ಮಂಗಳವಾರ, ಜನವರಿ 19, 2021
22 °C

PV Web Exclusive| ಬಸವ ಕಲ್ಯಾಣದ ಹೊಸ ‘ಅನುಭವ ಮಂಟಪ’ದಲ್ಲಿ ಇರುವುದಾದರೂ ಏನು?

ಗಣೇಶ ಚಂದನಶಿವ Updated:

ಅಕ್ಷರ ಗಾತ್ರ : | |

Prajavani

ಜಗತ್ತಿನ ‘ಪ್ರಥಮ ಪಾರ್ಲಿಮೆಂಟ್‌’ ಕಾರ್ಯನಿರ್ವಹಿಸಿದ್ದ ಸ್ಥಳದಲ್ಲೀಗ ‘ನೂತನ ಅನುಭವ ಮಂಟಪ’ ನಿರ್ಮಾಣವಾಗಲಿದೆ. ಬಸವಾದಿ ಶರಣರ ಕಾಯಕ ಮತ್ತು ಸಮಾನತೆಯ ಸಂದೇಶವನ್ನು ವಿಶ್ವಕ್ಕೆ ಪರಿಚಯಿಸುವ ಉದ್ದೇಶದಿಂದ ಬೀದರ್‌ ಜಿಲ್ಲೆಯ ಬಸವ ಕಲ್ಯಾಣದಲ್ಲಿ ಸ್ಥಾಪನೆಯಾಗಲಿರುವ ಈ ನೂತನ ಅನುಭವ ಮಂಟಪ ಅಂತರರಾಷ್ಟ್ರೀಯ ಪ್ರಮುಖ ಧಾರ್ಮಿಕ ಪ್ರವಾಸಿ ತಾಣವಾಗಿಯೂ ರೂಪುಗೊಳ್ಳಲಿದೆ.

ಬಸವ ಕಲ್ಯಾಣದ ತ್ರಿಪುರಾಂತ ಕೆರೆಯ ದಡದಲ್ಲಿ ರಾಜ್ಯ ಸರ್ಕಾರ ನೂತನ ಅನುಭವ ಮಂಟಪ ನಿರ್ಮಿಸಲಿದ್ದು, ಜ. 6ರಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಅನುಭವ ಮಂಟಪದ ಹಿರಿಮೆಯನ್ನು ಮರುಸ್ಥಾಪಿಸುವ ಆಶಯದಿಂದ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ 2016ರ ಮೇ 20ರಂದು ತಜ್ಞರ ಸಲಹಾ ಸಮಿತಿ ರಚಿಸಿದ್ದರು. ಗೊ.ರು.ಚನ್ನಬಸಪ್ಪ ನೇತೃತ್ವದ ಈ ಸಮಿತಿಯಲ್ಲಿ ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪ, ಬೆಂಗಳೂರು ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ, ಮ.ನ.ಜವರಯ್ಯ, ರಂಜಾನ್ ದರ್ಗಾ ಸೇರಿದಂತೆ 10 ಜನ ತಜ್ಞರು ಇದ್ದರು. ಈ ಸಮಿತಿ  ಕ್ಷೇತ್ರಕಾರ್ಯ ಕೈಗೊಂಡು ವಿಸ್ತೃತ ವರದಿಯನ್ನು 2017ರ ಸೆಪ್ಟೆಂಬರ್‌ 11ರಂದು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೀಡಿತ್ತು.

ಶರಣರ ಚಳವಳಿಯ ನೆನಪುಗಳನ್ನು ಮರುಸೃಷ್ಟಿಸುವ ಮಾದರಿಯಲ್ಲಿ ಈ ಕಟ್ಟಡದ ರೂಪುರೇಷೆ ತಯಾರಿಸಿದ್ದು, 182 ಅಡಿ ಎತ್ತರ ಮತ್ತು ಆರು ಮಹಡಿಯನ್ನು ಇದು ಹೊಂದಲಿದೆ. ಯೋಜನೆಗೆ ₹ 604 ಕೋಟಿ ವೆಚ್ಚವಾಗಬಹುದು ಎಂದು ವರದಿ ಉಲ್ಲೇಖಿಸಿದೆ.

ಅನುಭವ ಮಂಟಪ ಹೇಗಿತ್ತು ಎಂಬ ಕುರುಹುಗಳು ಲಭ್ಯವಿಲ್ಲದ್ದರಿಂದ, ವಚನಗಳು, ಕೆಲವು ಕೃತಿಗಳನ್ನು ಆಧರಿಸಿ ಮಂಟಪದ ಸ್ವರೂಪವನ್ನು ಕಲ್ಪಿಸಿಕೊಂಡು ವಿನ್ಯಾಸಗೊಳಿಸಲಾಗಿದೆ. ರೆವರೆಂಡ್‌ ಉತ್ತಂಗಿ ಚನ್ನಪ್ಪನವರ ‘ಅನುಭವ ಮಂಟಪದ ಐತಿಹಾಸಿಕತೆ’, ಎಸ್‌.ಎಂ. ಜಾಮದಾರ ಅವರ ‘ಅನುಭವ ಮಂಟಪದ ನವನಿರ್ಮಾಣ ಕುರಿತ ಟಿಪ್ಪಣಿ’, ವಚನ ಸಾಹಿತ್ಯ ಸಂಪುಟಗಳು, ಶರಣರ ಪುರಾಣಗಳಲ್ಲಿರುವ ಮಾಹಿತಿಗಳನ್ನು ಪರಿಗಣಿಸಿ, ಯಾವುದೇ ಅನುಕರಣೆಯಿಲ್ಲದಂತೆ ಮಂಟಪ ನಿರ್ಮಿಸುವ ರೂಪುರೇಷೆಯನ್ನು ಗೊರುಚ ಸಮಿತಿ ಸಿದ್ಧಪಡಿಸಿದೆ.

12ನೇ ಶತಮಾನದ ಶರಣರ ಷಟ‌ಸ್ಥಲ, ಅಷ್ಟಾವರಣ, ಪಂಚಾಚಾರ ಸಿದ್ಧಾಂತಗಳು, ಕಾಯಕ, ದಾಸೋಹ, ಅನುಭಾವ ಜೀವನ ಸೂತ್ರಗಳನ್ನು ಪರಿಚಯಿಸುವ ರೀತಿಯಲ್ಲಿ ಮಂಟಪ ನಿರ್ಮಾಣವಾಗಲಿದೆ.

ಕಲ್ಯಾಣಿ ಚಾಲುಕ್ಯರ ವಾಸ್ತುಶಿಲ್ಪ ಶೈಲಿಯಲ್ಲಿ ವೃತ್ತಾಕಾರದಲ್ಲಿ ನಿರ್ಮಾಣವಾಗಲಿರುವ ಈ ಕಟ್ಟಡದ ಮೇಲುತುದಿಯಲ್ಲಿ 100 ಅಡಿ ವ್ಯಾಸದ ಲಿಂಗಾಕಾರದ ಬೃಹತ್‌ ಗೋಪುರ ಇರಲಿದೆ.

ಕಟ್ಟಡದ ನೆಲ ಮಾಳಿಗೆಯಲ್ಲಿ 1,500 ಜನರು ಪ್ರಸಾದ ಸ್ವೀಕರಿಸುವಷ್ಟು ವಿಶಾಲವಾದ ದಾಸೋಹ ಭವನ ನಿರ್ಮಾಣವಾಗಲಿದೆ.

ಎಲ್ಲ ಅಂತಸ್ತುಗಳಲ್ಲಿ ಶರಣರ ವಿಚಾರಧಾರೆಗೆ ಸಂಬಂಧಿಸಿದ ಚಿಂತನಾ ಮಂಟಪಗಳು, ಅನುಷ್ಠಾನಕ್ಕೆ ಕುಳಿತುಕೊಳ್ಳುವ ಗುಹೆಗಳು, ಕಂಬಗಳ ಮೇಲೆ ವಚನಗಳ ಕೆತ್ತನೆ, ಭಿತ್ತಿಚಿತ್ರ, ಉಬ್ಬುಚಿತ್ರಗಳು ಇರಲಿವೆ.

ವಚನಗಳಲ್ಲಿ ಪ್ರಸ್ತಾಪವಾಗಿರುವ 770 ಅಮರಗಣಂಗಳ ಸಂಕೇತವಾಗಿ 770 ಆಸನಗಳ ಸಭಾಭವನ ಮೇಲಂತಸ್ತಿನಲ್ಲಿ ಇರಲಿದೆ.

ಮಹಾಮನೆ ಕ್ಷೇತ್ರದಲ್ಲಿ ಸ್ವಾಗತ, ಭದ್ರತೆ, ಆಡಳಿತ ಕಚೇರಿ, ಗ್ರಂಥಾಲಯ, ಸಂಶೋಧನೆಗೆ ಅಗತ್ಯ ಸೌಲಭ್ಯ, ಯೋಗ, ಧ್ಯಾನಕ್ಕೆ ಪ್ರತ್ಯೇಕ ಸಭಾಂಗಣಗಳನ್ನು ನಿರ್ಮಿಸಲಾಗುತ್ತದೆ.

ಮಹಾಮನೆ ಕ್ಷೇತ್ರದಲ್ಲಿ ಉದ್ಯಾನವನ, ಕಾರಂಜಿ, ಶರಣರ ಕಾಯಕ ಮೂರ್ತಿಗಳು ಇರಲಿವೆ.

ತ್ರಿಪುರಾಂತ ಕೆರೆಯಲ್ಲಿ ದೋಣಿ ವಿಹಾರದ ವ್ಯವಸ್ಥೆ ಇರಲಿದೆ.

ನೂತನ ಅನುಭವ ಮಂಟಪಕ್ಕೆ ರಾಜ್ಯ ಸರ್ಕಾರ ₹ 600 ಕೋಟಿ ಅನುದಾನ ನೀಡಲು ಮಂಜೂರಾತಿ ನೀಡಿದೆ. ಈಗ ₹ 100 ಕೋಟಿ ಬಿಡುಗಡೆ ಮಾಡಿದ್ದು, ಎರಡು ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಸರ್ಕಾರ ಹೇಳಿದೆ.

ಬಸವ ಕಲ್ಯಾಣಕ್ಕೆ ಕಿರೀಟ

ಬಸವಕಲ್ಯಾಣ ಅಭಿವೃದ್ಧಿ ಮಂಡಳಿಯಿಂದ ವಿವಿಧ ಶರಣ ಸ್ಮಾರಕಗಳ ಜೀರ್ಣೋದ್ಧಾರ ಮಾಡಲಾಗಿದೆ. ಬಸವ ಮಹಾಮನೆ ಆವರಣದಲ್ಲಿ 108 ಅಡಿ ಎತ್ತರದ ಬಸವಣ್ಣನ ಮೂರ್ತಿ ಸ್ಥಾಪಿಸಿದ್ದು, ಇದು ಬಸವ ಕಲ್ಯಾಣದ ಪ್ರಮುಖ ಆಕರ್ಷಣೆಯಾಗಿದೆ. ಬಿಜ್ಜಳನ ಕೋಟೆ, ಬಸವಣ್ಣನವರ ಅರಿವಿನ ಮನೆ, ಅನುಭವ ಮಂಟಪ, ಮಡಿವಾಳ ಮಾಚಿದೇವರ ಗುಡಿ, ಸಮಗಾರ ಹರಳಯ್ಯನವರ ಗುಹೆ, ನೂಲಿ ಚಂದಯ್ಯನ ಗುಹೆ, ಅಕ್ಕ ನಾಗಮ್ಮನ ಗವಿ, ಅಂಬಿಗರ ಚೌಡಯ್ಯನವರ ಗುಹೆ ಮುಂತಾದವು ಬಸವ ಕಲ್ಯಾಣದ ಪ್ರಮುಖ ತಾಣಗಳಾಗಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು