ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಸಾಹಿತ್ಯದಿಂದ ಬೆಳ್ಳಿತೆರೆ–ಕಿರುತೆರೆ ಶ್ರೀಮಂತ

Last Updated 6 ಜನವರಿ 2023, 15:53 IST
ಅಕ್ಷರ ಗಾತ್ರ

ಹಾವೇರಿ (ಶ್ರೀ ಹಾನಗಲ್‌ ಕುಮಾರ ಶಿವಯೋಗಿಗಳ ವೇದಿಕೆ): ಬೆಳ್ಳಿತೆರೆ ಮತ್ತು ಕಿರುತೆರೆ ಶ್ರೀಮಂತಗೊಳಿಸಿ ಅವುಗಳಿಗೆ ಜನಮಾನಸದಲ್ಲಿ ವಿಶೇಷ ಸ್ಥಾನ ಒದಗಿಸಿದ ಶ್ರೇಯಸ್ಸು ಕನ್ನಡ ಸಾಹಿತ್ಯ ಲೋಕಕ್ಕೆ ಸಲ್ಲುತ್ತದೆ ಎಂಬ ಅಭಿಪ್ರಾಯ ಶುಕ್ರವಾರ ಸಂಜೆ ಇಲ್ಲಿ ನಡೆದ ‘ಬೆಳ್ಳಿತೆರೆ–ಕಿರುತೆರೆ’ ಗೋಷ್ಠಿಯಲ್ಲಿ ವ್ಯಕ್ತವಾಯಿತು.

86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಮೂರನೇ ವೇದಿಕೆಯಲ್ಲಿ ಏರ್ಪಡಿಸಿದ್ದ ಗೋಷ್ಠಿಯಲ್ಲಿ ‘ಕನ್ನಡ ಚಲನಚಿತ್ರಗಳಲ್ಲಿ ದೇಶಭಕ್ತಿ ಮತ್ತು ಕನ್ನಡಪರ ಗೀತೆಗಳು’ ಕುರಿತು ಮಾತನಾಡಿದ ನಿರ್ದೇಶಕ ಪ್ರಕಾಶ್‌ ಮಲ್ಪೆ, ‘ಕನ್ನಡ ಚಿತ್ರರಂಗವು ಮನರಂಜನೆಯೊಂದಿಗೆ ಉತ್ಕೃಷ್ಟವಾದ ಸಾಹಿತ್ಯದ ಮೂಲಕ ಜನಸಾಮಾನ್ಯರಲ್ಲಿ ರಾಷ್ಟ್ರಭಕ್ತಿ ವಿಕಸನಗೊಳಿಸುವ ಕೆಲಸ ಮಾಡಿದೆ. ರಾಷ್ಟ್ರಭಕ್ತಿ ಉದ್ದೀಪನಗೊಳಿಸುವ, ಕನ್ನಡದ ಅಭಿಮಾನ ಮೂಡಿಸುವ ಹಾಡುಗಳು ಅನೇಕ ಚಿತ್ರಗಳಲ್ಲಿ ಮೂಡಿಬಂದಿವೆ. ರಾಷ್ಟ್ರಭಕ್ತಿ ಕನ್ನಡ ಬಿಟ್ಟು ಅಲ್ಲ. ಅದು ಕೂಡ ಭಾರತದ ಸಂಗತಿ. ಶರಣರು, ದಾಸರು ಕೂಡ ಕನ್ನಡ ನಾಡು, ನುಡಿ ಭಾಷೆಗೆ ಪ್ರಾಮುಖ್ಯತೆ ಕೊಟ್ಟಿದ್ದರು’ ಎಂದು ಹೇಳಿದರು.

ಎಲ್ಲ ತರಹದ ಸಾಹಿತ್ಯದಲ್ಲಿ ರಾಷ್ಟ್ರಭಕ್ತಿ, ನಾಡು ನುಡಿಯ ಬಗ್ಗೆ ಹೆಮ್ಮೆ ತರುವ ಅಂಶಗಳಿವೆ. ಕನ್ನಡ ಚಿತ್ರರಂಗಕ್ಕೆ ಈಗ 88 ವರ್ಷಗಳಾಗಿವೆ. ಆರಂಭದಿಂದಲೂ ಈ ಪರಂಪರೆ ನಡೆದುಕೊಂಡು ಬಂದಿದೆ. ಕನ್ನಡ ಬಿಟ್ಟು ಭಾರತವಿಲ್ಲ, ಭಾರತ ಬಿಟ್ಟು ಕನ್ನಡವಿಲ್ಲ ಎಂಬ ಸಂದೇಶಗಳೇ ಹೆಚ್ಚಾಗಿವೆ ಎಂದರು.

ಆಶಯ ನುಡಿಗಳಾಡಿದ ನಟ ಸುಂದರರಾಜ್‌, ಕನ್ನಡ ಚಲನಚಿತ್ರಗಳಲ್ಲಿ ಮೊದಲಿನಿಂದಲೂ ಕನ್ನಡ ಸಾಹಿತ್ಯಕ್ಕೆ ಹೆಚ್ಚಿನ ಒತ್ತು ಕೊಡಲಾಗಿದೆ. ಸಾಹಿತ್ಯ, ಸಂಗೀತ, ಸಂಸ್ಕೃತಿ ಕನ್ನಡ ಚಲನಚಿತ್ರಗಳ ಅವಿಭಾಜ್ಯ ಅಂಗವಾಗಿವೆ. ಒಂದು ಕಡೆ ತಂತ್ರಜ್ಞಾನ ಇದೆ. ಆದರೆ, ಎಲ್ಲದರಲ್ಲೂ ಸಾಹಿತ್ಯ ಇದೆ. ಅಕ್ಷರ ಜ್ಞಾನ ಇರದಿದ್ದವರಿಗೂ ಸರಳ ಭಾಷೆಯಲ್ಲಿ ಜನರ ಮನಮುಟ್ಟುವಂತೆ ಸಾಹಿತ್ಯ ರಚಿಸಿ, ಸಿನಿಮಾ ಮೂಲಕ ಅವರನ್ನು ತಲುಪುವ ಕೆಲಸ ನಮ್ಮ ಸಾಹಿತಿಗಳು ಮಾಡಿದ್ದಾರೆ. ಅದು ಸಾಹಿತ್ಯಕ್ಕಿರುವ ಶಕ್ತಿ ಎಂದರು.

ಕನ್ನಡ ಚಿತ್ರರಂಗದ ಆರಂಭದ ಕಾಲಘಟ್ಟದಲ್ಲಿ ಕಾದಂಬರಿ ಆಧಾರಿತ ಸಿನಿಮಾಗಳೇ ಹೆಚ್ಚಾಗಿ ಬಂದಿದ್ದವು. ಪುಟ್ಟಣ ಕಣಗಾಲ್‌ ಅವರೇ ಅದಕ್ಕೆ ನಿದರ್ಶನ. ‘ಬಂಗಾರದ ಮನುಷ್ಯ’ ಚಿತ್ರ, ಸಾಹಿತ್ಯದ ಮೂಲಕ ರೈತ ಪರಂಪರೆ ಬೆಳೆಸಿರುವುದಕ್ಕೆ ಸಾಕ್ಷಿ ಎಂದು ನಿದರ್ಶನ ನೀಡಿದರು.

‘ಚಲನಚಿತ್ರ ಸಾಹಿತ್ಯ ಪರಂಪರೆ’ ಕುರಿತು ಮಾತನಾಡಿದ ಸಿನಿಮಾ ವಿಶ್ಲೇಷಕ ಎನ್‌.ಎಸ್‌. ಶ್ರೀಧರಮೂರ್ತಿ, ಸಾಹಿತ್ಯವು ಓದುವುದರ ಮೂಲಕ ದಕ್ಕುವಂಥದ್ದು. ಆದರೆ, ಸಿನಿಮಾ ಕಣ್ಣುಗಳ ಮೂಲಕ ನೇರವಾಗಿ ಮನಸ್ಸಿಗೆ ಹೋಗಿ ಅನಂತರ ತಲೆಗೆ ಹೋಗುತ್ತದೆ. ಹೀಗಾಗಿ ಎರಡರ ಸ್ವರೂಪದಲ್ಲೂ ಭಿನ್ನತೆ ಇದೆ. ಚಿ. ಉದಯಶಂಕರ, ಆರ್‌.ಎನ್‌. ಜಯಗೋಪಾಲ್‌, ವಿಜಯ ನರಸಿಂಹ ಅವರು ಉತ್ಕೃಷ್ಟವಾದ ಸಿನಿಮಾ ಸಾಹಿತ್ಯ ರಚಿಸುವುದರ ಮೂಲಕ ಕನ್ನಡ ಚಿತ್ರರಂಗಕ್ಕೆ ಹೆಚ್ಚಿನ ಪ್ರಾಮುಖ್ಯತೆ ತಂದುಕೊಟ್ಟರು ಎಂದು ಹೇಳಿದರು.

ಕಿರುತೆರೆ ಮತ್ತು ಬೆಳ್ಳಿತೆರೆ ಎರಡೂ ವಿಭಿನ್ನ. ಒಂದು ಧಾರಾವಾಹಿ ಚಲನಚಿತ್ರಕ್ಕಿಂತ ವಿಭಿನ್ನವಾದ ಪರಿಣಾಮ ಬೀರುತ್ತದೆ. ಬಹುತೇಕ ಧಾರವಾಹಿಗಳು ಮನುಷ್ಯನ ಮನಸ್ಸನ್ನು ವ್ಯಘ್ರಗೊಳಿಸಿ, ಕೆರಳಿಸುತ್ತವೆ. ಅನೇಕ ಕಂತುಗಳಲ್ಲಿ ನೋಡಲು ಪ್ರೇರೇಪಿಸುತ್ತವೆ. ಆದರೆ, ಸಿನಿಮಾ ವಿಷಯಕ್ಕೆ ಬಂದರೆ ಅದು ಸಂಪೂರ್ಣ ಭಿನ್ನ. ಮೂರು ಗಂಟೆಗಳಲ್ಲಿ ಅದರ ಕಥೆ ಮುಕ್ತಾಯಗೊಳ್ಳುತ್ತದೆ ಎಂದು ತಿಳಿಸಿದರು.

ರಂಜಿನಿ ದತ್ತಾತ್ರಿ ನಿರೂಪಿಸಿದರು. ಯಮುನಾ ಕೋಣೇಸರ ಸ್ವಾಗತಿಸಿದರು. ರತ್ನಮ್ಮ ಎ.ಬಿ. ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT