ಶುಕ್ರವಾರ, ಮೇ 27, 2022
23 °C

ದೇಶದ ಸ್ವಾತಂತ್ರ್ಯ ಅವಮಾನಿಸಿದ ನಟಿ ಕಂಗನಾಗೆ ವರುಣ್‌ ಗಾಂಧಿ ತರಾಟೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ‘ಭಾರತಕ್ಕೆ 2014ರಲ್ಲಿ ಸ್ವಾತಂತ್ರ್ಯ ಸಿಕ್ಕಿದ್ದು, 1947ರಲ್ಲಿ ಸಿಕ್ಕಿದ್ದು ಭಿಕ್ಷೆ’ ಎಂದು ಹೇಳಿಕೆ ನೀಡಿರುವ ಬಾಲಿವುಡ್‌ ನಟಿ ಕಂಗನಾ ರನೌತ್‌ ವಿರುದ್ಧ ಬಿಜೆಪಿ ಸಂಸದ ವರುಣ್ ಗಾಂಧಿ ಗುರುವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ. ‘ಇದು ದೇಶ ವಿರೋಧಿ ಕೃತ್ಯ ಮತ್ತು ರನೌತ್‌ ಅವರನ್ನು ದೇಶವಿರೋಧಿ’ ಎನ್ನಬಹುದು ಎಂದು ಅವರು ಕಿಡಿಕಾರಿದ್ದಾರೆ.

‘ನಮ್ಮ ಸ್ವಾತಂತ್ರ್ಯ ಚಳವಳಿಯ ಅನನ್ಯ ತ್ಯಾಗವನ್ನು ಜನರು ಎಂದಿಗೂ ಮರೆಯಲು ಸಾಧ್ಯವಿಲ್ಲ. ಲಕ್ಷಾಂತರ ಜೀವಗಳು ಬಲಿಯಾದವು ಮತ್ತು ಲಕ್ಷಾಂತರ ಕುಟುಂಬಗಳು ನಾಶವಾದವು. ಇದನ್ನು ನಾಚಿಕೆಗೇಡಿನ ರೀತಿಯಲ್ಲಿ ಕೀಳಾಗಿಸುವುದನ್ನು ಕೇವಲ ಅಸಡ್ಡೆ ಅಥವಾ ನಿಷ್ಠುರ ಹೇಳಿಕೆಯಾಗಿ ಪರಿಗಣಿಸಿ ಕ್ಷಮಿಸಲು ಸಾಧ್ಯವಿಲ್ಲ’ ಎಂದು ಅವರು ಹೇಳಿದರು.

‘ಇದು ದೇಶವಿರೋಧಿ ಕೃತ್ಯ ಮತ್ತು ನಾವು ಅದನ್ನು ಹಾಗೆಯೇ ಕರೆಯಬೇಕು. ಹಾಗೆನ್ನದಿದ್ದರೆ ಸ್ವಾತಂತ್ರ್ಯಕ್ಕಾಗಿ ರಕ್ತ ಸುರಿಸಿದ ಎಲ್ಲರಿಗೂ ದ್ರೋಹ ಮಾಡಿದಂತಾಗುತ್ತದೆ. ಅಂದು ಸಿಕ್ಕಿದ ಸ್ವಾತಂತ್ರ್ಯದಿಂದಾಗಿ ನಾವು ಇಂದು ರಾಷ್ಟ್ರವಾಗಿ ಎತ್ತರದಲ್ಲಿ ಮತ್ತು ಸ್ವತಂತ್ರವಾಗಿ ನಿಂತಿದ್ದೇವೆ’ ಎಂದು ಸಂಸದರು ಹೇಳಿದರು.

ಕಂಗನಾ ಅವರನ್ನು ಕಟುವಾಗಿ ಟೀಕಿಸಿದ ವರುಣ್‌ ಗಾಂಧಿ, ‘ಒಮ್ಮೆ ಮಹಾತ್ಮ ಗಾಂಧಿಯವರ ತ್ಯಾಗವನ್ನು ಅವಮಾನಿಸಿ, ಕೆಲವೊಮ್ಮೆ ಅವರ ಹಂತಕನನ್ನು ಗೌರವಿಸಿ, ಈಗ ಮಂಗಲ್ ಪಾಂಡೆ, ರಾಣಿ ಲಕ್ಷ್ಮೀಬಾಯಿ, ಭಗತ್ ಸಿಂಗ್, ಚಂದ್ರಶೇಖರ್ ಆಜಾದ್, ನೇತಾಜಿ ಸುಭಾಷ್ ಚಂದ್ರ ಬೋಸ್ ಮತ್ತು ಲಕ್ಷಾಂತರ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗದ ಬಗ್ಗೆ ತಿರಸ್ಕಾರದ ಮಾತು ಆಡಿದ್ದೀರಿ. ಇದನ್ನು ಹುಚ್ಚುತನ ಅಥವಾ ದೇಶದ್ರೋಹ ಎನ್ನದೇ ಮತ್ತೇನೆಂದು ಕರೆಯಬೇಕು’ ಎಂದು ಹರಿಹಾಯ್ದಿದ್ದಾರೆ.

ಹೊಸ ಚಾನೆಲ್ ಕಾರ್ಯಕ್ರಮವೊಂದರಲ್ಲಿ ರನೌತ್ ಅವರ ಟೀಕೆಗಳ ಸಣ್ಣ ತುಣುಕನ್ನು ಪೋಸ್ಟ್ ಮಾಡಲಾಗಿದೆ. ಇದರಲ್ಲಿ ಅವರು ಹಿಂದಿಯಲ್ಲಿ, ‘ಅದು ಸ್ವಾತಂತ್ರ್ಯವಲ್ಲ ‘ಭೀಖ್’ (ಭಿಕ್ಷೆ) ಮತ್ತು ಸ್ವಾತಂತ್ರ್ಯವು 2014ರಲ್ಲಿ ಬಂದಿತು’ ಎಂದು ಹೇಳಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು