ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಂಗೆ ಪದದ ಪರಿಣಾಮ ಗೊತ್ತೇ: ಸಿದ್ದರಾಮಯ್ಯಗೆ ಬಿಜೆಪಿ ಪ್ರಶ್ನೆ

Last Updated 10 ಮೇ 2021, 12:01 IST
ಅಕ್ಷರ ಗಾತ್ರ

ಬೆಂಗಳೂರು: ಲಾಕ್‌ಡೌನ್ ಗೊಂದಲದ ಗೂಡಾಗಿದ್ದು, ಗ್ರಾಮೀಣ ಪ್ರದೇಶದ ಜನತೆ ಇದರ ವಿರುದ್ಧ ದಂಗೆ ಎದ್ದರೂ ಆಶ್ಚರ್ಯ ಇಲ್ಲ ಎಂಬ ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟೀಕೆಗೆ ಬಿಜೆಪಿ ಕಟುವಾಗಿ ತಿರುಗೇಟು ನೀಡಿದೆ.

ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿ ಬಿಜೆಪಿ ರಾಜ್ಯ ಘಟಕದ ಟ್ವಿಟರ್‌ ಖಾತೆಯಿಂದ ಟ್ವೀಟ್‌ ಮಾಡಲಾಗಿದ್ದು, ದಂಗೆ ಪದದ ಪರಿಣಾಮ ಗೊತ್ತೇ ಎಂದು ಪ್ರಶ್ನಿಸಲಾಗಿದೆ.

‘ದಂಗೆ ಎಂಬ ಪದದ ಪರಿಣಾಮವನ್ನು ಅರಿತಿದ್ದೀರಾ ಸಿದ್ದರಾಮಯ್ಯನವರೇ? ದಂಗೆಗೆ ಪ್ರೇರೇಪಿಸುವುದು ಕಾನೂನು ಪ್ರಕಾರ ಅಪರಾಧ ಎಂಬುದು ಗೊತ್ತಿಲ್ಲವೇ ಸೆಕ್ಷನ್‌ ಮಾಸ್ಟರ್? ಕೋವಿಡ್ ವಿರುದ್ಧದ ಹೋರಾಟದಲ್ಲಿ ಗ್ರಾಮೀಣ ಭಾಗದ ಜನತೆ ಇದುವರೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಈಗ ಅವರನ್ನು ಎತ್ತಿ ಕಟ್ಟಲು ಹೊರಟಿದ್ದೀರಾ?’ ಎಂದು ಬಿಜೆಪಿ ಟ್ವೀಟ್ ಮಾಡಿದೆ.

‘ಕೋವಿಡ್ ವಿರುದ್ಧದ ಹೋರಾಟದಲ್ಲಿ ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡರೂ ಸಿದ್ದರಾಮಯ್ಯ ಅವರು ವಿರೋಧಿಸುವ ಮೂಲಕ ಕೊಂಕುರಾಮಯ್ಯ ಎನಿಸಿಕೊಂಡಿದ್ದಾರೆ. ಈಗಾಗಲೇ ಚಾಮುಂಡೇಶ್ವರಿ ಕ್ಷೇತ್ರದ ಜನತೆಯ ಶಾಪಕ್ಕೆ ಒಳಗಾಗಿರುವ ಸಿದ್ದರಾಮಯ್ಯನವರು, ಹೀಗೇ ಮುಂದುವರಿದರೆ ಇಡೀ ರಾಜ್ಯದ ಜನತೆಯ ಶಾಪಕ್ಕೆ ತುತ್ತಾಗಬೇಕಾಗುತ್ತದೆ’ ಎಂದು ಮತ್ತೊಂದು ಟ್ವೀಟ್‌ನಲ್ಲಿ ಉಲ್ಲೇಖಿಸಲಾಗಿದೆ.

‘ಕೊರೊನಾ ರೋಗಕ್ಕಿಂತ ಹೆಚ್ಚಾಗಿ ಇಲ್ಲಿನ ರೋಗಗ್ರಸ್ತ ಬಿಜೆಪಿ ಸರ್ಕಾರದಿಂದ ರಾಜ್ಯದ ಜನತೆ ಬವಣೆಪಡುವಂತಾಗಿದೆ. ಸೋಮವಾರದಿಂದ ಜಾರಿಗೆ ಬರಲಿರುವ ಲಾಕ್‌ಡೌನ್ ಗೊಂದಲದ ಗೂಡಾಗಿದ್ದು, ಗ್ರಾಮೀಣ ಪ್ರದೇಶದ ಜನತೆ ಇದರ ವಿರುದ್ಧ ದಂಗೆ ಎದ್ದರೂ ಆಶ್ಚರ್ಯ ಇಲ್ಲ’ ಎಂದು ಸಿದ್ದರಾಮಯ್ಯ ಭಾನುವಾರ ಟೀಕಿಸಿದ್ದರು.

17 ಕೋಟಿಗೂ ಹೆಚ್ಚು ಮಂದಿಗೆ ಲಸಿಕೆ

‘ನರೇಂದ್ರ ಮೋದಿ ಸರ್ಕಾರ ಕೋವಿಡ್‌ ಲಸಿಕೆ ವಿತರಣೆಯಲ್ಲಿ ದಾಖಲೆ ಸೃಷ್ಟಿಸಿದೆ. ಕೇವಲ 114 ದಿನಗಳಲ್ಲಿ ದೇಶದ 17 ಕೋಟಿಗೂ ಅಧಿಕ ಜನರಿಗೆ ಲಸಿಕೆ ವಿತರಿಸಿದೆ’ ಎಂದು ಇನ್ನೊಂದು ಟ್ವೀಟ್‌ನಲ್ಲಿ ಬಿಜೆಪಿ ಹೇಳಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT