ಗುಜರಾತ್‌ನ ‘ಅಮುಲ್’ ಜೊತೆ ಕರ್ನಾಟಕದ ‘ನಂದಿನಿ’ ವಿಲೀನಕ್ಕೆ ಕ್ರಮ: ಅಮಿತ್ ಶಾ

ಮದ್ದೂರು: ‘ಗುಜರಾತ್‌ನ ‘ಅಮುಲ್’ ಜತೆ ಕರ್ನಾಟಕದ ‘ನಂದಿನಿ’ಯನ್ನು ಒಂದುಗೂಡಿಸಲು ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು’ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಹೇಳಿದರು.
ತಾಲ್ಲೂಕಿನ ಗೆಜ್ಜಲಗೆರೆ ಜಿಲ್ಲಾ ಹಾಲು ಒಕ್ಕೂಟದ (ಮನ್ ಮುಲ್) ಆವರಣದಲ್ಲಿ ನಿರ್ಮಿಸಿರುವ ಮೆಗಾ ಡೇರಿಗೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.
‘ಗುಜರಾತ್‌ನಲ್ಲಿ ಸಹಕಾರ ಒಕ್ಕೂಟವು ಪ್ರಗತಿಯ ಹಾದಿಯಲ್ಲಿದೆ. ಹಾಗೆಯೇ 1975ರಿಂದಲೂ ಕೆಎಂಎಫ್ ಕೂಡ ಅಭಿವೃದ್ಧಿ ಹೊಂದುತ್ತಿದೆ. ಅಮುಲ್ ಹಾಗೂ ನಂದಿನಿ ಒಂದಾದರೆ ಕರ್ನಾಟಕದ ಹಾಲು ಉತ್ಪಾದಕರಿಗೆ ಇನ್ನಷ್ಟು ಅನುಕೂಲವಾಗುತ್ತದೆ’ ಎಂದರು.
‘ಮುಂದಿನ ಮೂರು ವರ್ಷಗಳಲ್ಲಿ ದೇಶದಲ್ಲಿ 2 ಲಕ್ಷಕ್ಕೂ ಅಧಿಕ ಪ್ರಾಥಮಿಕ ಡೇರಿಗಳನ್ನು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸ್ಥಾಪನೆ ಮಾಡಲಾಗುವುದು. ಆ ಮೂಲಕ ಹಾಲಿನ ಉತ್ಪನ್ನಗಳನ್ನು ಇತರ ರಾಷ್ಟ್ರಗಳಿಗೆ ರಫ್ತು ಮಾಡುವ ಗುರಿ ಹೊಂದಲಾಗಿದೆ’ ಎಂದರು.
‘ಕರ್ನಾಟಕದಲ್ಲಿ ಪ್ರಸ್ತುತ ಹಾಲು ಉತ್ಪಾದಕರಿಗೆ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಪ್ರತಿ ಲೀಟರ್ ಹಾಲಿಗೆ ₹ 5 ಪ್ರೋತ್ಸಾಹ ಧನ ನೀಡುತ್ತಿದೆ. ಇದರಿಂದ ಸುಮಾರು ₹ 36 ಲಕ್ಷ ಹಾಲು ಉತ್ಪಾದಕರು ಇದರ ಉಪಯೋಗ ಪಡೆಯುತ್ತಿದ್ದಾರೆ. ಮನ್‌ಮುಲ್ ಆವರಣದಲ್ಲಿ ₹ 260 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಮೆಗಾ ಡೇರಿ ಉದ್ಘಾಟನೆ ಮಾಡುತ್ತಿರುವುದು ಸಂತಸ ತಂದಿದೆ’ ಎಂದರು.
ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಮಾತನಾಡಿ ‘ನಾನು ಪ್ರಧಾನಿಯಾಗಿದ್ದಾಗ ಸಹಕಾರ ಕ್ಷೇತ್ರದ ಉನ್ನತಿಗೆ ದುಡಿದಿದ್ದೆ. ದೇಶದ ಹಲವಾರು ಹಾಲಿನ ಸೊಸೈಟಿಗಳನ್ನು ಒಟ್ಟುಗೂಡಿಸಿ ಹಾಲು ಉತ್ಪಾದನೆಯಲ್ಲಿ ಪ್ರಗತಿ ಸಾಧಿಸಲು ಶ್ರಮಿಸಿದ್ದೆ’ ಎಂದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ‘ದೇಶ ಹಾಗೂ ರಾಜ್ಯದಲ್ಲಿ ಕ್ಷೀರ ಕ್ರಾಂತಿ ನಡೆಯುತ್ತಿದೆ. ಹೈನುಗಾರಿಕೆಯಿಂದ ರೈತರು ಆರ್ಥಿಕ ಪ್ರಗತಿ ಸಾಧಿಸುತ್ತಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಈ ಹಿಂದೆ ನಮ್ಮ ರಾಜ್ಯದ ಮೊದಲ ಬೆಂಗಳೂರು ಮೆಗಾ ಡೇರಿ ನಿರ್ಮಾಣಕ್ಕೆ ಕಾರಣರಾಗಿದ್ದವರು, ಅದನ್ನು ಯಾರೂ ಮರೆಯುವುದಿಲ್ಲ’ ಎಂದರು.
ಆದಿಚುಂಚನಗಿರಿ ಕ್ಷೇತ್ರದ ಪೀಠಾಧಿಪತಿ ನಿರ್ಮಲಾನಂದನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಸಚಿವರಾದ ಎಸ್.ಟಿ.ಸೋಮಶೇಖರ್, ಕೆ.ಗೋಪಾಲಯ್ಯ, ಕೆ.ಸಿ.ನಾರಾಯಣಗೌಡ, ಶಾಸಕರಾದ ಡಿ.ಸಿ.ತಮ್ಮಣ್ಣ, ಪುಟ್ಟರಾಜು, ಸುರೇಶ್ ಗೌಡ, ಅನ್ನದಾನಿ, ವಿಧಾನ ಪರಿಷತ್ ಸದಸ್ಯ ಮಧು ಜಿ ಮಾದೇಗೌಡ, ಮನಮುಲ್ ಅಧ್ಯಕ್ಷ ರಾಮಚಂದ್ರು ಇದ್ದರು.
ಇದನ್ನೂ ಓದಿ: ‘ನಂದಿನಿ’– ‘ಅಮುಲ್’ ವಿಲೀನಗೊಳಿಸುವ ಶಾ ಪ್ರಸ್ತಾವಕ್ಕೆ ಕನ್ನಡಿಗರ ತೀವ್ರ ಆಕ್ರೋಶ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.