ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಇನ್ನೂ ನಿಲುಕದ ‘ಆತ್ಮ ನಿರ್ಭರ್ ಸಾಲ’!

Last Updated 2 ಅಕ್ಟೋಬರ್ 2020, 8:09 IST
ಅಕ್ಷರ ಗಾತ್ರ

ಬಳ್ಳಾರಿ: ‘ನನ್ನ ಹತ್ತಿರ ಇರೋದು ಚಿಕ್ಕ ಫೋನು. ಬೇರೆ ಏನೂ ಇಲ್ಲ. ಹತ್ತು ಸಾವಿರ ರೂಪಾಯಿ ಸಾಲಕ್ಕಾಗಿ ಅರ್ಜಿ ಹಾಕಿ ಎರಡು ತಿಂಗಳಾಯಿತು. ಬ್ಯಾಂಕಿನವರು ಇವತ್ತು ಬಾ, ನಾಳೆ ಬಾ ಅಂತ ಅಲೆಸುತ್ತಿದ್ದಾರೆ’

ನಗರದ ಗಡಿಗಿ ಚೆನ್ನಪ್ಪ ವೃತ್ತದ ಬಳಿ ತಳ್ಳುವ ಗಾಡಿಯಲ್ಲಿ ಹಣ್ಣು ಮಾರುವ ಲಕ್ಷ್ಮಣ ಹೀಗೆ ಹೇಳಿ ತಮ್ಮ ಚಿಕ್ಕ ಫೋನನ್ನು ತೋರಿಸಿದರು. ಅದು ಸಾಮಾನ್ಯ ಕೀಪ್ಯಾಡ್‌ ಫೋನು.

ದೀನ್‌ದಯಾಳ್‌ ಅಂತ್ಯೋದಯ ಯೋಜನಾ–ರಾಷ್ಟ್ರೀಯ ನಗರ ಜೀವನೋಪಾಯ ಯೋಜನೆಯ (ಡೇ–ನಲ್ಮ್‌) ‘ಪ್ರಧಾನಮಂತ್ರಿ ಬೀದಿ ವ್ಯಾಪಾರಿಗಳ ಆತ್ಮನಿರ್ಭರ್‌ ನಿಧಿ’ ಅಡಿ ರೂಪಿಸಲಾಗಿರುವ ಯೋಜನೆ ಜೂನ್‌ನಲ್ಲೇ ಆರಂಭವಾದರೂ, ಜಿಲ್ಲೆಯ ಬಹುತೇಕ ವ್ಯಾಪಾರಿಗಳಿಗೆ ಎಟುಕಿಲ್ಲ ಎಂಬುದನ್ನು ಅವರ ಮಾತು ಸೂಚಿಸುತ್ತಿತ್ತು.

ಇನ್ನೂ ಸ್ವಲ್ಪ ಮುಂದೆ ನಡೆದು, ಅಲ್ಲಿದ್ದ ವ್ಯಾಪಾರಿಗಳನ್ನು ಕೇಳಿದರೆ, ‘ಅದೇನೋ ಗೊತ್ತಿಲ್ಲ. ನಮ್ಮ ಕಷ್ಟ ನಾವೇ ನೋಡ್ಕೊಂತ ಇದ್ದೇವೆ’ ಎಂಬ ಉತ್ತರ ಬಂತು.

ಸಾಲಕ್ಕಾಗಿ ಅರ್ಜಿ ಸಲ್ಲಿಸುವವರ ಬಳಿ ಕಡ್ಡಾಯವಾಗಿ ಆಂಡ್ರಾಯ್ಡ್‌ ಫೋನ್‌ ಇರಬೇಕು. ಅದರ ಮೂಲಕವೇ ಯುಪಿಐ ಆ್ಯಾಪ್‌ ಡೌನ್‌ಲೋಡ್‌ ಮಾಡಿಕೊಂಡು ಸಾಲಕ್ಕೆ ಅರ್ಜಿ ಸಲ್ಲಿಸಬೇಕು. ಡಿಜಿಟಲ್‌ ವ್ಯವಹಾರವನ್ನೂ ಮಾಡಬೇಕು. ಆ ಮೂಲಕ ಕ್ಯಾಶ್ ಬ್ಯಾಕ್‌ ಸೌಲಭ್ಯವನ್ನೂ ಪಡೆಯಬೇಕು ಎಂಬುದು ಯೋಜನೆಯ ನಿಯಮ. ಆದರೆ ಕೀಪ್ಯಾಡ್‌ ಫೋನಿರುವ ಲಕ್ಷ್ಮಣ ಹೇಗೆ ಅರ್ಜಿ ಸಲ್ಲಿಸಿದರು? ಅವರನ್ನು ಕೇಳಿದರೆ ಬ್ಯಾಂಕಿಗೆ ಅರ್ಜಿ ಕೊಟ್ಟು ಬಂದೆ ಎನ್ನುತ್ತಿದ್ದಾರೆ!

ಬಹುತೇಕ ಬೀದಿ ವ್ಯಾಪರಿಗಳ ಬಳಿ ಆಂಡ್ರಾಯ್ಡ್‌ ಫೋನ್‌ಗಳಿಲ್ಲ. ಅವರಿಗೆ ಡಿಜಿಟಲ್‌ ವ್ಯವಹಾರ ಗೊತ್ತಿಲ್ಲ. ಹೀಗಾಗಿ ಕ್ಯಾಶ್‌ಬ್ಯಾಕ್‌ ಎಂದರೇನೆಂದೂ ಗೊತ್ತಿಲ್ಲ. ಯೋಜನೆ ಜಾರಿಗೆ ಬಂದಿದ್ದರೂ ಅದರ ಪ್ರಯೋಜನ ದೊರಕದೇ ವ್ಯಾಪಾರ ಮುಂದುವರಿಸಿದ್ದಾರೆ.

ನಗರದಲ್ಲಿ ಇತ್ತೀಚೆಗೆ ನಡೆದ ಜಿಲ್ಲಾ ಅಭಿವೃದ್ಧಿ ಸಹಕಾರ ಮತ್ತು ಮೇಲ್ವಿಚಾರಣಾ ಸಮಿತಿ (ದಿಶಾ) ಸಭೆಯಲ್ಲಿ ಈ ಯೋಜನೆಯನ್ನು ಜಾರಿಗೊಳಿಸಲು ಇರುವ ಕಷ್ಟಗಳ ಕುರಿತು ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸಿದ್ದರು. ಅದನ್ನು ಅನುಸರಿಸಿ ಮಾರುಕಟ್ಟೆಯಲ್ಲಿ ಸಂಚರಿಸಿದಾಗ ಅದು ನಿಜವೆಂದು ಕಂಡುಬಂತು.

10 ಸಾವಿರದ ವಾರ್ಷಿಕ ಸಾಲಕ್ಕೆ ವಿಧಿಸುವ ಬಡ್ಡಿ ದರ ಎಷ್ಟು ಗೊತ್ತೆ? ಶೇ 24. ಅವರಿಗೆ ಯೋಜನೆ ಅಡಿ ದೊರಕುವ ಬಡ್ಡಿ ರಿಯಾಯಿತಿ ಶೇ 7.

‘ಸಾಲ ಪಡೆದವರು 12ನೇ ತಿಂಗಳ ಹೊತ್ತಿಗೆ ಸಾಲ ಮತ್ತು ಬಡ್ಡಿಯ ಎಲ್ಲ ಕಂತುಗಳನ್ನೂ ಸೇರಿಸಿ ₹11,139 ಮರುಪಾವತಿ ಮಾಡಿರುತ್ತಾರೆ. ಬಡ್ಡಿಯ ಶೇ.30ರಷ್ಟು ರಿಯಾಯಿತಿಯ ಮೊತ್ತ ₹402 ಪಾವತಿಯಾಗಿರುತ್ತದೆ. ಬಡ್ಡಿಯ ಶೇ 88ರಷ್ಟು ಅಂದರೆ ₹1,200 ಕ್ಯಾಶ್‌ ಬ್ಯಾಕ್‌ ಬಂದಿರುತ್ತದೆ. ಒಟ್ಟಾರೆ ₹1,602 ಲಾಭವಾಗಿರುತ್ತದೆ’ ಎಂಬುದು ಯೋಜನೆಯ ನಿಯಮಗಳಲ್ಲಿ ತೋರಿಸಿರುವ ಅಂಕಿ–ಅಂಶದ ಮಾಹಿತಿ.

ಆದರೆ ಈ ಲೆಕ್ಕದ ಬಗ್ಗೆ ಬಹುತೇಕ ವ್ಯಾಪಾರಿಗಳಿಗೆ ಆಸಕ್ತಿಯೇ ಇಲ್ಲ. ಕುತೂಹಲವೂ ಇಲ್ಲ. ವರ್ಷವಿಡೀ ಕೇವಲ ₹10 ಸಾವಿರ ಸಾಲ ತೀರಿಸುವುದು ಮುಂದಿನ ವರ್ಷ ಮತ್ತೆ ₨ ಹತ್ತು ಸಾವಿರ ಸಾಲ ಪಡೆಯುವುದು ಅವರಿಗೆ ಕಹಿಸತ್ಯ. ಏಕೆಂದರೆ ಅವರು ದಿನಕ್ಕೆ ಶೇ 10ರ ಬಡ್ಡಿ ಲೆಕ್ಕದಲ್ಲೇ ಸಾವಿರಾರು ರೂಪಾಯಿ ಸಾಲಪಡೆದು ತೀರಿಸುವ ಬದುಕನ್ನು ಬಹಳ ವರ್ಷದಿಂದ ನಡೆಸುತ್ತಿದ್ದಾರೆ.

ಈ ವಿಷಯವನ್ನೂ ದಿಶಾ ಸಭೆಯಲ್ಲಿ ಬೆಳಕಿಗೆ ತಂದವರು ಶಾಸಕ ಜಿ.ಸೋಮಶೇಖರ ರೆಡಿ. ಬಡ್ಡಿ ದಂಧೆ ನಡೆಸುವವರು ವ್ಯಾಪಾರಿಗಳಿಗೆ ಶೇ 10ರ ಬಡ್ಡಿ ದರವನ್ನು ಕಡಿತಗೊಳಿಸಿ ಕನಿಷ್ಠ ₨ 900 ಸಾಲ ಕೊಟ್ಟರೆ, ಸಂಜೆ ವೇಳೆಗೆ ವ್ಯಾಪಾರಿಗಳು ₹1ಸಾವಿರವನ್ನು ಮರುಪಾವತಿ ಮಾಡುತ್ತಾರೆ. ಅದಕ್ಕೆ ಅವರು ಯಾವ ಆಂಡ್ರಾಯ್ಡ್‌ ಫೋನ್‌ ಅನ್ನೂ ಖರೀದಿಸಬೇಕಿಲ್ಲ. ಬ್ಯಾಂಕಿಗೆ ಅರ್ಜಿ ಹಾಕಬೇಕಿಲ್ಲ. ಕಾಯಲೂಬೇಕಿಲ್ಲ.

ಇಂಥ ವಹಿವಾಟಿಗೆ ಒಗ್ಗಿ ಹೋಗಿರುವ ವ್ಯಾಪಾರಿಗಳಿಗೆ ನೆರವಾಗಬೇಕೆಂದರೆ ಹೆಚ್ಚು ನಿಯಮಗಳಿರಬಾರದು. ಸರಾಗವಾಗಿ ಸಾಲ ಸಿಗುವಂತೆ ನಿಯಮಗಳನ್ನು ರೂಪಿಸಬೇಕು ಎಂಬುದು ಸಭೆಯಲ್ಲಿ ಶಾಸಕ ರೆಡ್ಡಿಯವರು ನೀಡಿದ ಸಲಹೆ.

ನಗರ ಜೀವನೋಪಾಯ ಯೋಜನೆ ಅಡಿಯಲ್ಲಿ ರೂಪಿಸಲಾಗಿರುವ ಯೋಜನೆಗಾಗಿ ಬಳ್ಳಾರಿ ಜಿಲ್ಲೆಯಲ್ಲಿ 7,756 ವ್ಯಾಪಾರಿಗಳನ್ನು ಗುರುತಿಸಲಾಗಿದೆ. ಅವರ ಪೈಕಿ 2,648 ಮಂದಿ ಅರ್ಜಿ ಸಲ್ಲಿಸಿದ್ದಾರೆ. 500 ಮಂದಿಗೆ ಸಾಲ ಮಂಜೂರಾಗಿದೆ. 255 ಮಂದಿಗಷ್ಟೇ ಸಾಲ ವಿತರಿಸಲಾಗಿದೆ!

ಈ ಯೋಜನೆಗೆ ಆಯ್ಕೆಯಾಗಿರುವ ರಾಜ್ಯದ ನಾಲ್ಕು ಪಾಲಿಕೆಗಳ ಪೈಕಿ ಒಂದಾದ ಬಳ್ಳಾರಿ ಮಹಾನಗರ ಪಾಲಿಕೆಯಲ್ಲಿ 3,500 ವ್ಯಾಪಾರಿಗಳನ್ನು ಗುರುತಿಸಿ ಪ್ರಮಾಣಪತ್ರ ನೀಡಲಾಗಿದೆ. ಬ್ಯಾಂಕ್‌ ಖಾತೆ ತೆರೆಯಲಾಗಿದೆ. 1 ಸಾವಿರ ಮಂದಿಯ ಅರ್ಜಿ ಬ್ಯಾಂಕ್‌ಗಳಿಗೆ ಸಲ್ಲಿಕೆಯಾಗಿವೆ. ಅವರ ಪೈಕಿ 150 ಮಂದಿಗೆ ಮಾತ್ರ ಸಾಲ ದೊರಕಿದೆ.

ಜಿಲ್ಲಾ ಕೇಂದ್ರವಾಗಿರುವ ಬಳ್ಳಾರಿ ಪಾಲಿಕೆ ವ್ಯಾಪ್ತಿಯ ಅರ್ಹ ಬೀದಿಬದಿ ವ್ಯಾಪಾರಿಗಳಿಗೆ ಇನ್ನೂ ಸಾಲ ದೊರಕದ ಪರಿಸ್ಥಿತಿಯಲ್ಲಿ ತಾಲ್ಲೂಕು, ಹೋಬಳಿ ಕೇಂದ್ರಗಳಲ್ಲಿರುವ ವ್ಯಾಪಾರಿಗಳ ಪರಿಸ್ಥಿತಿ ಹೇಗಿರಬಹುದು?

ಜಾಗೃತಿ ಮೂಡಿಸಿ: ‘ವ್ಯಾಪಾರಿಗಳಿಗೆ ಸಾಲ ದೊರಕದೇ ಇರುವ ಸನ್ನಿವೇಶದಲ್ಲಿ ಯೋಜನೆಯ ಕುರಿತು ವ್ಯಾಪಕ ಜಾಗೃತಿ ಮೂಡಿಸಬೇಕು. ಹೆಚ್ಚು ಮಂದಿಗೆ ಸಾಲ ಸೌಲಭ್ಯ ದೊರಕುವಂತಾಗಬೇಕು’ ಎಂದು ಸಂಸದರಾದ ವೈ.ದೇವೇಂದ್ರಪ್ಪ ಮತ್ತು ಕರಡಿ ಸಂಗಣ್ಣ ಅವರ ಸೂಚನೆ ರೂಪದ ಪ್ರತಿಪಾದನೆಯನ್ನು ಅಧಿಕಾರಿಗಳು ಒಪ್ಪಿದರು.

‘ಮುಂಚಿತವಾಗಿಯೇ ಬಡ್ಡಿ ಹಣವನ್ನು ಹಿಡಿದುಕೊಳ್ಳುವ’ ನಿಯಮ ಬಿಟ್ಟು ಬೇರೆ ಯಾವ ಶರತ್ತುಗಳೂ ಇಲ್ಲದೆ, ಯಾವುದೇ ಪ್ರಮಾಣತ್ರವನ್ನೂ ಕೇಳದೆ, ಸುಲಭವಾಗಿ ದಿನಕ್ಕೆ ಸಾವಿರಾರು ರೂಪಾಯಿ ಕೈ ಸಾಲ ದೊರಕುತ್ತಿರುವ ಮತ್ತು ಅದಕ್ಕೆ ವ್ಯಾಪಾರಿಗಳು ಒಗ್ಗಿರುವ ಸನ್ನಿವೇಶದಲ್ಲಿ ವರ್ಷಕ್ಕೆ ₹10 ಸಾವಿರ ಸಾಲಕ್ಕಾಗಿ ವ್ಯಾಪಾರಿಗಳು ಮುಂದೆ ಬರುವಂತೆ ಮಾಡುವುದು ಹೇಗೆ ಎಂಬ ಪ್ರಶ್ನೆ ಹಾಗೇ ಉಳಿಯಿತು.

ಕೈಯಲ್ಲಿ ಸ್ಮಾರ್ಟ್‌ಫೋನ್‌, ಸರ್ಕಾರಿ ಕಚೇರಿ, ಬ್ಯಾಂಕ್‌ಗಳಿಗೆ ಅಲೆದಾಟವಿಲ್ಲದೆ ಬೀದಿವ್ಯಾಪಾರಿಗಳಿಗೆ ಸಲೀಸಾಗಿ ಸಾಲ ದೊರಕುವುದು ಯಾವಾಗ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT