ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳದ ತಟ್ಟೆಕಾಡ್‌ನಲ್ಲಿ ಹೊಸ ಬಗೆಯ ಚಿಮ್ಮುವ ಕಪ್ಪೆ ಪತ್ತೆ

ಕೇರಳದ ತಟ್ಟೆಕಾಡ್‌ನಲ್ಲಿ ಪತ್ತೆ
Last Updated 23 ಜೂನ್ 2021, 21:15 IST
ಅಕ್ಷರ ಗಾತ್ರ

ಬೆಂಗಳೂರು: ಹೊಸ ಜಾತಿಯ ಚಿಮ್ಮುವ ಕಪ್ಪೆಯೊಂದನ್ನು ಕೇರಳದ ತಟ್ಟೆಕಾಡ್‌ ಪಕ್ಷಿಧಾಮದ ಸಮೀಪದಲ್ಲಿ ಸಂಶೋಧಕರು ಪತ್ತೆ ಮಾಡಿದ್ದಾರೆ.

ಜೂವಲಾಜಿಕಲ್‌ ಸರ್ವೇ ಆಫ್‌ ಇಂಡಿಯಾ, ಬೆಂಗಳೂರಿನ ಮೌಂಟ್‌ ಕಾರ್ಮೆಲ್‌ ಕಾಲೇಜು ಮತ್ತು ಭುವನೇಶ್ವರದ ನ್ಯಾಷನಲ್‌ ಇನ್ಸ್‌ಟಿಟ್ಯೂಟ್‌ ಆಫ್‌ ಸೈನ್ಸ್‌ ಎಜುಕೇಷನ್‌ ರೀಸರ್ಚ್‌ (ನೈಸರ್‌) ತಂಡ ಜಂಟಿಯಾಗಿ ಈ ಅಪರೂಪದ ಕಪ್ಪೆಯನ್ನು ಪತ್ತೆ ಮಾಡಿವೆ.

ಇದಕ್ಕೆ ಈಯುಫೆಲಿಕ್ಟೀಸ್‌ ಕೇರಳ ಎಂದು ನಾಮಕರಣ ಮಾಡಲಾಗಿದೆ. ಕೇರಳದಲ್ಲಿ ಜೀವ ವೈವಿಧ್ಯತೆ ಅಗಾಧವಾಗಿರುವ ಕಾರಣಕ್ಕೆ ಈ ಹೆಸರನ್ನು ಇಡಲಾಗಿದೆ. ಇದು ಈ ಪ್ರದೇಶದ ವಿಶಿಷ್ಟ ಕಪ್ಪೆಗಳ ತಳಿಗಳ ಪೈಕಿ ಒಂದಾಗಿದೆ. ಈ ಕುರಿತ ಅಧ್ಯಯನದ ವರದಿಯು ನ್ಯೂಜಿಲೆಂಡ್‌ನ ಅಂತರರಾಷ್ಟ್ರೀಯ ಜರ್ನಲ್‌ ಝೂಟಾಕ್ಸ್‌ದಲ್ಲಿ ಪ್ರಕಟವಾಗಿದೆ.

ಕಪ್ಪೆಗಳ ವೈವಿಧ್ಯತೆ, ಅವುಗಳ ರೂಪ ಮತ್ತು ಗುಣ ಲಕ್ಷಣಗಳು, ವಂಶವಾಹಿ ಇತ್ಯಾದಿ ಅಂಶಗಳನ್ನು ಒಳಗೊಂಡ ಏಕೀಕೃತ ವರ್ಗೀಕರಣದ ಮೂಲಕ ಈ ಹೊಸ ಪ್ರಬೇಧದ ಕಪ್ಪೆಯ ಅಧ್ಯಯನ ನಡೆಸಲಾಗಿದೆ. ಆರಂಭಿಕ ಅಧ್ಯಯನದ ಪ್ರಕಾರ ಈ ಬಗೆಯ ಕಪ್ಪೆಗಳು ಕೇವಲ ಪಶ್ಚಿಮಘಟ್ಟದ ಪರ್ವತಗಳ ಕೆಳಗೆ ಇರುವ ಜಲಮೂಲಗಳ ಬಳಿ,ಅದರಲ್ಲೂ ಪಾಲಕ್ಕಾಡ್‌ ಸಮೀಪದಲ್ಲಿ ಮಾತ್ರ ಇರುತ್ತವೆ ಎಂದು ಹೇಳಲಾಗಿತ್ತು.

ಪಶ್ಚಿಮಘಟ್ಟ ಪ್ರದೇಶಗಳಲ್ಲಿ ಈ ಬಗೆಯ ಕಪ್ಪೆಗಳು ವ್ಯಾಪಕವಾಗಿ ಹಂಚಿ ಹೋಗಿರುವ ವ್ಯಾಪ್ತಿಯ ನಿಖರತೆ ಪಡೆಯಲು ಇನ್ನಷ್ಟು ಅಧ್ಯಯನಗಳು ಆಗಬೇಕಾಗಿದೆ. ಇವು ಸಿಹಿನೀರಿನ ಮೂಲಗಳ ಬಳಿ ವಾಸಿಸುವ ಕಾರಣ, ಅಂತಹ ನೀರಿನ ಮೂಲಗಳನ್ನು ರಕ್ಷಿಸುವುದರ ಜತೆಗೆ ಕಪ್ಪೆಗಳ ರಕ್ಷಣೆಯೂ ಆಗಬೇಕು. ಭಾರತದಲ್ಲಿ ಕಳೆದ ಎರಡು ಶತಮಾನಗಳಿಂದ(1799) ವಿವಿಧ ಬಗೆಯ ಚಿಮ್ಮುವ ಕಪ್ಪೆಗಳನ್ನು (ಸ್ಕಿಟ್ಟರಿಂಗ್ ಫ್ರಾಗ್‌) ಪತ್ತೆ ಮಾಡಲಾಗಿದೆ. ವರ್ಗೀಕರಣ ಮಾಡುವಲ್ಲಿ ಏರುಪೇರಾಗಿರುವುದರಿಂದ ಸಾಕಷ್ಟು ಗೊಂದಲಕ್ಕೆ ಕಾರಣವಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಈಯುಫೆಲಿಕ್ಟೀಸ್‌ ಕುಟುಂಬದ ಸದಸ್ಯ ಕಪ್ಪೆಗಳು ಅರೇಬಿಯಾ ಪರ್ಯಾಯ ದ್ವೀಪಗಳು, ಪಾಕಿಸ್ತಾನ, ನೇಪಾಳ, ಶ್ರೀಲಂಕಾ, ಮಯಾನ್ಮಾರ್‌ ಮತ್ತು ಥೈಲಾಂಡ್‌ಗಳಲ್ಲೂ ವ್ಯಾಪಿಸಿವೆ. ಹೊಸ ಅಧ್ಯಯನದಿಂದ ಈ ಪ್ರಬೇಧದ ಕಪ್ಪೆಗಳು ಭಾರತೀಯ ಮೂಲದ್ದೇ ಎಂಬುದು ಸಾಬೀತಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಕೇರಳದಲ್ಲಿ ಸುಮಾರು 180 ಜಾತಿಯ ಕಪ್ಪೆಗಳಿವೆ. ಇನ್ನೂ ಸಾಕಷ್ಟು ಹೊಸ ಬಗೆಯ ಕಪ್ಪೆಗಳು ಇರಬಹುದು, ಇವುಗಳ ಕುರಿತ ವಿವರಣೆ ಮತ್ತು ಗುಣಲಕ್ಷಣದ ಆಧಾರದಲ್ಲಿ ನಿರ್ಧರಿಸಬಹುದು ಎಂದೂ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT