ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಲಕಾವೇರಿ: ಅ.17ಕ್ಕೆ ತೀರ್ಥೋದ್ಭವ, ವೀಕ್ಷಣೆಗೆ ಮುಕ್ತ ಅವಕಾಶ

ಭಕ್ತರ ಆಗ್ರಹಕ್ಕೆ ಮಣಿದ ಆಡಳಿತ; ತಲಕಾವೇರಿಗೆ ವಾಹನದಲ್ಲೇ ತೆರಳಲೂ ಭಕ್ತರಿಗೆ ಅವಕಾಶ
Last Updated 6 ಅಕ್ಟೋಬರ್ 2021, 13:08 IST
ಅಕ್ಷರ ಗಾತ್ರ

ಮಡಿಕೇರಿ: ಕಾವೇರಿಯ ಭಕ್ತರ ಆಗ್ರಹ, ಎಚ್ಚರಿಕೆಯ ಸಂದೇಶಕ್ಕೆ ಮಣಿದ ಆಡಳಿತವು ತಲಕಾವೇರಿಯಲ್ಲಿ ಇದೇ 17ರಂದು ನಡೆಯುವ ತೀರ್ಥೋದ್ಭವ ವೀಕ್ಷಣೆಗೆ ಮುಕ್ತ ಅವಕಾಶ ನೀಡಲು ತೀರ್ಮಾನ ಕೈಗೊಂಡಿದೆ. ಈ ಹಿಂದೆ ನಡೆದ ಸಭೆಯಲ್ಲಿ ಕಾಲ್ನಡಿಗೆಯಲ್ಲಿ ಬರುವ ಭಕ್ತರಿಗೆ ಮಾತ್ರ ವೀಕ್ಷಣೆಗೆ ಅವಕಾಶ ಎಂದು ಘೋಷಣೆ ಮಾಡಲಾಗಿತ್ತು. ಇದರಿಂದ ಕೊಡಗಿನಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಈಗ ವಾಹನದಲ್ಲೇ ತಲಕಾವೇರಿಗೆ ಬರಲು ಅವಕಾಶ ಕಲ್ಪಿಸಲಾಗಿದೆ. ಕಾವೇರಿ ಭಕ್ತರು ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದಾರೆ.

ನಗರದಲ್ಲಿ ಬುಧವಾರ ಜನಪ್ರತಿನಿಧಿಗಳು ಹಾಗೂ ಜಿಲ್ಲಾಧಿಕಾರಿಗಳ ಜೊತೆಗೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ನೇತೃತ್ವದಲ್ಲಿ ನಡೆದ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಈ ಹಿಂದೆ ಸ್ಥಳೀಯ ಜನಪ್ರತಿನಿಧಿಗಳು ಮನವಿಯಂತೆ ತೀರ್ಮಾನ ಕೈಗೊಳ್ಳಲಾಗಿತ್ತು. ಕಾವೇರಿಯೊಂದಿಗೆ ಭ‌ಕ್ತರು ಭಾವನಾತ್ಮಕ ಸಂಬಂಧ ಹೊಂದಿದ್ದಾರೆ. ಎಲ್ಲರಿಗೂ ಅವಕಾಶ ನೀಡಬೇಕು ಎಂದು ಶಾಸಕರು ಕೋರಿಕೊಂಡಿದ್ದರು. ಅದರಂತೆ ಕೋವಿಡ್‌ ನಿಯಮ ಪಾಲಿಸಿಕೊಂಡು ತೀರ್ಥೋದ್ಭವ ವೀಕ್ಷಣೆಗೆ ಮುಕ್ತ ಅವಕಾಶ ಕಲ್ಪಿಸಲಾಗುತ್ತಿದೆ’ ಎಂದು ಸಚಿವರು ಹೇಳಿದರು.

‘ಜಿಲ್ಲಾಡಳಿತವು ಥರ್ಮಲ್‌ ಸ್ಕ್ಯಾನಿಂಗ್‌ ವ್ಯವಸ್ಥೆ, ಸ್ಯಾನಿಟೈಸ್‌ ವ್ಯವಸ್ಥೆ ಮಾಡಲಿದೆ. ಈ ಹಿಂದೆ ವಿಧಿಸಿದ್ದ ಎಲ್ಲ ನಿರ್ಬಂಧ ತೆರವು ಮಾಡಲಾಗಿದೆ. ಮುಖ್ಯಮಂತ್ರಿಯೊಂದಿಗೆ ಸ್ಥಳೀಯ ಶಾಸಕರು ಚರ್ಚಿಸಿದ್ದಾರೆ’ ಎಂದು ಸಚಿವರು ಮಾಹಿತಿ ನೀಡಿದರು.

ಕೊಳದಲ್ಲಿ ಪುಣ್ಯಸ್ನಾನ ಮಾಡುವುದಕ್ಕೆ ಸದ್ಯಕ್ಕೆ ಅವಕಾಶ ಕಲ್ಪಿಸಿಲ್ಲ. ಇನ್ನು ತೀರ್ಥೋದ್ಭವಕ್ಕೆ 10 ದಿನ ಉಳಿದಿದ್ದು, ಆ ವೇಳೆ ಇನ್ನೂ ಕೋವಿಡ್‌ ದೃಢ ಪ್ರಮಾಣ ಕಡಿಮೆಯಾದರೆ ತೀರ್ಮಾನ ಕೈಗೊಳ್ಳಲಾಗುವುದು. ಹೊರ ಜಿಲ್ಲೆಯ ಭಕ್ತರಿಗೆ ಪ್ರವೇಶ ಕುರಿತು ಇನ್ನೂ ತೀರ್ಮಾನ ಕೈಗೊಂಡಿಲ್ಲ ಎಂದು ಮಾಹಿತಿ ನೀಡಿದರು.

ಯಾವುದೇ ಬದಲಾವಣೆ ಇಲ್ಲ: ಮಡಿಕೇರಿ ಹಾಗೂ ಗೋಣಿಕೊಪ್ಪಲು ದಸರಾ ಸಂಬಂಧ ಕೈಗೊಂಡಿರುವ ನಿಯಮಗಳಲ್ಲಿ ಯಾವುದೇ ಬದಲಾವಣೆ ಇಲ್ಲ. ಹಿಂದಿನ ನಿಯಮಗಳೇ ಮುಂದುವರಿಯಲಿವೆ ಎಂದು ಸಚಿವರು ಹೇಳಿದರು.

ಶಾಸಕ ಎಂ.ಪಿ.ಅಪ್ಪಚ್ಚು ರಂಜನ್‌ ಅವರು ಮಾತನಾಡಿ, ಕೋವಿಡ್‌ ಸೋಂಕು ವ್ಯಾಪಿಸದಂತೆ ತಡೆಯಲು ಹಾಗೂ ಜನರ ಆರೋಗ್ಯದ ದೃಷ್ಟಿಯಿಂದ ಕೆಲವು ನಿರ್ಬಂಧ ಹೇರಲಾಗಿತ್ತು. ಭಕ್ತರೇ ಪ್ರವೇಶಕ್ಕೆ ಅವಕಾಶ ಕೋರಿರುವ ಕಾರಣಕ್ಕೆ ನಿರ್ಬಂಧ ಸಡಿಲಿಕೆ ಮಾಡಲಾಗಿದೆ. ಯಾವುದೇ ಗೊಂದಲ ಇಲ್ಲ ಎಂದು ಉತ್ತರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶಾಸಕ ಕೆ.ಜಿ.ಬೋಪಯ್ಯ, ವಿಧಾನ ಪರಿಷತ್‌ ಸದಸ್ಯ ಎಂ.ಪಿ.ಸುನಿಲ್‌ ಸುಬ್ರಮಣಿ, ಜಿಲ್ಲಾಧಿಕಾರಿ ಚಾರುಲತಾ ಸೋಮಲ್‌ ಹಾಗೂ ಪಶ್ಚಿಮಘಟ್ಟ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷ ರವಿ ಕುಶಾಲಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT