ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣ್ಣು–ತರಕಾರಿ ಸಾಗಣೆಗೆ ಕೆಎಸ್‌ಆರ್‌ಟಿಸಿ ಬಸ್

ಆದಾಯ ಹೆಚ್ಚಿಸಿಕೊಳ್ಳಲು ಮುಂದಾದ ನಿಗಮ: ಹೊಸ ದಾರಿಗಳ ಹುಡುಕಾಟ
Last Updated 28 ಜುಲೈ 2021, 3:57 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌ನಿಂದ ಆರ್ಥಿಕವಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಕೆಎಸ್‌ಆರ್‌ಟಿಸಿ, ಆದಾಯ ಹೆಚ್ಚಿಸಿಕೊಳ್ಳಲು ಹೊಸ ಮಾರ್ಗಗಳನ್ನು ಹುಡುಕಾಡುತ್ತಿದೆ. ರೈತರು ಕೃಷಿ ಉತ್ಪನ್ನಗಳನ್ನು ಒಂದೆಡೆಯಿಂದ ಮತ್ತೊಂದೆಡೆ ಸಾಗಿಸಲು ನೆರವಾಗಲು ಮುಂದಾಗಿದೆ. ಇದಕ್ಕಾಗಿ ಹವಾನಿಯಂತ್ರಿತ ಹಳೇ ಬಸ್‌ಗಳನ್ನು ಮರು ವಿನ್ಯಾಸಗೊಳಿಸುತ್ತಿದೆ.

ಕೆಎಸ್‌ಆರ್‌ಟಿಸಿಯಲ್ಲಿ ಹವಾನಿಯಂತ್ರಿತ ಬಸ್‌ಗಳನ್ನು 2003ರಿಂದ ಪರಿಚಯಿಸಲಾಗಿದೆ. 11 ಲಕ್ಷ ಅಥವಾ 12 ಲಕ್ಷ ಕಿಲೋ ಮೀಟರ್ ಸಂಚರಿಸಿದ ಬಳಿಕ ಅವುಗಳನ್ನು ಗುಜರಿಗೆ ಕಳುಹಿಸಲಾಗುತ್ತದೆ. ಈವರೆಗೆ 283 ಎ.ಸಿ ಬಸ್‌ಗಳನ್ನು ಗುಜರಿಗೆ ನಿಗಮ ಕಳುಹಿಸಿದೆ. ಸದ್ಯ ನಿಗಮದಲ್ಲಿ 500 ಬಸ್‌ಗಳಿವೆ.

ಕೋವಿಡ್‌ ಬಳಿಕ ಕಾರ್ಯಾಚರಣೆ ಕಡಿಮೆಯಾಗಿರುವ ಕಾರಣ ಇವುಗಳನ್ನು ಬೇರೆ ಉದ್ದೇಶಕ್ಕೆ ಬಳಸಿಕೊಂಡು ನಿಗಮಕ್ಕೆ ಆದಾಯ ಬರುವಂತೆ ಮಾಡಿಕೊಳ್ಳುವ ದಾರಿಯನ್ನು ನಿಗಮ ಕಂಡುಕೊಂಡಿದೆ.

ಮೊದಲ ಹಂತದಲ್ಲಿ ಚಿಕ್ಕಬಳ್ಳಾಪುರ, ಕೋಲಾರ, ಹೊಸಕೋಟೆ ಮತ್ತು ಬೆಂಗಳೂರು ಸುತ್ತಮುತ್ತಲ ಇತರ ನಗರಗಳಿಂದ ಬಸ್‌ಗಳ ಕಾರ್ಯಾಚರಣೆ ಮಾಡಲು ನಿಗಮ ಉದ್ದೇಶಿಸಿದೆ. ಪ್ರಯೋಗಿಕವಾಗಿ ಒಂದು ತಿಂಗಳ ಕಾಲ ಈ ಬಸ್‌ಗಳನ್ನು ಕಾರ್ಯಾಚರಣೆ ಮಾಡಲಾಗುವುದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ. ಕಳಸದ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಬೆಂಗಳೂರು ನಗರಕ್ಕೆ ಸುತ್ತಮುತ್ತಲ ಪ್ರದೇಶಗಳಿಂದ ತರಕಾರಿ ಮತ್ತು ಹಣ್ಣು ಸರಬರಾಜಾಗುತ್ತದೆ. ತರಕಾರಿ, ಹಣ್ಣು ಮತ್ತು ಇತರ ಕೃಷಿ ಉತ್ಪನ್ನಗಳನ್ನು ರೈತರು ಬಸ್‌ಗಳಲ್ಲಿ ತಂದು ಕೆ.ಆರ್. ಮಾರುಕಟ್ಟೆ, ಕಲಾಸಿಪಾಳ್ಯ ಮಾರುಕಟ್ಟೆ ಮತ್ತು ಇತರ ಮಾರುಕಟ್ಟೆಗಳಲ್ಲಿ ಮಾರಾಟ ಮಾಡುತ್ತಾರೆ. ಹಣ್ಣು ಮತ್ತು ತರಕಾರಿ ಸಾಗಿಸಲು ಹವಾನಿಯಂತ್ರಿತ ಬಸ್‌ಗಳ ವ್ಯವಸ್ಥೆಯನ್ನು ಮಾಡಿದರೆ ರೈತರಿಗೆ ಇನ್ನಷ್ಟು ಅನುಕೂಲ ಆಗಗಲಿದೆ ಎಂದು ಅವರು ಹೇಳಿದರು.

ಗುತ್ತಿಗೆ ಆಧಾರದಲ್ಲಿ ಈ ಸೇವೆ ಒದಗಿಸುವ ಆಲೋಚನೆ ಇದೆ. ರೈತರು, ರೈತ ಗುಂಪುಗಳು, ಸಹಕಾರ ಸಂಘಗಳು ಬಸ್‌ಗಳನ್ನು ಗುತ್ತಿಗೆ ಆಧಾರದಲ್ಲಿ ಪಡೆದುಕೊಳ್ಳಬಹುದಾಗಿದೆ. ಮುಂದಿನ ದಿನಗಳಲ್ಲಿ ಎಲ್ಲಾ ವಿಭಾಗಗಳಲ್ಲೂ ಸುಸ್ಥಿತಿಯಲ್ಲಿರುವ ಹವಾನಿಯಂತ್ರಿತ ಬಸ್‌ಗಳನ್ನು ಮರು ವಿನ್ಯಾಸಗೊಳಿಸಲಾಗುವುದು ಎಂದು ವಿವರಿಸಿದರು.

ಈ ಯೋಜನೆಯನ್ನು ಏಪ್ರಿಲ್‌ನಲ್ಲೇ ಅನುಷ್ಠಾನ ಮಾಡುವ ಉದ್ದೇಶವನ್ನು ಕೆಎಸ್‌ಆರ್‌ಟಿಸಿ ಹೊಂದಿತ್ತು. ಆದರೆ, ನೌಕರರ ಮುಷ್ಕರ, ಅದರ ಜತೆಯಲ್ಲೇ ಆರಂಭವಾದ ಕೋವಿಡ್ ಎರಡನೇ ಅಲೆಯ ಲಾಕ್‌ಡೌನ್‌ನಿಂದ ಅದು ವಿಳಂಬವಾಯಿತು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT