ಮಂಗಳವಾರ, ಸೆಪ್ಟೆಂಬರ್ 28, 2021
22 °C

ಕೃಷಿ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಕೆ ಇಲ್ಲ: ಸಚಿವ ಸುನಿಲ್ ಕುಮಾರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ರಾಜ್ಯದಲ್ಲಿ ಕೃಷಿ ಪಂಪ್‌ಸೆಟ್‌ಗಳಿಗೆ ಮೀಟರ್‌ ಅಳವಡಿಸುವ ಚಿಂತನೆ ಸದ್ಯಕ್ಕೆ ಇಲ್ಲ.  ಈ ಬಗ್ಗೆ ಊಹಾಪೋಹಗಳನ್ನು ರೈತರು ನಂಬಬಾರದು ಎಂದು ಇಂಧನ ಸಚಿವ ವಿ.ಸುನಿಲ್ ಕುಮಾರ್‌  ಹೇಳಿದರು.

ಶುಕ್ರವಾರ ತಮ್ಮ ಕಚೇರಿಯ ಪೂಜೆಯ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡಿದರು. ‘ಕೃಷಿಗೆ ಸಮರ್ಪಕವಾಗಿ ವಿದ್ಯುತ್‌ ಪೂರೈಕೆ ಮಾಡುವುದಕ್ಕೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಇಲಾಖೆಯ ಆಳ ಮತ್ತು ಅಗಲ ತಿಳಿದುಕೊಳ್ಳುವ ಪ್ರಯತ್ನ ಮಾಡಿದ್ದೇನೆ. ಇಲಾಖೆಯನ್ನು ಜನಸ್ನೇಹಿಯಾಗಿಸುವುದು ನನ್ನ ಮುಂದಿರುವ ಸವಾಲು’ ಎಂದೂ ಅವರು ಹೇಳಿದರು.

‘ಈ ಇಲಾಖೆಯಲ್ಲಿ ಲೈನ್‌ಮನ್‌ ಗಳಿಂದ ಹಿಡಿದು ವ್ಯವಸ್ಥಾಪಕ ನಿರ್ದೇಶಕರವರೆಗೆ ಇದ್ದಾರೆ. ಎಲ್ಲ ಹಂತಗಳಲ್ಲಿ ಸುಧಾರಣೆ ತಂದು, ಇಲಾಖೆಯನ್ನು ಕ್ರಿಯಾಶೀಲವಾಗಿಸುವ ಬಗ್ಗೆ ಆಲೋಚನೆ ನಡೆಸಿದ್ದೇನೆ’ ಎಂದು ಸುನಿಲ್‌ ತಿಳಿಸಿದರು.

ರಾಜಕೀಯ ವ್ಯಕ್ತಿಗಳ ಹೆಸರೇಕೆ?:

ಕ್ಯಾಂಟೀನ್‌ಗಳಿಗೆ ರಾಜಕೀಯ ವ್ಯಕ್ತಿಗಳ ಹೆಸರೇಕೆ? ಅದಕ್ಕೆ ಯಾರ ಹೆಸರು ಇಡಬೇಕು ಅಥವಾ ಬಿಡಬೇಕು ಎಂಬುದರ ಚರ್ಚೆ ಆಗಲಿ. ಇಂದಿರಾ ಕ್ಯಾಂಟೀನ್‌ ಹೆಸರು ಬದಲಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯ ವಾಗಿದೆ ಎಂದು ಅವರು ಹೇಳಿದರು.

ಅನ್ನಪೂರ್ಣೇಶ್ವರಿ ಹೆಸರು ಇಟ್ಟರೆ ಬೇರೆ ಪಕ್ಷದವರು ವಿರೋಧ ಏಕೆ ಮಾಡಬೇಕು. ಸರ್ಕಾರಕ್ಕೆ ಹೆಸರು ಬದಲಿಸಬೇಕು ಎಂಬ ಉದ್ದೇಶವಿಲ್ಲ. ಬದಲಿಸಬೇಕು ಎಂಬುದು ಜನರ ಅಭಿಪ್ರಾಯ. ಹಿಂದೆ ವಾಜಪೇಯಿ ಅವರ ಅವಧಿ ಸುವರ್ಣ ಚತುಷ್ಪಥ ರಸ್ತೆಗೆ ವಾಜಪೇಯಿ ಅವರ ಹೆಸರು ಇಡಲಾಗಿತ್ತು. ಕೇಂದ್ರದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ತಕ್ಷಣವೇ ರಸ್ತೆಗಳಲ್ಲಿದ್ದ ಬೋರ್ಡ್‌ಗಳನ್ನೇ ಕಿತ್ತು ಹಾಕಿಸಿತು. ಇದು ಇವರ ಸಂಸ್ಕೃತಿ. ಆದ್ದರಿಂದ ಕಾಂಗ್ರೆಸ್‌ನವರಿಂದ ನಾವು ಸಂಸ್ಕೃತಿ ಕಲಿಯಬೇಕಿಲ್ಲ ಎಂದು ಸುನಿಲ್‌ ಹೇಳಿದರು.

‘ತಪ್ಪು ಆಗಿದ್ದರೆ ತನಿಖೆ’

‘ಸೌರ ವಿದ್ಯುತ್‌ ಯೋಜನೆಗಳಲ್ಲಿ ಈ ಹಿಂದೆ ನಡೆದಿರುವ ಹಗರಣದ ತನಿಖೆ ನಡೆಸಬೇಕು ಎಂದು ವಿಧಾನಸಭೆ ಕಲಾಪದಲ್ಲಿ ಒತ್ತಾಯ ಮಾಡಿದ್ದಕ್ಕೆ ಈಗಲೂ ಬದ್ಧನಾಗಿದ್ದೇನೆ’ ಎಂದು ಸುನಿಲ್ ತಿಳಿಸಿದರು.

‘ಇಲಾಖೆಯಲ್ಲಿ ಈ ಹಿಂದೆ ಯಾವುದಾದರೂ ತಪ್ಪುಗಳು ಆಗಿದ್ದರೆ, ಅದನ್ನು ಸರಿಪಡಿಸುವ ಮತ್ತು ಸುಧಾರಣೆ ಮಾಡುವುದು ನಮ್ಮ ಮೊದಲ ಆದ್ಯತೆಯಾಗಿದೆ. ಅಧಿಕಾರಿಗಳ ಸಭೆ ನಡೆಸಿ ಸಮಗ್ರ ಮಾಹಿತಿ ಪಡೆಯುತ್ತೇನೆ. ಪ್ರಮಾದಗಳು ಆಗಿದ್ದರೆ ತನಿಖೆ ನಡೆಸಲಾಗುವುದು’ ಎಂದು ಅವರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು