ಸಿದ್ದರಾಮಯ್ಯ ನೇತೃತ್ವದಲ್ಲೇ ಪಕ್ಷ ಅಧಿಕಾರಕ್ಕೆ: ಶಾಸಕ ಡಾ. ಯತೀಂದ್ರ

ಬೆಂಗಳೂರು/ ಮೈಸೂರು: ಮುಂದಿನ ಮುಖ್ಯಮಂತ್ರಿ ಯಾರು ಎನ್ನುವುದರ ಕುರಿತು ಬಹಿರಂಗ ಚರ್ಚೆ ಮಾಡದಂತೆ ಕಾಂಗ್ರೆಸ್ ಹೈಕಮಾಂಡ್ ತಾಕೀತು ಮಾಡಿದ್ದರೂ, ಈ ಬಗ್ಗೆ ಹೇಳಿಕೆ ನೀಡುವುದನ್ನು ಆ ಪಕ್ಷದ ಶಾಸಕರು, ಸ್ಥಳೀಯ ನಾಯಕರು ಮುಂದುವರಿಸಿದ್ದಾರೆ.
‘ಸಿದ್ದರಾಮಯ್ಯ ನೇತೃತ್ವದ ಸರ್ಕಾರವೇ ಬರಲಿದೆ’ ಎಂದು ಶಾಸಕ ಡಾ. ಯತೀಂದ್ರ ಹೇಳಿದ್ದರೆ, ‘ಜನಬೆಂಬಲ ಇರುವವರು ಮುಖ್ಯಮಂತ್ರಿ ಆಗುತ್ತಾರೆ’ ಎಂದು ಶಾಸಕ ಜಮೀರ್ ಅಹಮ್ಮದ್ ಖಾನ್ ಹೇಳಿಕೆ ನೀಡಿದ್ದಾರೆ.
ಮುಂದಿನ ಮುಖ್ಯಮಂತ್ರಿ ಯಾರು ಎಂಬ ಚರ್ಚೆಯ ಕುರಿತು ಶುಕ್ರವಾರ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ ವರುಣಾ ಕ್ಷೇತ್ರದ ಶಾಸಕರೂ ಆಗಿರುವ ಸಿದ್ದರಾಮಯ್ಯ ಅವರ ಮಗ ಡಾ. ಯತೀಂದ್ರ,‘ಈಗ ಮತ್ತೆರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಒಗ್ಗಟ್ಟಿನಿಂದ ಶ್ರಮಿಸುತ್ತಿದ್ದೇವೆ. ಸಿದ್ದರಾಮಯ್ಯ ನೇತೃತ್ವದಲ್ಲೇ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೇರಲಿದೆ’ ಎಂದರು.
ಇದನ್ನೂ ಓದಿ: ಕಾಂಗ್ರೆಸ್ನಿಂದ ಮುಖ್ಯಮಂತ್ರಿಯನ್ನು ಹೈಕಮಾಂಡ್ ನಿರ್ಧರಿಸುತ್ತದೆ: ಸಿದ್ದರಾಮಯ್ಯ
ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಯತೀಂದ್ರ, ‘ಸಿದ್ದರಾಮಯ್ಯ ಯಾವತ್ತೂ ಜೆಡಿಎಸ್‌ಗೆ ಮೋಸ ಮಾಡಿಲ್ಲ. ಯಾವುದೇ ಪಾಪವನ್ನೂ ಮಾಡಿಲ್ಲ. ಜೆಡಿಎಸ್‌ನಲ್ಲಿ ನಾಯಕರಾಗಿ ಬೆಳೆಯುತ್ತಿದ್ದ ಅವರನ್ನು ಆ ಪಕ್ಷದಿಂದ ಉಚ್ಛಾಟಿಸಿದರು. ಸಿದ್ದರಾಮಯ್ಯ ಮತ್ತು ಅವರ ಸ್ನೇಹಿತರು ಕಾಂಗ್ರೆಸ್ ಸೇರಿದರು. ಎಲ್ಲರಿಗೂ ಒಳ್ಳೆಯದೇ ಆಯಿತು. ರಾಜ್ಯದಲ್ಲಿ ಜೆಡಿಎಸ್ ನೆಲೆ ಕಳೆದುಕೊಳ್ಳಲಿದೆ’ ಎಂದು ಹೇಳಿದರು.
ಜನಬೆಂಬಲ ಇದ್ದವರೇ ಸಿಎಂ: ಬೆಂಗಳೂರಿನಲ್ಲಿ ಸಿದ್ದರಾಮಯ್ಯ ಅವರ ನಿವಾಸದ ಬಳಿ ಸುದ್ದಿಗಾರರ ಜತೆ ಮಾತನಾಡಿದ ಶಾಸಕ ಜಮೀರ್ ಅಹಮ್ಮದ್ ಖಾನ್, ‘ಜನಬೆಂಬಲ ಇರುವವರು ರಾಜ್ಯದ ಮುಂದಿನ ಮುಖ್ಯಮಂತ್ರಿ ಆಗುತ್ತಾರೆ’ ಎಂದರು.
‘ಲಿಂಗಾಯತರಲ್ಲಿ ಎಂ.ಬಿ. ಪಾಟೀಲ್, ಅಲ್ಪಸಂಖ್ಯಾತರಲ್ಲಿ ಸಿ.ಎಂ. ಇಬ್ರಾಹಿಂ, ತನ್ವೀರ್ ಸೇಠ್ ಸೇರಿದಂತೆ ಹಲವರು ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಗಳಿದ್ದಾರೆ. ಅಂತಿಮವಾಗಿ ಯಾರು ಮುಖ್ಯಮಂತ್ರಿ ಎಂಬುದನ್ನು ನಿರ್ಧರಿಸುವುದು ಕಾಂಗ್ರೆಸ್ ಹೈಕಮಾಂಡ್’ ಎಂದು ಹೇಳಿದರು.
‘ಮುಂದಿನ ಮುಖ್ಯಮಂತ್ರಿ ಕುರಿತು ಮಾತನಾಡದಂತೆ ನಮ್ಮ ನಾಯಕರು ಸೂಚಿಸಿದ್ದಾರೆ. ಆ ಬಗ್ಗೆ ನಾನು ಇನ್ನು ಯಾವುದೇ ಹೇಳಿಕೆ ನೀಡುವುದಿಲ್ಲ. ರಾಜ್ಯದ ಮುಂದಿನ ಮುಖ್ಯಮಂತ್ರಿ ಯಾರು ಎನ್ನುವುದನ್ನು ಜನತೆ ಮತ್ತು ಪಕ್ಷದ ಹೈಕಮಾಂಡ್ ನಿರ್ಧರಿಸುತ್ತದೆ’ ಎಂದರು.
ಇದನ್ನೂ ಓದಿ: ಜನ ಬೆಂಬಲ ಇರುವವರು ಮುಖ್ಯಮಂತ್ರಿ ಆಗುತ್ತಾರೆ: ಜಮೀರ್ ಅಹಮ್ಮದ್ ಖಾನ್
‘ನಾನು ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿ ಅಲ್ಲ. ನಾನಿನ್ನೂ ಆ ಮಟ್ಟಕ್ಕೆ ಹೋಗಿಲ್ಲ. ನನ್ನದು ಎಲ್‌ಕೆಜಿ ಎಂದು ಸಿ.ಎಂ. ಇಬ್ರಾಹಿಂ ಹೇಳಿದ್ದಾರೆ. ಎಲ್‌ಕೆಜಿಯವನಿಗೆ ಮುಖ್ಯಮಂತ್ರಿ ಹುದ್ದೆ ಸಿಗುತ್ತಾ’ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದರು.
ಹೈಕಮಾಂಡ್ ನಿರ್ಧಾರ: ಸಿದ್ದರಾಮಯ್ಯ
ದಾವಣಗೆರೆ: ‘ಯಾರೋ ಒಬ್ಬರು, ಇಬ್ಬರ ತೀರ್ಮಾನ ಇಡೀ ಪಕ್ಷದ ತೀರ್ಮಾನವಲ್ಲ. ಚುನಾವಣೆ ಬಳಿಕ ಹೊಸದಾಗಿ ಆಯ್ಕೆಯಾದವರು ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡುತ್ತಾರೆ. ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬುದನ್ನು ನಂತರ ಹೈಕಮಾಂಡ್ ನಿರ್ಧರಿಸುತ್ತದೆ’ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಯಾರು ಏನೇ ಅಭಿಪ್ರಾಯ ಹೇಳಲಿ, ಪಕ್ಷದಲ್ಲಿ ಒಂದು ವ್ಯವಸ್ಥೆ ಇದೆ. ಪಕ್ಷದಲ್ಲಿ ಒಳಜಗಳ, ಗುಂಪುಗಾರಿಕೆ ಇಲ್ಲ. ಎಲ್ಲರೂ ಒಗ್ಗಟ್ಟಾಗಿ ಇದ್ದೇವೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವೇ ಹೆಚ್ಚಿನ ಸ್ಥಾನ ಗಳಿಸುತ್ತದೆ’ ಎಂದರು. ಕಾಂಗ್ರೆಸ್ ಒಳಜಗಳದ ಬಗ್ಗೆ ಎಚ್.ಡಿ.ಕುಮಾರಸ್ವಾಮಿ ಮಾಡಿರುವ ಟೀಕೆಗೆ ಉತ್ತರಿಸಿದ ಸಿದ್ದರಾಮಯ್ಯ, ‘ಕುಮಾರಸ್ವಾಮಿ ಹೇಳಿದ್ದೆಲ್ಲವೂ ವೇದವಾಕ್ಯನಾ? ಅವರೇನು ನಮ್ಮ ಪಕ್ಷದವರಾ? ಬೇಕು ಅಂತಲೇ ಸುಳ್ಳು ಹೇಳುತ್ತಿದ್ದಾರೆ’ ಎಂದು ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.