ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ: ಆರೋಪಿ ಮೆಕ್ಯಾನಿಕಲ್‌ ಎಂಜಿನಿಯರಿಂಗ್ ಪದವೀಧರ

ಎಫ್‌ಡಿಎ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ
Last Updated 25 ಜನವರಿ 2021, 16:49 IST
ಅಕ್ಷರ ಗಾತ್ರ

ಬಾಗಲಕೋಟೆ:ಪ್ರಥಮ ದರ್ಜೆ ಸಹಾಯಕರ (ಎಫ್‌ಡಿಎ) ಸ್ಪರ್ಧಾತ್ಮಕ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯ ಆರೋಪಿ ಕೆಪಿಎಸ್‌ಸಿ ಗೌಪ್ಯತೆ ವಿಭಾಗದ ದ್ವಿತೀಯ ದರ್ಜೆ ಸಹಾಯಕ ರಮೇಶ (ರಾಮಪ್ಪ) ಹೆರಕಲ್‌ ಕೂಡ ಎಫ್‌ಡಿಎ ಪರೀಕ್ಷೆ ಬರೆಯಲು ಸಿದ್ಧತೆ ನಡೆಸಿದ್ದರು ಎಂಬುದು ಪೊಲೀಸರ ವಿಚಾರಣೆ ವೇಳೆ ಗೊತ್ತಾಗಿದೆ.

ಬೀಳಗಿ ತಾಲ್ಲೂಕಿನ ಬೂದಿಹಾಳ ಎಸ್‌.ಜಿ.ಗ್ರಾಮದ ಕೃಷಿಕ ಕುಟುಂಬದ ರಮೇಶ, ಬೆಳಗಾವಿಯ ವಿಟಿಯುನಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಪಡೆದಿದ್ದರು. ತಾಯಿಯ ತವರು ಜಮಖಂಡಿ ತಾಲ್ಲೂಕಿನ ಚಿಕ್ಕಪಡ
ಸಲಗಿಯಲ್ಲಿ ಪ್ರಾಥಮಿಕ ಶಿಕ್ಷಣ ಹಾಗೂ ಜಮಖಂಡಿಯಲ್ಲಿ ಪಿಯುಸಿ ಓದಿದ್ದರು.

ಕೆಪಿಎಸ್‌ಸಿಯ ದ್ವಿತೀಯ ದರ್ಜೆ ಸಹಾಯಕ ಪರೀಕ್ಷೆ ಬರೆದು ಆಯ್ಕೆಯಾಗಿ 2017ರ ಜನವರಿ 15ರಂದು ಆಯೋಗದ ಕಚೇರಿಯಲ್ಲಿ ಕೆಲಸಕ್ಕೆ ಸೇರಿದ್ದರು.

ಜನವರಿ 23ರಂದು ಬೂದಿಹಾಳಕ್ಕೆ ಬಂದಿದ್ದ ರಮೇಶ, ಪೋಷಕರನ್ನು ಭೇಟಿಯಾಗಿ ಪರೀಕ್ಷೆ ಬರೆಯಲು ತೆರಳುತ್ತಿರುವುದಾಗಿ ಹೇಳಿ ಚಿಕ್ಕಪಡಸಲಗಿಗೆ ಹೋಗಿದ್ದರು. ಅದೇ ದಿನ ರಾತ್ರಿ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿರುವುದು ಬಯಲಾಗಿದೆ ಎಂದು ತಿಳಿಯುತ್ತಲೇ ಮೊಬೈಲ್‌ಫೋನ್ ಸ್ವಿಚ್‌ ಆಫ್ ಮಾಡಿಕೊಂಡಿದ್ದರು ಎಂದು ತಿಳಿದುಬಂದಿದೆ.

ಬೆಂಗಳೂರಿನಿಂದ ತನ್ನೊಂದಿಗೆ ತಂದಿದ್ದ ಪ್ರಶ್ನೆಪತ್ರಿಕೆಯನ್ನು ಚಿಕ್ಕಪಡಸಲಗಿ ಗ್ರಾಮದ ಅಶೋಕ ಕೃಷ್ಣಾ ಹಾಗೂ ಪಕ್ಕದ ಚಿನಗುಂಡಿ ಗ್ರಾಮದ ರಮೇಶಪ್ಪ ಕರಿಯಪ್ಪ ಎಂಬುವವರಿಗೆ ತಲಾ ₹12 ಲಕ್ಷಕ್ಕೆ ಕೊಡಲು ಒಪ್ಪಂದ ಮಾಡಿಕೊಂಡಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಶ್ನೆ ಪತ್ರಿಕೆ ಸೋರಿಕೆ ಆಗುತ್ತಿದ್ದಂತೆಯೇ ತನಿಖೆಗೆ ಮುಂದಾದ ಸಿಸಿಬಿ ಪೊಲೀಸರು ಬಾಗಲಕೋಟೆ ಪೊಲೀಸರಿಗೆ ರಮೇಶ ಬಗ್ಗೆ ಮಾಹಿತಿ ನೀಡಿದ್ದಾರೆ. ಸ್ಥಳೀಯ ಪೊಲೀಸರು ಬೂದಿಹಾಳಕ್ಕೆ ಹೋದಾಗ ರಮೇಶ ಅಲ್ಲಿರಲಿಲ್ಲ. ಸಹೋದರ ಶ್ರೀಕಾಂತ ಅವರನ್ನು ವಿಚಾರಿಸಿದಾಗ ಪಡಸಲಗಿಗೆ ತೆರಳಿರುವುದು ಗೊತ್ತಾಗಿದೆ.

’ನನ್ನ ಮಗ ಓದಿನಲ್ಲಿ ಮುಂದಿದ್ದ. ಅವನಿಗಾಗಿ ಕಷ್ಟಪಟ್ಟು ಸಾಲ ಮಾಡಿ ಶಿಕ್ಷಣ ಕೊಡಿಸಿದ್ದೇವೆ. ಈ ಬಾರಿ ಪರೀಕ್ಷೆ ಬರೆದ ನಂತರ ಸಂಬಂಧಿ ಯುವತಿಯ ಜೊತೆ ನಿಶ್ಚಿತಾರ್ಥಕ್ಕೆ ಸಿದ್ಧತೆ ಮಾಡಿಕೊಂಡಿದ್ದೆವು. ಅವನು ಅಮಾಯಕನಾಗಿದ್ದು, ಯಾರದ್ದೋ ಕೃತ್ಯಕ್ಕೆ ಬಲಿಯಾಗಿದ್ದಾನೆ’ ಎಂದು ರಮೇಶನ ತಾಯಿ ಶಾಂತವ್ವ ಬೂದಿಹಾಳದಲ್ಲಿ ಮಾಧ್ಯಮದವರ ಎದುರು ಕಣ್ಣೀರಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT