಿಕಾರ ನೀಡುವ ನಿಬಂಧನೆಗಳೂ ಇವೆ.

ಕೇಂದ್ರ ಕೃಷಿ ಕಾಯ್ದೆಗಳನ್ನು ಚರ್ಚೆಯಿಲ್ಲದೆ ಅಂಗೀಕರಿಸಲಾಗಿದೆ ಮತ್ತು ಅವರ ಹಲವಾರು ನಿಬಂಧನೆಗಳು ರಾಜ್ಯ ಸರ್ಕಾರಗಳ ಹಕ್ಕುಗಳನ್ನು ಅತಿಕ್ರಮಿಸುತ್ತವೆ ಎಂದು ಕಂದಾಯ ಸಚಿವ ಬಾಲಾಸಾಹೇಬ್ ಥೋರತ್ ಹೇಳಿದರು. ‘ರಾಜ್ಯ ಸರ್ಕಾರವು ಕಾನೂನುಗಳನ್ನು ಮಾಡುವ ಹಕ್ಕನ್ನು ಹೊಂದಿದೆ ಮತ್ತು ರೈತ ವಿರೋಧಿಯಾಗಿರುವ ಕೇಂದ್ರ ಕೃಷಿ ಕಾನೂನುಗಳಿಗೆ ತಿದ್ದುಪಡಿಗಳನ್ನು ಸೂಚಿಸಲು ನಾವು ಬಯಸುತ್ತೇವೆ’ಎಂದು ಅವರು ಹೇಳಿದರು.

ಮಹಾರಾಷ್ಟ್ರ ಸರ್ಕಾರದ ತಿದ್ದುಪಡಿ ಮಸೂದೆಗಳು

* ಅಗತ್ಯ ಸರಕುಗಳು (ತಿದ್ದುಪಡಿ ಮಸೂದೆ)
* ರೈತರ ಸಬಲೀಕರಣ ಮತ್ತು ರಕ್ಷಣೆ ಮಸೂದೆ
* ಬೆಲೆ ಖಾತರಿ; ಕೃಷಿ ಸಂಬಂಧಿತ ಒಪ್ಪಂದಗಳು (ಮಹಾರಾಷ್ಟ್ರ ತಿದ್ದುಪಡಿ ಮಸೂದೆ) ಮತ್ತು ಕೇಂದ್ರ ಸರ್ಕಾರದ ರೈತರ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ತಿದ್ದುಪಡಿ ಮಸೂದೆ.

ಮಸೂದೆಗಳ ಬಗ್ಗೆ ಸಲಹೆಗಳು ಮತ್ತು ಆಕ್ಷೇಪಣೆಗಳಿಗಾಗಿ ಎರಡು ತಿಂಗಳ ಕಾಲ ಸಾರ್ವಜನಿಕವಾಗಿ ಚರ್ಚೆಗೆ ಅವಕಾಶ ನೀಡಲಾಗಿದೆ.

ಕರಡು ಮಸೂದೆಗಳನ್ನು ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಕ್ಯಾಬಿನೆಟ್ ಉಪಸಮಿತಿ ಸಿದ್ಧಪಡಿಸಿದೆ. ಕರಡು ಮಸೂದೆಗಳು ಎರಡು ತಿಂಗಳವರೆಗೆ ಸಾರ್ವಜನಿಕ ವಲಯದಲ್ಲಿರುತ್ತವೆ. ಈ ಸಮಯದಲ್ಲಿ ಜನರು ಮಸೂದೆಗಳ ಕುರಿತು ಚರ್ಚೆಗಳು ಮತ್ತು ಡಿಬೆಟ್‌ಗಳನ್ನು ನಡೆಸಬಹುದು ಎಂದು ಪವಾರ್ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು