ಭಾನುವಾರ, 23 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಇದೇ 16ರಿಂದ ಮೈಸೂರು–ಬೆಂಗಳೂರು ಮಧ್ಯೆ ಎಲೆಕ್ಟ್ರಿಕ್ ಬಸ್

ಪರೀಕ್ಷಾರ್ಥ ಸಂಚಾರ ಯಶಸ್ವಿ: ಫೆಬ್ರುವರಿ 15ರೊಳಗೆ 50 ಬಸ್‌ ಕಾರ್ಯಾಚರಣೆ
Last Updated 13 ಜನವರಿ 2023, 20:15 IST
ಅಕ್ಷರ ಗಾತ್ರ

ಬೆಂಗಳೂರು: ಕೆಎಸ್‌ಆರ್‌ಟಿಸಿಗೆ ಬಂದಿರುವ ಮೊದಲ ಎಲೆಕ್ಟ್ರಿಕ್ ಬಸ್‌(ಪವರ್ ಪ್ಲಸ್) ಪರೀಕ್ಷಾರ್ಥ ಸಂಚಾರ ಯಶಸ್ವಿಯಾಗಿದ್ದು, ಸೋಮವಾರದಿಂದ ಮೈಸೂರು–ಬೆಂಗಳೂರು ಮಧ್ಯೆ ಕಾರ್ಯಾಚರಣೆ ಮಾಡಲಿದೆ.

ಓಲೆಕ್ಟ್ರಾ ಗ್ರೀನ್‌ಟೆಕ್ ಲಿಮಿಟೆಡ್ ಕಂಪನಿಯಿಂದ ಜಿಸಿಸಿ(ಗ್ರಾಸ್ ಕಾಸ್ಟ್ ಕಂಟ್ರ್ಯಾಕ್ಟ್) ಮಾದರಿಯಲ್ಲಿ 50 ಬಸ್‌ಗಳನ್ನು ಪಡೆಯಲಾಗುತ್ತಿದ್ದು, ಅದರಲ್ಲಿ ಮೊದಲ ಬಸ್‌ ಡಿಸೆಂಬರ್ 31ರಂದು ಬಂದಿತ್ತು. ಈ ಬಸ್‌ ಪರೀಕ್ಷಾರ್ಥ ಸಂಚಾರ ನಡೆಸಿದ್ದು, ಕಾರ್ಯಾಚರಣೆಗೆ ಇಳಿಸಲು ಸೂಕ್ತವಾಗಿದೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ತೀರ್ಮಾನಿಸಿದ್ದಾರೆ.

ಫೆಬ್ರುವರಿ 15ರ ವೇಳೆಗೆ ಬಾಕಿ 49 ಬಸ್‌ಗಳನ್ನು ಹಂತ– ಹಂತವಾಗಿ ಒದಗಿಸಲು ಓಲೆಕ್ಟ್ರಾ ಕಂಪನಿ ಒಪ್ಪಿಕೊಂಡಿದೆ. ರಾಜಧಾನಿಯಿಂದ ಮೈಸೂರು, ಮಡಿಕೇರಿ, ವಿರಾಜಪೇಟೆ, ದಾವಣಗೆರೆ, ಶಿವಮೊಗ್ಗ ಮತ್ತು ಚಿಕ್ಕಮಗಳೂರಿಗೆ ಈ ಬಸ್‌ಗಳನ್ನು ಕಾರ್ಯಾಚರಣೆ ಮಾಡಲಾಗುವುದು ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್ ತಿಳಿಸಿದರು.

ಈ ಬಸ್‌ನ ಬ್ಯಾಟರಿಯನ್ನು ಒಮ್ಮೆ ಚಾರ್ಜ್ ಮಾಡಿದರೆ 320 ಕಿಲೋ ಮೀಟರ್ ಸಂಚರಿಸುತ್ತದೆ. ಆರೂ ಕಡೆ ಚಾರ್ಜಿಂಗ್ ಘಟಕಗಳನ್ನು ತೆರೆಯಲಾಗಿದ್ದು, ಅಲ್ಲಿ ಒಂದು ಗಂಟೆ ಚಾರ್ಜ್ ಮಾಡಿಕೊಂಡು ಮತ್ತೆ ರಾಜಧಾನಿಗೆ ವಾಪಸ್ ಬರಲಿದೆ ಎಂದು ವಿವರಿಸಿದರು.

ಕರ್ನಾಟಕ ಸಾರಿಗೆಗಿಂತ (ಕೆಂಪು ಬಸ್‌) ಐಷಾರಾಮಿ ಮತ್ತು ಮಲ್ಟಿ ಆ್ಯಕ್ಸೆಲ್ ವೋಲ್ವೊ ಬಸ್‌ಗಳಿಂತ ಕಡಿಮೆ ದರ್ಜೆಯ ಬಸ್‌ ಇದಾಗಿದೆ. ಕರ್ನಾಟಕ ಸಾರಿಗೆ ಬಸ್‌ಗಳಲ್ಲಿ (ನಾನ್ ಸ್ಟಾಪ್‌) ಪ್ರಯಾಣ ದರ ₹250 ಇದೆ. ಎಲೆಕ್ಟ್ರಿಕ್‌ ಬಸ್‌ನಲ್ಲಿ ಪ್ರಯಾಣಕ್ಕೆ ₹300 ದರ ನಿಗದಿ ಮಾಡಲಾಗಿದೆ. ಇದು ಪ್ರಯಾಣಿಕರಿಗೆ ಅಷ್ಟೇನೂ ಹೊರೆಯಾಗದು ಎಂದರು.

ಸದ್ಯಕ್ಕೆ ಜಿಸಿಸಿ ಮಾದರಿಯಲ್ಲಿ ವಾಹನ ಪಡೆಯಲಾಗಿದೆ. ಎಲೆಕ್ಟ್ರಿಕ್ ಬಸ್‌ಗಳನ್ನು ನಿರ್ವಹಣೆ ಮಾಡುವ ವಿಭಾಗ ನಿಗಮದಲ್ಲಿ ಇಲ್ಲ. ಮುಂದಿನ ದಿನಗಳಲ್ಲಿ ಕೆಎಸ್‌ಆರ್‌ಟಿಸಿ ಸಿಬ್ಬಂದಿಯೇ ತರಬೇತಿ ಪಡೆದು ಚಾಲನೆ ಮತ್ತು ನಿರ್ವಹಣೆ ಮಾಡಲು ಶಕ್ತರಾಗಬಹುದು. ಆಗ ಗುತ್ತಿಗೆ ಆಧಾರದಲ್ಲಿ ಪಡೆಯದೆ ಎಲೆಕ್ಟ್ರಿಕ್ ಬಸ್‌ಗಳನ್ನು ಖರೀದಿ ಮಾಡುವ ಬಗ್ಗೆ ಆಲೋಚನೆ ನಡೆಸಲಾಗುತ್ತದೆ ಎಂದು ಹೇಳಿದರು.

ಶೀಘ್ರವೇ 20 ವೋಲ್ವೊ ಬಸ್‌

ಅತ್ಯಂತ ಐಷಾರಾಮಿ ಬಸ್ ಆಗಿರುವ ‘ವೋಲ್ವೊ 9600’ ದರ್ಜೆಯ 50 ಬಸ್‌ಗಳನ್ನು ಕೆಎಸ್‌ಆರ್‌ಟಿಸಿ ಖರೀದಿಸುತ್ತಿದ್ದು, ಈ ತಿಂಗಳ ಅಂತ್ಯದೊಳಗೆ 20 ಬಸ್‌ಗಳು ಕಾರ್ಯಾಚರಣೆಗೆ ಇಳಿಯಲಿವೆ.

ವೋಲ್ವೊ ಬಸ್‌ಗಳಲ್ಲೇ ಐಷಾರಾಮಿ ಬಸ್‌ ಇದಾಗಿದೆ. ಸದ್ಯ ಕೆಎಸ್‌ಆರ್‌ಟಿಸಿಯಲ್ಲಿರುವ ಅಂಬಾರಿ ಡ್ರೀಮ್ ಕ್ಲಾಸ್ ಬಸ್‌ಗಿಂತಲೂ ಐಷಾರಾಮಿ(ಅಂಬಾರಿ 2.ಓ) ಆಗಿರಲಿದೆ. ಇದಕ್ಕೆ ಇನ್ನೂ ಹೆಸರು ಅಂತಿಮಗೊಳಿಸಿಲ್ಲ. ಈ ವರ್ಷದ ಅಂತ್ಯದೊಳಗೆ 50 ಬಸ್‌ಗಳು ಸೇರ್ಪಡೆಯಾಗಲಿವೆ ಎಂದು ವಿ.ಅನ್ಬುಕುಮಾರ್ ಹೇಳಿದರು.

ಕೆಎಸ್‌ಆರ್‌ಟಿಸಿ ಬಸ್‌ಗಳ ಕೊರತೆ ಎದುರಿಸುತ್ತಿದ್ದು, 650 ಡೀಸೆಲ್ ಬಸ್‌ಗಳ(ಕರ್ನಾಟಕ ಸಾರಿಗೆ) ಖರೀದಿಗೆ ಟೆಂಡರ್ ಕರೆಯಲಾಗಿದೆ. ಮಾರ್ಚ್ ಅಂತ್ಯದ ವೇಳೆಗೆ ಅವುಗಳೂ ನಿಗಮಕ್ಕೆ ಸೇರ್ಪಡೆಯಾಗಲಿವೆ. ಗ್ರಾಮೀಣ ಪ್ರದೇಶದಲ್ಲಿ ಬಸ್‌ಗಳಿಲ್ಲ ಎಂಬ ಸಮಸ್ಯೆಗೆ ಕೊಂಚ ಪರಿಹಾರ ದೊರಕಲಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT