ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ. ಬಂಗಾಳದತ್ತ ಒವೈಸಿ ಕಣ್ಣು: ಮುಸ್ಲಿಂ ಮತಗಳ ಮೇಲಿನ ಟಿಎಂಸಿ ಹಿಡಿತಕ್ಕೆ ಪೆಟ್ಟು?

Last Updated 14 ನವೆಂಬರ್ 2020, 14:21 IST
ಅಕ್ಷರ ಗಾತ್ರ

ಕೊಲ್ಕತ್ತಾ: ಬಿಹಾರ ವಿಧಾನಸಭೆ ಚುನಾವಣೆಯ ಐದು ಕ್ಷೇತ್ರಗಳನ್ನು ಗೆದ್ದು, ಹೊಸ ರಾಜಕೀಯ ಲೆಕ್ಕಾಚಾರ ಹುಟ್ಟುಹಾಕಿರುವ ಹೈದರಾಬಾದ್‌ ಮೂಲದ ಎಐಎಂಐಎಂ (ಅಖಿಲ ಭಾರತ ಮಜ್ಲಿಸ್-ಎ-ಇತ್ತ್ಹೇದುಲ್ ಮುಸ್ಲೀಮೀನ್) ಪಕ್ಷ ಈಗ ಪಶ್ಚಿಮ ಬಂಗಾಳದ ಕಡೆ ನೋಡುತ್ತಿದೆ. ಪಕ್ಷವು ಬಂಗಾಳದ ಚುನಾವಣೆ ಕಣಕ್ಕೆ ಇಳಿಯಲಿದೆ ಎಂಬ ಸಂಸದ ಒವೈಸಿ ಅವರ ಹೇಳಿಕೆಯು ಅಲ್ಲಿನ ರಾಜಕೀಯ ಸಮೀಕರಣವನ್ನು ಬದಲಿಸುವ ಮುನ್ಸೂಚನೆ ನೀಡಿದೆ.

2011 ರಲ್ಲಿ ಎಡರಂಗವನ್ನು ಅಧಿಕಾರದಿಂದ ಇಳಿಸಿದ ನಂತರ ಪಶ್ಚಿಮ ಬಂಗಾಳದಲ್ಲಿ ಅಲ್ಪಸಂಖ್ಯಾತ ಮತಗಳ ಏಕೈಕ ಫಲಾನುಭವಿಯಾಗಿ ಉಳಿದಿರುವುದು ಮಮತಾ ಬ್ಯಾನರ್ಜಿ ಅವರ ನೇತೃತ್ವದ ಟಿಎಂಸಿ ಮಾತ್ರ. ಒವೈಸಿ ಪಕ್ಷದ ಸ್ಪರ್ಧೆಯನ್ನು ಗಂಭೀರವಾಗಿ ಪರಗಣಿಸಿಲ್ಲ ಎಂದು ಬಿಂಬಿಸಿಕೊಳ್ಳಲು ಟಿಎಂಸಿ ಪ್ರಯತ್ನಿಸಿದೆ. 'ಮುಸ್ಲಿಮರ ಮೇಲೆ ಒವೈಸಿ ಪ್ರಭಾವವು ಹಿಂದಿ ಮತ್ತು ಉರ್ದು ಮಾತನಾಡುವ ಸಮುದಾಯಗಳಿಗೆ ಮಾತ್ರ ಸೀಮಿತವಾಗಿದೆ. ಅದು ಒಟ್ಟಾರೆ ಮತಗಳಲ್ಲಿ ಶೇ. 6ರಷ್ಟು ಮತಗಳನ್ನು ಮಾತ್ರ ಹೊಂದಿದೆ,' ಎಂದು ವಾದಿಸಿದೆ.

ಪಶ್ಚಿಮ ಬಂಗಾಳದ ಮತದಾರರಲ್ಲಿ ಶೇ. 30ರಷ್ಟು ಮತದಾರರು ಮುಸ್ಲಿಮರೇ ಆಗಿದ್ದಾರೆ. ಅತಿ ಹೆಚ್ಚು ಮುಸ್ಲಿಂ ಮತಗಳನ್ನು ಹೊಂದಿರುವ ರಾಜ್ಯಗಳಲ್ಲಿ ಪಶ್ಚಿಮ ಬಂಗಾಳ ಜಮ್ಮು ಕಾಶ್ಮೀರದ ನಂತರದ ಸ್ಥಾನದಲ್ಲಿದೆ.

294 ಕ್ಷೇತ್ರಗಳ ಪೈಕಿ ಸುಮಾರು 100-110 ಸ್ಥಾನಗಳಲ್ಲಿ ಅಲ್ಪಸಂಖ್ಯಾತರು, ಅದರಲ್ಲಿಯೂ ಮುಖ್ಯವಾಗಿ ಮುಸ್ಲೀಮರು 2019ರ ವರೆಗೆ ಟಿಎಂಸಿಗೆ ಭದ್ರಕೋಟೆಯಂತೆ ಬೆಂಬಲವಾಗಿ ನಿಂತಿದ್ದಾರೆ. ಬಹುತೇಕರು ಟಿಎಂಸಿ ಪರವಾಗಿಯೇ ಮತ ಚಲಾಯಿಸಿದ್ದಾರೆ. ಬಿಜೆಪಿ ಪ್ರವೇಶವನ್ನು ತಡೆಯುವ ಅತ್ಯಂತ ವಿಶ್ವಾಸಾರ್ಹ ಶಕ್ತಿ ಎಂದೇ ಈ ಮತಗಳನ್ನು ವಿಶ್ಲೇಷಿಸಲಾಗಿದೆ. ಆದರೆ, 'ಎಐಎಂಐಎಂ ಪ್ರವೇಶದೊಂದಿಗೆ, ಈ ನಂಬಿಕೆಗಳ ಬುಡ ಅಲುಗಾಡುವ ಸಾಧ್ಯತೆಗಳಿವೆ, ರಾಜಕೀಯ ಸಮೀಕರಣಗಳು ಬದಲಾಗುವ ಮುನ್ಸೂಚನೆ ಇದೆ,' ಎಂದು ಮುಸ್ಲಿಂ ನಾಯಕರು ಹೇಳಿದ್ದಾರೆ.

ಬಿಹಾರ ಚುನಾವಣೆಯ ಫಲಿತಾಂಶದಿಂದ ಉತ್ಸಾಹದಲ್ಲಿರುವ ಒವೈಸಿ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ ಮತ್ತು ಇತರ ರಾಜ್ಯಗಳ ಚುನಾವಣೆಯಲ್ಲಿ ಎಐಐಎಂಐಎಂ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.

'ಮಿಷನ್ ಪಶ್ಚಿಮ ಬಂಗಾಳ'ಕ್ಕಾಗಿ ತೆಲಂಗಾಣ ಮೂಲದ ಪಕ್ಷದ ಯೋಜನೆಯ ಬಗ್ಗೆ ಅದರ ರಾಷ್ಟ್ರೀಯ ವಕ್ತಾರ ಅಸಿಮ್ ವಾಕರ್ ಪಿಟಿಐ ಜೊತೆಗೆ ಮಾತನಾಡಿದ್ದಾರೆ. 'ನಾವು ಚುನಾವಣೆಗೆ ಸಜ್ಜಾಗಿದ್ದೇವೆ. ಈಗಾಗಲೇ ರಾಜ್ಯದ 23 ಜಿಲ್ಲೆಗಳ ಪೈಕಿ 22 ರಲ್ಲಿ ಘಟಕಗಳನ್ನು ಸ್ಥಾಪಿಸಿದ್ದೇವೆ,' ಎಂದು ಅವರು ಹೇಳಿದ್ದಾರೆ.

"ನಾವು ಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತೇವೆ. ನಾವು ನಮ್ಮ ಕಾರ್ಯತಂತ್ರವನ್ನು ಸಿದ್ಧಪಡಿಸುತ್ತಿದ್ದೇವೆ. ರಾಜ್ಯದ 23 ಜಿಲ್ಲೆಗಳಲ್ಲಿ 22 ರಲ್ಲಿ ಈಗಾಗಲೇ ನಮ್ಮ ಅಸ್ತಿತ್ವವನ್ನು ನಾವು ಖಾತ್ರಿಪಡಿಸಿಕೊಂಡಿದ್ದೇವೆ. ರಾಜಕೀಯ ಪಕ್ಷವಾಗಿ ನಾವು ರಾಜ್ಯದಲ್ಲಿ ಗಟ್ಟಿಯಾಗಿ ನೆಲೆಯೂರಲಿದ್ದೇವೆ,' ಎಂದು ವಾಕರ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕಳೆದ ವರ್ಷ ನವೆಂಬರ್‌ನಲ್ಲಿ ಉತ್ತರ ಬಂಗಾಳದಲ್ಲಿ ನಡೆದ ಎನ್‌ಆರ್‌ಸಿ ವಿರೋಧಿ ಸಮಾವೇಶದಲ್ಲಿ ಮಾತನಾಡುತ್ತಿದ್ದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, 'ಹೈದರಾಬಾದ್‌ನ ತೀವ್ರವಾದಿಗಳ ಬಗ್ಗೆ ಎಚ್ಚರದಿಂದ ಇರಬೇಕು,' ಎಂದು ಪರೋಕ್ಷವಾಗಿ ಅಸಾದುದ್ದೀನ್‌ ಒವೈಸ್‌ ಮೇಲೆ ವಾಗ್ದಾಳಿ ನಡೆಸಿದ್ದರು. ಮಮತಾ ಹೇಳಿಕೆಯಿಂದ ಆಕ್ರೋಶಗೊಂಡಿರುವ ಅಸಾದುದ್ದೀನ್‌ ಒವೈಸಿ ಅವರು, ಪಶ್ಚಿಮ ಬಂಗಾಳದತ್ತ ಕಣ್ಣು ನೆಟ್ಟಿದ್ದಾರೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT