ಬುಧವಾರ, ಆಗಸ್ಟ್ 17, 2022
25 °C

ಕಲಾಪ: ‘ಕೈ’ ಅಸಹಕಾರ, ಮಾಹಿತಿ ನೀಡದೆ ಗೋಹತ್ಯೆ ನಿಷೇಧ ಮಸೂದೆ ಮಂಡನೆಗೆ ಸಿಟ್ಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಯಾವುದೇ ಮಾಹಿತಿ ನೀಡದೆ ಗೋಹತ್ಯೆ ನಿಷೇಧ ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸಿದ್ದನ್ನು ಖಂಡಿಸಿದ ಅಧಿಕೃತ ವಿರೋಧ ಪಕ್ಷ ಕಾಂಗ್ರೆಸ್‌, ಕಲಾಪ ಚಟುವಟಿಕೆಗೆ ಗುರುವಾರ ಗೈರುಹಾಜರಾಗುವ ಮೂಲಕ ಅಸಹಕಾರದ ಹಾದಿ ಹಿಡಿಯಿತು.

ವಿರೋಧ ಪಕ್ಷಗಳ ಸಭಾತ್ಯಾಗದ ಮಧ್ಯೆಯೇ ಗೋಹತ್ಯೆ ನಿಷೇಧ ಮಸೂದೆಗೆ ವಿಧಾನಸಭೆಯಲ್ಲಿ ಬುಧವಾರ ಅಂಗೀಕಾರ ನೀಡಲಾಗಿತ್ತು.

‘ಇನ್ನು ಮುಂದೆ ಸದನದ ಕಲಾಪವನ್ನೇ ಬಹಿಷ್ಕರಿಸುತ್ತೇವೆ. ಜನತಾ ನ್ಯಾಯಾಲಯಕ್ಕೆ ಹೋಗುತ್ತೇವೆ‘ ಎಂದು
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಕಟಿಸಿದ್ದರು. ಗುರುವಾರ ನಡೆದ ಕಲಾಪಕ್ಕೆ ಕಾಂಗ್ರೆಸ್‌ ಸದಸ್ಯರೆಲ್ಲ ಗೈರುಹಾಜರಾದರು. ಜೆಡಿಎಸ್‌ನ ಕೃಷ್ಣಾ ರೆಡ್ಡಿ ಬಿಟ್ಟು ಉಳಿದವರು ಸದನದ ಕಡೆ ಮುಖವನ್ನೇ ಹಾಕಲಿಲ್ಲ. ಹೀಗಾಗಿ, ವಿರೋಧ ಪಕ್ಷದ ಬಹುತೇಕ ಸದಸ್ಯರ ಗೈರು ಹಾಜರಿಯಲ್ಲಿ ‘ಏಕಪಕ್ಷೀಯ’ ಕಲಾಪ ನಡೆಸಿದ್ದಕ್ಕೂ ಗುರುವಾರದ ವಿದ್ಯಮಾನ ಸಾಕ್ಷಿಯಾಯಿತು.

ಕಲಾಪ ಆರಂಭವಾದ ಕೂಡಲೇ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಕಾಂಗ್ರೆಸ್‌ ಸದಸ್ಯರು ಸದನಕ್ಕೆ ಹಾಜರಾಗಬೇಕು ಎಂದು ಕೋರಿದರು.  ಮಸೂದೆ ಮಂಡನೆ ಹಿಂದಿನ ಅನಿವಾರ್ಯತೆಗಳನ್ನು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿಕೊಂಡರು.

‘ಈ ಹಿಂದೆ ಮಂಡಿಸಿದ ಎರಡು–ಮೂರು ಮಸೂದೆಗಳಿಗೆ ವಿಧಾನ ಪರಿಷತ್‌ನಲ್ಲಿ ಸೋಲಾಗಿತ್ತು. ಪದೇ ಪದೇ ಸುಗ್ರೀವಾಜ್ಞೆ ಹೊರಡಿಸಿದ್ದಕ್ಕೆ ರಾಜ್ಯಪಾಲರು ಪ್ರಶ್ನೆ ಮಾಡಿದ್ದರು. ಈ ಸಲವೂ ಯಾವುದೇ ಕ್ಷಣದಲ್ಲಾದರೂ ಪರಿಷತ್‌ ಕಲಾಪ ಮುಂದೂಡಿಕೆಯಾಗುವ ಸಾಧ್ಯತೆ ಇತ್ತು. ಹೀಗಾಗಿ, ತರಾತುರಿಯಲ್ಲಿ ಈ ಮಸೂದೆ ಮಂಡಿಸಿದೆವು. ಮಂಡನೆ ಹಿಂದೆ ದುರುದ್ದೇಶ ಇರಲಿಲ್ಲ. ಕದ್ದು ಮುಚ್ಚಿ ಮಸೂದೆ ಮಂಡಿಸುವ ಅಗತ್ಯವೂ ಇಲ್ಲ’ ಎಂದು ಮಾಧುಸ್ವಾಮಿ ಪ್ರತಿಪಾದಿಸಿದರು.

‘ಸುಗ್ರೀವಾಜ್ಞೆ ಹಾಗೂ ತುರ್ತು ಮಸೂದೆಗಳನ್ನು ಮಂಡಿಸುವುದಾಗಿ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಹೇಳಿದ್ದೆವು. ಮಸೂದೆಯ ಪ್ರತಿಯನ್ನೂ ಕಾಂಗ್ರೆಸ್‌ ಸದಸ್ಯರಿಗೆ ನೀಡಿದ್ದೆವು. ಚರ್ಚೆಯಲ್ಲಿ ಪಾಲ್ಗೊಳ್ಳುವಂತೆ ವಿರೋಧ ಪಕ್ಷದ ನಾಯಕರಿಗೆ ಮನವಿ ಮಾಡಿದ್ದೆವು. ನಮ್ಮ ಕಡೆಯಿಂದ ಲೋಪ ಆಗಿಲ್ಲ’ ಎಂದು ಸಭಾಧ್ಯಕ್ಷ ಕಾಗೇರಿ ಸ್ಪಷ್ಟಪಡಿಸಿದರು.

ಕಂದಾಯ ಸಚಿವ ಆರ್‌.ಅಶೋಕ, ‘ಈ ಹಿಂದೆ ಎರಡು ಸಲ ಮಸೂದೆ ಮಂಡಿಸಿದಾಗ ಕಾಂಗ್ರೆಸ್‌ ಸದಸ್ಯರು ರಾಜಭವನದ ಮೇಲೆ ಒತ್ತಡ ತಂದು ಮಸೂದೆಗೆ ತಡೆ ತಂದರು. ಗೋಹತ್ಯೆ ನಿಷೇಧ ಕಾಯ್ದೆ ತರುವುದಾಗಿ ಪ್ರಣಾಳಿಕೆಯಲ್ಲೇ ಹೇಳಿದ್ದೆವು. ಆ ಪ್ರಕಾರವೇ ನಡೆದುಕೊಂಡಿದ್ದೇವೆ’ ಎಂದರು.

ಕಾಂಗ್ರೆಸ್‌ ಸದಸ್ಯರನ್ನು ಮತ್ತೊಮ್ಮೆ ಮನವೊಲಿಸುವುದಾಗಿ ಹೇಳಿದ ಕಾಗೇರಿ ಕಲಾಪವನ್ನು 10 ನಿಮಿಷ ಮುಂದೂಡಿದರು. ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ ನಡೆಯುತ್ತಿದ್ದ ಸ್ಥಳಕ್ಕೆ ಸಭಾಧ್ಯಕ್ಷರು ಪ್ರತಿನಿಧಿಯನ್ನು ಕಳುಹಿಸಿದರು. ಮತ್ತೆ ಕಲಾಪ ಆರಂಭವಾದ ಬಳಿಕವೂ ಕಾಂಗ್ರೆಸ್‌ ಸದಸ್ಯರು ಬರಲಿಲ್ಲ. ಜೆಡಿಎಸ್‌ ಸದಸ್ಯರು ಗೈರುಹಾಜರಾಗಿದ್ದರು. ಬಿಜೆಪಿ ಸದಸ್ಯರು ಹಾಗೂ ಪಕ್ಷೇತರ ಸದಸ್ಯ ಶರತ್‌ ಬಚ್ಚೇಗೌಡ, ಎನ್‌.ಮಹೇಶ್‌ ಹಾಜರಿದ್ದರು.

ಮಸೂದೆ ಮಂಡನೆ ಮುನ್ನವೇ ಮುಂದೂಡಿಕೆ

ಕಾಂಗ್ರೆಸ್ಸಿನ ತೀವ್ರ ವಿರೋಧದ ಮಧ್ಯೆಯೇ ವಿಧಾನಸಭೆಯಲ್ಲಿ ಅನುಮೋದನೆಗೊಂಡ ಗೋ ಹತ್ಯೆ ನಿಷೇಧ  ಮಸೂದೆ ವಿಧಾನ ಪರಿಷತ್‌ನಲ್ಲಿ ಗುರುವಾರ ಮಂಡನೆಯಾಗುವ ಮೊದಲೇ ಸಭಾಪತಿ ಪ್ರತಾಪ್‌ಚಂದ್ರ ಶೆಟ್ಟಿ ಅನಿರ್ದಿಷ್ಟಾವಧಿಗೆ ಕಲಾಪವನ್ನು ಮುಂದೂಡಿದರು.

ಬುಧವಾರ ನಡೆದ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಅಧಿವೇಶನನ್ನು ಇದೇ 15ರವರೆಗೆ ನಡೆಸುವಂತೆ ಬಿಜೆಪಿ ಆಗ್ರಹಿಸಿದ್ದರೂ, ಕಾಂಗ್ರೆಸ್‌ ಒಪ್ಪಿರಲಿಲ್ಲ. ಈ ವಿಷಯದಲ್ಲಿ ಗದ್ದಲ ಉಂಟಾಗಿದ್ದರಿಂದ ತೀರ್ಮಾನ ಇಲ್ಲದೇ ಸಭೆ ಅಂತ್ಯವಾಗಿತ್ತು.  ತೀರ್ಮಾನವನ್ನು ಸದನದಲ್ಲಿ ತಿಳಿಸುವುದಾಗಿ ಸಭೆಯಲ್ಲಿ ಹೇಳಿದ್ದ ಸಭಾಪತಿ, ಬಿಜೆಪಿ ಸದಸ್ಯರು ಅವಿಶ್ವಾಸ ನಿರ್ಣಯದ ಮೇಲೆ ಚರ್ಚೆ ಆರಂಭಿಸಲು ಆಗ್ರಹಿಸುತ್ತಿದ್ದಂತೆ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡುವುದಾಗಿ ಪ್ರಕಟಿಸಿದರು.

ಸಭಾಪತಿ ವಿರುದ್ಧ ನೀಡಿರುವ ಅವಿಶ್ವಾಸ ನಿರ್ಣಯ ನೋಟಿಸ್‌ ಮೇಲೆ ಚರ್ಚೆ ಕೈಗೆತ್ತಿಕೊಳ್ಳುವಂತೆ ಬಿಜೆಪಿಯ ಆಯನೂರು ಮಂಜುನಾಥ್ ಮತ್ತು ಬಿಜೆಪಿಯ ಇತರ ಸದಸ್ಯರು ಆಗ್ರಹಿಸಿದಾಗ ಕಾಂಗ್ರೆಸ್ಸಿನ ಬಿ.ಕೆ. ಹರಿಪ್ರಸಾದ್, ಕಲಾಪದ ಕಾರ್ಯಸೂಚಿಯಲ್ಲಿರುವ ಗೋಹತ್ಯೆ ನಿಷೇಧ ಕಾಯ್ದೆಯ ಮಸೂದೆ ಮೇಲೆ ಚರ್ಚೆ ಕೈಗೆತ್ತಿಕೊಳ್ಳುವಂತೆ ಸಭಾಪತಿ ಬಳಿ ಮನವಿ ಮಾಡಿದರು. ಆಗ ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ, ‘ಸಂಬಂಧಪಟ್ಟ ಸಚಿವರು ಸದನದಲ್ಲಿ ಇಲ್ಲ. ನಾಳೆ (ಶುಕ್ರವಾರ) ಈ ವಿಚಾರ ಕೈಗೆತ್ತಿಕೊಳ್ಳುತ್ತೇವೆ’ ಎಂದರು.

ಆಗ ಆಯನೂರು ಮಂಜುನಾಥ್ ಅವಿಶ್ವಾಸ ನಿರ್ಣಯ ವಿಚಾರವನ್ನು ಮತ್ತೊಮ್ಮೆ ಪ್ರಸ್ತಾಪಿಸಿದರು. ಅದಕ್ಕೆ ಸಭಾಪತಿ, ‘ಈ ವಿಚಾರದಲ್ಲಿ ನಾನು ಕಾನೂನು ತಜ್ಞರ ಸಲಹೆಯನ್ನು ಕಡತದಲ್ಲಿ ಪಡೆದಿದ್ದೇನೆ. ಅದನ್ನು ಎಲ್ಲ ಸದಸ್ಯರಿಗೆ ತಿಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಈಗಾಗಲೇ ಗ್ರಾಮ ಮಂಚಾಯಿತಿ ಚುನಾವಣೆ ಘೋಷಣೆಯಾಗಿದ್ದು, ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾದ 25 ಸದಸ್ಯರು ಸದನದಲ್ಲಿದ್ದಾರೆ. ಹೀಗಾಗಿ, ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದ್ದೇನೆ’ ಎಂದು ಪ್ರಕಟಿಸಿದರು.

15ಕ್ಕೆ ವಿಶೇಷ ಅಧಿವೇಶನ?: ಗೋಹತ್ಯೆ ನಿಷೇಧ ಮಸೂದೆಗೆ ಅಂಗೀಕಾರಕ್ಕಾಗಿ ಡಿ.15ರಂದು ವಿಧಾನಮಂಡಲದ ಅಧಿವೇಶನ ನಡೆಸಲು ಚಿಂತನೆ ನಡೆಸಿರುವ ಸರ್ಕಾರ, ರಾಜ್ಯಪಾಲರ ಅನುಮತಿ ಕೋರಲು ಮುಂದಾಗಿದೆ.

***

2–3 ಮಸೂದೆಗಳನ್ನು ಮಂಡಿಸುತ್ತೇವೆ ಎಂದು ಕಲಾಪ ಸಲಹಾ ಸಮಿತಿಯಲ್ಲಿ ಹೇಳಿದ್ದೆವು. ಆದರೆ,ಗೋಹತ್ಯೆ ನಿಷೇಧ ಮಸೂದೆ ಮಂಡಿಸುತ್ತೇವೆ ಎಂದು ಹೇಳಿರಲಿಲ್ಲ 

- ಜೆ.ಸಿ.ಮಾಧುಸ್ವಾಮಿ, ಕಾನೂನು ಸಚಿವ

***
ಭ್ರಷ್ಟಾಚಾರ, ಆಂತರಿಕ ಭಿನ್ನಮತದಿಂದಾಗಿ ಸರ್ಕಾರ ನಿಷ್ಕ್ರಿಯವಾಗಿದೆ. ಜನರ ಗಮನ ಬೇರೆಡೆ ಸೆಳೆಯಲು ಗೋಹತ್ಯೆ ನಿಷೇಧದಂತಹ ವಿಷಯ ಮುನ್ನೆಲೆಗೆ ತರಲಾಗಿದೆ 

- ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು