ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರಜಾವಾಣಿ ಸಂವಾದ’: ಅರ್ಹತೆ ಇದ್ದವರು ಎಸ್‌ಟಿ ಪಟ್ಟಿ ಸೇರಲಿ

ಸಚಿವ ಕೆ.ಎಸ್‌. ಈಶ್ವರಪ್ಪ, ಕಾಂಗ್ರೆಸ್‌ ಮುಖಂಡ ಎಚ್‌.ಎಂ. ರೇವಣ್ಣ
Last Updated 16 ಅಕ್ಟೋಬರ್ 2020, 19:31 IST
ಅಕ್ಷರ ಗಾತ್ರ

ಬೆಂಗಳೂರು: ಕುರುಬರು ಮಾತ್ರವಲ್ಲ; ಗುಣಲಕ್ಷಣ, ಜೀವನಶೈಲಿ, ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿದಿರುವಿಕೆಯ ಆಧಾರದಲ್ಲಿ ಅರ್ಹತೆ ಪಡೆದಿರುವ ಎಲ್ಲ ಸಮುದಾಯಗಳಿಗೂ ಪರಿಶಿಷ್ಟ ಪಂಗಡ (ಎಸ್‌ಟಿ) ಸ್ಥಾನಮಾನ ನೀಡಬೇಕು. ಆಯಾ ಜಾತಿಯ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಬೇಕು ಎಂದು ಸಚಿವ ಕೆ.ಎಸ್‌. ಈಶ್ವರಪ್ಪ ಮತ್ತು ಕಾಂಗ್ರೆಸ್‌ ಮುಖಂಡ ಎಚ್‌.ಎಂ. ರೇವಣ್ಣ ಅಭಿಪ್ರಾಯಪಟ್ಟರು.

‘ಪ್ರಜಾವಾಣಿ’ ಕಚೇರಿಯಲ್ಲಿ ಶುಕ್ರವಾರ ನಡೆದ ‘ಫೇಸ್‌ಬುಕ್‌’ ನೇರ ಪ್ರಸಾರ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಉಭಯ ನಾಯಕರು, ‘ಕುರುಬ ಸಮುದಾಯಕ್ಕೆ ಎಸ್‌ಟಿ ಸ್ಥಾನಮಾನ ನೀಡಬೇಕು ಎಂಬುದು ನಮ್ಮ ಹಕ್ಕೊತ್ತಾಯ. ಅರ್ಹತೆ ಪಡೆದಿರುವ ಇತರ ಯಾವುದೇ ಸಮುದಾಯವನ್ನು ಎಸ್‌ಟಿ ಪಟ್ಟಿಗೆ ಸೇರಿಸುವುದನ್ನು ನಾವು ವಿರೋಧಿಸುವುದಿಲ್ಲ’ ಎಂದರು. ‘ಕುರುಬರು ಹೊಸದಾಗಿ ಈ ಬೇಡಿಕೆ ಇಡುತ್ತಿಲ್ಲ. 1976ರಿಂದಲೂ ಈ ಪ್ರಸ್ತಾವವಿದೆ. ಕುರುಬ ಸಮುದಾಯದ ಹಲವುಉಪ ಪಂಗಡಗಳು ಎಸ್‌ಟಿ ಪಟ್ಟಿಯ
ಲ್ಲಿವೆ. ತಾಂತ್ರಿಕ ಕಾರಣದಿಂದ ನಮ್ಮ ಸಮುದಾಯ ಹೊರಗುಳಿದಿದೆ. ಅರ್ಹತೆಯ ಆಧಾರದಲ್ಲಿ ಕುರುಬರನ್ನೂ ಪರಿಗಣಿಸುವಂತೆ ಕೇಳುತ್ತಿದ್ದೇವೆ’ ಎಂದು ಬೇಡಿಕೆಯನ್ನು ಸಮರ್ಥಿಸಿಕೊಂಡರು.

ಜಾತಿ ಗಣತಿ ವರದಿ ಮಂಡಿಸಲೇಬೇಕು

‘ಹಿಂದುಳಿದ ವರ್ಗಗಳ ಆಯೋಗದ ಮೂಲಕ ನಡೆದಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಗಣತಿ) ವರದಿಯನ್ನು ಸ್ವೀಕರಿಸಿ, ವಿಧಾನಮಂಡಲದಲ್ಲಿ ಮಂಡಿಸಲೇಬೇಕು. ಆ ವರದಿಯ ಆಧಾರದಲ್ಲೇ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಮತ್ತು ಇತರ ಸೌಲಭ್ಯಗಳನ್ನು ನೀಡಬೇಕು. ಕುರುಬರನ್ನು ಎಸ್‌ಟಿ ಪಟ್ಟಿಗೆ ಸೇರಿಸುವಾಗಲೂ ಜಾತಿ ಗಣತಿ ವರದಿಯಲ್ಲಿನ ಅಂಕಿಅಂಶಗಳನ್ನು ಪರಿಗಣಿಸಬೇಕು’ ಎಂದು ಸಚಿವ ಕೆ.ಎಸ್‌. ಈಶ್ವರಪ್ಪ ಹೇಳಿದರು.

ಈಶ್ವರಪ್ಪ ಹೇಳಿದ್ದೇನು?

‘ಕುರುಬರು ಅಂದಾಕ್ಷಣ ಈಶ್ವರಪ್ಪ, ಸಿದ್ದರಾಮಯ್ಯ, ರೇವಣ್ಣ, ಬಂಡೆಪ್ಪ ಕಾಶೆಂಪೂರ, ವಿಶ್ವನಾಥ್‌ ಅವರನ್ನಷ್ಟೇ ನೋಡಿ ಮುಂದುವರಿದ ಸಮುದಾಯ ಎಂಬ ತೀರ್ಮಾನಕ್ಕೆ ಬರುವುದು ತಪ್ಪು. ತಿನ್ನಲು ಅನ್ನವಿಲ್ಲದ, ಸೂರು, ಉದ್ಯೋಗ ಇಲ್ಲದವರೇ ನಮ್ಮ ಸಮುದಾಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಪರಿಶಿಷ್ಟ ಪಂಗಡ ಸ್ಥಾನಮಾನ ದೊರೆತರೆ ನಮ್ಮ ಜನರಿಗೆ ಉದ್ಯೋಗ, ಶಿಕ್ಷಣದಲ್ಲಿ ಹೆಚ್ಚಿನ ಅವಕಾಶಗಳು ಲಭಿಸುತ್ತವೆ. ಸರ್ಕಾರವೇ ಜಮೀನು ನೀಡುತ್ತದೆ.

‘ಕುರುಬರನ್ನು ಎಸ್‌ಟಿ ಪಟ್ಟಿಗೆ ಸೇರಿಸುವಂತೆ ರಾಜ್ಯ ಸರ್ಕಾರ ಈ ಹಿಂದೆ ಮೂರು ಬಾರಿ ಶಿಫಾರಸು ಮಾಡಿತ್ತು. ಆದರೆ, ತಾಂತ್ರಿಕ ಕಾರಣಗಳಿಂದ ಈವರೆಗೂ ಅದಕ್ಕೆ ಒಪ್ಪಿಗೆ ಸಿಕ್ಕಿಲ್ಲ. ಎಸ್‌ಟಿ ಸ್ಥಾನಮಾನ ಪಡೆಯುವ ಎಲ್ಲ ಅರ್ಹತೆಯೂ ಕುರುಬ ಸಮುದಾಯಕ್ಕೆ ಇದೆ. ಅದಕ್ಕಾಗಿ ಸಮುದಾಯದ ಮಠಾಧೀಶರ ನೇತೃತ್ವದಲ್ಲಿ ಹಕ್ಕೊತ್ತಾಯ ಮಾಡುತ್ತಿದ್ದೇವೆ. ‘ಕುರುಬರನ್ನು ಎಸ್‌ಟಿಗೆ ಸೇರಿಸಿದರೆ ಯಾರಿಗೂ ತೊಂದರೆ ಆಗುವುದಿಲ್ಲ. ನಮ್ಮ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಿಸಬೇಕು’

ಎಚ್‌.ಎಂ. ರೇವಣ್ಣ ಹೇಳಿದ್ದೇನು?

‘1868ರಲ್ಲಿ ಹೊರಡಿಸಿದ ಗೆಜೆಟಿಯರ್‌ನಲ್ಲೇ ಕುರುಬರು ಪರಿಶಿಷ್ಟ ಪಂಗಡಕ್ಕೆ ಸೇರಿದವರು ಎಂಬ ಉಲ್ಲೇಖವಿದೆ. ಪಟ್ಟಿಯಿಂದ ಬಿಟ್ಟು ಹೋಗಿರುವುದನ್ನು ಮತ್ತೆ ಸೇರಿಸುವಂತೆ ಕೇಳುತ್ತಿದ್ದೇವೆ. ನಮ್ಮ ಸಮುದಾಯದ ಜನರು ವಾಸಿಸುವುದೇ ಗುಡ್ಡ ಪ್ರದೇಶದಲ್ಲಿ. ಕುರಿ ಮಂದೆಯೊಂದಿಗೆ ಅಲೆಮಾರಿ ಜೀವನ ನಡೆಸುತ್ತಾರೆ. ಪರಿಶಿಷ್ಟ ಪಂಗಡದ ಜೀವನಶೈಲಿ ಇಂದಿಗೂ ಇದೆ. ಜನರು ಹೋರಾಟ ಆರಂಭಿಸಿದ್ದಾರೆ. ಧಾರ್ಮಿಕ ಮುಖಂಡರು ಮತ್ತು ರಾಜಕೀಯ ನಾಯಕರು ಅವರ ಬೆಂಬಲಕ್ಕೆ ನಿಂತಿದ್ದೇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT