ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರಂಗ ಮಾರ್ಗ ಬದಲಿಗೆ ಇದ್ದ ರಸ್ತೆ ವಿಸ್ತರಿಸಿದ್ದರೆ ಸಾಕಿತ್ತು: ಪರಿಸರ ಪ್ರಿಯರು

ಪಶ್ಚಿಮಘಟ್ಟದಲ್ಲಿ ಜೀವ ಕೇಂದ್ರಿತ ಅಭಿವೃದ್ಧಿ ಅಗತ್ಯ: ಪರಿಸರ ಪ್ರಿಯರ ಸಲಹೆ
Last Updated 13 ಫೆಬ್ರುವರಿ 2021, 19:39 IST
ಅಕ್ಷರ ಗಾತ್ರ

ಹಾಸನ: ಶಿರಾಡಿ ಘಾಟಿ ಸುರಂಗ ಮಾರ್ಗ ನಿರ್ಮಾಣದ ಬದಲು ಇರುವ ರಸ್ತೆಯನ್ನೇ ವಿಸ್ತರಿಸಿದ್ದರೆ ಸಾಕಿತ್ತು ಎನ್ನುವ ಅಭಿಪ್ರಾಯ ಪರಿಸರ ಪ್ರಿಯರದ್ದು.

ಸುರಂಗ ಮಾರ್ಗ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿರುವ ವನ್ಯಜೀವಿಪ್ರಿಯರು, ‘ಪ್ರಾಣಿಗಳ ಓಡಾಟಕ್ಕೆ ತೊಂದರೆಯಾಗುವ ಕಾರಣ ಸುರಂಗ ಮಾರ್ಗದ ಬದಲು ಹಾಲಿ ಇರುವ ರಸ್ತೆಯನ್ನೇ ವಿಸ್ತರಣೆ ಮಾಡಿ, ಕಾಡು ಉಳಿಸಬೇಕು’ ಎಂದು ಸಲಹೆ ನೀಡಿದ್ದಾರೆ.

‘ಪಶ್ಚಿಮಘಟ್ಟದಲ್ಲಿ ಇತ್ತೀಚಿನ ವರ್ಷಗಳಲ್ಲಿ ಭೂ ಕುಸಿತ ಹೆಚ್ಚಾಗುತ್ತಿದೆ. ಸುರಂಗ ಮಾರ್ಗ ನಿರ್ಮಾಣದಿಂದ ಭೂ ಪದರಕ್ಕೆ ಹಾನಿಯಾಗಿ, ಭೂ ಕುಸಿತ ಮತ್ತಷ್ಟು ಹೆಚ್ಚಾಗುವ ಸಂಭವವಿದೆ. ಇದರಿಂದ ಅರಣ್ಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾಗಿ, ವನ್ಯಜೀವಿಗಳಿಗೂ ತೊಂದರೆ ಆಗಲಿದೆ. ಪ್ರಾಣಿಗಳ ಓಡಾಟಕ್ಕೆ ತೊಂದರೆ ಆಗಬಾರದು ಎಂದರೆ, ಮೊದಲು ಅರಣ್ಯದಲ್ಲಿ ಅಭಿವೃದ್ಧಿ ಚಟುವಟಿಕೆ ನಿಲ್ಲಿಸಬೇಕು. ಮನುಷ್ಯ ಕೇಂದ್ರಿತ ಅಭಿವೃದ್ಧಿ ಬದಲು ಜೀವ ಕೇಂದ್ರಿತ ಅಭಿವೃದ್ಧಿಯಾಗಬೇಕು. ಈಗ ನಡೆಯುತ್ತಿರುವುದು ವಿನಾಶದ ಅಭಿವೃದ್ಧಿ’ ಎಂದು ಮಲೆನಾಡು ಜನಪರ ಹೋರಾಟ ಸಮಿತಿ ಅಧ್ಯಕ್ಷ ಎಚ್.ಎ. ಕಿಶೋರ್‌ ಕುಮಾರ್ ಅಭಿಪ್ರಾಯಪಟ್ಟರು.

‘ಈಗಾಗಲೇ ಅರಣ್ಯ ಪ್ರದೇಶ ನಾಶವಾಗಿ ಕಾಡಾನೆ, ಚಿರತೆ, ಕಾಡುಕೋಣ ನಾಡಿಗೆ ನುಗ್ಗುತ್ತಿವೆ. ಸಾಕಷ್ಟು ಜೀವ ಹಾನಿ, ಬೆಳೆ ಹಾನಿಯೂ ಆಗುತ್ತಿದೆ. ಈ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ, ಕಿರುಜಲ ವಿದ್ಯುತ್ ಯೋಜನೆ, ರೈಲು ಮಾರ್ಗ, ಗ್ಯಾಸ್‌ ಪೈಪ್‌ಲೈನ್‌ ಹಾದು ಹೋಗಿದೆ. ಸರಕು ಸಾಗಾಣೆಗೆ ರೈಲು, ರಾಷ್ಟ್ರೀಯ ಹೆದ್ದಾರಿ ಸೌಲಭ್ಯವನ್ನೇ ಸಮರ್ಪಕವಾಗಿ ಬಳಸಿಕೊಂಡು ಸುರಂಗ ಮಾರ್ಗ ಕೈ ಬಿಡುವ ಬಗ್ಗೆ ಪರಿಶೀಲನೆ ನಡೆಸಬೇಕು. ಯೋಜನೆ ರೂಪಿಸುವ ಮುನ್ನ ಸರಿಯಾದ ಅಧ್ಯಯನ ನಡೆಯಬೇಕು’ ಎಂದು ಅವರು ಸಲಹೆ ನೀಡಿದರು.

‘ಕಾಡು ನಾಶ ಮಾಡುತ್ತಾ ಹೋದರೆ ನೀರಿನ ಸಮಸ್ಯೆ ಉಂಟಾಗುತ್ತದೆ. ವನ್ಯಜೀವಿಗಳಿಗೆ ಉಳಿದಿರುವುದು ಶೇ 3ರಷ್ಟು ಅರಣ್ಯ. ಸುರಂಗ ಮಾರ್ಗ ನಿರ್ಮಾಣದ ಸ್ಥಳಗಳಲ್ಲಿ ಸಮಸ್ಯೆ ತಪ್ಪಿದಲ್ಲ. ಹಾಲಿ ರಸ್ತೆಯನ್ನೇ ವಿಸ್ತರಣೆ ಮಾಡುವುದರಿಂದ ಯಾವುದೇ ತೊಂದರೆ ಆಗುವುದಿಲ್ಲ. ನೂರಾರು ವರ್ಷಗಳ ಮರಗಳನ್ನು ಕಡಿದು, ಬೇರೆ ಕಡೆ ಮರ ಬೆಳೆಸುತ್ತೇನೆ ಅಂದರೆ ಅರ್ಥವಿಲ್ಲ. ಇರುವ ಅರಣ್ಯ ಪ್ರದೇಶವನ್ನು ಉಳಿಸಿಕೊಂಡರೆ ಪ್ರಾಣಿಗಳಿಗೆ ತೊಂದರೆ ಆಗುವುದಿಲ್ಲ’ ಎಂದು ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಜೋಸೆಫ್‌ ಹೂವರ್‌ ಅಭಿಪ್ರಾಯಪಟ್ಟರು.

‘ಸುರಂಗ ಮಾರ್ಗದ ಮಾಹಿತಿಯೇ ಇಲ್ಲ’

‘ಶಿರಾಡಿ ಘಾಟಿಯಲ್ಲಿ ನಿರ್ಮಿಸುತ್ತಿರುವ ‘ಸುರಂಗ ಮಾರ್ಗ’ ಯೋಜನೆ ಬಗ್ಗೆ ಯಾರಿಗೂ ಮಾಹಿತಿಯೇ ಇಲ್ಲ. ಎಷ್ಟು ಎಕರೆ ಭೂಮಿ ಸ್ವಾಧೀನ ಮಾಡಿಕೊಳ್ಳಬೇಕು? ಯೋಜನೆಯ ಸ್ವರೂಪ ಏನು? ತಜ್ಞರು, ಪರಿಸರ ಪ್ರೇಮಿಗಳು ಏನು ಹೇಳುತ್ತಾರೆ ಎಂಬ ಅಭಿಪ್ರಾಯವನ್ನೂ ಸಂಗ್ರಹಿಸಿಲ್ಲ. ಹಲವು ಯೋಜನೆಗಳಿಂದ ಈಗಾಗಲೇ ಪಶ್ಚಿಮ ಘಟ್ಟಕ್ಕೆ ಸಾಕಷ್ಟು ಹಾನಿಯಾಗಿದೆ’ ಎಂದು ಸಕಲೇಶಪುರ ಕ್ಷೇತ್ರದ ಶಾಸಕ ಎಚ್.ಕೆ. ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಎನ್‌ಎಂಪಿಟಿಗೂ ಅನುಕೂಲ’

ಮಂಗಳೂರು: ‘ನವಮಂಗಳೂರು ಬಂದರು ಮಂಡಳಿಯು (ಎನ್‌ಎಂಪಿಟಿ) ವರ್ಷಕ್ಕೆ 6.8 ಕೋಟಿ ಟನ್ ಸರಕು ನಿರ್ವಹಣೆಯ ಗುರಿ ಹೊಂದಿದ್ದರೂ, ಸಮರ್ಪಕ ಸಂಪರ್ಕ ವ್ಯವಸ್ಥೆಯ ಕೊರತೆಯಿಂದ ಈ ಗುರಿಯನ್ನು ತಲುಪಲಾಗುತ್ತಿಲ್ಲ. ಶಿರಾಡಿ ಸುರಂಗ ಮಾರ್ಗ ನಿರ್ಮಾಣವಾದರೆ, ಕಡಿಮೆ ಅವಧಿಯಲ್ಲಿ ಸರಕು ಸಾಗಣೆ ಸಾಧ್ಯವಾಗಲಿದ್ದು, ಪೂರ್ಣ ಪ್ರಮಾಣದ ಸಾಮರ್ಥ್ಯ ಬಳಕೆ ಸಾಧ್ಯವಾಗಲಿದೆ’ ಎನ್ನುತ್ತಾರೆ ಎನ್‌ಎಂಪಿಟಿ ಅಧ್ಯಕ್ಷ ಡಾ.ಎ.ವಿ. ರಮಣ.

‘ಶಿರಾಡಿ, ಚಾರ್ಮಾಡಿ, ಸಂಪಾಜೆ ಹೆದ್ದಾರಿಗಳಿದ್ದರೂ ಮಳೆಗಾಲದಲ್ಲಿ ಭೂಕುಸಿತ, ದುರಸ್ತಿ ಮತ್ತು ಇತರ ಕಾರಣಗಳಿಂದ ತೊಂದರೆ ಉಂಟಾಗುತ್ತಿದೆ. ಶಿರಾಡಿ ಘಾಟಿ ಸುರಂಗ ಮಾರ್ಗ ಸರ್ವಋತು ರಸ್ತೆಯಾಗಲಿದ್ದು, 2025ರ ವೇಳೆಗೆ ಎನ್‌ಎಂಪಿಟಿಯಲ್ಲಿ ಕನಿಷ್ಠ 4.5 ಕೋಟಿ ಟನ್‌ ಸರಕು ನಿರ್ವಹಣೆ ಸಾಧ್ಯವಾಗಲಿದೆ. 2033ರ ವೇಳೆಗೆ ಕನಿಷ್ಠ 7.7 ಕೋಟಿ ಟನ್ ಸರಕು ನಿರ್ವಹಣೆ ಮಾಡಬಹುದು’ ಎನ್ನುವ ಆಶಾವಾದ ಅವರದು.

‘ಔದ್ಯೋಗಿಕ ಕ್ಷೇತ್ರದಲ್ಲಿ ಪರಿವರ್ತನೆ’

‘ಶಿರಾಡಿ ಸುರಂಗ ಮಾರ್ಗ ನಿರ್ಮಾಣವಾದರೆ, ಕರಾವಳಿಯ ಕೈಗಾರಿಕೆಗಳ ಭವಿಷ್ಯ ಉಜ್ವಲವಾಗುತ್ತದೆ. ಹೊಸ ಅವಕಾಶಗಳ ಸಾಧ್ಯತೆಗಳು ತೆರೆದುಕೊಳ್ಳುತ್ತವೆ’ ಎಂದು ಕೆನರಾ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಐಸಾಕ್‌ ವಾಸ್‌ ಅಭಿಪ್ರಾಯಪಡುತ್ತಾರೆ.

‘ವಾಯು ಮಾರ್ಗದ ಮೂಲಕ ಎಲ್ಲಾ ಉತ್ಪನ್ನಗಳ ಸಾಗಾಣಿಕೆ ಕಷ್ಟ. ಶಿರಾಡಿ ಸುರಂಗ ನಿರ್ಮಾಣವಾದಲ್ಲಿ, ಆಮದು ಮತ್ತು ರಫ್ತು ಸುಲಭವಾಗಲಿದೆ. ಮಂಗಳೂರಿನಿಂದ ಬೆಂಗಳೂರು, ಚೆನ್ನೈವರೆಗೆ ಯಾವುದೇ ಅಡ್ಡಿಯಿಲ್ಲದೆ ಉತ್ಪನ್ನಗಳ ಸಾಗಾಟ ಮಾಡಬಹುದು’ ಎನ್ನುತ್ತಾರೆ ಅವರು.

‘ಕೈಗಾರಿಕಾ ಅಭಿವೃದ್ಧಿಗೆ ಸಾರಿಗೆ ಸಂಪರ್ಕದ ಪಾತ್ರ ಬಹುಮುಖ್ಯ. ಸಂಪರ್ಕ ಮಾಧ್ಯಮದ ಸುಧಾರಣೆಯಿಂದ ಬಹುರಾಷ್ಟ್ರೀಯ ಕಂಪನಿಗಳು ಕರಾವಳಿಯಲ್ಲಿ ಉದ್ಯಮ ಪ್ರಾರಂಭಿಸಲು ಆಸಕ್ತಿ ತೋರುವ ಮೂಲಕ ಉದ್ಯೋಗಾವಕಾಶದ ಸಾಧ್ಯತೆಗಳು ಹೆಚ್ಚುತ್ತವೆ. ಔದ್ಯೋಗಿಕ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ ಸಾಧ್ಯವಾಗುತ್ತದೆ’ ಎನ್ನುವುದು ಅವರ ವಿಶ್ವಾಸ.

‘ನೀರಿನ ಹರಿವು ತಡೆಯುವ ತಂತ್ರಜ್ಞಾನ ಇದೆಯೇ?’

‘ಶಿರಾಡಿ ಸುರಂಗ ಮಾರ್ಗದಲ್ಲಿ ಶೋಲಾ ಅರಣ್ಯ ಬರುತ್ತಿದ್ದು, ಇಲ್ಲಿನ ನೀರಿನ ಹರಿವು ಸದಾಕಾಲ ಇರುತ್ತದೆ. ಅದನ್ನು ತಡೆಯುವ ತಂತ್ರಜ್ಞಾನ ಸರ್ಕಾರದ ಬಳಿ ಇದೆಯೇ’ ಎಂದು ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟದ ರಾಜ್ಯ ಘಟಕದ ಕಾರ್ಯದರ್ಶಿ ಶಶಿಧರ ಶೆಟ್ಟಿ ಪ್ರಶ್ನಿಸಿದ್ದಾರೆ.

‘ಇವರು ಕೇವಲ ಜಪಾನ್‌ನ ಹಣಕಾಸು ನೆರವು ಪಡೆಯುತ್ತಿದ್ದಾರೆ. ಜಪಾನ್‌ನ ತಂತ್ರಜ್ಞಾನವನ್ನು ಬಳಸುತ್ತಿಲ್ಲ. ಅಲ್ಲಿನ ತಂತ್ರಜ್ಞಾನ ಬಳಸಿದರೆ, ಯೋಜನೆಯ ವೆಚ್ಚವೂ ತಗ್ಗಲಿದ್ದು, ಪ್ರಾಕೃತಿಕ ಸಮತೋಲನವನ್ನೂ ಕಾಪಾಡಬಹುದು’ ಎನ್ನುತ್ತಾರೆ ಅವರು.

‘ಶೋಲಾ ಅರಣ್ಯದ ನೀರಿನ ಹರಿವನ್ನು ಸಮರ್ಪಕವಾಗಿ ಬಳಕೆ ಮಾಡದೇ ಇದ್ದರೆ, ನದಿಗಳು ಬತ್ತುತ್ತವೆ. ಜನರು, ಪ್ರಾಣಿ, ಸಸ್ಯ ಸಂಕುಲಗಳು ನೀರಿನ ಕೊರತೆಯನ್ನು ಅನುಭವಿಸಬೇಕಾಗುತ್ತದೆ. ಭವಿಷ್ಯವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಯೋಜನೆ ರೂಪಿಸಬೇಕೆ ಹೊರತು, ಭವಿಷ್ಯವನ್ನು ಹಾಳು ಮಾಡುವ ಯೋಜನೆ ಮಾಡುವುದು ಸರಿಯಲ್ಲ’ ಎಂದು ಅವರು ವಾದಿಸುತ್ತಾರೆ.

‘ಇನ್ನಷ್ಟು ಪ್ರಾಕೃತಿಕ ವಿಕೋಪ ಕಟ್ಟಿಟ್ಟ ಬುತ್ತಿ’

‘ಎತ್ತಿನಹೊಳೆ, ರೈಲ್ವೆ ಮಾರ್ಗ, ರಾಷ್ಟ್ರೀಯ ಹೆದ್ದಾರಿ, ಜಲ ವಿದ್ಯುತ್ ಘಟಕ ಸೇರಿದಂತೆ ಹಂತ ಹಂತವಾಗಿ ಪಶ್ಚಿಮ ಘಟ್ಟದ ಮೇಲೆ ಪ್ರಹಾರ ಮಾಡುತ್ತಲೇ ಬರಲಾಗಿದೆ. ಸುರಂಗ ಮಾರ್ಗದ ಮೂಲಕ ಪಶ್ಚಿಮ ಘಟ್ಟಕ್ಕೆ ಮತ್ತೊಂದು ಹೊಡೆತ ಬೀಳಲಿದೆ’ ಎಂದು ಸಹ್ಯಾದ್ರಿ ಸಂಚಯ ಅಧ್ಯಕ್ಷ ದಿನೇಶ್‌ ಹೊಳ್ಳ ಅಭಿಪ್ರಾಯಪಟ್ಟಿದ್ದಾರೆ.

‘ಎತ್ತಿನಹೊಳೆ ಯೋಜನೆಗಾಗಿ ಬ್ಲಾಸ್ಟ್‌ ಮಾಡಿದ್ದರಿಂದಲೇ ಪಶ್ಚಿಮ ಘಟ್ಟದಲ್ಲಿ ಅಲ್ಲಿಲ್ಲ ಭೂಕುಸಿತಗಳು ಉಂಟಾಗುತ್ತಿವೆ. ಶಿರಾಡಿ ಸುರಂಗದಿಂದ ಇನ್ನಷ್ಟು ಪ್ರಾಕೃತಿಕ ದುರಂತ ಕಟ್ಟಿಟ್ಟ ಬುತ್ತಿ’ ಎಂದು ಹೇಳುತ್ತಾರೆ ಅವರು.

‘ನಾವು ಅಭಿವೃದ್ಧಿ ವಿರೋಧಿಗಳಲ್ಲ. ಪ್ರಕೃತಿಯ ಹೊಡೆತದಿಂದ ಯಾವ ರೀತಿಯ ತೊಂದರೆ ಅನುಭವಿಸಿದ್ದೇವೆ ಎನ್ನುವುದನ್ನು ಆಲೋಚನೆ ಮಾಡಬೇಕು. ಕುಡಿಯುವ ನೀರಿಗೆ ಹಾಹಾಕಾರ, ಬರಗಾಲ, ಪ್ರಾಕೃತಿಕ ದುರಂತಗಳು ಸಂಭವಿಸಿದರೆ ನಮ್ಮ ಭವಿಷ್ಯವೇನು' ಎಂದು ದಿನೇಶ್‌ ಹೊಳ್ಳ ಪ್ರಶ್ನಿಸುತ್ತಾರೆ.

‘ಇರುವ ಚಾರ್ಮಾಡಿ ಹಾಗೂ ಶಿರಾಡಿ ಘಾಟಿ ಹೆದ್ದಾರಿಗಳನ್ನು ಅಭಿವೃದ್ಧಿ ಮಾಡಬೇಕೇ ಹೊರತು, ಹೊಸ ಸುರಂಗ ಮಾರ್ಗ ಖಂಡಿತ ಒಳ್ಳೆಯದಲ್ಲ’ ಎನ್ನುತ್ತಾರೆ ಅವರು.

ಸರಕು ರಫ್ತು ಪ್ರಮಾಣ ದುಪ್ಪಟ್ಟು

ಬೆಂಗಳೂರು: ‘ವಿಶ್ವದಲ್ಲಿ ಬಂದರು ಮೂಲಕ ನಡೆಯುತ್ತಿರುವ ಸರಕು ಸಾಗಣೆ ಪ್ರಮಾಣದಲ್ಲಿ ದೇಶದ ಪಾಲು ಶೇ 1.6ರಷ್ಟು ಇದೆ. ಅದೇ ರೀತಿ, ದೇಶದಲ್ಲಿ ಕರ್ನಾಟಕದ ಪಾಲು ಶೇ 15ರಿಂದ ಶೇ 19ರಷ್ಟಿದೆ. ಈ ಸುರಂಗ ಮಾರ್ಗ ತೆರೆದ ನಂತರ, ಈ ಪ್ರಮಾಣ ಶೇ 35ರಿಂದ ಶೇ 38ಕ್ಕೆ ಹೆಚ್ಚಲಿದೆ’ ಎನ್ನುತ್ತಾರೆ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ (ಎಫ್‌ಕೆಸಿಸಿಐ) ನಿಕಟಪೂರ್ವ ಅಧ್ಯಕ್ಷ ಜಿ.ಆರ್. ಜನಾರ್ದನ.

‘ರಸ್ತೆಯ ಮೂಲಕ ಸರಕು ಸಾಗಣೆಯ ಭಾರಿ ವಾಹನಗಳು ಸಾಗುವುದು ತುಂಬಾ ಕಷ್ಟವಾಗುತ್ತದೆ ಮತ್ತು ವಿಳಂಬವಾಗುತ್ತದೆ. ಅಲ್ಲದೆ, ಈ ವಾಹನಗಳು ತಮಿಳುನಾಡು ಮತ್ತು ಕೇರಳದ ಬಂದರಿಗೆ ಹೋಗಬೇಕು. ಸುರಂಗ ಮಾರ್ಗ ನಿರ್ಮಾಣದಿಂದ ಸಮಯ ಮತ್ತು ಹಣ ಎರಡೂ ಉಳಿತಾಯವಾಗುತ್ತದೆ’ ಎಂದು ಅವರು ವಿವರಿಸುತ್ತಾರೆ.

‘ಚಿಕ್ಕಮಗಳೂರಿನಲ್ಲಿ ಕಾಫಿ ಹೆಚ್ಚಾಗಿ ಬೆಳೆಯುತ್ತಾರೆ. ಆದರೆ, ಇವುಗಳನ್ನು ವಿದೇಶಗಳಿಗೆ ರಫ್ತು ಮಾಡಲು ಬೆಳೆಗಾರರು ಹಿಂಜರಿಯುತ್ತಿದ್ದರು. ಈಗ ಕಾಫಿ ಬೀಜ ಅಥವಾ ಪುಡಿಯ ಜೊತೆಗೆ, ಸೆಣಬು ಪದಾರ್ಥಗಳು, ಜವಳಿ ಉತ್ಪನ್ನಗಳು, ಔಷಧ, ಆಟಿಕೆಗಳು, ಗೊಂಬೆಗಳ ಸಾಗಣೆ ಪ್ರಮಾಣ ಹೆಚ್ಚಾಗಲಿದೆ’ ಎಂದು ಅವರು ಮಾಹಿತಿ ನೀಡಿದರು.

‘ತಮಿಳುನಾಡು, ಕೇರಳದ ಬಂದರಿಗೆ ಹೋಗುವ ವಾಹನಗಳ ಸಂಖ್ಯೆ ಕಡಿಮೆಯಾಗಲಿದೆ. ಶಿರಾಡಿ ಸುರಂಗ ಮಾರ್ಗ ಕಾರ್ಯನಿರ್ವಹಣೆಯಿಂದ ಆರ್ಥಿಕವಾಗಿ ಪ್ರಗತಿ ಹೊಂದುವುದು ಸಾಧ್ಯವಾಗುತ್ತದೆಯಲ್ಲದೆ, ಈ ಭಾಗದಲ್ಲಿ ಉದ್ಯೋಗಾವಕಾಶಗಳ ಸೃಷ್ಟಿಯಾಗುತ್ತದೆ’ ಎಂದು ಅವರು ತಿಳಿಸಿದರು.

‘ಹಾಸನದಲ್ಲಿ ‘ಡ್ರೈ ಪೋರ್ಟ್‌’ (ಬಂದರುಗಳಿಗೆ ರೈಲು ಅಥವಾ ರಸ್ತೆ ಮೂಲಕ ಸರಕು ಸಾಗಣೆ ಮಾಡುವ ತಾಣ) ನಿರ್ಮಾಣ ಮಾಡಬೇಕು
ಎಂದು ಸಲಹೆ ಮಾಡಿದ್ದೆವು. ಇಲ್ಲಿ ಡ್ರೈ ಪೋರ್ಟ್‌ ನಿರ್ಮಾಣದಿಂದ
ಬಂದರಿಗೆ ಸರಕು ಸಾಗಣೆ ಸುಲಭವಾಗುತ್ತದೆಯಲ್ಲದೆ, ಸ್ಥಳೀಯವಾಗಿ
ಹೆಚ್ಚು ಜನರಿಗೆ ಉದ್ಯೋಗ ಸಿಗುತ್ತದೆ. ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಪ್ರವಾಸೋದ್ಯಮವೂ ಅಭಿವೃದ್ಧಿಗೊಳ್ಳಲಿದೆ’ ಎಂದು
ಜನಾರ್ದನ ತಿಳಿಸಿದರು.

***

ಈ ವರೆಗೂ ಯೋಜನೆ ಕುರಿತು ಸರ್ಕಾರದಿಂದ ಅಧಿಕೃತ ಆದೇಶ ಬಂದಿಲ್ಲ. ಮಾರ್ಗಸೂಚಿ ಪ್ರಕಾರ ಸ್ಥಳ ಪರಿಶೀಲಿಸಿ, ಪ್ರಾಣಿಗಳ ಓಡಾಟಕ್ಕೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲಾಗುವುದು.

- ಪಿ.ಶಂಕರ್‌, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಹಾಸನ ವೃತ್ತ

***

ಸುರಂಗ ಮಾರ್ಗದ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದ ಬಳಿಕ ಭೂ ಸ್ವಾಧೀನ ಪ್ರಕ್ರಿಯೆಯನ್ನು ತ್ವರಿತಗತಿಯಲ್ಲಿ ಆರಂಭಿಸಲಾಗುವುದು.

- ಟಿ.ಎನ್‌.ಮಂಜುನಾಥ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಹಾಸನ ವಿಭಾಗದ ಭೂ ಸ್ವಾಧೀನಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT