ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂಬಾಕು ಸಂಬಂಧಿ ಕ್ಯಾನ್ಸರ್: ಲಕ್ಷ ಪುರುಷರಲ್ಲಿ 40 ಮಂದಿಗೆ ದೃಢ

ಆರೋಗ್ಯ ಇಲಾಖೆಯು ವಿಶೇಷ ತಂಡದ ಕಾರ್ಯಾಚರಣೆ: ತಂಬಾಕು ಉತ್ಪನ್ನ ಸೇವನೆ 1.83 ಲಕ್ಷ ಪ್ರಕರಣ ದಾಖಲು
Last Updated 31 ಮೇ 2021, 3:24 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಕಾರಣ ಸಾರ್ವಜನಿಕ ಪ್ರದೇಶಗಳಲ್ಲಿ ನಿರ್ಬಂಧಗಳನ್ನು ವಿಧಿಸಿದರೂ ಧೂಮಪಾನಕ್ಕೆ ಕಡಿವಾಣ ಬಿದ್ದಿಲ್ಲ. ತಂಬಾಕು ಉತ್ಪನ್ನಗಳ ಸಾರ್ವಜನಿಕ ಬಳಕೆ ನಿಯಂತ್ರಣ ಕಾಯ್ದೆಯಡಿ (ಕೋಟ್ಪಾ) 2020–21ನೇ ಸಾಲಿನಲ್ಲಿ 1.83 ಲಕ್ಷ ಪ್ರಕರಣಗಳನ್ನು ದಾಖಲಿಸಲಾಗಿದೆ.

ಶ್ವಾಸಕೋಶಕ್ಕೆ ಹಾನಿ ಮಾಡುವ ತಂಬಾಕು ಉತ್ಪನ್ನಗಳು ಕೋವಿಡ್‌ ಅಪಾಯವನ್ನು ತಂದೊಡ್ಡುವ ಸಾಧ್ಯತೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯು ಎಚ್ಚರಿಸಿದೆ. ಅದೇ ರೀತಿ, ಈ ಉತ್ಪನ್ನಗಳ ಸೇವನೆಯು ಬಾಯಿ, ಗಂಟಲು, ಧ್ವನಿಪಟ್ಟಿಗೆ, ಮಿದುಳು, ಅನ್ನನಾಳ, ಶ್ವಾಸಕೋಶ, ಪಿತ್ತಕೋಶ, ಮೂತ್ರಪಿಂಡ, ಸ್ತನ ಸೇರಿದಂತೆ ದೇಹದ ವಿವಿಧ ಅಂಗಗಳ ಕ್ಯಾನ್ಸರ್‌ಗೆ ಕಾರಣವಾಗುತ್ತದೆ. ಹೃದಯ ಕಾಯಿಲೆ, ಶ್ವಾಸಕೋಶದ ಸಮಸ್ಯೆ, ಪಾರ್ಶ್ವವಾಯು, ಅಂಧತ್ವ, ಹಲ್ಲು ಮತ್ತು ಒಸಡಿನ ಸಮಸ್ಯೆ ಸೇರಿದಂತೆ ವಿವಿಧ ಕಾಯಿಲೆಗಳು ಸಹ ಇದರಿಂದ ಬರುವ ಸಾಧ್ಯತೆಗಳಿವೆ ಎಂದು ವೈದ್ಯಕೀಯ ತಜ್ಞರು ಎಚ್ಚರಿಸಿದ್ದಾರೆ.

ತಂಬಾಕು ಉತ್ಪನ್ನಗಳ ಸೇವನೆಯಿಂದ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಮೇ 31ರಂದು ವಿಶ್ವ ತಂಬಾಕು ರಹಿತ ದಿನವನ್ನು ಆಚರಿಸಲಾಗುತ್ತಿದೆ. ರಾಜ್ಯದಲ್ಲಿ ಧೂಮಪಾನ ಮತ್ತು ತಂಬಾಕು ಉತ್ಪನ್ನಗಳ ಸೇವನೆಗೆ ಕಡಿವಾಣ ಹಾಕಲು ಆರೋಗ್ಯ ಇಲಾಖೆಯಡಿ ತಂಬಾಕು ನಿಯಂತ್ರಣ ಘಟಕ ಕಾರ್ಯನಿರ್ವಹಿಸುತ್ತಿದೆ. ಸಾರ್ವಜನಿಕ ಪ್ರದೇಶಗಳಲ್ಲಿ ಧೂಮಪಾನ ಮಾಡಿದವರ ಮೇಲೆ ಮೇಲೆ ಪ್ರಕರಣ ದಾಖಲಿಸಿ, ₹ 200 ದಂಡ ವಿಧಿಸಲಾಗುತ್ತಿದೆ. ಕಳೆದ ಸಾಲಿನಲ್ಲಿ ₹ 2.4 ಕೋಟಿಗೂ ಅಧಿಕ ದಂಡ ಸಂಗ್ರಹಿಸಲಾಗಿದೆ.

ಕೋವಿಡ್ ನಡುವೆಯೂ ಕಾರ್ಯಾಚರಣೆ: ಸಾರ್ವಜನಿಕ ಪ್ರದೇಶಗಳಲ್ಲಿ ಧೂಮಪಾನಕ್ಕೆ ಕಡಿವಾಣ ಹಾಕಲು ಹಾಗೂ ಕಾನೂನು ಬಾಹಿರವಾಗಿ ಮಾರಾಟ ಮಾಡುತ್ತಿರುವ ಮಳಿಗೆಗಳ ಮೇಲೆ ಕ್ರಮಕೈಗೊಳ್ಳಲು ಆರೋಗ್ಯ ಇಲಾಖೆಯು ವಿಶೇಷ ತಂಡಗಳನ್ನು ರಚಿಸಿದೆ. ತಾಲ್ಲೂಕು ಮಟ್ಟದಲ್ಲಿ 176 ಹಾಗೂ ಜಿಲ್ಲಾ ಮಟ್ಟದಲ್ಲಿ 32 ತಂಡಗಳು ಕಾರ್ಯಾಚರಣೆ ನಡೆಸುತ್ತಿವೆ. ಕೋವಿಡ್ ಕಾಣಿಸಿಕೊಂಡ ಬಳಿಕ ಈ ತಂಡಗಳು ಕಾರ್ಯಾಚರಣೆಯನ್ನು ಮುಂದುವರಿಸಿದ್ದು, ಲಾಕ್‌ಡೌನ್ ವಿನಾಯಿತಿ ಅವಧಿ ಸೇರಿದಂತೆ ವಿವಿಧ ಸಂದರ್ಭದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡಿದವರ ಮೇಲೆ ಪ್ರಕರಣ ದಾಖಲಿಸುತ್ತಿವೆ.

‌‘ಕೋವಿಡ್ ಕಾಣಿಸಿಕೊಂಡ ಬಳಿಕ ತಂಬಾಕು ಉತ್ಪನ್ನಗಳ ಸೇವನೆಯಿಂದ ಆಗುವ ದುಷ್ಪರಿಣಾಮದ ಬಗ್ಗೆ ಜನರಲ್ಲಿ ಜಾಗೃತಿ ಮೂಡುತ್ತಿದೆ. ಇದರಿಂದ ಹಲವರು ಧೂಮಪಾನ ಹಾಗೂ ತಂಬಾಕು ಉತ್ಪನ್ನವನ್ನು ತ್ಯಜಿಸುತ್ತಿದ್ದಾರೆ. ಇನ್ನಷ್ಟು ಜಾಗೃತಿ ಮೂಡಬೇಕಿದೆ’ ಎಂದು ಇಲಾಖೆಯ ಉಪನಿರ್ದೇಶಕ ಡಾ.ಎಂ. ಸೆಲ್ವರಾಜನ್ ತಿಳಿಸಿದರು.

‘‌ಧೂಮಪಾನಿಗಳುಕೊರೊನಾ ಸೋಂಕಿಗೆ ಒಳಗಾದಲ್ಲಿ ಅವರ ಜೀವಕ್ಕೇ ಕುತ್ತು ಬರುವ ಸಾಧ್ಯತೆಯಿದೆ. ಧೂಮಪಾನವು ಶ್ವಾಸಕೋಶದ ಕಾರ್ಯಕ್ಷಮತೆ ಹದಗೆಡಿಸಿ, ರೋಗ ನಿರೋಧಕ ಶಕ್ತಿ ಕುಗ್ಗಿಸುತ್ತದೆ. ಉಸಿರಾಟದ ಸಮಸ್ಯೆ ಕಾಣಿಸಿಕೊಂಡು, ಗಂಭೀರ ಸ್ವರೂಪ ಪಡೆದುಕೊಳ್ಳುತ್ತದೆ. ಧೂಮಪಾನಿಗಳಿಗೆ ಶ್ವಾಸಕೋಶ ಮತ್ತು ಹೃದಯ ಸೋಂಕಿನ ಅಪಾಯದ ತೀವ್ರತೆಗಳೂ ಹೆಚ್ಚಿರುತ್ತವೆ. ಕೊರೊನಾ ಸೋಂಕಿಗೆ ತುತ್ತಾಗುವ ಧೂಮಪಾನಿಗಳು ಹೆಚ್ಚಿನ ತೊಂದರೆ ಅನುಭವಿಸುವುದಲ್ಲದೆ, ಮೃತಪಡುವ ಸಾಧ್ಯತೆ ಇರುತ್ತದೆ’ ಎಂದು ವೈದ್ಯಕೀಯ ತಜ್ಞರು ಎಚ್ಚರಿಸಿದ್ದಾರೆ.

‘ಧೂಮಪಾನಿಗಳಿಗೆ ಕೊರೊನಾ ಸೋಂಕು ತಗುಲಿದರೆ ಅದು ಅವರ ಮೇಲೆ ಇನ್ನಷ್ಟು ಗಂಭೀರ ಪರಿಣಾಮಗಳನ್ನು ಬೀರುತ್ತವೆ.ಪರೋಕ್ಷ ಧೂಮಪಾನವೂ ಶ್ವಾಸಕೋಶ ಮತ್ತು ರೋಗನಿರೋಧಕ ಶಕ್ತಿಯ ಮೇಲೆ ಪರಿಣಾಮ ಬೀರುತ್ತದೆ.ಹೃದಯ ಮತ್ತು ಉಸಿರಾಟದ ಸೋಂಕಿಗೂ ಒಳಗಾಗುವ ಸಾಧ್ಯತೆ ಇದೆ’ ಎಂದು ರಾಜ್ಯ ಸರ್ಕಾರದ ತಂಬಾಕು ನಿಯಂತ್ರಣ ಕುರಿತಾದ ಉನ್ನತ ಸಮಿತಿ ಸದಸ್ಯ ಡಾ.ಯು.ಎಸ್. ವಿಶಾಲ್ ರಾವ್ ತಿಳಿಸಿದರು.

***

ಧೂಮಪಾನವು ಕೋವಿಡ್ ಸೇರಿದಂತೆ ವಿವಿಧ ಉಸಿರಾಟ ಸಂಬಂಧಿ ಕಾಯಿಲೆ<br/>ಗಳ ತೀವ್ರತೆ ಹೆಚ್ಚಿಸುತ್ತದೆ. ಜಗಿಯುವ ತಂಬಾಕಿನಿಂದ ಕ್ಯಾನ್ಸರ್ ಸೇರಿದಂತೆ ದೀರ್ಘಾವಧಿ ಕಾಯಿಲೆ ಬರುತ್ತವೆ

-ಡಾ.ಸಿ. ರಾಮಚಂದ್ರ, ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ನಿರ್ದೇಶಕ

***

ಕೋಟ್ಪಾ ಕಾಯ್ದೆಯಡಿ ಪ್ರಕರಣಗಳ ದಾಖಲು

ವರ್ಷ; ಸೆಕ್ಷನ್ 4; ಸೆಕ್ಷನ್ 6

2019–20; 1,80,000; 4,529

2020–21; 1,79,000; 4118

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT