ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿಯಿಂದ ಶಿವಮೊಗ್ಗ ವಿಮಾನ ನಿಲ್ದಾಣ ಲೋಕಾರ್ಪಣೆ; ಬಿಎಸ್‌ವೈ ಸಾಧನೆಗೆ ಮೆಚ್ಚುಗೆ

Last Updated 28 ಫೆಬ್ರುವರಿ 2023, 5:16 IST
ಅಕ್ಷರ ಗಾತ್ರ

ಶಿವಮೊಗ್ಗ: ದೇಶದ ನಾಗರಿಕರು ‘ಮೇಡ್ ಇನ್ ಇಂಡಿಯಾ’ ಮೊಹರು ಇರುವ ವಿಮಾನಗಳಲ್ಲಿ ಓಡಾಡುವ ಕಾಲ ದೂರವಿಲ್ಲ. ಯುವಜನತೆಗೆ ಉದ್ಯೋಗಾವಕಾಶ ಕಲ್ಪಿಸುವಲ್ಲಿ ವಿಮಾನಯಾನ ಕ್ಷೇತ್ರ ಮುಂದಿನ ದಿನಗಳಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂದು ಮೋದಿ ಹೇಳಿದರು.

ಜಿಲ್ಲೆಯ ಸೋಗಾನೆಯಲ್ಲಿ ಸೋಮವಾರ ನೂತನ ವಿಮಾನ ನಿಲ್ದಾಣ ಲೋಕಾರ್ಪಣೆ ಮಾಡಿದ ಪ್ರಧಾನಿ ನರೇಂದ್ರ ಮೋದಿ, ಭಾರತಕ್ಕೆ ಈಗ ಸಾವಿರಾರು ವಿಮಾನಗಳ ಅಗತ್ಯವಿದ್ದು, ವಿಮಾನ ತಯಾರಿಕೆಯಲ್ಲಿ ಸ್ವಾವಲಂಬನೆ ಸಾಧಿಸುವತ್ತ ದೇಶ ಮುಂದಡಿ ಇಟ್ಟಿದೆ ಎಂದರು.

‘ಬಿಜೆಪಿ ಅಧಿಕಾರಕ್ಕೆ ಬಂದ 9 ವರ್ಷಗಳಲ್ಲಿ ಹೊಸದಾಗಿ 74 ವಿಮಾನ ನಿಲ್ದಾಣಗಳ ನಿರ್ಮಾಣವಾಗಿವೆ. ಇದು ನಮ್ಮ (ಬಿಜೆಪಿ) ಅಭಿವೃದ್ಧಿಯ ದೃಷ್ಟಿಕೋನ. ಈ ಹಿಂದೆ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಏರ್ ಇಂಡಿಯಾ ಅಂದರೆ ಬರೀ ನಕಾರಾತ್ಮಕ ಸಂಗತಿಗಳೇ ಕೇಳಿಬರುತ್ತಿದ್ದವು. ಅಧಿಕಾರಸ್ಥರಿಂದ ಹಗರಣಗಳು, ಕೆಟ್ಟ ನಿರ್ವಹಣೆಗೆ ಮಾದರಿ ಆಗಿದ್ದ ಏರ್ ಇಂಡಿಯಾ ಈಗ ದೇಶದ ಹೊಸ ಸಾಮರ್ಥ್ಯದ ಧ್ಯೋತಕವಾಗಿ ಮುನ್ನಡೆಯುತ್ತಿದೆ’ ಎಂದು ಬಣ್ಣಿಸಿದರು.

ಯಡಿಯೂರಪ್ಪ ಕೇಂದ್ರಬಿಂದು: ಕಾರ್ಯಕ್ರಮದ ಬಹುಪಾಲು ಸಮಯವನ್ನು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಗೌರವ ಸಲ್ಲಿಸಲು ಬಳಸಿಕೊಂಡರು. ಯಡಿಯೂರಪ್ಪ ಅವರನ್ನು ಬಿಜೆಪಿ ಕಡೆಗಣಿಸಿಲ್ಲ ಎಂಬ ಸಂದೇಶವನ್ನು ರವಾನಿಸಲು ಯತ್ನಸಿದರು.

80ನೇ ವಸಂತಕ್ಕೆ ಕಾಲಿಸಿರಿದ ಯಡಿಯೂರಪ್ಪ ಅವರಿಗೆ ಮೋದಿ ಅವರ ಮನವಿಯಂತೆ ಕಾರ್ಯಕ್ರಮದಲ್ಲಿ ಸೇರಿದ್ದ ಲಕ್ಷಕ್ಕೂ ಹೆಚ್ಚು ಮಂದಿಗೆ ಮೊಬೈಲ್‌ಫೋನ್ ಟಾರ್ಚ್ ಬೆಳಗಿಸಿ ಹಿರಿಯ ನಾಯಕನಿಗೆ ಹಗಲಲ್ಲೂ ಟಾರ್ಚ್‌ ಬೆಳಕಿನ ಗೌರವ ಕೊಡಿಸಿದರು.

‘ಯಡಿಯೂರಪ್ಪ ಅವರ 50–60 ವರ್ಷಗಳ ಸಾರ್ವಜನಿಕ ಬದುಕು ನಮಗೆಲ್ಲರಿಗೂ ಮಾದರಿಯಾಗಿದ್ದು, ಮೊಬೈಲ್‌ ಟಾರ್ಚ್‌ ಬೆಳಕಿನ ಮೂಲಕ ಅವರನ್ನು ಗೌರವಿಸೋಣ’ ಎಂದು ಮೋದಿ ಹೇಳಿದಾಗ, ‘ಮೋದಿ, ಮೋದಿ..’ ಹಾಗೂ ‘ಯಡಿಯೂರಪ್ಪ ಅವರಿಗೆ ಜೈ’ ಎಂಬ ಘೋಷಣೆ ಮುಗಿಲುಮುಟ್ಟಿತು.

ವಿಮಾನ ನಿಲ್ದಾಣದ ಹೆಸರು ಪ್ರಸ್ತಾಪವಿಲ್ಲ: ವಿಮಾನ ನಿಲ್ದಾಣಕ್ಕೆ ರಾಷ್ಟ್ರಕವಿ ಕುವೆಂಪು ಅವರ ಹೆಸರನ್ನು ಸ್ವತಃ ಪ್ರಧಾನಿ ಉದ್ಘಾಟನಾ ಸಮಾರಂಭದಲ್ಲಿ ಘೋಷಿಸುವ ಸಾಧ್ಯತೆ ಇದೆ ಎಂದು ಬಿಜೆಪಿ ಮೂಲಗಳು ತಿಳಿಸಿದ್ದವು. ಭಾಷಣದಲ್ಲಿ ಕುವೆಂಪು ಹಾಗೂ ಅವರ ವಿಶ್ವಮಾನವ ಸಂದೇಶವನ್ನು ನರೇಂದ್ರ ಮೋದಿ ಸಾರಿದರೂ, ವಿಮಾನ ನಿಲ್ದಾಣಕ್ಕೆ ಯಾರ ಹೆಸರನ್ನು ಇರಿಸಲಾಗುವುದು ಎಂಬುದರ ಬಗ್ಗೆ ಪ್ರಸ್ತಾಪಿಸಲಿಲ್ಲ.

2019ರಲ್ಲಿ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ವಿಮಾನ ನಿಲ್ದಾಣದ ವಿನ್ಯಾಸ ಬದಲಿಸಿತ್ತು. ಬೋಯಿಂಗ್‌ನಂತಹ ದೊಡ್ಡ ವಿಮಾನ ಇಳಿಯಲು ಅವಕಾಶ ಕಲ್ಪಿಸಿ, ರನ್ ವೇ ಉದ್ದವನ್ನು 2.05 ಕಿ.ಮೀ ಬದಲಿಗೆ, 3.20 ಕಿ.ಮೀ.ಗೆ ಹೆಚ್ಚಿಸಲಾಯಿತು. ರಾತ್ರಿ ವೇಳೆ ವಿಮಾನ ಇಳಿಯುವ ಸೌಲಭ್ಯ ಕಲ್ಪಿಸಲಾಯಿತು. ಇದರಿಂದ ಯೋಜನಾ ವೆಚ್ಚ ₹ 220 ಕೋಟಿಯಿಂದ ₹449.22 ಕೋಟಿಗೆ ಏರಿಕೆಯಾಯಿತು.

ಹಸಿರು ಶಾಲು: ಪ್ರವೇಶ ನಿರಾಕರಣೆ
ಸಮಾರಂಭಕ್ಕೆ ಕಪ್ಪು ಬಟ್ಟೆ, ಶಾಲು ಹಾಕಿಕೊಂಡು ಬಂದರೆ ಪ್ರವೇಶವಿಲ್ಲ ಎಂದು ಮೊದಲೇ ಸಂಘಟಕರು ತಿಳಿಸಿದ್ದರು. ಆದರೆ, ಹಸಿರು ಶಾಲು ಹಾಕಿಕೊಂಡು ಬಂದವರಿಗೂ ಪ್ರವೇಶ ನೀಡಲಿಲ್ಲ.

‘ಯಡಿಯೂರಪ್ಪ ಅವರಿಗೆ ಹಸಿರುಶಾಲು ಹಾಕಿ ಮೋದಿ ಸನ್ಮಾನಿಸಿದರು. ಆದರೆ, ಹಸಿರು ಶಾಲು ಹಾಕಿದ್ದಕ್ಕೆ ನಮ್ಮನ್ನು ಒಳಗೆ ಬಿಡಲಿಲ್ಲ’ ಎಂದು ದಾವಣಗೆರೆ ತಾಲ್ಲೂಕು ಬಾಡ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಪ್ರತಿನಿಧಿ ಬಿ.ಎಚ್. ಹನುಮಣ್ಣ ಹೇಳಿದರು.

‘ಹಸಿರು ಶಾಲು ತೆಗೆದಿಟ್ಟರೆ ಒಳಗೆ ಬಿಡುತ್ತೇವೆ ಅಂದರು. ಅದಕ್ಕೆ ಒಪ್ಪದೇ ನಾವು ಎಂಟು ಮಂದಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದೇ ಮರಳಿದೆವು’ ಎಂದರು. ಕೇಸರಿ ಶಾಲು ಹಾಕಿಕೊಂಡು ಬಂದವರಿಗೆ ಕಾರ್ಯಕ್ರಮಕ್ಕೆ ಪ್ರವೇಶ ನೀಡಲಾಗಿತ್ತು.

***

ಶಿವಮೊಗ್ಗದ ಸೋಗಾನೆ ವಿಮಾನ ನಿಲ್ದಾಣವನ್ನು ಇನ್ನೆರಡು ವರ್ಷಗಳಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವಾಗಿ ಮೇಲ್ದರ್ಜೆಗೇರಿಸಲಾಗುವುದು.
–ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT